ADVERTISEMENT

ನಿರ್ಭೀತ ನ್ಯಾಯಮೂರ್ತಿ ಜಸ್ತಿ ಚೆಲಮೇಶ್ವರ

ಎ.ಎಸ್‌.ಪೊನ್ನಣ್ಣ
Published 24 ಜೂನ್ 2018, 5:23 IST
Last Updated 24 ಜೂನ್ 2018, 5:23 IST
ಚೆಲಮೇಶ್ವರ
ಚೆಲಮೇಶ್ವರ   

‘ನಾನು ದಂತಗೋಪುರದಲ್ಲಿ ಕುಳಿತ ನ್ಯಾಯಮೂರ್ತಿಯಲ್ಲ. ಆಂದೋಲನದ ದೂಳು ನನಗೆಂದೂ ವರ್ಜ್ಯವಲ್ಲ’ ಎಂದು ನ್ಯಾಯಾಂಗದೊಳಗೆ ಕೊತಕೊತ ಕುದಿಯುತ್ತಿದ್ದ ಅಸಮಾಧಾನಗಳ ವಿರುದ್ಧ ಪಾಂಚಜನ್ಯ ಮೊಳಗಿಸಿದ ಸುಪ್ರೀಂ ಕೋರ್ಟ್‌ನ ಅತ್ಯಂತ ಹಿರಿಯ ನ್ಯಾಯಮೂರ್ತಿ ಜಸ್ತಿ ಚೆಲಮೇಶ್ವರ್ ಎರಡು ದಿನಗಳ ಹಿಂದಷ್ಟೇ ನಿವೃತ್ತರಾಗಿದ್ದಾರೆ. ಕರ್ತವ್ಯದ ಕೊನೆಯ ದಿನ ನ್ಯಾಯಮೂರ್ತಿಗಳಿಂದ ಮತ್ತು ವಕೀಲರ ಪರಿಷತ್‌ ವತಿಯಿಂದ ನೀಡಲಾಗುವ ಬೀಳ್ಕೊಡುಗೆಯನ್ನು ನಯವಾಗಿಯೇ ತಿರಸ್ಕರಿಸಿ ತಮ್ಮ ಪತ್ನಿಯ ಜೊತೆ ಸರಳವಾಗಿ ದೆಹಲಿಯಿಂದ ಹೈದರಾಬಾದ್‌ಗೆ ಮರಳಿದ್ದಾರೆ.

