ADVERTISEMENT

ಸಾತ್ವಿಕತೆಯನ್ನೇಕೆ ದ್ವೇಷಿಸುತ್ತೀರಿ?

​ಪ್ರಜಾವಾಣಿ ವಾರ್ತೆ
Published 7 ಏಪ್ರಿಲ್ 2013, 19:59 IST
Last Updated 7 ಏಪ್ರಿಲ್ 2013, 19:59 IST
ಸಾತ್ವಿಕತೆಯನ್ನೇಕೆ ದ್ವೇಷಿಸುತ್ತೀರಿ?
ಸಾತ್ವಿಕತೆಯನ್ನೇಕೆ ದ್ವೇಷಿಸುತ್ತೀರಿ?   

ಸಮಾಜದಲ್ಲಿ  ಬಹುತೇಕರು ನನ್ನನ್ನು ಗುರುತಿಸುವುದು ಬ್ರಾಹ್ಮಣ ಎಂದು. ಆದರೆ ನಾನು ಬ್ರಾಹ್ಮಣ ಎಂದು ಎಲ್ಲೂ ಹೇಳಿಕೊಳ್ಳುವುದಿಲ್ಲ. ಅದೊಂದು ದೊಡ್ಡಸ್ತಿಕೆ ಎಂಬ ಶ್ರೇಷ್ಠತೆಯ ವ್ಯಸನ ನನಗಿಲ್ಲ. ಯಾಕೆಂದರೆ ಹುಟ್ಟಿನಿಂದ ನಾನು ಬ್ರಾಹ್ಮಣನೇ ಹೊರತು ಬ್ರಾಹ್ಮಣ್ಯದ ಕಟ್ಟಾ ಸಂಪ್ರದಾಯ ಆಚರಣೆಯಿಂದ ಖಂಡಿತಾ ಅಲ್ಲ. ವಿಚಾರವಾದಿಯೂ, ವಿದ್ಯಾವಂತರೂ ಆದ ಅಪ್ಪ ತಾವೂ ಸಹ ಎಂದೂ ಬ್ರಾಹ್ಮಣ್ಯದ ಕಂದಾಚಾರಗಳಿಗೆ ಬಲಿಯಾದವರಲ್ಲ. ನನಗೆ ತಿಳುವಳಿಕೆ ಬರುವ ಹೊತ್ತಿನಲ್ಲಿ ಜಾತಿಯ ಐಡೆಂಟಿಟಿ ಬೇಕಾಗಿದ್ದು ಸ್ನೇಹಕ್ಕೆ. ಓರಗೆಯ ಗೆಳೆಯರೆಲ್ಲಾ ಬ್ರಾಹ್ಮಣರೇ. ಆ ಸ್ನೇಹ ಸಂಪಾದನೆಗೆ, ಅವರ ಮನೆಯಲ್ಲಿ ತಿಂಡಿ ಊಟಕ್ಕೆ ಬ್ರಾಹ್ಮಣ್ಯ ಅನುಕೂಲವಾಗಿತ್ತು.  ನಮ್ಮೊನು  ಎಂದು ಒಂದಿಷ್ಟು ಊಟ ತಿಂಡಿ ಬೀಳುತ್ತಿತ್ತು.ಅವರ ಜೊತೆ ಪಂಚೆ ಉಟ್ಟು ಅರೆಬರೆ ಬೆತ್ತಲೆಯಾಗಿ ಹೋದರೆ ಚರುಪು ಸಿಗುತ್ತದೆ, ಊಟ ಸಿಗುತ್ತದೆ. ಇದೇ ಬ್ರಾಹ್ಮಣ್ಯದ ಮಹತ್ವ ಎಂದುಕೊಂಡಿದ್ದವನು ನಾನು. ಇಂದಿಗೂ ಎಷ್ಟೋ ಮನೆಯಲ್ಲಿ ತಂದೆ ತಾಯಿಗಳು ಮಕ್ಕಳಿಗೆ ಬ್ರಾಹ್ಮಣ್ಯದ ನಿಜ ಅರ್ಥ ಹೇಳಿದ್ದನ್ನು ನಾನು ನೋಡಿಲ್ಲ. ನನ್ನ ಮಟ್ಟಿಗೆ ಬ್ರಾಹ್ಮಣ್ಯ ಕಂದಾಚಾರದ ಆಚರಣೆ ಆಗಿರಲಿಲ್ಲ. ಇದು ಮಾಡಬಾರದು, ಅದು ಮಾಡಬಾರದು ಎಂಬ ಭಯ, ನಿರ್ಬಂಧಗಳ ಒಂದು ಕಟ್ಟುಪಾಡಾಗಿತ್ತು. ಹೀಗಾಗಿ ಬ್ರಾಹ್ಮಣ್ಯ ನನಗೆ ಸಂಸ್ಕಾರ, ಸಂಸ್ಕೃತಿ, ಮತ್ತು ಸಾತ್ವಿಕತೆಗಳನ್ನು ಬಳುವಳಿಯಾಗಿ ನೀಡಿದೆ ಎಂದರೆ ತಪ್ಪಿಲ್ಲ.

