ADVERTISEMENT

ಅಧಿಕ ಕಾಫಿ ಸೇವನೆ ಗರ್ಭಪಾತದ ಹೆಚ್ಚಳ

​ಪ್ರಜಾವಾಣಿ ವಾರ್ತೆ
Published 4 ಏಪ್ರಿಲ್ 2016, 19:30 IST
Last Updated 4 ಏಪ್ರಿಲ್ 2016, 19:30 IST
ಅಧಿಕ ಕಾಫಿ ಸೇವನೆ ಗರ್ಭಪಾತದ ಹೆಚ್ಚಳ
ಅಧಿಕ ಕಾಫಿ ಸೇವನೆ ಗರ್ಭಪಾತದ ಹೆಚ್ಚಳ   

ಅಧಿಕ ಚಹಾ ಅಥವಾ ಕಾಫಿ ಸೇವನೆ ಒಳ್ಳೆಯದು ಹೌದೋ ಅಲ್ಲವೋ ಎಂಬ ಬಗ್ಗೆ ಈಗಾಗಲೇ ಹಲವಾರು ಅಧ್ಯಯನಗಳು ನಡೆದಿವೆ. ಅದರಲ್ಲಿ ಎರಡೂ ರೀತಿಯ ಫಲಿತಾಂಶ ಬಂದಿದೆ. ಕೆಲವರು ಇವುಗಳ ಸೇವನೆಯಿಂದ ಯಾವುದೇ ಸಮಸ್ಯೆ ಇಲ್ಲ ಎಂದಿದ್ದರೆ, ಇನ್ನು ಕೆಲವು ಅಧ್ಯಯನಗಳ ಪ್ರಕಾರ ಇವುಗಳ ಸೇವನೆ ಅಪಾಯಕಾರಿ.

ಆದರೆ ರಾಷ್ಟ್ರೀಯ ಆರೋಗ್ಯ ಸಂಸ್ಥೆ ನಡೆಸಿರುವ ಅಧ್ಯಯನದ ಪ್ರಕಾರ, ಅಧಿಕ ಕಾಫಿ ಸೇವಿಸಿದರೆ ಗರ್ಭಪಾತ ಆಗುವ ಸಂಭವ ಹೆಚ್ಚು. ಈ ಕುರಿತು ಕಳೆದ ವಾರ ಅಧ್ಯಯನ ವರದಿಯನ್ನು ಬಹಿರಂಗಪಡಿಸಲಾಗಿದೆ. ಸುಖ ಪ್ರಸವ ಬಯಸುವ ಮಹಿಳೆ ಮಾತ್ರವಲ್ಲದೇ, ತಂದೆಯಾಗಬಯಸುವ ಪುರುಷ ಕೂಡ ಅಧಿಕ ಕಾಫಿ ಸೇವನೆ ಮಾಡುವುದು ಒಳಿತಲ್ಲ ಎಂದಿದೆ ವರದಿ.

ಮಗುವಿಗಾಗಿ ದಂಪತಿ ತಯಾರಿ ನಡೆಸಿರುವ ಸಂದರ್ಭಗಳಲ್ಲಿ, ಅದಕ್ಕೂ ಕೆಲವು ವಾರಗಳಿಗೆ ಮುಂಚಿತವಾಗಿ ಇಬ್ಬರಲ್ಲಿ ಒಬ್ಬರು ಪ್ರತಿದಿನ ಕನಿಷ್ಠ ಎರಡು ಲೋಟಗಳಷ್ಟು ಕಾಫಿ ಸೇವನೆ ಮಾಡುತ್ತಿದ್ದರೆ ಗರ್ಭಪಾತದ ಸಂಭವ ಹೆಚ್ಚು ಎನ್ನುವುದು ಸಂಶೋಧಕರ ವಾದ.   ಇದರಲ್ಲಿ ಅಧಿಕವಾಗಿರುವ ಕೆಫೇನ್‌ ಅಂಶವೇ ಮಗುವಿನ ಪ್ರಾಣಕ್ಕೆ ಕುತ್ತಾಗಲಿದೆ ಎಂದಿದ್ದಾರೆ ಅವರು.

ಇಷ್ಟೇ ಅಲ್ಲದೇ, ಗರ್ಭ ಧರಿಸಿದ ಮೊದಲ ಏಳು ತಿಂಗಳು ದಿನಕ್ಕೆ ಎರಡು ಬಾರಿ ಮಹಿಳೆ ಕೆಫೀನ್‌ ಅಂಶ ಇರುವ ಪಾನೀಯವನ್ನು ಸೇವಿಸುತ್ತಿದ್ದರೂ ಇಂಥ ಅನಾಹುತ ಸಂಭವಿಸುವ ಸಾಧ್ಯತೆ ಹೆಚ್ಚಿದೆ. 35 ವಯಸ್ಸಿನ ಮಹಿಳೆಯರಲ್ಲಿ ಗರ್ಭಪಾತದ ಸಾಧ್ಯತೆ ಎರಡು ಪಟ್ಟು ಹೆಚ್ಚು ಎಂದಿದ್ದಾರೆ ಸಂಶೋಧಕರಲ್ಲಿ ಒಬ್ಬರಾಗಿರುವ ಇಂಟ್ರಾಮ್ಯೂರಲ್ ಪಾಪ್ಯುಲೇಷನ್ ಹೆಲ್ತ್ ರಿಸರ್ಚ್ ನಿರ್ದೇಶಕ ಡಾ.ಜರ್ಮೇನ್ ಬುಕ್ ಲೂಯಿಸ್.

ಈ ಅಧ್ಯಯನಕ್ಕಾಗಿ 2005ರಿಂದ 2009ರವರೆಗೆ 12ದೇಶಗಳಿಂದ 501 ದಂಪತಿಯನ್ನು ಪರೀಕ್ಷೆಗೆ ಒಳಪಡಿಸಲಾಗಿತ್ತು. ಇದರಲ್ಲಿ 344 ದಂಪತಿ ಪೈಕಿ ಒಬ್ಬರಿಗಾದರೂ ಸಿಗರೇಟ್ ಸೇವನೆ, ಕಾಫಿ ಸೇವಿಸುವ ಚಟ ಅಧಿಕವಾಗಿತ್ತು. ಇನ್ನು ಕೆಲವರು ವಿವಿಧ ರೀತಿಯ ವಿಟಮಿನ್‌ಗಳನ್ನು ಸೇವಿಸುವ ಅಭ್ಯಾಸ ರೂಢಿಸಿಕೊಂಡಿದ್ದರು. ಇವರೆಲ್ಲ ಗರ್ಭ ಧರಿಸುವ ನಾಲ್ಕು ವಾರಗಳ ಮುಂಚೆಯೇ ಈ ಸೇವನೆಯನ್ನು ಅಧಿಕವಾಗಿ ಮಾಡುತ್ತಿದ್ದರು.

ಆ ಪೈಕಿ ಕಾಫಿ ಸೇವಿಸುವ ಮಹಿಳೆಯರಲ್ಲಿ ಉಳಿದವರಿಗಿಂತಲೂ ಅಧಿಕವಾಗಿ   ರಕ್ತದೊತ್ತಡ, ಹೃದಯ ಬಡಿತ ಹಾಗೂ ಮೂತ್ರ ವಿಸರ್ಜನೆಯಲ್ಲಿ ಏರುಪೇರಾಯಿತು. ಇಂಥ ಸಮಸ್ಯೆಯಿಂದ ಬಳಲಿದ ಮಹಿಳೆಯರ ಪೈಕಿ 98 ಮಂದಿಗೆ (ಶೇ 28ರಷ್ಟು) ಗರ್ಭ ಧರಿಸಿದ ಮೊದಲ 5–6 ತಿಂಗಳಿನಲ್ಲಿಯೇ  ಗರ್ಭಪಾತವಾಯಿತು. ಕೆಲ ಗರ್ಭಿಣಿಯರಲ್ಲಿ ಅಜೀರ್ಣ ಸಮಸ್ಯೆ, ನಿದ್ರಾಹೀನತೆಯೂ ಕಂಡುಬಂತು.

ಮಗು ಗರ್ಭದಲ್ಲಿ ಇದ್ದಾಗ ಮಹಿಳೆ ಸೇವಿಸುವ ಕೆಫೇನ್ ಅಂಶ ಆಕೆಯ ಮಾಸುಚೀಲದ (ಪ್ಲೆಸೆಂಟಾ) ಮೂಲಕ ಮಗುವಿನ ಶರೀರ ಸೇರುತ್ತದೆ. ಮಾಸುಚೀಲ ದೊಡ್ಡದಾಗುತ್ತಾ ಹೋದಂತೆ ಈ ಅಂಶವೂ ಹೆಚ್ಚುಹೆಚ್ಚಾಗಿ ಮಗುವಿಗೆ ಪೂರೈಕೆ ಆಗುತ್ತದೆ ಎನ್ನುತ್ತಾರೆ ಸಂಶೋಧಕರು.

ಹಲವರಿಗೆ ಕಾಫಿ ಸೇವಿಸದೇ ಇದ್ದರೆ ಏನೋ ಕಳೆದುಕೊಂಡಂಥ ಭಾವನೆ ಉಂಟಾಗುತ್ತದೆ. ಕೆಲಸ ಮಾಡಲೂ ಮನಸ್ಸು ಬರುವುದಿಲ್ಲ. ಅಂಥ ಅಭ್ಯಾಸ ಇರುವವರು ಕಾಫಿ ಕುಡಿಯಲೇಬೇಕು ಎಂದಾದರೆ ಗರಿಷ್ಠ 200ಮಿಲಿ ಗ್ರಾಂ ಕುಡಿಯಬಹುದು ಎಂದಿದೆ ಅಧ್ಯಯನ ತಂಡ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT