ADVERTISEMENT

ಅವಳಿಗೂ ಅವನಂಥ ಉಡುಪು!

ಪ್ರಜಾವಾಣಿ ವಿಶೇಷ
Published 5 ಜನವರಿ 2014, 19:30 IST
Last Updated 5 ಜನವರಿ 2014, 19:30 IST

ಗಂಡ ನಿನ್ನೆ ಧರಿಸಿದ ಕ್ವಾಡ್ರೈ ಪ್ಯಾಂಟ್‌ ಇವತ್ತು ಹೆಂಡತಿ ಧರಿಸಿ ಸಹೋದ್ಯೋಗಿಗಳ ಕಣ್ಸೆಳೆಯುತ್ತಾಳೆ. ವಾರ್ಡ್‌ರೋಬ್ ಹೊರಗಿನ ಹ್ಯಾಂಗರ್‌ನಿಂದ ಎತ್ತಿಕೊಂಡು ಅವನು ಇಂದು ಹಾಕಿರೋ ಜೀನ್ಸ್ ಪ್ಯಾಂಟು ಮತ್ತು ಅರೆತೋಳಿನ ಕಾಟನ್‌ ಶರ್ಟ್‌ ಆಚೆ ಮೊನ್ನೆ ಅವಳು ಧರಿಸಿದ್ದು.

ಇತ್ತೀಚಿನ ದಿನಗಳಲ್ಲಿ ಹೆಚ್ಚುತ್ತಿರುವ ‘ಯುನಿಸೆಕ್ಸ್ ಔಟ್‌ಫಿಟ್‌’ ಪರಿಕಲ್ಪನೆ ಇದು. ಅಂದರೆ ಪುರುಷರಿಗೂ ಸೈ ಮಹಿಳೆಯರಿಗೂ ಸೈ ಅನ್ನುವಂತಹ ವಿನ್ಯಾಸದ ಉಡುಪು. ಇದನ್ನು ಸಮಾನತೆಯ ಮಂತ್ರವನ್ನಾಧರಿಸಿದ ವಸ್ತ್ರಸಂಹಿತೆ ಅನ್ನೋಣವೇ?

ನಿಖಿತ್‌–ಪೂರ್ವಿ ದಂಪತಿ ಕಳೆದ ನಾಲ್ಕು ವರ್ಷಗಳಿಂದ ಈ ಮಂತ್ರವನ್ನು ಪಾಲಿಸುತ್ತಿದ್ದಾರಂತೆ. ‘ಮದುವೆಯಾದ ಹೊಸತರಲ್ಲಿ ನಾನು ತುಂಬಾ ಸಣ್ಣಗಿದ್ದೆ. ಇಬ್ಬರ ಪ್ಯಾಂಟ್– ಶರ್ಟ್ ಅಳತೆ ಒಂದೇ ಆಗಿತ್ತು. ಅವಳ ಬಟ್ಟೆ ಧರಿಸಿದಾಗ ನನಗೆ ಒಂಥರಾ ಕಂಫರ್ಟ್ ಫೀಲಿಂಗ್ ಇರೋದು. ಮುದ್ದಿನ ಮಡದಿ ನನ್ನೊಂದಿಗೇ ಇದ್ದಾಳೆ ಎಂಬ ಭಾವ. ಸಂಜೆ ಅವಳು ಹೇಳಿದ್ದೂ ಇದನ್ನೇ. ಅಂದಿನಿಂದ ನಾವಿಬ್ಬರೂ ಉಡುಪುಗಳ ಬಗ್ಗೆ ತಲೆಕೆಡಿಸಿಕೊಳ್ಳಲೇ ಇಲ್ಲ. ಅವಳೆಂದೂ ಚೂಡಿದಾರ್, ಸೀರೆ, ಮಿನಿ, ಮಿಡಿಗಳನ್ನು ಧರಿಸುವುದಿಲ್ಲ.

ಪ್ಯಾಂಟ್– ಶರ್ಟ್‌ನಷ್ಟು ಆರಾಮದಾಯಕ ಉಡುಗೆ ಬೇರೊಂದಿಲ್ಲ ಎಂಬುದು ಅವಳ ಅಭಿಪ್ರಾಯ. ನಾನೂ ಅದನ್ನು ಗೌರವಿಸುತ್ತೇನೆ. ಹೀಗಾಗಿ ಒಂದೇ ಶಾಪಿಂಗ್‌ನಲ್ಲಿ ಇಬ್ಬರೂ ಎರಡು ಬಗೆಯ ಉಡುಪುಗಳಿಗೆ ದುಡ್ಡು ವ್ಯಯಿಸುವ ಬದಲು ಯುನಿಸೆಕ್ಸ್ ಉಡುಪುಗಳನ್ನು ಹೆಚ್ಚಾಗಿ ಖರೀದಿಸುತ್ತೇವೆ. ನನ್ನ ಹೆಂಡತಿಯ ಚಿಂತನಾಕ್ರಮವೇ ಇಂತಹುದೊಂದು ಬದಲಾವಣೆಗೆ ಕಾರಣ’ ಎಂದು ನಿಖಿತ್ ಹೇಳುತ್ತಾನೆ.
ಯುನಿಸೆಕ್ಸ್ ಉಡುಪು ಪ್ಯಾಂಟು ಶರ್ಟುಗಳಿಗೆ ಸೀಮಿತವಾಗಿಲ್ಲ. ಗಂಡನ ಶೇರ್ವಾನಿಯ ಪೈಜಾಮಾ ಹೆಂಡತಿ ಹಾಕಿದರೂ ಗೊತ್ತಾಗುವುದಿಲ್ಲ. ಪಾಕಿಸ್ತಾನಿ ಶೈಲಿಯ ಪಠಾಣಿ ಪೈಜಾಮಾ, ಪಟಿಯಾಲ ಪೈಜಾಮಾಗಳದ್ದೂ ಇದೇ ಕತೆ.

ಶಾರ್ಟ್ಸ್, ಕಾರ್ಗೋ, ಕ್ರ್ಯೂ ನೆಕ್ ಟಿಶರ್ಟ್, ಜೀನ್ಸ್ ಮತ್ತು ಚಿನೋಸ್, ಪೋಲೊ ಶರ್ಟ್‌ ಯುನಿಸೆಕ್ಸ್ ಉಡುಪುಗಳಿಗೆ ಉತ್ತಮ ಉದಾಹರಣೆ. ಉಡುಗೆಗಳ ಮಾತು ಹೀಗಾಯ್ತು. ಆಕ್ಸೆಸರಿಗಳಲ್ಲಿಯೂ ಲಿಂಗ ಸಮಾನತೆಯನ್ನು ಕಾಯ್ದುಕೊಳ್ಳಬಹುದು. ಆದರೆ ಯಾವುದೇ ಯುನಿಸೆಕ್ಸ್ ಔಟ್‌ಫಿಟ್‌ಗಳನ್ನು ಖರೀದಿಸುವಾಗ ಅವುಗಳ ಅಳತೆ ಮತ್ತು ಫಿಟ್‌ನೆಸ್ ಬಗ್ಗೆ ಗಮನ ಹರಿಸಲೇಬೇಕು. ಹೆಣ್ಣುಮಕ್ಕಳು ತಮ್ಮ ಅಳತೆಗಿಂತ ಸ್ವಲ್ಪ ಸಡಿಲವಾದ ಪ್ಯಾಂಟು–ಶರ್ಟು ಧರಿಸುವುದು ಮತ್ತು ಪುರುಷರಂತೆ ಇನ್‌ಸರ್ಟ್‌ ಮಾಡಿ ಬೆಲ್ಟ್‌ ಧರಿಸುವ ಫ್ಯಾಷನ್ ಮತ್ತೆ ಬಂದಿದೆ. ಹೀಗೆ ಡ್ರೆಸ್‌ ಮಾಡಿದವಳನ್ನು ಕೆಲವರು ಆರಾಧನಾ ಭಾವದಿಂದ ನೋಡಿದರೆ, ಇನ್ನು ಕೆಲವರದು ಅಸೂಯೆಯ ನೋಟ. ಮತ್ತೊಂದಿಷ್ಟು ಮಂದಿಗೆ ಅವಳು ಮಾದರಿ ಆಗಿಬಿಡುತ್ತಾಳೆ. ಪುರುಷರ ಕಣ್ಣಲ್ಲಿ ಆಕೆ ರೆಬೆಲ್ ಆಗುವುದಂತೂ ಸತ್ಯ.

‘ಫ್ಯಾಷನ್ ಅಂದ್ರೆ ನಮ್ಮತನದ ಪ್ರಸ್ತುತಿ‘
ಯುನಿಸೆಕ್ಸ್ ಉಡುಗೆ ತೊಡುಗೆ ಗಂಡು–ಹೆಣ್ಣಿನ ನಡುವಿನ ಭೇದಭಾವನ್ನು ತೊಡೆದು ಹಾಕುತ್ತದೆ. ನಾನಂತೂ ರೂಪದರ್ಶಿಯಾಗಿಯೂ ಸಾಮಾನ್ಯವಾಗಿಯೂ ಬೋಲ್ಡ್ ಆಗಿ ಉಡುಪು ಧರಿಸಲು ಇಚ್ಛಿಸುತ್ತೇನೆ. ಆಗೆಲ್ಲ ನನ್ನ ಆಯ್ಕೆ ಯುನಿಸೆಕ್ಸ್ ಉಡುಗೆಗಳು. ಯುನಿಸೆಕ್ಸ್‌್ ಉಡುಪಿನಲ್ಲಿ ನೀವು ಸುಂದರವಾಗಿ, ಅಷ್ಟೇ ಟ್ರೆಂಡಿಯಾಗಿ ಕಾಣಿಸುತ್ತೀರಿ. ಉದ್ಯೋಗಸ್ಥ ಮಹಿಳೆಯರು ತಮ್ಮ ಕಚೇರಿಯಲ್ಲಿ ಸ್ಟೈಲ್‌ ದಿವಾ ಆಗುವ ಜತೆಗೆ ಬೋಲ್ಡ್ ಆಗಿಯೂ ಕಾಣಿಸುತ್ತಾರೆ. ಈ ಬಗೆಯ ಉಡುಪು ಧರಿಸಿದಾಗ ಪಾದರಕ್ಷೆ ಹಾಗೂ ಕೇಶಶೈಲಿಯನ್ನು ಕಡೆಗಣಿಸುವಂತಿಲ್ಲ. ಸಡಿಲವಾದ ಶರ್ಟು, ಆಕರ್ಷಕ ಬೂಟ್ಸ್ ಮತ್ತು ಸ್ಟೈಲಿಶ್ ಆಕ್ಸೆಸರಿಗಳನ್ನು ಧರಿಸಿ ಬಂದಳೆಂದರೆ ‘ಸ್ಟೈಲ್‌ ದಿವಾ’ ಆಗೋದು ಅವಳೇ.
ಫ್ಯಾಷನ್‌ ಅನ್ನೋದು ನಮ್ಮನ್ನು ನಾವು ಪ್ರಸ್ತುತಪಡಿಸಿಕೊಳ್ಳೋ ರೀತಿ ಅಷ್ಟೇ.
– ಸಂಧ್ಯಾ ಶೆಟ್ಟಿ, ರೂಪದರ್ಶಿ/ನಟಿ

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.