ಒಮ್ಮೆ ಒಂದು ಬ್ರಾಹ್ಮಣರ ಪಂಕ್ತಿ ಭೋಜನದಲ್ಲಿ ನನ್ನದೇ ವಯಸ್ಸಿನ ಹುಡುಗನೊಬ್ಬನನ್ನು ಬ್ರಾಹ್ಮಣ ಅಲ್ಲ ಎಂಬ ಕಾರಣಕ್ಕೆ ನಿರ್ದಾಕ್ಷಿಣ್ಯವಾಗಿ ಊಟದಿಂದ ಎಳೆದು ಆಚೆ ಹಾಕಲಾಯಿತು. ಅವತ್ತು ನಾನೂ ಊಟ ಬಿಟ್ಟು ಎದ್ದು ಹೋದೆ. ಅಂದಿನಿಂದ ಬ್ರಾಹ್ಮಣರ ಊಟದ ಪಂಕ್ತಿಯಲ್ಲಿ ನನಗೆ ಇದೇ ದೃಶ್ಯ ನೆನಪಾಗುತ್ತಿದ್ದ ಕಾರಣ ಸ್ನೇಹ, ಮಾನವೀಯತೆಯ ಕಟ್ಟುಪಾಡು ಹೊರತುಪಡಿಸಿ ನಾನು ಅಂತಹ ಊಟಗಳಿಗೆ ಹೋಗುವುದನ್ನೇ ನಿಲ್ಲಿಸಿದ್ದೇನೆ. ನಮ್ಮ ಮನೆಯಲ್ಲಿ  ಯಾವುದೇ ಕಟ್ಟುಪಾಡುಗಳಿಲ್ಲ.

ಯಾವ ಜಾತಿಯವರು ಬೇಕಾದರೂ ಮನೆಯೊಳಗೆ ಬರಬಹುದು. ನಮ್ಮಂದಿಗೆ ಊಟ ಮಾಡಬಹುದು. ನನ್ನ ನೆಚ್ಚಿನ ಗೆಳೆಯ ಮುನೀರ್ ಮುಸ್ಲಿಂ. ನನ್ನ ಪ್ರಿಯ ಶಿಷ್ಯೆ ಹೀನಾ ಮುಸ್ಲಿಂ, ನನ್ನಲ್ಲಿ ವೈಚಾರಿಕತೆಯ ಕಿಡಿ ಹೊತ್ತಿಸಿದ ಇಬ್ಬರು ಗುರುಗಳು ಫಯಾಸ್ ಅಹಮದ್ ಮತ್ತು ಭಾಷಾ ಮುಸ್ಲಿಮರು. ನನಗಿರುವ ಬಹುತೇಕ ಗೆಳೆಯರು ಬೇರೆ ಜಾತಿಯವರೇ! ಹಾಗಿದ್ದೂ ಈ ಶ್ರೇಷ್ಠ ಜಾತಿಯಲ್ಲಿ ಹುಟ್ಟಿದ ತಪ್ಪಿಗೆ ಹಲವು ಹಿಂಸೆಗಳನ್ನು ಅನುಭವಿಸಬೇಕಾಗಿದೆ. ಬ್ರಾಹ್ಮಣ ಎಂಬ ಜಾತಿ ಹಣೆಪಟ್ಟಿಯ ಕಾರಣದಿಂದಲೇ ಈ ಸಾತ್ವಿಕ ಪ್ರವೃತ್ತಿಯನ್ನೇ ಪ್ರತಿರೋಧಿಸುವ ಒಂದು ಸಾಮಾಜಿಕ ದೌರ್ಜನ್ಯಕ್ಕೆ ನನ್ನಂತಹ ನೂರಾರು ಬ್ರಾಹ್ಮಣರು ಬಲಿಯಾಗಿದ್ದಾರೆ.

ಚಿಕ್ಕಂದಿನಲ್ಲಿ ಇತರೆ ಜಾತಿಯ ಕೆಲವು ಹುಡುಗರು ದಿನಾ ನನ್ನನ್ನು ಶಾಲೆಗೆ ಹೋದ ತಕ್ಷಣ ಮುಟ್ಟಿ ನಗುತ್ತಿದ್ದರು. ಐನೋರ ಮಡಿ ಓಯ್ತು, ಮೈಲಿಗೆ ಆಗೋಯ್ತು  ಎಂದು ಕುಹಕವಾಡುತ್ತಿದ್ದರು. ನನಗೆ ಇಷ್ಟವಿಲ್ಲದ ತಿಂಡಿ ಶುಚಿಯಿಲ್ಲದಿದ್ದರೂ ನಾನು ಅವರಲ್ಲೊಬ್ಬ ಎಂದು ಸ್ನೇಹಕ್ಕಾಗಿ ಇಲ್ಲವೇ ಕಿರುಕುಳದಿಂದ ಪಾರಾಗಲು ತಿನ್ನಬೇಕಿತ್ತು. ಶಾಲೆಯಲ್ಲಿ ಕುಂಬಳಕಾಯಿ ಬಿಟ್ಟಾಗ ಮೇಷ್ಟರೊಬ್ಬರು  `ನಿಮಗೆ ಕುಂಬಳಕಾಯಿ ಅಂದ್ರೆ ಮೈ ಎಲ್ಲಾ ಬಾಯಿ. ನಾವೇ ಒಂದು ಕೊಳೆತದ್ದು ದಾನ ಕೊಡ್ತೀವಿ, ನೀವು ಬಾಂಬ್ರ ಮುಂಡೇವು ಅದನ್ನ ಕದ್ಕಂಡು ಹೋಗಬೇಡಿ'  ಎಂದು ಕಿಚಾಯಿಸುತ್ತಿದ್ರು. ಮತ್ತೊಬ್ಬರು ಬೇಕಂತಲೇ ನನ್ನ ಕೈಲಿ ಸಿಗರೇಟ್ ತರಿಸಿ, ಹಚ್ಚಿ, ಸೇದಿ ನನ್ನ ಮುಖಕ್ಕೆ ಹೊಗೆ ಬಿಡುತ್ತಿದ್ದರು. ಶೌಚಾಲಯ ಸ್ವಚ್ಛ ಮಾಡಲು ನನ್ನನ್ನೂ ಸೇರಿದಂತೆ ಬ್ರಾಹ್ಮಣ ಹುಡುಗರನ್ನೇ ಕಳಿಸುತ್ತಿದ್ದರು. ಒಟ್ಟಿನಲ್ಲಿ ನನ್ನಲ್ಲಿಲ್ಲದ ನನ್ನ ಬ್ಯಾಹ್ಮಣ್ಯವನ್ನೂ ಬ್ರಾಹ್ಮಣ ರೂಪದ ಸಾತ್ವಿಕತೆಯನ್ನು ಧ್ವಂಸ ಮಾಡಿ ವಿಕೃತ ಆನಂದ ಪಡುವುದರಲ್ಲಿ ಅವರಿಗೆ ಜನ್ಮ ಜನ್ಮಾಂತರದ ಸೇಡು ಇದ್ದಂತಿತ್ತು.

ಬೆಳೆಯುತ್ತಾ ಹೋದಂತೆಲ್ಲಾ ನಾನೇ ಒಪ್ಪದ, ಅಪ್ಪಿಕೊಳ್ಳದ ಬ್ರಾಹ್ಮಣ್ಯದ ವಾರಸುದಾರನೇ ನಾನು. ಶತಶತಮಾನಗಳ ಎಲ್ಲಾ ಕ್ರೌರ್ಯಕ್ಕೆ, ತುಳಿತಕ್ಕೆ ನಾನೇ ಕಾರಣ ಎಂಬಂತೆ ನನ್ನನ್ನ ಟಾರ್ಗೆಟ್ ಮಾಡಲಾಗುತ್ತಿತ್ತು. ಪಲಾವ್ ಜೊತೆಗೆ ಚಿಕನ್ ಬಿರಿಯಾನಿ ಬೆರೆಸಿ ತಿನ್ನಿಸಿ ನನ್ನ ಬ್ರಾಹ್ಮಣ್ಯವನ್ನು ಹಾಳುಗೆಡವುವ ಪ್ರಯತ್ನವನ್ನೂ ಮಾಡಲಾಗಿತ್ತು. ಒಂದಷ್ಟು ಜನ ನನಗೆ ಕುಡಿಸಿ, ಸೇದಿಸಿ, ತಿನ್ನಿಸಿ ನನ್ನ ಬ್ರಾಹ್ಮಣ್ಯದ ಶೀಲಭಂಗ ಮಾಡುವ ನಿರಂತರ ಪಿತೂರಿ ನಡೆಸಿದ್ದರು. (ಬಹಳಷ್ಟು ಮಹಾಬ್ರಾಹ್ಮಣರು ಯಾರೂ ಒತ್ತಾಯ ಮಾಡದೇ ಈ ಕೆಲಸಗಳನ್ನು ಸ್ವಯಂ ಪ್ರೇರಣೆಯಿಂದ ಮಾಡುತ್ತಾರೆ ಎಂಬುದು ಬೇರೆ ಮಾತು) ಮಲಗಿದ್ದಾಗ ನನ್ನ ಜನಿವಾರವನ್ನೇ ಬಿಚ್ಚಿ ಹಾಕುತ್ತಿದ್ದರು. ಬ್ರಾಹ್ಮಣನಾಗಿ ಹುಟ್ಟಿದ ತಪ್ಪಿಗೇ ಹಲವು ಅವಕಾಶಗಳನ್ನು ಕಳೆದುಕೊಂಡು  ಖಿನ್ನನಾಗಿದ್ದೆ. ಇಂತಹ  ನನ್ನ ಮುಖ ನೋಡಿ ವಿಚಾರವಾದಿಗಳು ಶತಶತಮಾನದ ತುಳಿತಕ್ಕೆ ಪುರೋಹಿತ ಶಾಹಿ ಬ್ರಾಹ್ಮಣ ವ್ಯವಸ್ಥೆಯ ಶೋಷಣೆಯೇ ಕಾರಣ ಎಂದು ನಮ್ಮ ತಾತನೇ ಅವರಪ್ಪನ ಸ್ಲೇಟು ಬಳಪ ಕಿತ್ತುಕೊಂಡಿರುವಂತೆ ಅಬ್ಬರಿಸುತ್ತಿದ್ದರು.

ಈಗಲೂ ಹಲವರು ನೀವು ಬ್ರಾಹ್ಮಣರಾ? ನೀವು ಮಟನ್ ತಿನ್ನೋ ಹಾಗಾದ ಮೇಲೇ ಕೆಜಿ ಮಾಂಸ 350  ಆಗಿದ್ದು ಎಂದು ನಗುತ್ತಾರೆ. ನಿಮ್ಮೂರಿನ ದೇವಸ್ಥಾನದಲ್ಲಿ ನೀವು ಎಂಜಲೆಲೆ ಮೇಲೆ ಹೊರಳುತ್ತೀರಂತೆ..!(ಮಡೆಸ್ನಾನ ಇಂದಿಗೂ ಇದೆ). ಅಸಹ್ಯ ಅನಿಸಲ್ಲವಾ? ಥೂ! ಬ್ರಾಹ್ಮಣ್ಯ ಎಂಜಲೆಲೆ ಮೇಲೆ ಉರುಳಿಹೋಯ್ತಲ್ಲಪ್ಪ ಎಂದು ಕುಹಕವಾಡುತ್ತಾರೆ. ನಿಮ್ಮನೇಲಿ ಹೆಣ್ಣು ಮಕ್ಕಳನ್ನು ಈಗಲೂ ಮೂಲೇಲಿ ಕೂರುಸ್ತೀರಾ? ಮುಟ್ಟಿಸಿಕೊಳ್ಳಲ್ಲವಾ? ಅಡುಗೆ ಮಾಡಿಸಲ್ಲವಾ? ನಾವು ಮುಟ್ಟುದ್ರೆ ಮನೆಗೆ ಹೋಗಿ ಸ್ನಾನ ಮಾಡ್ತೀರಾ? ಊಟ ಮಾಡಕ್ಕೆ ಬಟ್ಟೆ ಯಾಕೆ ಬಿಚ್ಚೋದು? ಅರೆಬೆತ್ತಲಾಗಿ ಬಡಿಸೋರು ಬೆವರಿ ಗಬ್ಬು ನಾರ‌್ತಿರ‌್ತಾರೆ. ಅದು ಹೇಗೆ ಕೂತ್ಕೊಂಡು ಕುಂಬಳಕಾಯಿ ಹುಳಿ ತಿಂತೀರೋ? ಬ್ರಾಹ್ಮಣ ಜನ್ಮ ಮುಗಿದರೂ ಈ ಪ್ರಶ್ನೆಗಳು ಮಾತ್ರ ಎಂದಿಗೂ ಚಿರಂಜೀವಿಗಳೇ!

ಮನುಷ್ಯ ಮನುಷ್ಯನನ್ನು ಮಾನವೀಯತೆಯಿಂದ ನೋಡೋಕೆ, ತನಗಿಷ್ಟ ಬಂದಂತೆ ಸ್ವತಂತ್ರವಾಗಿ ಬದುಕೋಕೆ ಈ ಜಾತಿ ಅನ್ನೋದು ಎಂತಹ ಅಡ್ಡಗೋಡೆಯಾಗಿದೆ ಎಂಬುದಕ್ಕೆ ಇದಕ್ಕಿಂತ ದೊಡ್ಡ ಉದಾಹರಣೆ ಬೇಕೇ? ಶ್ರೇಷ್ಠ ಜಾತಿಯೊಳಗಿನ ದ್ವಂದ್ವ, ಗೊಂದಲ, ಕಂದಾಚಾರಗಳು, ಕಗ್ಗಂಟುಗಳು, ನಿಷ್ಠುರ  ಸತ್ಯಗಳು ಅನಾವರಣಗೊಂಡರೆ ಕೆಳಸ್ತರದ ಜಾತಿಗಳು ಉಚ್ಚ ಜಾತಿಗಳತ್ತ ಗುಪ್ತಗಾಮಿ ಚಲನಶೀಲತೆ ತೋರುವುದನ್ನು ನಿಲ್ಲಿಸುತ್ತವೆಯೋ ಏನೋ?
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.