ADVERTISEMENT

ದೇಹ ದಂಡನೆಗೂ ಮುನ್ನ...

ರಮೇಶ ಕೆ
Published 10 ಜುಲೈ 2013, 19:59 IST
Last Updated 10 ಜುಲೈ 2013, 19:59 IST
ದೇಹ ದಂಡನೆಗೂ ಮುನ್ನ...
ದೇಹ ದಂಡನೆಗೂ ಮುನ್ನ...   

ಶಂಕರ್ ಐಪಿಎಸ್ ಚಿತ್ರಕ್ಕಾಗಿ ನಟ ದುನಿಯಾ ವಿಜಯ್ ಸಿಕ್ಸ್‌ಪ್ಯಾಕ್ ಪ್ರದರ್ಶಿಸುವ ಮೂಲಕ ಯುವಕರಲ್ಲಿ ದೇಹದಂಡನೆಯ ಹುಚ್ಚು ಹಚ್ಚಿದ್ದರು. ಡ್ಯೂಪ್ ಇಲ್ಲದೆ ಸಾಹಸ ದೃಶ್ಯಗಳಲ್ಲಿ ತಮ್ಮನ್ನು ತೊಡಗಿಸಿಕೊಳ್ಳುವ ಇವರು ಇಂದಿಗೂ ದಿನಕ್ಕೆ ಎರಡು ಗಂಟೆಗೂ ಹೆಚ್ಚು ಕಾಲ ದೇಹ ದಂಡಿಸುತ್ತಾರೆ. ಹಾಗೆಯೇ ದೇಹದಂಡಿಸುವ ಯುವಕರಿಗೆ ಕೆಲವು ಸಲಹೆಗಳನ್ನೂ ನೀಡುತ್ತಾರೆ.

ಕಳೆದ ವಾರ ಹೆಬ್ಬಾಳದ ಜಿಮ್‌ನಲ್ಲಿ ವ್ಯಾಯಾಮದಲ್ಲಿ ತೊಡಗಿದ್ದಾಗ ಯುವನಟ ಹೇಮಂತ್ ಎದೆನೋವು ಕಾಣಿಸಿಕೊಂಡು ಆಸ್ಪತ್ರೆಯಲ್ಲಿ ಮೃತಪಟ್ಟರು. ಬಹುತೇಕ ಯುವಕರು ಅವೈಜ್ಞಾನಿಕ ವಿಧಾನದ ಮೂಲಕ ವ್ಯಾಯಾಮ ಮಾಡುವ ಅಥವಾ ವರ್ಕೌಟ್ ಮಾಡಿದ ನಂತರ ಸಿಗರೇಟ್ ಸೇದುವ ಅಭ್ಯಾಸ ಬೆಳೆಸಿಕೊಂಡಿರುತ್ತಾರೆ. ಇದರಿಂದ ಪ್ರಾಣವನ್ನೇ ಕಳೆದುಕೊಳ್ಳಬೇಕಾಗಬಹುದು. ಹಾಗಾಗಿ ಜಿಮ್‌ನಲ್ಲಿ ದೇಹ ದಂಡಿಸುವ ಮುಂಚೆ ಕೆಲವು ಮುನ್ನೆಚ್ಚರಿಕೆ ವಹಿಸುವ ಅಗತ್ಯವಿದೆ. ಶಿವಾಜಿನಗರ ಚಿತ್ರದ ಚಿತ್ರೀಕರಣದಲ್ಲಿ ಬ್ಯುಸಿಯಾಗಿರುವ ವಿಜಯ್ ಈ ಹಿನ್ನೆಲೆಯಲ್ಲಿ `ಮೆಟ್ರೊ'ದೊಂದಿಗೆ ಮಾತಾಡಿದರು. ವರ್ಕೌಟ್ ಮಾಡುವವರಿಗಾಗಿ ಅವರು ಕೆಲವು ಸಲಹೆಗಳನ್ನು ನೀಡಿದ್ದಾರೆ.

`ಫಿಟ್‌ನೆಸ್ ಎಂದರೆ ಮಾನಸಿಕವಾಗಿ ಬಲಿಷ್ಠವಾಗುವ ಕ್ರಿಯೆ. ನಾವು ಕ್ರಿಯಾಶೀಲರಾಗಿರಬೇಕು. ವರ್ಕೌಟ್‌ನಿಂದ ಆತ್ಮವಿಶ್ವಾಸ ಹೆಚ್ಚಾಗುತ್ತದೆ. ದೇಹದಂಡನೆಯಲ್ಲಿ ಬೇಸಿಕ್, ಅಡ್ವಾನ್ಸ್ಡ್ ಮೊದಲಾದ ವಿಧಾನಗಳಿವೆ. ಹಂತ ಹಂತವಾಗಿ ಕಷ್ಟವಾಗುತ್ತದೆ. ಹಾಗಂತ ಅರ್ಧಕ್ಕೆ ಕೈಬಿಡಬಾರದು. ಜೀವನದಲ್ಲಿ ಸಾಧನೆ ಎಷ್ಟು ಮುಖ್ಯವೋ ಹಾಗೆಯೇ ವರ್ಕೌಟ್‌ನಲ್ಲೂ ಗುರಿ ಮುಖ್ಯ. ಕ್ರೀಡೆಗೂ ವರ್ಕೌಟ್‌ಗೂ ಸಂಬಂಧವಿದೆ. ಕ್ರೀಡೆಯಲ್ಲಿ ತೊಡಗಿಸಿಕೊಳ್ಳುವರಿಗೆ ಹೆಚ್ಚು ಅನುಕೂಲವಾಗುತ್ತದೆ. ಯಾವುದೇ ಕೆಲಸವನ್ನು ಕಷ್ಟ ಎಂದು ಬಿಡಬಾರದು' ಎಂಬುದು ವಿಜಯ್ ಅಭಿಪ್ರಾಯ.

ಬೆಳಿಗ್ಗೆ 5.45ರಿಂದ 7ಗಂಟೆವರೆಗೆ ಹಾಗೂ ಸಂಜೆ 6.30ರಿಂದ ಒಂದು ಗಂಟೆ ವರ್ಕೌಟ್ ಮಾಡುವ ವಿಜಯ್ ಇಂದಿಗೂ ದೇಹವನ್ನು ದಷ್ಟಪುಷ್ಟವಾಗಿ ಇಟ್ಟುಕೊಂಡಿದ್ದಾರೆ. ದೇಹ ದಂಡಿಸುವ ಮಂದಿ ಪೌಷ್ಟಿಕಾಂಶ ಹೆಚ್ಚಿರುವ ಆಹಾರವನ್ನು ಸೇವಿಸಬೇಕು, ಸೊಪ್ಪು, ತರಕಾರಿ ತಿನ್ನಬೇಕು. ಜೊತೆಗೆ ಮಾಂಸಾಹಾರವನ್ನೂ ಸೇವಿಸಬೇಕು. ಆದರೆ ದೇಹ ದಂಡಿಸುವವರು ಸಿಗರೇಟ್ ಸೇದುವ ಅಭ್ಯಾಸವನ್ನು ಕೈಬಿಡಲೇಬೇಕು ಎಂಬುದು ವಿಜಯ್ ಸಲಹೆ.

`ಸಿನಿಮಾ ಚಿತ್ರೀಕರಣದ ನಡುವೆ ಸಮಯವನ್ನು ಮೀಸಲಿಟ್ಟು ವರ್ಕೌಟ್ ಮಾಡುತ್ತೇನೆ. ದಿನಕ್ಕೆ ಕನಿಷ್ಠ ಎರಡು ಗಂಟೆಯಾದರೂ ದೇಹ ದಂಡಿಸುತ್ತೇನೆ. ಪಾನಿಪುರಿ ಕಿಟ್ಟಿ ಎಂಬುವರು ನನಗೆ ತರಬೇತಿ ನೀಡುತ್ತಿದ್ದಾರೆ. ಕೆಲವು ಯುವಕರು ವರ್ಕೌಟ್ ಮಾಡಿದ ನಂತರ ಸಿಗರೇಟ್ ಸೇದುತ್ತಾರೆ. ದಯವಿಟ್ಟು ವರ್ಕೌಟ್ ಮಾಡುವವರು ಧೂಮಪಾನ ಮಾಡಲೇಬೇಡಿ' ಎಂದು ಕಿವಿಮಾತು ಹೇಳುತ್ತಾರೆ ವಿಜಯ್. ಇತ್ತೀಚೆಗೆ ವಿಜಯ್ ಹೆಸರಿನಲ್ಲಿ ರಾಜ್ಯ ಮಟ್ಟದ ದೇಹದಾರ್ಢ್ಯ ಸ್ಪರ್ಧೆಯೂ ನಡೆದಿತ್ತು.

ವೈದ್ಯರ ಸಲಹೆ
ವರ್ಕೌಟ್ ಹಾಗೂ ವಾಕಿಂಗ್ ಮಾಡುವವರು ತಂಬಾಕು, ಮದ್ಯಪಾನ ಸೇವನೆ ಮಾಡಲೇಬಾರದು. ತಂಬಾಕಿನಿಂದ ಫ್ರೀ ರಾಡಿಕಲ್ಸ್ ಉತ್ಪಾದನೆಯಾಗಿ ಹೃದಯಾಘಾತಕ್ಕೆ ಕಾರಣವಾಗುತ್ತದೆ. ಇಂಥ ವ್ಯಕ್ತಿಗಳಿಗೆ ಡಯಟ್ ಬಗ್ಗೆ ಹಾಗೂ ವರ್ಕೌಟ್ ಮಾಡಲು ಸಲಹೆ ನೀಡಲಾಗುತ್ತದೆ. ಕೆಲಸದ ಒತ್ತಡ, ರಕ್ತದೊತ್ತಡ, ಸಕ್ಕರೆ ಕಾಯಿಲೆ ಇರುವವರು, ಅತಿಯಾದ ಬೊಜ್ಜು, ಪೋಷಕರಿಗೆ ಯಾರಿಗಾದರೂ ಹೃದ್ರೋಗವಿದ್ದರೆ ಅಂಥವರು `ಟ್ರೆಡ್‌ಮಿಲ್', `ಎಕೋ ಕಾರ್ಡಿಯೋಗ್ರಾಂ' ಪರೀಕ್ಷೆಗಳನ್ನು ಮಾಡಿಸಿಕೊಳ್ಳಬೇಕು. ಆನಂತರ ವೈದ್ಯರನ್ನು ಭೇಟಿ ಮಾಡಿ ಸಲಹೆ ಪಡೆದುಕೊಳ್ಳಬೇಕು.

ಇದ್ಯಾವುದೇ ಸಮಸ್ಯೆ ಇಲ್ಲದ ಸದೃಢವಾಗಿರುವ ವ್ಯಕ್ತಿಗಳಿಗೆ ಯಾವುದೇ ನಿರ್ಬಂಧ ಇಲ್ಲ, ಎಷ್ಟು ಸಮಯ ಬೇಕಾದರೂ ವರ್ಕೌಟ್ ಮಾಡಬಹುದು. ಯಾವುದೇ ಆಹಾರವನ್ನಾದರೂ ಸೇವಿಸಬಹುದು. ಒಟ್ಟಾರೆ ವರ್ಕೌಟ್ ಮಾಡುವವರು ತಂಬಾಕು ಹಾಗೂ ಮದ್ಯಪಾನ ನಿಷಿದ್ಧ ಮಾಡುವುದೇ ಉತ್ತಮ.
-ಡಾ. ಬಿ.ಎ. ಮಹೇಶ್, ಹೃದ್ರೋಗತಜ್ಞ, ಬನಶಂಕರಿ ಹಾರ್ಟ್ ಕ್ಲಿನಿಕ್

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.