ADVERTISEMENT

ದೈತ್ಯ ಆಮೆ ತೂಕ 250 ಕೆ.ಜಿ! ಆಯಸ್ಸು 255 ವರ್ಷ

​ಪ್ರಜಾವಾಣಿ ವಾರ್ತೆ
Published 8 ಜೂನ್ 2018, 19:30 IST
Last Updated 8 ಜೂನ್ 2018, 19:30 IST
ಚಿನ್ನಾಟದಲ್ಲಿ ತೊಡಗಿರುವ ದೈತ್ಯ ಆಮೆಗಳು
ಚಿನ್ನಾಟದಲ್ಲಿ ತೊಡಗಿರುವ ದೈತ್ಯ ಆಮೆಗಳು   

ವಿಶ್ವದ ಎಲ್ಲಾ ಪ್ರಾಣಿಗಳ ಪೈಕಿ ಹೆಚ್ಚು ವರ್ಷ ಜೀವಿಸುವ ಪ್ರಾಣಿ ಆಮೆ. ಇವು ಸುಮಾರು 250ವರ್ಷಗಳ ವರೆಗೆ ಜೀವಿಸುತ್ತವೆ. ಈವರೆಗೆ ಪುಟ್ಟ ಗಾತ್ರದ ಆಮೆಗಳಿಂದ ಹಿಡಿದು ಭಾರೀ ಗಾತ್ರದ ಆಮೆಗಳವರೆಗೆ ಹಲವು ಪ್ರಭೇದಗಳನ್ನು ಗುರುತಿಸಲಾಗಿದೆ.

ಅಂತಹ ಅಪರೂಪದ ಪ್ರಭೇದಗಳಲ್ಲಿ ‘ಅಲ್ಡಬ್ರ ದೈತ್ಯ ಆಮೆ’ ಕೂಡ ಒಂದು. ಇಂದಿನ ಪ್ರಾಣಿ ಪ್ರಪಂಚದಲ್ಲಿ ಇದರ ಬಗ್ಗೆ ತಿಳಿದುಕೊಳ್ಳೋಣ.

ಹಿಂದೂ ಮಹಾಸಾಗರದ ಅಲ್ಡಬ್ರ ದ್ವೀಪಗಳಲ್ಲಿ ಇದರ ಸಂತತಿ ಹೆಚ್ಚಾಗಿ ಇರುವುದರಿಂದ ಇವಕ್ಕೆ ಆ ಹೆಸರಿನಿಂದ ಕರೆಯಲಾಗುತ್ತದೆ. ಇದರ ವೈಜ್ಞಾನಿಕ ಹೆಸರು ಜಿಯೊಕೆಲೊನ್‌ ಗಿಗಂಟಿಯಾ (Geochelone gigantea)

ADVERTISEMENT

ಲಕ್ಷಣಗಳು

ದೇಹದ ರಕ್ಷಣೆಗೆ ದೊಡ್ಡ ಡೊಪ್ಪಿ ಇರುತ್ತದೆ. ಆಹಾರ ಸೇವನೆಗೆ ನೆರವಾಗುವಂತ ನೀಳವಾದ ಕತ್ತು ಇರುತ್ತದೆ. ಕಾಲುಗಳು ಚಿಕ್ಕದಾಗಿರುತ್ತವೆ. ಮೂತಿ ಹಾವಿನಂತೆ ಉದ್ದಕ್ಕೆ ಇರುತ್ತದೆ. ಕಣ್ಣುಗಳು ಪುಟ್ಟದಾಗಿ ಮತ್ತು ಗಟ್ಟಿಯಾಗಿರುತ್ತವೆ. ಗಂಡು ಮತ್ತು ಹೆಣ್ಣು ಆಮೆಗಳ ಗಾತ್ರದಲ್ಲಿ ಹೆಚ್ಚಿನ ವ್ಯತ್ಯಾಸಗಳೇನೂ ಇರುವುದಿಲ್ಲ. ಪುಟ್ಟ ಬಾಲ ಇರುತ್ತದೆ.

ವಾಸಸ್ಥಾನ

ಅಲ್ಡಬ್ರದ ಹುಲ್ಲುಗಾವಲು ಪ್ರದೇಶಗಳೇ ಇದರ ನೆಚ್ಚಿನ ಆವಾಸ ಸ್ಥಾನ. ದಟ್ಟವಾಗಿ ಕುರುಚಲು ಗಿಡಗಳು ಬೆಳೆದಿರುವ ಪ್ರದೇಶ ಇದರ ವಾಸಕ್ಕೆ ಹೆಚ್ಚು ಸುರಕ್ಷಿತವಾಗಿರುತ್ತದೆ. ಆದರೆ, ಆಹಾರ ಸಿಗುವುದು ಕಡಿಮೆಯಾದರೆ ಮೈದಾನ, ಬಂಡೆಗಲ್ಲು ಪ್ರದೇಶಗಳಲ್ಲೂ ವಾಸಿಸುತ್ತದೆ. ನೀರು ಇರುವಂತಹ ಕೆರೆ, ನದಿಯಂತಹ ಪ್ರದೇಶಗಳಲ್ಲಿ ಮತ್ತು ನೆರಳು ಇರುವ ಕಡೆ ಹೆಚ್ಚು ಹೊತ್ತು ಇರುತ್ತದೆ.

ಆಹಾರ

ಇದು ಸಂಪೂರ್ಣ ಸಸ್ಯಾಹಾರಿ ಪ್ರಾಣಿ. 20ಕ್ಕೂ ಅಧಿಕ ವಿಧದ ಹುಲ್ಲು, ಮತ್ತು ಮೂಲಿಕೆಗಳನ್ನು ತಿನ್ನುತ್ತದೆ. ಎಲೆ, ಹಣ್ಣು, ಬೆರ‍್ರಿಗಳು ಇದರ ಪ್ರಮುಖ ಆಹಾರ. ಎಲೆಗಳನ್ನು ಮೇಕೆಗಳು ಸೇವಿಸುವ ಹಾಗೆ ವೇಗವಾಗಿ ಸೇವಿಸುತ್ತದೆ.

ಸಂತಾನೋತ್ಪತ್ತಿ

ಫೆಬ್ರುವರಿಯಿಂದ ಮೇ ವರೆಗಿನ ಅವಧಿ ಇದರ ಸಂತಾನೋತ್ಪತ್ತಿಗೆ ಪ್ರಶಸ್ತವಾಗಿರುತ್ತದೆ. ಸುಮಾರು 8 ತಿಂಗಳವರೆಗೆ ಗರ್ಭಧರಿಸಿ ಒಮ್ಮೆಗೆ ಸುಮಾರು 25 ಮೊಟ್ಟೆಗಳನ್ನು ಇಡುತ್ತದೆ. ಎರಡು ವಾರಗಳ ವರೆಗೆ ಕಾವು ಕೊಟ್ಟ ನಂತರ ಮರಿಗಳು ಹೊರಬರುತ್ತವೆ. ಇವುಗಳ ಬೆಳವಣಿಗೆ ತುಂಬಾ ನಿಧಾನವಾಗಿರುತ್ತದೆ. 3ರಿಂದ 6 ತಿಂಗಳ ನಂತರ ಸ್ವತಂತ್ರವಾಗುತ್ತವೆ.

ಇದು ದೊಡ್ಡ ಗಾತ್ರದ ದೇಹ ಹೊಂದಿರುವುದರಿಂದ ಯಾವ ಪ್ರಾಣಿಯೂ ಇದನ್ನು ಬೇಟೆಯಾಡುವುದಿಲ್ಲ. ಆದರೆ ಇದರ ಮೊಟ್ಟೆ ಮತ್ತು ಮರಿಗಳಿಗೆ ಅಪಾಯ ಕಾಡುತ್ತಿರುತ್ತದೆ.

ನಾಯಿಗಳು ಒಮ್ಮೆಮ್ಮೆ ದಾಳಿ ಮಾಡುತ್ತವೆ. ಅದಿಕ ತಾಪಮಾನದ ಪರಿಣಾಮ ಸಮುದ್ರ ಮಟ್ಟ ಹೆಚ್ಚಳವಾಗುತ್ತಿರುವುದರಿಂದ ದ್ವೀಪ ಪ್ರದೇಶಗಳು ಮುಳುಗುವ ಅಪಾಯವಿದೆ. ಹೀಗಾಗಿ ಇನ್ನು ಕೆಲವೇ ವರ್ಷಗಳಲ್ಲಿ ಇದರ ಸಂತತಿ ವಾಸಸ್ಥಾನ ಕಳೆದುಕೊಂಡು ಸಂಪೂರ್ಣ ನಶಿಸಿಹೋಗುವ ಅಪಾಯದಲ್ಲಿದೆ.

1700ಕ್ಕಿಂತ ಮುಂಚೆ ಇವಕ್ಕೆ ಯಾವುದೇ ಆಹಾರಕೊರತೆ ಸಮಸ್ಯೆ ಇರಲಿಲ್ಲ. ದ್ಪೀಪ ಪ್ರದೇಶಗಳಿಗೆ ಮನುಷ್ಯ ಕಾಲಿಟ್ಟ ನಂತರ, ಇದರ ಮಾಂಸಕ್ಕಾಗಿ ಹೆಚ್ಚಾಗಿ ಬೇಟೆಯಾಡುತ್ತಿದ್ದಾನೆ. ಮಾನವನ ಹಸ್ತಕ್ಷೇಪದಿಂದಾಗಿ ವಾಸಸ್ಥಾನ ಕಳೆದುಕೊಳ್ಳುತ್ತಿವೆ.

‌**

3ರಿಂದ 4 ಅಡಿ: ದೇಹದ ಉದ್ದ

150ರಿಂದ 250ಕೆಜಿ: ದೇಹದ ತೂಕ

0.5 ಕಿ.ಮೀ/ಗಂಟೆಗೆ: ಓಡುವ ವೇಗ

80ರಿಂದ 255ವರ್ಷ: ಜೀವಿತಾವಧಿ

**

ವಿಶೇಷ

* ಮನುಷ್ಯರೊಂದಿಗೆ ಸ್ನೇಹವಾಗಿ ಇರುತ್ತವೆ.

* ಇದರ ಸಂತತಿ ಉಳಿಸುವ ಉದ್ದೇಶದಿಂದ ಅಲ್ಡಬ್ರ ದ್ವೀಪ ಪ್ರದೇಶವನ್ನು ವಿಶ್ವ ಪಾರಂಪರಿಕ ಪಟ್ಟಿಗೆ ಸೇರಿಸಲಾಗಿದೆ.

* ಪ್ರಸ್ತುತ 1,52,000 ಅಲ್ಡಬ್ರ ದೈತ್ಯ ಆಮೆಗಳು ಮಾತ್ರ ಉಳಿದಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.