ಯಾರೇ ಆಗಲಿ ಅಧಿಕಾರದಲ್ಲಿದ್ದಾಗ ಒಳಗಿನ ಕೆಡುಕು, ದೋಷಗಳ ಬಗ್ಗೆ ಮಾತನಾಡುವುದು ಕಮ್ಮಿ. ಆದರೆ, ಚೆಲಮೇಶ್ವರ್ ತಮ್ಮ ನಿವೃತ್ತಿಗೆ ಮೂರು ತಿಂಗಳಿದೆ ಎನ್ನುವಾಗ ಮುಖ್ಯ ನ್ಯಾಯಮೂರ್ತಿ ದೀಪಕ್‌ ಮಿಶ್ರಾ ನಡೆಗೆ ಸಿಡಿದೆದ್ದು, ಸಹೋದ್ಯೋಗಿ ನ್ಯಾಯಮೂರ್ತಿಗಳಾದ ರಂಜನ್‌ ಗೊಗೊಯ್‌, ಎಂ.ಬಿ.ಲೋಕೂರ್ ಮತ್ತು ಕುರಿಯನ್ ಜೋಸೆಫ್‌ ಜೊತೆಗೂಡಿ ಮಾಧ್ಯಮಗೋಷ್ಠಿ ನಡೆಸಿದರು. ‘ಪ್ರಕರಣಗಳನ್ನು ಹಂಚಿಕೆ ಮಾಡುವಲ್ಲಿ ಮುಖ್ಯ ನ್ಯಾಯಮೂರ್ತಿ ತರತಮ ತೋರುತ್ತಿದ್ದಾರೆ’ ಎಂದು ಗಟ್ಟಿದನಿಯಲ್ಲಿ ಪ್ರತಿಭಟಿಸಿದರು. ‘ನ್ಯಾಯಾಂಗದ ಸ್ವಾತಂತ್ರ್ಯ ಸಂಕಟದ ಕಾಲದಲ್ಲಿದೆ’ ಎಂದು ಎಚ್ಚರಿಸಿದರು. ನ್ಯಾಯಮೂರ್ತಿಗಳು ಪತ್ರಿಕಾಗೋಷ್ಠಿ ನಡೆಸಬಾರದು ಎಂಬ ಹದ್ದುಮೀರಿ, ನ್ಯಾಯಾಂಗದ ಘನ ಪರಂಪರೆಯನ್ನು ಪುಡಿಗಟ್ಟಿದ ಖ್ಯಾತಿ– ಅಪಖ್ಯಾತಿಗಳೆರಡಕ್ಕೂ ಗುರಿಯಾದರು. ಸ್ವತಂತ್ರ ಭಾರತದ ಇತಿಹಾಸದಲ್ಲಿ ಮೊದಲ ಬಾರಿಗೆ ನ್ಯಾಯಾಂಗದ ಒಳಗಿನ ಅತೃಪ್ತಿಯನ್ನು ಬೀದಿಯಲ್ಲಿ ಬಿಚ್ಚಿಟ್ಟು, ‘ನಾನು ಮಂದಗಾಮಿ ನ್ಯಾಯಮೂರ್ತಿಯಲ್ಲ’ ಎಂದು ಎಲ್ಲರನ್ನೂ ದಂಗುಬಡಿಸಿದರು. ದಿನ ಬೆಳಗಾಗುವುದರೊಳಗೆ ಯಾರು ಈ ಚೆಲಮೇಶ್ವರ್ ಎಂದು ಜನಸಾಮಾನ್ಯರು ಹುಬ್ಬೇರಿಸುವಂತೆ ಮಾಡಿದರು.

‘ಕರಗುತ್ತಿರುವ ಪ್ರಾಮಾಣಿಕತೆ, ಬೆಳೆಯುತ್ತಿರುವ ಭ್ರಷ್ಟಾಚಾರ, ಪಕ್ಷಪಾತಿ ತೀರ್ಪು ನೀಡುವಿಕೆ, ಅಧಿಕಾರಾರೂಢ ಜನರ ಪ್ರಭಾವಗಳಿಂದ ಜನತಂತ್ರದ ಆಶಾಸೌಧವೆನಿಸಿದ ನ್ಯಾಯಾಂಗ ಸೊರಗುತ್ತಿದೆ’ ಎಂಬ ಆರೋಪಗಳ ಕಾಲದಲ್ಲೇ ಚೆಲಮೇಶ್ವರ್‌, ‘ಅನ್ಯಾಯಗಳ ಪರಿಮಾರ್ಜನೆಗೆ ದನಿಯೆತ್ತಲು ನಾನು ಹಿಂದೇಟು ಹಾಕುವುದಿಲ್ಲ’ ಎಂಬುದನ್ನು ನಿಶ್ಚಿತವಾಗಿ ಎತ್ತಿ ತೋರಿಸಿದರು.

ADVERTISEMENT

ಎತ್ತರದ ನಿಲುವಿನ, ಗುಂಗುರು ಕೂದಲ, ಕಪ್ಪು ವರ್ಣದ ಚೆಲಮೇಶ್ವರ್‌ ಆಂಧ್ರಪ್ರದೇಶದ ಪ್ರಬಲ ಕಮ್ಮ ಸಮುದಾಯಕ್ಕೆ ಸೇರಿದವರು. ಆಂಧ್ರದ ಪೂರ್ವ ಕರಾವಳಿ ತೀರದ ಮೂವ್ವ ತಾಲ್ಲೂಕಿನ ಪೆದ್ದಮುತ್ತೇವಿ ಗ್ರಾಮ ಇವರ ಹುಟ್ಟೂರು. ಈ ಗ್ರಾಮದಲ್ಲಿ 3 ಸಾವಿರ ಜನರೂ ವಾಸ ಮಾಡುವುದಿಲ್ಲ!. ಇಂತಹ ಪುಟ್ಟ ಗ್ರಾಮದಲ್ಲಿ ಚೆಲಮೇಶ್ವರ್ 1953ರ ಜೂನ್‌ 23ರಂದು ಜನಿಸಿದರು.

ತಂದೆ ಜಸ್ತಿ ಲಕ್ಷ್ಮಿನಾರಾಯಣ ಕೂಡಾ ವಕೀಲರು. ತಾಯಿ ಅನ್ನಪೂರ್ಣಮ್ಮ ಗೃಹಿಣಿ. ಮಚಲೀಪಟ್ಟಣದ ಹಿಂದೂ ಪ್ರೌಢಶಾಲೆಯಲ್ಲಿ ಪ್ರಾಥಮಿಕ ವಿದ್ಯಾಭ್ಯಾಸ ಪೂರೈಸಿ, ಕಾಲೇಜು ಕಲಿಯಲು ಚೆನ್ನೈಗೆ (ಅಂದಿನ ಮದ್ರಾಸ್‌) ತೆರಳಿದ ಚೆಲಮೇಶ್ವರ್‌, ಲೊಯೊಲಾ ಕಾಲೇಜಿನಲ್ಲಿ ಭೌತಶಾಸ್ತ್ರದ ವಿದ್ಯಾರ್ಥಿಯಾಗಿದ್ದವರು. ಪದವಿ ಬಳಿಕ ವಿಶಾಖಪಟ್ಟಣಂನ ಆಂಧ್ರ ವಿಶ್ವವಿದ್ಯಾಲಯದಿಂದ 1976ರಲ್ಲಿ ಕಾನೂನು ಪದವಿ ಪಡೆದರು.

ಆಂಧ್ರಪ್ರದೇಶದ ಹೈಕೋರ್ಟ್‌ನಲ್ಲಿ 19 ವರ್ಷಗಳ ಕಾಲ ವಕೀಲಿಕೆ ನಡೆಸಿದ ನಂತರ ‘ಹಿರಿಯ ವಕೀಲ’ ಎಂಬ ಉಪಾಧಿ ಅವರ ಮುಡಿಗೇರಿತು. ‘ನಾನು ಎನ್‌.ಟಿ. ರಾಮರಾವ್‌ ಅಭಿಮಾನಿ’ ಎಂದು ಎದೆಯುಬ್ಬಿಸಿ ಹೇಳಿಕೊಳ್ಳುತ್ತಿದ್ದ ಚೆಲಮೇಶ್ವರ್‌, 1995ರಲ್ಲಿ ಆಂಧ್ರಪ್ರದೇಶ ಹೈಕೋರ್ಟ್‌ ಹೆಚ್ಚುವರಿ ಅಡ್ವೊಕೇಟ್‌ ಜನರಲ್‌ ಆದರು. ಅದೇ ವರ್ಷ ಆಂಧ್ರಪ್ರದೇಶ ಹೈಕೋರ್ಟ್‌ ನ್ಯಾಯಮೂರ್ತಿಯಾಗಿಯೂ ನೇಮಕಗೊಂಡರು. 2007ರ ಮೇ 3ರಂದು ಗುವಾಹಟಿ ಹೈಕೋರ್ಟ್‌ ಮುಖ್ಯ ನ್ಯಾಯಮೂರ್ತಿಯಾಗಿ ಪದೋನ್ನತಿ ಹೊಂದಿದರು. 2010ರ ಮಾರ್ಚ್‌ 17ರಂದು ಕೇರಳ ಹೈಕೋರ್ಟ್‌ ಮುಖ್ಯ ನ್ಯಾಯಮೂರ್ತಿಯಾಗಿ ವರ್ಗಾವಣೆಯಾದರು. 2011ರ ಅಕ್ಟೋಬರ್‌ನಲ್ಲಿ ಸುಪ್ರೀಂ ಕೋರ್ಟ್‌ ನ್ಯಾಯಮೂರ್ತಿಯಾದರು.

‘ಪುಸ್ತಕದ ಹುಳು’ ಎಂದು ಜರೆಯುವಷ್ಟು ಓದುವ ಅಭ್ಯಾಸ ಹೊಂದಿರುವ ಚೆಲಮೇಶ್ವರ್‌, ವಕೀಲರಾಗಿ ಮತ್ತು ನ್ಯಾಯಮೂರ್ತಿಯಾಗಿ 42 ವರ್ಷಗಳ ಸುದೀರ್ಘ ಹಾದಿ ಸವೆಸಿದ್ದಾರೆ. ಕಿರಿಯ ವಕೀಲರು ವಾದ ಮಾಡುತ್ತಿದ್ದರೆ, ಗಲ್ಲಕ್ಕೆ ಕೈಹಚ್ಚಿ ಎನ್‌ಟಿಆರ್ ಸ್ಟೈಲ್‌ನಲ್ಲೇ ಕುಳಿತಿರುತ್ತಿದ್ದ ಚೆಲಮೇಶ್ವರ್ ಠೀವಿಯನ್ನು ಯಾರೂ ಮರೆಯುವುದಿಲ್ಲ. ಕೋರ್ಟ್‌ಹಾಲ್‌ನಲ್ಲಿ ಮೈಕ್ರೋಫೋನ್‌ ಬಳಸುತ್ತಿದ್ದ ಏಕೈಕ ನ್ಯಾಯಮೂರ್ತಿ ಎನಿಸಿದ್ದ ಇವರಿಗೆ ತೆಲುಗು ಸಾಹಿತ್ಯದಲ್ಲಿ ಅಪಾರ ಆಸಕ್ತಿ. ವಿದೇಶಗಳಲ್ಲಿರುವ ತೆಲುಗರಲ್ಲಿಯೂ ಇವರು ಅತ್ಯಂತ ಜನಪ್ರಿಯ ವ್ಯಕ್ತಿ.

ನ್ಯಾಯಮೂರ್ತಿಗಳ ನೇಮಕಕ್ಕೆ ಸಂಬಂಧಿಸಿದಂತೆ ಕೊಲಿಜಿಯಂ ಪದ್ಧತಿ ವಿರೋಧಿಸುತ್ತಿದ್ದ ಇವರು, ರಾಷ್ಟ್ರೀಯ ನ್ಯಾಯಂಗ ನೇಮಕ ಆಯೋಗದ (ಎನ್‌ಜೆಎಸಿ) ಪರ ಒಲವು ವ್ಯಕ್ತಪಡಿಸಿದಂತಹವರು. ತಮ್ಮ ಸಂವೇದನಾಶೀಲ ತೀರ್ಪುಗಳ ಮೂಲಕ ಸಾಕಷ್ಟು ಬಾರಿ ಸುದ್ದಿಯ ಮುನ್ನೆಲೆಯಲ್ಲಿದ್ದವರು. ಇವರ ಮಹತ್ವದ ತೀರ್ಪುಗಳ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಲೋಸುಗ ಈಗ್ಗೆ ಎರಡು ವರ್ಷಗಳ ಹಿಂದೆ
ಅಮೆರಿಕದ ಇಲಿನಾಯ್ಸ್ ಪ್ರಾಂತ್ಯದ ನೇಪರ್‌ವಿಲ್ಲೆಯಲ್ಲಿ ಅಕ್ಟೋಬರ್ 14 ಅನ್ನು ‘ಜಸ್ತಿ ಚೆಲಮೇಶ್ವರ್ ದಿನ’ ಎಂದೇ ಆಚರಿಸಲಾಯಿತು.

‘ಎಲೆಕ್ಟ್ರಾನಿಕ್‌ ಮಾಧ್ಯಮದಲ್ಲಿ ಆಕ್ಷೇಪಾರ್ಹ ಸಂದೇಶ ರವಾನಿಸಿದವರನ್ನು ಬಂಧಿಸಿ ಮೂರು ವರ್ಷಗಳ ಕಾಲ ಜೈಲಿಗೆ ತಳ್ಳಲು ಅವಕಾಶ ಕಲ್ಪಿಸಿದ್ದ ಮಾಹಿತಿ ತಂತ್ರಜ್ಞಾನ ಕಾಯ್ದೆಯ ಕಲಂ 66 ‘ಎ’ ಅನ್ನು 2015ರಲ್ಲಿ ರದ್ದುಗೊಳಿಸಿದ ನ್ಯಾಯಮೂರ್ತಿ ಚೆಲಮೇಶ್ವರ್ ತಮ್ಮ ತೀರ್ಪಿನಲ್ಲಿ ಹೇಳಿದ್ದೇನೆಂದರೆ; ‘ಇದೊಂದು ರೀತಿ ನೀಹಾರಿಕೆ ರೂಪದಲ್ಲಿರುವ ಅಸಾಂವಿಧಾನಿಕ ಕಾನೂನು. ಒಬ್ಬರಿಗೆ ಕಿರಿಕಿರಿ ಅನ್ನಿಸಬಹುದಾದ ವಿಚಾರ ಮತ್ತೊಬ್ಬರಿಗೆ ಅನ್ನಿಸಲಿಕ್ಕಿಲ್ಲ. ಚರ್ಚೆ, ಪ್ರತಿಪಾದನೆ ಮತ್ತು ಚಿತಾವಣೆಗಳ ನಡುವೆ ಇರುವ ಗೆರೆಯನ್ನು ನಾವು ಸೂಕ್ಷ್ಮವಾಗಿ ಗುರುತಿಸಬೇಕು’ ಎನ್ನುವ ಮೂಲಕ ಅಭಿವ್ಯಕ್ತಿ ಸ್ವಾತಂತ್ರ್ಯದ ಪಾರಮ್ಯವನ್ನು ಎತ್ತಿಹಿಡಿದರು.

‘ಈ ದೇಶದ ನಾಗರಿಕನಿಗೆ 12 ಅಂಕಿಗಳ ಆಧಾರ್ ಕಾರ್ಡ್‌ ಇಲ್ಲವೆಂದಾಕ್ಷಣ ಅವನಿಗೆ ದೊರೆಯಬೇಕಾದ ಮೂಲ ಸೌಕರ್ಯಗಳಿಗೆ ಅಡ್ಡಿ ಉಂಟು ಮಾಡುವುದು ಸಲ್ಲ’ ಎಂದು ಆಧಾರ್ ಪ್ರಕರಣದಲ್ಲಿ ತಮ್ಮ ಖಡಕ್‌ ಅಭಿಪ್ರಾಯ ವ್ಯಕ್ತಪಡಿಸಿದರು. ನ್ಯಾಯಮೂರ್ತಿ ಪುಟ್ಟಸ್ವಾಮಿ ಪ್ರಕರಣದಲ್ಲಿ ‘ಖಾಸಗಿತನದ ಹಕ್ಕು ಮೂಲಭೂತ ಹಕ್ಕು’ ಎಂದು ಹೇಳಿದ್ದು ಐತಿಹಾಸಿಕ ಎನಿಸಿದೆ ಅಲ್ಲದೆ, ಜಾಗತಿಕ ಚರ್ಚೆಗೆ ಅವಕಾಶ ಮಾಡಿಕೊಟ್ಟಿದೆ.

2018ರ ಜನವರಿ 12ರಂದು ಸುಪ್ರೀಂ ಕೋರ್ಟ್‌ನ ನಾಲ್ವರು ಹಿರಿಯ ನ್ಯಾಯಮೂರ್ತಿಗಳು ಚೆಲಮೇಶ್ವರ್ ನೇತೃತ್ವದಲ್ಲಿ ನಡೆಸಿದ ಮಾಧ್ಯಮ ಗೋಷ್ಠಿಗೆ ಪ್ರಶಂಸೆಯ ಪ್ರಮಾಣದಷ್ಟೇ ಟೀಕೆಗಳೂ ಕೇಳಿ ಬಂದವು. ‘ನ್ಯಾಯಮೂರ್ತಿಗಳು ತಮ್ಮ ತೀರ್ಪುಗಳ ಮುಖಾಂತರ ಮಾತಾಡಬೇಕೇ ಹೊರತು ಪತ್ರಿಕಾಗೋಷ್ಠಿ ನಡೆಸಿದರೆ ನ್ಯಾಯಾಂಗದ ಪಾವಿತ್ರ್ಯ ಎಲ್ಲಿ ಉಳಿದೀತು’ ಎಂದು ಕುಟಕಿದ್ದ ಸುಪ್ರೀಂ ಕೋರ್ಟ್‌ನ ನಿವೃತ್ತ ನ್ಯಾಯಮೂರ್ತಿ ಆರ್.ಎಸ್‌. ಸೋಧಿ, ‘ಈ ನಾಲ್ವರೂ ನ್ಯಾಯಮೂರ್ತಿಗಳ ವಿರುದ್ಧ ವಾಗ್ದಂಡನೆ ವಿಧಿಸಬೇಕು’ ಎಂದು ಆಗ್ರಹಿಸಿದ್ದರು.

‘ಸುಪ್ರೀಂ ಕೋರ್ಟ್‌ನ ಆಂತರಿಕ ವಿಷಯಗಳನ್ನು ನ್ಯಾಯಮೂರ್ತಿಗಳು ಬಹಿರಂಗವಾಗಿ ಮಾಧ್ಯಮದ ಮುಂದೆ ಬಂದು ಚರ್ಚಿಸುವುದು ಎಷ್ಟು ಸರಿ’ ಎಂಬ ಪ್ರಶ್ನೆಗೆ ಇನ್ನೂ ಸರಿಯಾದ ಉತ್ತರ ಸಿಕ್ಕಿಲ್ಲ.

ನಿವೃತ್ತಿಯ ನಂತರ ಚೆಲಮೇಶ್ವರ್, ‘ನಾನು ಸುಪ್ರೀಂಕೋರ್ಟ್‌ನ 231 ಅಥವಾ 232ನೇ ನ್ಯಾಯಮೂರ್ತಿ ಇರಬಹುದು. ನನ್ನ ನಂತರವೂ ಸಾಕಷ್ಟು ಜನ ನನ್ನ ಸ್ಥಾನಕ್ಕೆ ಬರುತ್ತಾರೆ. ಆದರೆ, ನ್ಯಾಯಮೂರ್ತಿಯಾಗಿ ಸ್ವೀಕರಿಸಿದ ಪ್ರತಿಜ್ಞೆಗೆ ತಕ್ಕಂತೆ ನನಗೊಪ್ಪಿಸಿದ್ದ ಕರ್ತವ್ಯವನ್ನು ಪ್ರಾಮಾಣಿಕವಾಗಿ ನಿರ್ವಹಿಸಿದ್ದೇನೆ’ ಎಂಬ ಸಂತೃಪ್ತಿಯ ನುಡಿಗಳನ್ನು ಹೊರ ಹಾಕಿದ್ದಾರೆ.

ಸುಪ್ರೀಂ ಕೋರ್ಟ್‌ನ ನಿವೃತ್ತ ಮುಖ್ಯ ನ್ಯಾಯಮೂರ್ತಿ ಎಂ.ಎನ್. ವೆಂಕಟಾಚಲಯ್ಯ ಅವರ ಮಾತಿನಲ್ಲೇ ಹೇಳುವುದಾದರೆ, ‘ನ್ಯಾಯ, ಸತ್ಯ ಮತ್ತು ಧೈರ್ಯಗಳನ್ನು ತನ್ನ ಆತ್ಮಸಂಗಾತಿಗಳನ್ನಾಗಿ ಮಾಡಿಕೊಂಡಿರುವ ಚೆಲಮೇಶ್ವರ್‌ ಕೋರ್ಟ್‌ನಲ್ಲಿರುವ ಸನ್ಯಾಸಿ!

ಲೇಖಕ: ಹೆಚ್ಚುವರಿ ಅಡ್ವೊಕೇಟ್‌ ಜನರಲ್‌

ನಿರೂಪಣೆ: ಬಿ.ಎಸ್‌.ಷಣ್ಮುಖಪ್ಪ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.