ADVERTISEMENT

ಉಡುಪು... ಹುರುಪು

​ಪ್ರಜಾವಾಣಿ ವಾರ್ತೆ
Published 7 ಡಿಸೆಂಬರ್ 2012, 5:12 IST
Last Updated 7 ಡಿಸೆಂಬರ್ 2012, 5:12 IST

ಸಪೂರ ದೇಹ, ಮೈಗಂಟಿದ ಬಣ್ಣಬಣ್ಣದ ಪೋಷಾಕು. ಇವನ್ನು ಧರಿಸಿ ಬೆಕ್ಕಿನ ಹೆಜ್ಜೆ ಇಡುತ್ತಾ ಸುಂದರಿಯರು ರ‌್ಯಾಂಪ್ ಮೇಲೆ ನಡೆದು ಬರುತ್ತಿದ್ದರೆ, ಕುಳಿತವರ ಕಣ್ಗಳು ಚೆಲುವನ್ನು ಹೀರಿಕೊಳ್ಳುತ್ತಿದ್ದವು.

ಮಿಸ್ ಇಂಡಿಯಾ ಸ್ಪರ್ಧೆಯನ್ನು ಉದ್ದೇಶವಾಗಿಟ್ಟುಕೊಂಡು ವಿನ್ಯಾಸಗೊಳಿಸಲಾಗಿರುವ ಬ್ರಾಂಡ್ `ರನ್‌ವೇ ಅಟ್ ಮ್ಯಾಕ್ಸ್' ಹಾಗೂ ಚಳಿಗಾಲದ ಉಡುಪುಗಳ ಸಂಗ್ರಹಕ್ಕೆ ಕೋರಮಂಗಲದ ಓಯಸಿಸ್ ಮಾಲ್‌ನಲ್ಲಿ ಚಾಲನೆ ನೀಡಲಾಯಿತು. ಫ್ಯಾಷನ್ ಶೋ ಕೂಡ ಈ ಸಂದರ್ಭದಲ್ಲಿ ಏರ್ಪಾಟಾಗಿತ್ತು. ವಿವಿಧ ವಿನ್ಯಾಸದ ಆ ಉಡುಪುಗಳನ್ನು ತೊಟ್ಟು ನಸುನಗುತ್ತಾ ಬೆಡಗಿಯರು ನಡೆಯುತ್ತಿದ್ದರೆ, `ಹೃದಯದ ಮೇಲೆ ಹೈಹೀಲ್ಡು ಹಾಕಿ ನಡೆದಂಗಾಯ್ತು' ಎಂದುಕೊಳ್ಳುತ್ತಿದ್ದವರು ಅಲ್ಲಿದ್ದರು.

ಜೋರಾಗಿ ಕೂಗಿಕೊಳ್ಳುತ್ತಿದ್ದ ರಾಕ್ ಸಂಗೀತಕ್ಕೆ ಪೂರಕವಾಗಿ ಬೆಡಗಿಯರು ಬಳುಕುತ್ತಾ ನಡೆದು ಬರುತ್ತಿದ್ದರು. ಅಲ್ಲಲ್ಲಿ ತುಸು ಜೋತು ಬಿಟ್ಟಂತೆ ವಿನ್ಯಾಸಗೊಳಿಸಲಾಗಿದ್ದ ವಸ್ತ್ರಗಳು ಒಡತಿಯ ಹೆಜ್ಜೆಗೆ ತಕ್ಕಂತೆ ನಾಚುತ್ತ ಬೀಗುತ್ತಿದ್ದವು. ಮುಂಗುರುಳನ್ನು ಉಬ್ಬಿಸಿ ವಿನ್ಯಾಸಗೊಳಿಸಲಾಗಿದ್ದ ಕೇಶರಾಶಿಗೂ ಉಡುಪಿಗೂ ಪಕ್ಕಾ ಹೇಳಿ ಮಾಡಿಸಿದಂಥ ಬಂಧನ. ಪಟ್ ಪಟ್ ಎಂದು ಹೆಜ್ಜೆ ಇಡುತ್ತಿದ್ದ ರೂಪದರ್ಶಿಯರು ರ‌್ಯಾಂಪ್ ತುದಿಗೆ ಬರುತ್ತಿದ್ದಂತೆ ತುಟಿ ಮುಂದೆ ಮಾಡಿ ಎದೆಯುಬ್ಬಿಸಿ ನಕ್ಕಾಗ ಕ್ಯಾಮೆರಾಗಳಲ್ಲೂ ಮಿಂಚಿನ ಸಂಚಾರ. ಮಾದಕ ನೋಟವನ್ನು ಎಲ್ಲರೆಡೆ ಬೀರಿ ಮತ್ತದೇ ವೇಗದಲ್ಲಿ ಹಿಂದೆ ಹೊರಟಾಗ ಇನ್ನೊಂದು ಸುತ್ತು ಬೆಕ್ಕಿನ ಹೆಜ್ಜೆ ಇಡಬಾರದೇಕೆ ಎಂದು ಮನಸ್ಸು ಬಯಸುತ್ತಿತ್ತು.

ಚೆಂದದ ಉಡುಪುಗಳನ್ನು ತೊಟ್ಟು ಮೆಚ್ಚುಗೆ ಪಡೆಯುತ್ತಿದ್ದ ಚೆಲುವೆಯರು ಒಳ ನಡೆದರೆ ಇನ್ಯಾವ ಹೊಸ ವಿನ್ಯಾಸದ ಉಡುಗೆ ತೊಟ್ಟು ಬರುತ್ತಾರೆ ಎಂದು ಎಲ್ಲರೂ ಕಾಯುತ್ತಿದ್ದರು. ಕ್ಷಣದಲ್ಲೇ ದೇಹದ ಅರ್ಧ ಭಾಗಕ್ಕಷ್ಟೇ ಚಾಚಿದ್ದ ನೇರಳೆ, ಗುಲಾಬಿ ಮಿಶ್ರಿತ ಉಡುಪು ತೊಟ್ಟ ಬೆಡಗಿ ಕಾಲಿಟ್ಟಳು.   ಕಿವಿಯಲ್ಲಿ ನೀಲಿ ಚಿಟ್ಟೆ ಹೇಗೆ ಬಂತು ಎಂದುಕೊಳ್ಳುವ ಹೊತ್ತಿಗೆ ಸೊಂಟದ ಮೇಲಿದ್ದ ಕೈ ನಿಧಾನವಾಗಿ ಮುಂಗುರಳನ್ನು ನೇವರಿಸಿ ಕಿವಿಯ ಬಳಿ ನಿಂತಿತು. `ಅರೆ, ಇದು ಉಡುಪಿಗೆ ಹೊಂದುವ ಕಿವಿಯೋಲೆ! ಮ್ಯಾಚಿಂಗ್ ಜಮಾನಾ ಅಲ್ಲವೆ' ಎಂದು ಮನಸ್ಸು ಉತ್ತರ ಹುಡುಕಿಕೊಂಡಿತು.

ವಸ್ತ್ರದ ವಿನ್ಯಾಸಕ್ಕೆ, ಬಣ್ಣದ ರಂಗಿಗೆ ಹೊಂದಿಕೊಳ್ಳುವಂಥ ಚಪ್ಪಲಿ, ಪ್ಯಾಂಟ್, ಜೊತೆಗೆ ಬ್ಯಾಗ್. ಯುವಮನಸ್ಸಿಗೆ ಬೇಕಾದಂಥ ವಿನ್ಯಾಸದ ಹಾಗೂ ಬಣ್ಣದ ವಸ್ತ್ರಗಳನ್ನು ನಾಜೂಕಾಗಿ ವಿನ್ಯಾಸಗೊಳಿಸಲಾಗಿದೆ ಎಂಬುದು ಇವುಗಳಿಂದಲೇ ಸ್ಪಷ್ಟವಾಗುತ್ತಿತ್ತು. `ದೇಶದ ವಿವಿಧ ಭಾಗಗಳಿಗೆ ಭೇಟಿ ನೀಡುತ್ತಿರುತ್ತೇವೆ. ಅಲ್ಲಿ ನೋಡುವ ವಿವಿಧ ವಿನ್ಯಾಸಗಳಿಗೆ ನಮ್ಮದೇ ಕಲ್ಪನೆಯ ರೆಕ್ಕೆ ಕಟ್ಟುತ್ತೇವೆ. ಫ್ಯಾಷನ್‌ಭರಿತ ಮ್ಯಾಚಿಂಗ್ ಇಂದಿನ ಟ್ರೆಂಡ್. ಬಾಯ್‌ಫ್ರೆಂಡ್ ಜಾಕೆಟ್ ಮತ್ತು ಬಾಯ್‌ಫ್ರೆಂಡ್ ಬಾಟಮ್ ಈಗೀಗ ಜನಪ್ರಿಯಗೊಳ್ಳುತ್ತಿದೆ. ಹೀಗಾಗಿ ಲಲನೆಯರು ಬಯಸುವ ವಿನ್ಯಾಸದ ವಸ್ತ್ರಗಳನ್ನು ಮ್ಯಾಕ್ಸ್‌ನಿಂದ ಪರಿಚಯಿಸುತ್ತಿದ್ದೇವೆ' ಎಂದರು ಮುಖ್ಯ ವಿನ್ಯಾಸಕಿ ಕಾಮಾಕ್ಷಿ ಕೌಲ್.

ಬೇರೆ ಬೇರೆ ಬಣ್ಣದ, ಮೈಗಂಟುವ ಪ್ರಿಂಟೆಡ್ ಬಾಟಮ್‌ಗಳು ವಿನೂತನವಾಗಿದ್ದು ಮನಸ್ಸಿಗೆ ಮೆಚ್ಚುಗೆಯಾಗುವಂತಿವೆ. ಹಾಗೆಯೇ ತಿಳಿ ಗುಲಾಬಿ, ನೇರಳೆ ಬಣ್ಣ ಮಿಶ್ರಿತ ಪ್ಲೇನ್ ಬಾಟಮ್‌ಗಳು ಯುವತಿಯ ಯೌವನಕ್ಕೆ ಇನ್ನಷ್ಟು ಮೆರಗು ನೀಡುತ್ತವೆ. ಕಾರ್ಯಕ್ರಮ ಪ್ರಾರಂಭವಾಗಿದ್ದು ಒಂದು ಗಂಟೆ ತಡವಾಗಿ. ಆದರೆ ಮ್ಯಾಕ್ಸ್ ಫ್ಯಾಷನ್ ಐಕಾನ್ ವಿಜೇತರಾದ ಶೋಭಿತಾ ದುಹಿಪಾಲ್, ಪಂಚಮಿ ರಾವ್, ದೆಬೋರಾ ಫೆಲ್ ಹಾಗೂ ಅಖಿಲಾ ಕಿಶೋರ್ ಹಾಜರಿದ್ದರಿಂದ ಎಲ್ಲರೂ ಅವರ ಛಾಯಾಚಿತ್ರ ಕ್ಲಿಕ್ಕಿಸುವುದರಲ್ಲಿ ಮಗ್ನವಾಗಿದ್ದರು.

ಕುಳಿತಲ್ಲೇ ಅವರಿಗೆ ನೀರು ಸರಬರಾಜಾಗುತ್ತಿತ್ತು. ಒಬ್ಬರಾದ ಮೇಲೊಬ್ಬರಂತೆ ಅವರ ಬಗ್ಗೆ ಕಾಳಜಿ ತೋರುತ್ತಾ ಏನು ಮಾತನಾಡಬೇಕು ಎಂಬುದನ್ನು ಹೇಳಿಕೊಡುವಷ್ಟು ಆಸಕ್ತಿ ವಹಿಸುತ್ತಿದ್ದುದನ್ನು ಕಂಡು ತಾರೆಗಳಿಗೆ ಸಿಕ್ಕಷ್ಟು ಸನ್ಮಾನ ಸಿಕ್ಕಿತಲ್ಲ ಎಂದುಕೊಳ್ಳುತ್ತಿತ್ತು ಮನಸ್ಸು. ಕಾರ್ಯಕ್ರಮದಲ್ಲಿ ಮ್ಯಾಕ್ಸ್‌ನ ಕಾರ್ಯನಿರ್ವಾಹಕ ನಿರ್ದೇಶಕ ವಸಂತ ಕುಮಾರ್ ಹಾಗೂ ಮಾರುಕಟ್ಟೆ ವಿಭಾಗದ ಪ್ರಧಾನ ವ್ಯವಸ್ಥಾಪಕ ಜಿತೇನ್ ಮಹೇಂದ್ರ ಮತ್ತಿತರರು ಉಪಸ್ಥಿತರಿದ್ದರು. `ಯುವಜನತೆ ಫ್ಯಾಷನ್ ಬಗ್ಗೆ ಹೆಚ್ಚಿನ ಒಲವು ತೋರುತ್ತಿರುವುದು ಸಂತಸ ತಂದಿದೆ. ಫ್ಯಾಷನ್ ಸ್ಪರ್ಧೆಯ ಕನಸು ಕಾಣುವ ಯುವತಿಯರಿಗಾಗಿ ರನ್‌ವೇಯನ್ನು ಪ್ರಾರಂಭಿಸಿದ್ದೇವೆ.

ಸದ್ಯದಲ್ಲೇ ದೇಶದ ವಿವಿಧೆಡೆ ಉಡುಪುಗಳನ್ನು ಪರಿಚಯಿಸಲಿದ್ದು, ಫ್ಯಾಷನ್ ಲೋಕದ ಯುವತಿಯರು ಇದರ ಪ್ರಯೋಜನ ಪಡೆಯಬಹುದು. ಅಂತರರಾಷ್ಟ್ರೀಯ ಫ್ಯಾಷನ್ ಉತ್ಸವಗಳಲ್ಲಿ ಮಿಂಚುವ ಆಧುನಿಕ ರೀತಿಯ ಸ್ಕರ್ಟ್, ಟಾಪ್, ಜಾಕೆಟ್, ಪ್ಯಾಂಟ್ ಮುಂತಾದವುಗಳು ಜನರಿಗೆ ಇಷ್ಟವಾಗುವುದರಲ್ಲಿ ಸಂಶಯವಿಲ್ಲ' ಎಂದು ಜಿತೇಂದ್ರ ಅಭಿಪ್ರಾಯಪಟ್ಟರು. `ಹೊಸದಾಗಿ ವಿನ್ಯಾಸಗೊಳಿಸಲಾಗಿರುವ ಎಲ್ಲಾ ಉಡುಪುಗಳು ಆರಾಮದಾಯಕವಾಗಿವೆ. ಬಣ್ಣದ ಸಂಯೋಜನೆ ತುಂಬಾ ಹಿಡಿಸಿದೆ. ಧರಿಸಿದ ಮೇಲೆ ನಮ್ಮ ಲುಕ್ಕೇ ಬದಲಾಗುತ್ತದೆ. ಎಲ್ಲಾ ವಯೋಮಾನದವರಿಗೂ ಹೋಲುವ ವಸ್ತ್ರಗಳು ಇಲ್ಲಿ ಲಭ್ಯವಿದ್ದು ಮ್ಯಾಕ್ಸ್ ನನ್ನ ನೆಚ್ಚಿನ ಬ್ರಾಂಡ್ ಆಗಿದೆ' ಎಂದು ನಗೆ ಬೀರಿದರು ರೂಪದರ್ಶಿ ರುಕ್ಷರ್.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT