ADVERTISEMENT

ನಗುವೇ ಆರೋಗ್ಯದ ಗುಟ್ಟು

ಪ್ರಜಾವಾಣಿ ವಿಶೇಷ
Published 7 ಜನವರಿ 2013, 19:59 IST
Last Updated 7 ಜನವರಿ 2013, 19:59 IST
ನಗುವೇ ಆರೋಗ್ಯದ ಗುಟ್ಟು
ನಗುವೇ ಆರೋಗ್ಯದ ಗುಟ್ಟು   

ಯಾವುದೇ ಉಡುಗೆ ತೊಟ್ಟರೂ ಅದಕ್ಕೆ ಫಿಟ್ ಆಗಿರುವ ಮೈಕಟ್ಟು ರೂಪದರ್ಶಿ ಆರ‌್ವಾ ಅವರದು. ತೆಳ್ಳಗೆ ಬಳುಕುವ ದೇಹಸಿರಿ, ಸೌಂದರ್ಯದ ಜತೆಗೆ ಆರೋಗ್ಯವೂ ಬೇಕು ಎನ್ನುವುದು ಈ ಚೆಲುವೆಯ ನಿಲುವು. `ಮೆಟ್ರೊ'ದೊಂದಿಗೆ ಅವರು ಮಾತನಾಡಿದ್ದಾರೆ.

ಕ್ಷೇತ್ರದ ಬಗ್ಗೆ ಆಸಕ್ತಿ ಏಕೆ? ಯಾವಾಗ ಶುರು ಮಾಡಿದ್ದಿರಿ?
ಕಾಲೇಜಿನಲ್ಲಿ ಇರುವಾಗಲೇ ನಾನು ಮಾಡೆಲಿಂಗ್ ಆರಂಭಿಸಿದ್ದೆ. ಓದಿದ್ದು ವಿಜ್ಞಾನ. ಮಾಡೆಲಿಂಗ್ ಮಾಡುತ್ತೇನೆ ಎಂದಾಗ ಮನೆಯಲ್ಲಿ ವಿರೋಧ ವ್ಯಕ್ತವಾಗಿತ್ತು. ಮೊದಲು ಡಾಕ್ಟರ್ ಆಗು ಎಂದರು. ಓದು ಮುಗಿಸಿ ಮತ್ತೆ ನನ್ನಿಷ್ಟದ ಕ್ಷೇತ್ರದಲ್ಲಿ ಮುಂದುವರಿದೆ. ಕೊನೆಗೆ ಈ ಕ್ಷೇತ್ರದಲ್ಲಿ ನಾನು ಮಾಡುತ್ತಿದ್ದ ಹೆಸರನ್ನು ನೋಡಿ ಮನೆಯವರು ಬೆಂಬಲ ನೀಡಿದರು. ಈಗ ಬದುಕು ಸುಂದರವಾಗಿದೆ.

ಎಷ್ಟು ವರ್ಷದ ಅನುಭವ ಈ ಕ್ಷೇತ್ರದಲ್ಲಿ?
ನಾನು ಮಾಡೆಲಿಂಗ್ ಮಾಡಿದ್ದು ಮುಂಬೈಯಲ್ಲಿ. ಅಲ್ಲಿ ಅವಕಾಶ ಹೆಚ್ಚು. ಮುಂಬೈ ಫ್ಯಾಷನ್ ಸಿಟಿ. ಬೆಂಗಳೂರು ಕೂಡ ಕಡಿಮೆಯೇನಿಲ್ಲ. ಇಲ್ಲಿಯೂ ಅವಕಾಶಗಳು ಇವೆ. ಇಲ್ಲಿಗೆ ಬಂದು ಮೂರು ತಿಂಗಳಾಗಿದೆ. ಇಲ್ಲಿಯ ಹವಾಮಾನ ಚೆನ್ನಾಗಿದೆ. ಶಾಪಿಂಗ್ ಮಾಡೋದಕ್ಕೆ ಒಳ್ಳೆಯ ಸ್ಥಳಗಳು ಕೂಡ ಇವೆ.

ಮಾಡೆಲಿಂಗ್‌ಗೆ ನಿಮ್ಮ ತಯಾರಿ ಏನು?
ಫ್ಯಾಷನ್‌ಗೆ ಸಂಬಂಧಪಟ್ಟ ನಿಯತಕಾಲಿಕೆಗಳನ್ನು ಜಾಸ್ತಿ ಓದುತ್ತೇನೆ. ಎಲ್ಲಕ್ಕಿಂತ ಹೆಚ್ಚಾಗಿ ಉಳಿದ ರೂಪದರ್ಶಿಗಳ ಫೋಟೊಗಳನ್ನು ನೋಡುತ್ತೇನೆ. ಅದರಿಂದ ನನಗೆ ಫೋಟೊ ಶೂಟ್‌ಗೆ ಹೇಗೆ ನಿಲ್ಲಬೇಕು, ಯಾವ ರೀತಿ ನನ್ನನ್ನು ನಾನು ಸ್ಟೈಲಿಶ್ ಆಗಿ ಪ್ರೆಸೆಂಟ್ ಮಾಡಿಕೊಳ್ಳಬಹುದು ಎಂಬುದರ ಬಗ್ಗೆ ಗೊತ್ತಾಗುತ್ತದೆ, ಜತೆಗೆ ಆರೋಗ್ಯಕ್ಕೆ ಸಂಬಂಧಪಟ್ಟ ವಿಷಯಗಳನ್ನೂ ಓದುತ್ತೇನೆ.

ನಿಮ್ಮ ಫ್ಯಾಷನ್ ಮಂತ್ರ?
ನಾವು ಏನೇ ತೊಟ್ಟರೂ ಕಂಫರ್ಟ್ ಆಗಿರಬೇಕು. ಯಾವತ್ತೂ ಇನ್ನೊಬ್ಬರ ಜತೆ ನಮ್ಮನ್ನು ಹೋಲಿಸಿಕೊಳ್ಳಬಾರದು. ಸಮಸ್ಯೆಗಳಿಗೆ ನಗುವೇ ಪರಿಹಾರ. ನಗುನಗುತ್ತಾ ಇದ್ದರೆ ಆರೋಗ್ಯವೂ ಚೆನ್ನಾಗಿರುತ್ತದೆ.

ನಿಮ್ಮ ಶಾಪಿಂಗ್ ಸ್ಪಾಟ್ ಯಾವುದು?
ಬಾಂಬೆಯಲ್ಲಿದ್ದಾಗ ಅಲ್ಲಿ ಕೆಲವು ಕಡೆ ಶಾಪಿಂಗ್ ಮಾಡುತ್ತಿದ್ದೆ. ಬೆಂಗಳೂರಿನಲ್ಲಿ ಕಮರ್ಷಿಯಲ್ ಸ್ಟ್ರೀಟ್ ಇಷ್ಟ.

ಮಾಡೆಲಿಂಗ್ ಕ್ಷೇತ್ರದ ಬಗ್ಗೆ ನಿಮ್ಮ ಅಭಿಪ್ರಾಯ?
ಇದೊಂದು ರೀತಿ ಸಾಗರ. ಇಲ್ಲಿ ಮನರಂಜನೆಯೂ ಸಿಗುತ್ತದೆ. ತುಂಬ ಜನರನ್ನು ಭೇಟಿಯಾಗುವ ಅವಕಾಶವೂ ಇದೆ. ಬೇರೆ ಬೇರೆ ಊರಿಗೆ ಪ್ರಯಾಣ ಮಾಡಬಹುದು, ಭಿನ್ನವಾದ ದಿರಿಸು, ಆಭರಣಗಳನ್ನು ತೊಡಬಹುದು. ನನಗೆ ಸಂಗೀತವೆಂದರೆ ತುಂಬಾ ಇಷ್ಟ. ಪ್ರತಿ ಶೋನಲ್ಲೂ ಮ್ಯೂಸಿಕ್ ಇರುವ ಕಾರಣ ನಾನು ಖುಷಿಯಿಂದ ಆಸ್ವಾದಿಸುತ್ತೇನೆ. ಈ ಕ್ಷೇತ್ರದಲ್ಲಿ ಮೂರು ವರ್ಷದ ಅನುಭವವಿದ್ದರೂ ಇನ್ನೂ ನನಗೆ ಕುತೂಹಲ ಕುಂದಿಲ್ಲ. ಮೊದಲಿನಷ್ಟೇ ಬೆರಗು ಕಣ್ಣಿನಿಂದ ನೋಡುತ್ತೇನೆ.

