ADVERTISEMENT

‘ಎಂತ ಸಕ್ಕಗುನ್ನಾವೇ...’ ಉಪಮಾನ ಉಪಮೇಯಗಳ ಹೊಗಳಿಕೆ

ಪೃಥ್ವಿರಾಜ್ ಎಂ ಎಚ್
Published 9 ಏಪ್ರಿಲ್ 2018, 19:30 IST
Last Updated 9 ಏಪ್ರಿಲ್ 2018, 19:30 IST
‘ರಂಗಸ್ಥಲಂ’ ಚಿತ್ರದಲ್ಲಿ ರಾಮ್‌ಚರಣ್ ತೇಜ
‘ರಂಗಸ್ಥಲಂ’ ಚಿತ್ರದಲ್ಲಿ ರಾಮ್‌ಚರಣ್ ತೇಜ   

ರಾಮ್‌ಚರಣ್ ಮತ್ತು ಸಮಂತಾ ಮುಖ್ಯ ಭೂಮಿಕೆಯಲ್ಲಿರುವ ತೆಲುಗು ಚಿತ್ರ ‘ರಂಗಸ್ಥಲಂ’ನ ‘ಎಂತ ಸಕ್ಕಗುನ್ನಾವೇ...’ (ಎಷ್ಟು ಚೆನ್ನಾಗಿರುವೆ) ಹಾಡು ಸಾಮಾಜಿಕ ಮಾಧ್ಯಮಗಳಲ್ಲಿ ಟ್ರೆಂಡಿಂಗ್ ಆಗಿದೆ. ಟಾಲಿವುಡ್‌ನ ಖ್ಯಾತ ಚಿತ್ರ ಸಾಹಿತಿ ಚಂದ್ರಬೋಸ್‌ ರಚನೆಯ ಹಾಡಿಗೆ ದೇವಿಶ್ರೀ ಪ್ರಸಾದ್ ಸಂಗೀತ ನೀಡುವ ಜೊತೆಗೆ ದನಿಯೂ ಆಗಿದ್ದಾರೆ.

ಸಂಗೀತದ ಜೊತೆಜೊತೆಗೆ ಕ್ಯಾಮೆರಾ ಕಸುಬುದಾರಿಕೆ, ಅಭಿನಯ, ಡಾನ್ಸ್ ಸಹ ಹಾಡಿನ ಯಶಸ್ಸಿಗೆ ತಮ್ಮದೇ ಆದ ಕೊಡುಗೆ ನೀಡಿವೆ. 4.25 ನಿಮಿಷ ಹಾಡನ್ನು ಯುಟ್ಯೂಬ್‌ಗೆ ಬಿಡುಗಡೆ ಮಾಡಿದ ಎರಡೇ ವಾರಗಳಲ್ಲಿ ಸುಮಾರು 2.7 ಕೋಟಿ ಜನ ಈ ಹಾಡನ್ನು ಕೇಳಿದ್ದು, ಅದರ ಜನಪ್ರಿಯತೆಯನ್ನು ತೋರಿಸಿಕೊಟ್ಟಿದೆ.

ತೆಲುಗು ಬಲ್ಲವರನ್ನು ಈ ಹಾಡು ಒಂದು ಕಾವ್ಯದಂತೆ ಸೆಳೆಯುತ್ತಿದೆ.

ADVERTISEMENT

‘ಮಣ್ಣಿನಲ್ಲಿ ನೆಲಗಡಲೆ ಹುಡುಕುವಾಗ ಸಿಕ್ಕ ನಿಧಿಪಾತ್ರೆಯಂತೆ

ಹುಣಸೆ ಚಿಗರು ಕೀಳಲು ಹೋದಾಗ ಸಿಕ್ಕ ಹುಣ್ಣಿಮೆ ಚಂದ್ರಮನಂತೆ

ಮುತ್ತೈದೆ ಕೊರಳಲ್ಲಿ ಅರಿಶಿನದ ಕೊಂಬಿನಂತೆ, ಚುಕ್ಕಿಗಳ ಸೀರೆ ಉಟ್ಟ ಬೆಳದಿಂಗಳಂತೆ

ಜಾತ್ರೆಯಲ್ಲಿ ಕಳೆದು ಹೋದ ಮಗುವಿಗೆ ಎದುರು ಸಿಕ್ಕ ತಾಯಿಯ ಕಿರುನಗೆಯಂತೆ...’

ಹೀಗೆ ಸಾಗುತ್ತದೆ ನಾಯಕಿಯ ವರ್ಣನೆ. ಚಿತ್ರದಲ್ಲಿ ನಾಯಕ ಹಳ್ಳಿ ಹುಡುಗ. ಇದನ್ನು ದೃಷ್ಟಿಯಲ್ಲಿಟ್ಟುಕೊಂಡೇ ಇಡೀ ಹಾಡಿನಲ್ಲಿ ಗ್ರಾಮೀಣ ಸೊಗಡು ಎದ್ದು ಕಾಣುವಂತೆ ಸಾಲುಗಳನ್ನು ಹೊಸೆಯಲಾಗಿದೆ.

ಇದು ಚಿತ್ರದ ಮೊದಲ ಹಾಡು. ನಾಯಕ, ನಾಯಕಿಯನ್ನು (ಸಮಂತಾ) ನೋಡಿದ ಕೂಡಲೇ ಪರವಶನಾಗಿ ಅವಳನ್ನು ವರ್ಣಿಸುವ ಹಾಡಿದು. ಹಾಡಿನ ಸಾಹಿತ್ಯ ಮತ್ತು ಧಾಟಿಯಿಂದ ಸ್ಫೂರ್ತಿ ಪಡೆದುಕೊಂಡಿರುವ ಅಭಿಮಾನಿಗಳು ಇದೇ ಧಾಟಿಯಲ್ಲಿ ಹಲವು ವಾಕ್ಯಗಳನ್ನು ಪೋಣಿಸಿ ಸಾಮಾಜಿಕ ಜಾಲತಾಣಗಳಲ್ಲಿ ಸಂಭ್ರಮಿಸುತ್ತಿದ್ದಾರೆ.

ಚಂದ್ರಬೋಸ್‌ ಸಾಹಿತ್ಯವು ಪವನ್ ಕಲ್ಯಾಣ್ ಅಭಿನಯದ ‘ಗಬ್ಬರ್‌ಸಿಂಗ್‌’ ಮತ್ತು ‘ಆರ್ಯ–2’ ಚಿತ್ರಗಳಲ್ಲಿಯೂ ಹಿಟ್ ಆಗಿದ್ದವು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.