ADVERTISEMENT

1941ರ ಡಿಸೆಂಬರ್‌ನಲ್ಲಿ ಜಪಾನೀಯರು ಪರ್ಲ್‌ ಹಾರ್ಬರ್‌ನಲ್ಲಿ ದಾಳಿ ನಡೆಸಿದ್ದು ಏಕೆ?

​ಪ್ರಜಾವಾಣಿ ವಾರ್ತೆ
Published 7 ಮೇ 2020, 2:28 IST
Last Updated 7 ಮೇ 2020, 2:28 IST
ಪರ್ಲ್‌ ಹಾರ್ಬರ್‌ ದಾಳಿ
ಪರ್ಲ್‌ ಹಾರ್ಬರ್‌ ದಾಳಿ   

ಪರ್ಲ್‌ ಹಾರ್ಬರ್‌ ಎಲ್ಲಿದೆ?

ಇದು ಹವಾಯಿ ದ್ವೀಪದ ಓಆಹುನಲ್ಲಿ ಇರುವ ಅಮೆರಿಕದ ನೌಕಾನೆಲೆ. ಹಿಂದೆ ಇಲ್ಲಿ ಹವಳದ (ಪರ್ಲ್‌) ಜೀವಿಗಳು ಇದ್ದವು. ಆ ಕಾರಣದಿಂದಾಗಿ ಈ ಹೆಸರು ಬಂದಿದೆ.

1941ರ ಡಿಸೆಂಬರ್‌ನಲ್ಲಿ ಜಪಾನೀಯರು ಇಲ್ಲಿ ದಾಳಿ ನಡೆಸಿದ್ದು ಏಕೆ?

ADVERTISEMENT

ಜಪಾನೀಯರು ಆಗ್ನೇಯ ಏಷ್ಯಾವನ್ನು ವಶಪಡಿಸಿಕೊಳ್ಳುವ ಉದ್ದೇಶ ಹೊಂದಿದ್ದರು. ಅಮೆರಿಕದ ನೌಕಾದಳವು ತನ್ನ ಈ ಉದ್ದೇಶಕ್ಕೆ ಅಡ್ಡಿ ಬಾರದಿರಲಿ ಎಂಬ ಕಾರಣಕ್ಕೆ ಜಪಾನೀಯರು ಪರ್ಲ್‌ ಹಾರ್ಬರ್‌ ಮೇಲೆ ದಿಢೀರ್‌ ದಾಳಿ ನಡೆಸಿದರು.

ದಾಳಿ ಯಶಸ್ಸು ಕಂಡಿತೇ?

ಬಹುಮಟ್ಟಿಗೆ ಈ ದಾಳಿ ಯಶಸ್ಸು ಸಾಧಿಸಿತು. ಅಮೆರಿಕನ್ನರು ಈ ದಾಳಿಯ ವೇಳೆ ಹಲವು ಯುದ್ಧನೌಕೆಗಳನ್ನು ಕಳೆದುಕೊಂಡರು. ಆದರೆ ವಿಮಾನ ವಾಹಕ ಯುದ್ಧನೌಕೆಗಳು ಆ ಸಂದರ್ಭದಲ್ಲಿ ಅಲ್ಲಿರದಿದ್ದ ಕಾರಣ, ಉಳಿದುಕೊಂಡವು. ಅಮೆರಿಕದ 200 ವಿಮಾನಗಳು ನಾಶವಾದವು, ಎರಡು ಸಾವಿರಕ್ಕೂ ಹೆಚ್ಚಿನ ಸೈನಿಕರು ಮೃತಪಟ್ಟರು. ಇತ್ತ, ಜ‍ಪಾನ್‌ ದೇಶದ 29 ವಿಮಾನಗಳು ನಾಶಗೊಂಡವು ಹಾಗೂ 30 ಜನ ಪ್ರಾಣ ಕಳೆದುಕೊಂಡರು.

ಈ ಯಶಸ್ಸಿನಿಂದ ಜಪಾನೀಯರಿಗೆ ಆದ ಲಾಭ ಏನು?

ಶಾಂತ ಸಾಗರದ ಯುದ್ಧ ನೌಕೆಗಳು ನಾಶವಾದ ಪರಿಣಾಮವಾಗಿ ಅಮೆರಿಕನ್ನರಿಗೆ, ಆಗ್ನೇಯ ಏಷ್ಯಾದಲ್ಲಿ ಜಪಾನೀಯರ ಯುದ್ಧ ಚಟುವಟಿಕೆಗಳನ್ನು ತಡೆಯುವ ಶಕ್ತಿ ಇರಲಿಲ್ಲ. ಇತ್ತ ಜಪಾನೀಯರು ಒಂದಾದ ನಂತರ ಒಂದು ಕದನವನ್ನು ಗೆದ್ದುಕೊಂಡು ಭಾರತದ ಬಾಗಿಲವರೆಗೆ ಬಂದುನಿಂತಿದ್ದರು. ಡಚ್‌ ಈಸ್ಟ್‌ ಇಂಡೀಸ್‌ (ಈಗಿನ ಇಂಡೊನೇಷ್ಯಾ) ಗೆದ್ದುಕೊಂಡ ಕಾರಣ ಜಪಾನೀಯರು ಆಸ್ಟ್ರೇಲಿಯಾ ಮೇಲೆ ದಾಳಿ ನಡೆಸುವಷ್ಟು ಸಮೀಪ ಬಂದಂತಾಗಿತ್ತು. ಜಪಾನ್‌ ಸಾಮಾಜ್ಯವು 1942 ಆಗಸ್ಟ್‌ ತಿಂಗಳಲ್ಲಿ ಔನ್ನತ್ಯದ ತುತ್ತತುದಿ ತಲುಪಿತ್ತು.

ಪರ್ಲ್‌ ಹಾರ್ಬರ್‌ ಮೇಲಿನ ದಾಳಿಯು ಅಮೆರಿಕನ್ನರ ಮೇಲೆ ಯಾವ ಪರಿಣಾಮ ಬೀರಿತು?

ಇದು ಅಮೆರಿಕವು ಎರಡನೆಯ ವಿಶ್ವಯುದ್ಧದಲ್ಲಿ ಪಾಲ್ಗೊಳ್ಳುವಂತೆ ಮಾಡಿತು. ಪರ್ಲ್‌ ಹಾರ್ಬರ್‌ ಮೇಲೆ ದಾಳಿ ನಡೆಯುವವರೆಗೆ ಅಮೆರಿಕದಲ್ಲಿನ ಸಾರ್ವಜನಿಕರು ಯುದ್ಧದಲ್ಲಿ ತಮ್ಮ ದೇಶ ಪಾಲ್ಗೊಳ್ಳುವುದು ಬೇಡ ಎಂಬ ಅಭಿಪ್ರಾಯ ಹೊಂದಿದ್ದರು.

ಟೆಲಿಗ್ರಾಫ್‌ ಮತ್ತು ಯುದ್ಧ

ಗುಯೆಲ್ಮೊ ಮಾರ್ಕೊನಿ ಅವರು ವೈರ್‌ಲೆಸ್‌ ಟೆಲಿಗ್ರಾಫ್‌ ಕಂಡುಹಿಡಿದಾಗ, ‘ಯುದ್ಧ ಮಾಡುವುದು ಸಾಧ್ಯವೇ ಇಲ್ಲದ ಸ್ಥಿತಿಯನ್ನು ವೈರ್‌ಲೆಸ್‌ ಯುಗವು ತಂದಿಡಲಿದೆ. ಈ ಯುಗದಲ್ಲಿ ಯುದ್ಧವೆಂಬುದು ಹಾಸ್ಯಾಸ್ಪದವಾಗುತ್ತದೆ’ ಎಂದು ಉತ್ಸಾಹದಿಂದ ಘೋಷಿಸಿದ್ದರು. ವಿಶ್ವದ ಒಳಿತಿಗಾಗಿ ಮನುಷ್ಯನು ಹೆಚ್ಚು ಉತ್ತಮವಾಗಿ ಸಂಪರ್ಕ ಸಾಧಿಸಲು ಆಗುತ್ತದೆ ಎಂದು ಅವರು ನಂಬಿದ್ದರು.

ಆದರೆ, ಯುದ್ಧದ ಸಂದರ್ಭದಲ್ಲಿ ಇದೇ ತಂತ್ರಜ್ಞಾನ ಬಳಸಿ ಶತ್ರುವನ್ನು ನಾಶ ಮಾಡಲು ರಹಸ್ಯ ಯೋಜನೆಗಳನ್ನು ಹಂಚಿಕೊಳ್ಳಲು ಸಾಧ್ಯವಾಗುತ್ತದೆ ಎಂದು ಅವರು ಆಲೋಚಿಸಿರಲಿಲ್ಲ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.