ADVERTISEMENT

ಬರಲಿದೆ ಹೊಸ ಹೆಲಿಕಾಪ್ಟರ್

​ಪ್ರಜಾವಾಣಿ ವಾರ್ತೆ
Published 18 ಜೂನ್ 2017, 19:30 IST
Last Updated 18 ಜೂನ್ 2017, 19:30 IST
ಬರಲಿದೆ ಹೊಸ ಹೆಲಿಕಾಪ್ಟರ್
ಬರಲಿದೆ ಹೊಸ ಹೆಲಿಕಾಪ್ಟರ್   

ನಿತ್ಯ ನೂರಾರು ಕಿ.ಮೀ ಪ್ರಯಾಣಿಸುವವರಿಗೆ, ವಾಣಿಜ್ಯೋದ್ಯಮಿಗಳಿಗೆ ಮತ್ತು ತುರ್ತು ಸೇವೆಗಳಿಗಾಗಿ ಅಮೆರಿಕದ  ವರ್ಕ್‌ ಹಾರ್ಸ್‌ ಸಂಸ್ಥೆ ಸುಲಭವಾಗಿ ಬಳಸುವ ಹೊಸ ಮಾದರಿಯ ಹೆಲಿಕಾಪ್ಟರ್ ತಯಾರಿಸಿದೆ. ಈ ವಿಶೇಷ ಹೆಲಿಕಾಪ್ಟರ್‌ ಕುರಿತು ಒಂದಿಷ್ಟು ಮಾಹಿತಿ.

ನೋಡಲು ದೊಡ್ಡ ಗಾತ್ರದ ಡ್ರೋನ್‌ನಂತೆ ಕಾಣುವ ಈ ಹೆಲಿಕಾಪ್ಟರ್‌ನಲ್ಲಿ ಇಬ್ಬರು ಪ್ರಯಾಣಿಸಬಹುದು. ಇದರ ಹೆಸರು ‘ಶ್ಯೂರ್‌ಫ್ಲೈ’
ಕಡಿಮೆ ತೂಕವಿದ್ದರೆ ಹಾರಾಟಕ್ಕೆ ಅನುಕೂಲ. ಹಾಗಾಗಿ ಇದನ್ನು ಸಂಪೂರ್ಣ ಕಾರ್ಬನ್‌ ಫೈಬರ್‌ನಿಂದ ತಯಾರಿಸಲಾಗಿದೆ. ಇದು ಪರಿಸರಸ್ನೇಹಿ ವಾಹನವೂ ಹೌದು. ಜೂನ್ 19ಕ್ಕೆ ನಡೆಯುವ ಪ್ಯಾರಿಸ್‌ ವೈಮಾನಿಕ ಪ್ರದರ್ಶನದಲ್ಲಿ ಇದನ್ನು ಪ್ರದರ್ಶಿಸಲು ಸಂಸ್ಥೆ ಎಲ್ಲ ಸಿದ್ಧತೆ ನಡೆಸಿದೆ.

ಹೇಗೆ ಕೆಲಸ ಮಾಡುತ್ತದೆ?
ಇದಕ್ಕೆ 8 ಪ್ರತ್ಯೇಕ ಮೋಟಾರುಗಳನ್ನು ಅಳವಡಿಸಲಾಗಿದೆ. ಹೆಲಿಕಾಪ್ಟರ್‌ನ ನಾಲ್ಕು ಬಾಹುಗಳಲ್ಲಿ ಇರುವ 16 ರೆಕ್ಕೆಗಳು ತಿರುಗಿ ಹೆಲಿಕಾಪ್ಟರ್ ಅನ್ನು ಹಾರುವಂತೆ ಮಾಡುತ್ತವೆ. ಎಂಜಿನ್‌ ವಿದ್ಯುತ್‌ ಚಾಲಿತ ಮೋಟಾರ್‌ನಿಂದ ಕಾರ್ಯನಿರ್ವಹಿಸುತ್ತದೆ.

ADVERTISEMENT

ಈಗ ಬಳಕೆಯಲ್ಲಿರುವ ಇತರೆ ಹೆಲಿಕಾಪ್ಟರ್‌ಗಳಿಗಿಂತ ನಮ್ಮ ಸಂಸ್ಥೆ ತಯಾರಿಸಿರುವ ಈ ಹೆಲಿಕಾಪ್ಟರ್ ಹೆಚ್ಚು ಸುರಕ್ಷಿತ ಎಂಬುದು ವರ್ಕ್ ಹಾರ್ಸ್‌ನ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಸ್ಟೀಫನ್‌ ಬರ್ನ್‌ ಅವರ ಅಭಿಪ್ರಾಯ.

‘78 ವರ್ಷಗಳಲ್ಲೇ ನಮ್ಮ ಶ್ಯೂರ್‌ಫ್ಲೈ ಹೆಲಿಕಾಪ್ಟರ್‌ ನಿರ್ಮಾಣ ಕ್ಷೇತ್ರದಲ್ಲಿ ಹೊಸ ಆವಿಷ್ಕಾರವೆನಿಸಿದೆ. ಇದು ಕ್ಷೇತ್ರಕ್ಕೆ ಹೊಸ ಆಯಾಮ ನೀಡಲಿದೆ ಎಂದು ಬರ್ನ್‌ ತಿಳಿಸಿದ್ದಾರೆ.’

ವಿಶೇಷ
* ಬ್ಯಾಕಪ್‌ ಬ್ಯಾಟರಿ ಸೌಲಭ್ಯವಿದೆ.
* ತುರ್ತು ಸಂದರ್ಭಗಳಲ್ಲಿ ರಕ್ಷಣೆಗೆ ಪ್ಯಾರಾಚೂಟ್‌ಗಳನ್ನು ಅಳವಡಿಸಲಾಗಿದೆ.
* ರಸ್ತೆ ಸಂಪರ್ಕವಿಲ್ಲದ ದುರ್ಗಮ ಪ್ರದೇಶಗಳಿಗೆ ಹೋಗಬಹುದು.
* ಇದಕ್ಕೆ ಹೊಂಡಾ ಗ್ಯಾಸೊಲಿನ್ ಎಂಜಿನ್ ಅಳವಡಿಸಲಾಗಿದೆ. ವಿದ್ಯುತ್ ಖಾಲಿಯಾದರೆ ಈ ಎಂಜಿನ್‌ ಗ್ಯಾಸೊಲಿನ್ ಇಂಧನ ಉರಿಸಿ ವಿದ್ಯುತ್ ಮೋಟಾರ್‌ಗಳು ಮತ್ತೆ ಕಾರ್ಯನಿರ್ವಹಿಸುವಂತೆ ಮಾಡುತ್ತದೆ.
* ಎಂಟು ಮೋಟಾರ್‌ಗಳಲ್ಲಿ ಒಂದು ಕೆಟ್ಟರೂ ಯಾವುದೇ ಸಮಸ್ಯೆ ಇಲ್ಲ.
* ಹಣ ಮತ್ತು ಇಂಧನ ಉಳಿತಾಯ.
​* 112 ಕಿ.ಮೀ ಗರಿಷ್ಠ ಕ್ರಮಿಸುವ ದೂರ.
* 80  ಕಿ.ಮೀ ಗರಿಷ್ಠ ವೇಗ ಪ್ರತಿ ಗಂಟೆಗೆ.
* 200 ಸಿಸಿ ಎಂಜಿನ್‌ ಸಾಮರ್ಥ್ಯ.
* 181 ಕೆ.ಜಿ (400ಪೌಂಡ್) ಗರಿಷ್ಠ ತೂಕ ಹೊರುವ ಸಾಮರ್ಥ್ಯ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.