ADVERTISEMENT

ಜೀವದ ಗೆಳತಿ ಕನಸಿನ ಒಡತಿ

​ಪ್ರಜಾವಾಣಿ ವಾರ್ತೆ
Published 2 ಮಾರ್ಚ್ 2018, 19:30 IST
Last Updated 2 ಮಾರ್ಚ್ 2018, 19:30 IST
ಜೀವದ ಗೆಳತಿ ಕನಸಿನ ಒಡತಿ
ಜೀವದ ಗೆಳತಿ ಕನಸಿನ ಒಡತಿ   

ನಾನು ಮೊದಲ ಬಾರಿ ಶ್ರೀದೇವಿಯನ್ನು ನೋಡಿದ್ದು ನನ್ನ ತಂದೆ ನಿರ್ದೇಶನದ ‘ನರ್ಜಾನಾ’ ಸಿನಿಮಾ ಚಿತ್ರೀಕರಣದ ವೇಳೆ. ಜಿನುಗುತ್ತಿರುವ ಮಳೆಯ ನಡುವೆ ಸೊಂಟ ಬಳುಕಿಸುತ್ತಿದ್ದ ಅವರ ಸೌಂದರ್ಯಕ್ಕೆ ಮೊದಲ ನೋಟದಲ್ಲಿಯೇ ಆಕರ್ಷಿತಳಾಗಿದ್ದೆ.

ಶ್ರೀದೇವಿ ಅವರ ನೃತ್ಯ ನೋಡುತ್ತಾ ನಾನೂ ನೃತ್ಯ ಕಲಿತೆ. ಅವರನ್ನು ಬಾಲ್ಯದಿಂದಲೂ ಅನುಕರಿಸುತ್ತಿದ್ದೆ. ‘ಮಿ. ಇಂಡಿಯಾ, ಲಮ್ಹೆ, ಚಾಲ್‌ಬಾಜ್‌...ಹೀಗೆ ಅವರ ಸಿನಿಮಾಗಳನ್ನು ನೋಡಿದ್ದ ನಾನು ಕನ್ನಡಿ ಮುಂದೆ ನಿಂತು ಅವರಂತೆಯೇ ಅಭಿನಯಿಸುತ್ತಿದ್ದೆ. ಎತ್ತರದ ಜೊತೆಗೆ ದೃಢ ವ್ಯಕ್ತಿತ್ವ ಹೊಂದಿದ್ದ ಶ್ರೀದೇವಿ, ಸಿನಿಕ್ಷೇತ್ರದ ಆಸ್ತಿ. ಬಹುಮುಖ ಪ್ರತಿಭೆಯ ಅವರು ಯಾವುದೇ ಪಾತ್ರ ನಿರ್ವಹಣೆಗೂ ಹಿಂಜರಿಯುತ್ತಿರಲಿಲ್ಲ. ಕಾಮಿಡಿ ಪಾತ್ರದಲ್ಲಿಯೂ ಅಷ್ಟೇ ಅದ್ಭುತವಾಗಿ ನಟಿಸುತ್ತಿದ್ದರು.

ಹೀಗೆ ಬಾಲ್ಯದಿಂದಲೂ ಆರಾಧಿಸುತ್ತಿದ್ದ ಈ ಸೌಂದರ್ಯ ದೇವತೆಯ ಜೊತೆಗೆ ನಟಿಸುವ ಅವಕಾಶ ನನಗೆ ದೊರಕಿದ್ದು ‘ಲಾಡ್ಲಾ’ ಸಿನಿಮಾದ ಮೂಲಕ. ಈ ಸಿನಿಮಾದಲ್ಲಿ ಅನಿಲ್ ಕಪೂರ್‌, ಶಕ್ತಿ ಕಪೂರ್‌, ದಿವ್ಯಾ ಭಾರತಿ ಮತ್ತು ನಾನು ಇದ್ದೆ. ದಿವ್ಯಾ ಭಾರತಿಯ ಅಕಾಲಿಕ ಸಾವಿನಿಂದಾಗಿ ಆ ಪಾತ್ರ ನಿರ್ವಹಣೆಯ ಅವಕಾಶ ಶ್ರೀದೇವಿಗೆ ದೊರಕಿತು.

ADVERTISEMENT

ಚಿತ್ರೀಕರಣದ ಮೊದಲ ದಿನವೇ ನಮ್ಮಿಬ್ಬರ ಸ್ನೇಹವಾಯಿತು. ಆ ಅದ್ಭುತ ಕ್ಷಣವನ್ನು ನಾನು ನೆನಪಿಸಿಕೊಳ್ಳಲೇ ಬೇಕು. ನಿಮಗೆ ಇದನ್ನು ಕೇಳಿದರೆ ವಿಚಿತ್ರ ಎನಿಸಲೂಬಹುದು. ಹಿಂದೆ ದಿವ್ಯಾ ಮಾಡಿದ ದೃಶ್ಯದ ಚಿತ್ರೀಕರಣವನ್ನು ಮತ್ತೊಮ್ಮೆ ಮಾಡಬೇಕಿತ್ತು. ನಾನು ಮತ್ತು ಶಕ್ತಿ ಕಚೇರಿಲ್ಲಿರುತ್ತೇವೆ. ನಮ್ಮಿಬ್ಬರಿಗೆ ಶ್ರೀದೇವಿ, ಬೆಂಕಿ ಹಚ್ಚುವ ದೃಶ್ಯವದು. ಈ ದೃಶ್ಯದ ಸಂಭಾಷಣೆ ಹೇಳುವಾಗ ಶ್ರೀದೇವಿಗೆ ಮುಂದುವರೆಸಲು ಆಗಲೇ ಇಲ್ಲ. ಹಿಂದೆ ದಿವ್ಯಾ ಕೂಡ ಇದೇ ಸಂಭಾಷಣೆಗೆ ಕಷ್ಟ ಪಟ್ಟಿದ್ದರು. ಐದಾರು ಸಲ ಪ್ರಯತ್ನ ಪಟ್ಟರೂ ಸಂಭಾಷಣೆ ಮುಂದುವರಿಸಲು ಸಾಧ್ಯವಾಗಲಿಲ್ಲ. ನಮ್ಮೆಲ್ಲರಿಗೂ ದಿಗಿಲಾಯಿತು. ‘ನಾವೆಲ್ಲರೂ ಪ್ರಾರ್ಥಿಸಿ, ನಂತರ ಚಿತ್ರೀಕರಣ ಶುರು ಮಾಡೋಣ’ ಎಂದು ಶಕ್ತಿ ಸಲಹೆ ನೀಡಿದರು. ಎಲ್ಲರೂ ಒಬ್ಬರ ಕೈಯನ್ನು ಮತ್ತೊಬ್ಬರು ಹಿಡಿದು ಪ್ರಾರ್ಥನೆಗೆ ಅಣಿಯಾದೆವು. ಆಗ ಶ್ರೀದೇವಿಯ ಕೈಯನ್ನು ನಾನು ಹಿಡಿದಿದ್ದೆ. ಅದು ನಮ್ಮ ಸ್ನೇಹದ ಪ್ರಾರಂಭಕ್ಕೆ ಮುನ್ನುಡಿ ಬರೆಯಿತು.

ಚಿತ್ರೀಕರಣದ ವೇಳೆ ಸಮಯ ಸಿಕ್ಕಾಗಲೆಲ್ಲ ನಾವಿಬ್ಬರೂ ಹರಟಲು ಶುರು ಮಾಡುತ್ತಿದ್ದೆವು. ಶ್ರೀದೇವಿ ನನ್ನ ಜೀವಕ್ಕಿಂತ ಹೆಚ್ಚು. ಪಾತ್ರದಲ್ಲಿ ಸಂಪೂರ್ಣ ತೊಡಗಿಸಿಕೊಳ್ಳುತ್ತಿದ್ದ ಅವಳು, ಎಲ್ಲಾ ಪೀಳಿಗೆಗೂ ಮಾದರಿ. ಹಿಂದಿ ಸಿನಿಮಾ ಮತ್ತು ಭಾರತ ಸಿನಿಮಾ ನಟಿಯರು ಹೇಗಿರಬೇಕು ಎಂಬುದಕ್ಕೆ ಆಕೆ ಟ್ರೆಂಡ್‌ ಸೆಟ್ಟರ್‌.

ಶ್ರೀದೇವಿ ಅದ್ಭುತ ನೃತ್ಯಗಾರ್ತಿ. ಜೊತೆಗೆ ಭಾವನಾತ್ಮಕ, ಬೋಲ್ಡ್‌, ಕಾಮಿಡಿ... ಹೀಗೆ ಯಾವುದೇ ಪಾತ್ರವನ್ನಾದರೂ ಮೈಚಳಿ ಬಿಟ್ಟು ನಟಿಸುತ್ತಿದ್ದರು. ಘನತೆಗೆ ಕುಂದು ಬರುತ್ತದೆ ಎಂಬ ಕಾರಣಕ್ಕೆ ಆ ಕಾಲದಲ್ಲಿ ನಟಿಯರು ಕಾಮಿಡಿ ಪಾತ್ರ ಮಾಡಲು ಹಿಂದೇಟು ಹಾಕುತ್ತಿದ್ದರು. ಆದರೆ ಶ್ರೀದೇವಿ ಇಂತಹ ಪಾತ್ರಗಳಲ್ಲಿ ನಟಿಸುವ ಮೂಲಕ ಆ ಕಲ್ಪನೆಗೆ ಉತ್ತರ ನೀಡಿದರು.

ಶ್ರೀದೇವಿಯದ್ದು ಮಗುವಿನ ಮನಸು. ನಮಗೆ ಆಕೆ ಸೂಪರ್‌ ಸ್ಟಾರ್‌ ಆಗಿ ಗೊತ್ತು. ಆದರೆ ಅವರು ಅದ್ಭುತ ತಾಯಿ ಮತ್ತು ಪತ್ನಿ. ಶ್ರೀದೇವಿ ನನ್ನ ಸ್ನೇಹಿತೆ ಮತ್ತು ಸಹೋದ್ಯೋಗಿ ಆಗಿದ್ದಕ್ಕೆ ಹೆಮ್ಮೆ ಪಡುತ್ತೇನೆ. ನಾನು ನನ್ನ ಗೆಳತಿಯನ್ನು ‘ಮಿಸ್‌’ ಮಾಡಿಕೊ‌ಳ್ಳುತ್ತೇನೆ. ಜೀವಕ್ಕಿಂತ ಹೆಚ್ಚು ಎಂದುಕೊಂಡವರಿಗೆ ‘ಗುಡ್‌ ಬೈ’ ಎಂದು ಹೇಳುವುದು ಬಹಳ ಕಠಿಣ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.