ನಿಮ್ಮಲ್ಲಿ ನಿಮಗೆ ಇಷ್ಟವಾಗುವ ಸಂಗತಿ?
ಯಾವುದೇ ಪರಿಸ್ಥಿತಿಯಲ್ಲೂ ಆತ್ಮವಿಶ್ವಾಸ ಕಳೆದುಕೊಳ್ಳುವುದಿಲ್ಲ. ವಹಿಸಿದ ಕೆಲಸವನ್ನು ಖುಷಿಯಿಂದ ಮಾಡಿ ಮುಗಿಸುತ್ತೇನೆ.

ಬೇರೆಯವರು ನಿಮ್ಮ ಸೌಂದರ್ಯ ನೋಡಿ ನೀಡಿದ ಪ್ರತಿಕ್ರಿಯೆ?
ನನ್ನ ಕಣ್ಣು ಚೆನ್ನಾಗಿದೆ ಎಂದು ಹೇಳುತ್ತಾರೆ.

ಡಾಕ್ಟರ್ ಆಗಿ ನೀವು ನಿಮ್ಮ ಸೌಂದರ್ಯವನ್ನು ಯಾವ ರೀತಿ ಕಾಪಾಡಿಕೊಳ್ಳುತ್ತಿರಿ?
ಸೌಂದರ್ಯ ಕಾಪಾಡಿಕೊಳ್ಳುವುದು ಪ್ರತಿಯೊಬ್ಬ ಮಹಿಳೆಯ ಕರ್ತವ್ಯ. ಸರಿಯಾಗಿ ನೀರು ಕುಡಿಯಬೇಕು, ಚೆನ್ನಾಗಿ ಹಣ್ಣು ತಿನ್ನಬೇಕು. ಇದರಿಂದ ಚರ್ಮದ ಹೊಳಪು ಹೆಚ್ಚುತ್ತದೆ. ಸ್ವಲ್ಪಮಟ್ಟಿನ ವ್ಯಾಯಾಮ ಕೂಡ ದೇಹಕ್ಕೆ ಅಗತ್ಯ. ತೀರಾ ಸಣ್ಣಗಾಗುವುದು ಕೂಡ ಒಳ್ಳೆಯದಲ್ಲ.

ನಿಮ್ಮ ವರ್ಕ್‌ಔಟ್?
ನಾನು ಯಾವುದೇ ರೀತಿಯ ಡಯಟ್ ಮಾಡುತ್ತಿಲ್ಲ. ಯೋಗ ಮಾಡುತ್ತೇನೆ. ಬ್ಯಾಲೆ ಮಾಡುತ್ತೇನೆ. ಹಸಿರು ತರಕಾರಿಗಳನ್ನು ಹೆಚ್ಚು ತಿನ್ನುತ್ತೇನೆ. ಇದರಿಂದ ದೇಹ ಫಿಟ್ ಆಗಿರುತ್ತೆ. ಇವೆಲ್ಲಕ್ಕಿಂತ ಹೆಚ್ಚಾಗಿ ಮನಸ್ಸಿಗೆ ನೆಮ್ಮದಿ ಮುಖ್ಯ, ಹಾಗಾಗಿ ಖುಷಿ ಖುಷಿಯಾಗಿರುತ್ತೇನೆ.

ನಿಮ್ಮಿಷ್ಟದ ಫೋಟೊ ಯಾವುದು?
ನನ್ನೆಲ್ಲಾ ಪೋಟೋಗಳು ನನಗೆ ಇಷ್ಟ. ಅದರಲ್ಲೂ ಗೋವಾದ ಹತ್ತಿರ ಒಂದು ಕಾಡಿನಲ್ಲಿ ಸೀರೆ ಉಟ್ಟುಕೊಂಡು ತೆಗೆದ ಫೋಟೊ ತುಂಬಾ ಇಷ್ಟ. ಪ್ರಕೃತಿಯ ಮಡಿಲಲ್ಲಿ ತೆಗೆದ ಆ ಫೋಟೊ ತುಂಬಾ ಹಿಡಿಸಿತು.

ಕಿರಿಯರಿಗೆ ನಿಮ್ಮ ಸಲಹೆ?
ಈ ಕ್ಷೇತ್ರದ ಬಗ್ಗೆ ಆಸಕ್ತಿ ಇರಲಿ. ಆದರೆ ಮೊದಲು ನಿಮ್ಮ ವಿದ್ಯಾಭ್ಯಾಸ ಮುಗಿಸಿಕೊಳ್ಳಿ. ಶಿಕ್ಷಣವೊಂದು ಕೈಯಲ್ಲಿದ್ದರೆ ಬದುಕು ಸುಲಭ.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT