ADVERTISEMENT

ನಿಮಗಿದು ಗೊತ್ತೆ?: ಪೈರೊ ಮೀಟರ್

​ಪ್ರಜಾವಾಣಿ ವಾರ್ತೆ
Published 11 ಮೇ 2022, 19:30 IST
Last Updated 11 ಮೇ 2022, 19:30 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ಪೈರೊಮೀಟರ್‌ ಅನ್ನು (Pyrometer) ಅತ್ಯಧಿಕ ಉಷ್ಣಾಂಶ ಅಳೆಯಲು ಬಳಸುತ್ತಾರೆ. ಸಾಧಾರಣ ಥರ್ಮೊಮೀಟರ್‌ಗಳಿಂದ ಅಳೆಯಲಾಗದಂತಹ ಉಷ್ಣಾಂಶವನ್ನು ತಿಳಿಯಲು ಇದನ್ನು ಬಳಸಲಾಗುತ್ತದೆ. ಉದಾಹರಣೆಗೆ ಕುಲುಮೆಯೊಂದರ ಉಷ್ಣಾಂಶವನ್ನು ತಿಳಿಯಲು ಈ ಸಾಧನವನ್ನು ಬಳಸಲಾಗುತ್ತದೆ. 1752ರ ಹೊತ್ತಿಗೆ ಮೊದಲ ಬಾರಿಗೆ ಪೈರೊಮೀಟರ್‌ ಅನ್ನು ಉಪಯೋಗಿಸಿ ಉಷ್ಣಾಂಶ ಅಳೆಯಲಾಗಿದೆ ಎಂದು ಇತಿಹಾಸದಲ್ಲಿ ದಾಖಲಾಗಿದೆ. ಪೈರೊಮೀಟರ್ ಸಾಧನದ ಬಗ್ಗೆ ವಿವರವಾದ ಮಾಹಿತಿ ನೀಡಿದವರು ಯೂಲರ್(Euler).

ಎರಡು ರೀತಿಯ ಪೈರೊಮೀಟರ್‌ಗಳಿವೆ. 1. ರೇಡಿಯೇಷನ್ ಪೈರೊಮೀಟರ್ (Radition Pyrometer). 2. ಆಪ್ಟಿಕಲ್ ಪೈರೊಮೀಟರ್ (Optical Pyrometer).

ರೇಡಿಯೇಷನ್ ಪೈರೊಮೀಟರ್‌ನಲ್ಲಿ ಬಿಸಿಯಾದ ವಸ್ತುವಿನಿಂದ ಬರುವ ಶಾಖವನ್ನು ಥರ್ಮೊಪೈಲ್ (Thermopile) ಎಂಬ ಸಾಧನದಲ್ಲಿ ಸಂಗ್ರಹಿಸಲಾಗುವುದು. ಶಾಖವನ್ನು ಹಿಡಿದಿಟ್ಟುಕೊಳ್ಳುವುದರಿಂದ ಥರ್ಮೊಪೈಲ್ ಬಿಸಿಯಾಗಿ ಅದು ಒಂದು ವೋಲ್ಟೇಜ್ ಅನ್ನು ಉತ್ಪತ್ತಿ ಮಾಡುತ್ತದೆ. ಉಷ್ಣಾಂಶವನ್ನು ಅನುಸರಿಸಿ, ವೋಲ್ಟೇಜ್ ಹೆಚ್ಚುತ್ತದೆ. ಈ ವಿದ್ಯುತ್ ವೋಲ್ಟೇಜ್ ಎಷ್ಟಿರುತ್ತದೆ ಎಂಬುದನ್ನು ನಿರ್ಣಯಿಸುವ ಮೂಲಕ ಬಿಸಿಯಾಗಿರುವ ವಸ್ತುವಿನ ಉಷ್ಣಾಂಶವನ್ನು ತಿಳಿದುಕೊಳ್ಳಬಹುದು.

ADVERTISEMENT

ಆಪ್ಟಿಕಲ್ ಪೈರೊಮೀಟರ್ (Optical Pyrometer) ಎಂಬ ಇನ್ನೊಂದು ಬಗೆಯ ಪೈರೊಮೀಟರ್ ಇದೆ. ಇದು ಬಿಸಿಯಾದ ವಸ್ತುವಿನಿಂದ ಬರುವ ಬೆಳಕನ್ನು ಗ್ರಹಿಸಿ ಉಷ್ಣಾಂಶವನ್ನು ತಿಳಿಸುತ್ತದೆ. ಆಪ್ಟಿಕಲ್ ಪೈರೊಮೀಟರ್ ಶಾಖದಿಂದ ಬೆಳಗುವ ಒಂದು ವಸ್ತುವಿನ ಉಷ್ಣಾಂಶವನ್ನು ತೋರಿಸುತ್ತದೆ. ಅಳತೆಗಳನ್ನು ಗುರುತು ಮಾಡಿದ ಇನ್‌ಕ್ಯಾಂಡೆಸೆಂಟ್ ಫಿಲಮೆಂಟ್ ಒಂದನ್ನು ಅದರಲ್ಲಿ ಅಳವಡಿಸಲಾಗುತ್ತದೆ. ನೋಟದಿಂದಲೇ ಈ ಉಷ್ಣಾಂಶವನ್ನು ನಾವು ತಿಳಿದುಕೊಳ್ಳಬಹುದು. ವಸ್ತುವಿನ ಉಷ್ಣಾಂಶಕ್ಕೆ ಅನುಗುಣವಾಗಿ, ಬೆಳಕಿನ ಉಜ್ವಲತೆ ಮತ್ತು ಬಣ್ಣ ಬದಲಾಯಿಸುತ್ತದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.