ADVERTISEMENT

ಬಿಸಿಲಿನ ದಾಹಕ್ಕೆ ಆಹಾರದ ಪರಿಹಾರ

​ಪ್ರಜಾವಾಣಿ ವಾರ್ತೆ
Published 20 ಏಪ್ರಿಲ್ 2018, 19:30 IST
Last Updated 20 ಏಪ್ರಿಲ್ 2018, 19:30 IST
ಬಿಸಿಲಿನ ದಾಹಕ್ಕೆ ಆಹಾರದ ಪರಿಹಾರ
ಬಿಸಿಲಿನ ದಾಹಕ್ಕೆ ಆಹಾರದ ಪರಿಹಾರ   

ಶುಂಠಿ ಮತ್ತು ಸೌತೆಕಾಯಿ ಜ್ಯೂಸ್‌

ಶು೦ಠಿಯಲ್ಲಿ ಔಷಧೀಯ ಗುಣಗಳಿವೆ. ಸೌತೆಕಾಯಿಯಲ್ಲಿ ನೀರಿನ ಅಂಶ ಹೇರಳವಾಗಿದೆ. ಕ್ಯಾಲೊರಿ ಅತಿ ಕಡಿಮೆ. ಮನೆಯಲ್ಲಿ ಸುಲಭವಾಗಿ ಜ್ಯೂಸ್‌ ತಯಾರಿಸಿಕೊಳ್ಳಬಹುದು. ಸೌತೆಕಾಯಿ ಸಿಪ್ಪೆ ತೆಗೆದು ಸ್ವಚ್ಛ ಮಾಡಿ, ಒಂದು ತುಂಡು ಶುಂಠಿ ಹಾಕಿ, ಮಿಕ್ಸಿಗೆ ಹಾಕಬೇಕು. ಬಳಿಕ ಅದರ ರಸ ಸೋಸಿ ಅದಕ್ಕೆ ಸ್ವಲ್ಪ ಕಾಳು ಮೆಣಸಿನ ಪುಡಿ ಹಾಕಿಕೊಂಡು ಕುಡಿದರೆ ಬೇಸಿಗೆಗೆ ದೇಹ ತಂಪಾಗಿರುತ್ತದೆ. ಇದನ್ನು ಬೆಳಿಗ್ಗೆ ಕುಡಿದರೆ ದೇಹದ ಉಲ್ಲಸಿತವಾಗಿರುತ್ತದೆ.

ಬೀಟ್‌ರೂಟ್‌ ಜ್ಯೂಸ್‌

ADVERTISEMENT

ಹಸಿ ಬೀಟ್‌ರೂಟ್‌ ಆರೋಗ್ಯಕ್ಕೆ ಒಳ್ಳೆಯದು. ಬೀಟ್‌ರೂಟ್‌ ಅನ್ನು ಮಿಕ್ಸಿಯಲ್ಲಿ ರುಬ್ಬಿಕೊಳ್ಳಬೇಕು. ಅನಂತರ ಜ್ಯೂಸ್‌ ಅನ್ನು ಗ್ಲಾಸ್‌ಗೆ ಸೋಸಿಕೊಂಡು, ಮೊಸರು ಬೆರೆಸಿ ಕುಡಿಯಬೇಕು. ಇದು ಜೀರ್ಣ ಶಕ್ತಿಯನ್ನು ಹೆಚ್ಚು ಮಾಡುವ ಪ್ರೊಬಯೋಟಿಕ್‌ ಹಾಗೂ ಅತಿ ಹೆಚ್ಚು ಕ್ಯಾಲ್ಸಿಯಂ ಅನ್ನು ಹೊಂದಿದೆ.

ಕಲ್ಲಂಗಡಿ ಜ್ಯೂಸ್‌

ನೀರಿನ ಅಂಶ ಹೆಚ್ಚಾಗಿರುವ ಈ ಹಣ್ಣಿನಿಂದ ಜ್ಯೂಸ್ ಮಾಡಿ ಕುಡಿದರೆ ದೇಹಕ್ಕೂ ತಂಪು, ಬಿರು ಬಿಸಿಲಿನಿಂದಾಗುವ ದಾಹವೂ ಶಮನ. ಹಣ್ಣಿನ ಬೀಜ ತೆಗೆದು ನೀರು ಸೇರಿಸಿ ಮಿಕ್ಸಿಯಲ್ಲಿ ರುಬ್ಬಿದರಾಯಿತು. ಅಗತ್ಯ ಎನಿಸಿದರೆ ಸಕ್ಕರೆ ಸೇರಿಸಿಕೊಳ್ಳಬಹುದು. ಇದರಲ್ಲಿ ಅತಿ ಹೆಚ್ಚು ಪೌಷ್ಟಿಕಾಂಶಗಳಿವೆ. ಕಲ್ಲಂಗಡಿಯನ್ನು ಹಾಗೆಯೇ ತಿನ್ನುವುದೂ ಒಳ್ಳೆಯದು.

ಕಪ್ಪು ದ್ರಾಕ್ಷಿ ಜ್ಯೂಸ್‌

ಸೂರ್ಯನ ಬಿಸಿಲಿನಲ್ಲಿ ಅಡ್ಡಾಡಿ ದಣಿದವರಿಗೆ ಈ ಜ್ಯೂಸ್‌ ಸರಿಯಾದ ಆಯ್ಕೆ. ಇದರಲ್ಲಿ ಆ್ಯಂಟಿ ಆಕ್ಸಿಡೆಂಟ್‌ ಪ್ರಮಾಣ ಹೆಚ್ಚಿದೆ. ವಿಟಮಿನ್‌ ಬಿ, ಕಬ್ಬಿಣಾಂಶವೂ ಹೆಚ್ಚು. ಕೆಂಪು ರಕ್ತಕಣಗಳನ್ನು ಉತ್ಪತ್ತಿ ಮಾಡುತ್ತದೆ. ಕಪ್ಪುದ್ರಾಕ್ಷಿ ಹಾಗೂ ಸಕ್ಕರೆಯನ್ನು ಮಿಕ್ಸಿಗೆ ಹಾಕಿ ರುಬ್ಬಿಕೊಂಡು ಸೋಸಿದರೆ ಜ್ಯೂಸ್‌ ಸಿದ್ಧ. ನಿಮಗೆ ಸಣ್ಣಗಾಗುವ ಅಸೆ ಇದ್ದರೆ ಸಕ್ಕರೆ ಬದಲು ಜೇನುತುಪ್ಪ ಬಳಸಿ.

ಟೊಮೆಟೊ ಜ್ಯೂಸ್‌

ಟೊಮೆಟೊ ಜ್ಯೂಸ್‌ನಲ್ಲಿ ವಿಟಮಿನ್ ಸಿ ಹಾಗೂ ಎ ಸಮೃದ್ಧವಾಗಿವೆ. ಇದು ದೇಹದಲ್ಲಿ ರೋಗನಿರೋಧಕ ಶಕ್ತಿಯನ್ನು ಉಲ್ಬಣಗೊಳಿಸುತ್ತದೆ. ಈ ಜ್ಯೂಸಿನ ಸೇವನೆ ಬ್ರೆಸ್ಟ್ ಕ್ಯಾನ್ಸರ್ ಹಾಗೂ ಪ್ರಾಸ್ಟೇಟ್ ಕ್ಯಾನ್ಸರ್‌ ದೂರ ಮಾಡುತ್ತದೆ. ಈ ಜ್ಯೂಸ್‌ಗೆ ಬೇಸಿಗೆಗೆ ದಾಹ ತಣಿಸಲೂ ಪರಿಣಾಮಕಾರಿ. ಟೊಮೆಟೊ ಹಾಗೂ ಒಂದು ತುಂಡು ಶುಂಠಿಯನ್ನು ಮಿಕ್ಸಿಯಲ್ಲಿ ರುಬ್ಬಿಕೊಳ್ಳಬೇಕು. ಆ ರಸಕ್ಕೆ ಏಲಕ್ಕಿ ಹುಡಿ, ಸ್ವಲ್ಪ ನಿಂಬೆ ರಸ ಹಾಕಿಕೊಂಡರೆ ಜ್ಯೂಸ್‌ ಸಿದ್ಧ.

ಮಕ್ಕಳಿಗೂ ಇಷ್ಟ

ಬೇಸಿಗೆಯಲ್ಲಿ ಸುಲಭವಾಗಿ ಸಿಗುವ ಹಣ್ಣುಗಳಾದ ಮಾವು, ಕಿತ್ತಳೆ, ಸೀಬೆ, ಬಾಳೆಹಣ್ಣುಗಳ ಜ್ಯೂಸ್‌ಗಳನ್ನು ಮಾಡಿಕೊಂಡು ಕುಡಿಯಬಹುದು. ಇವುಗಳು ದಾಹ ತಣಿಸುವುದರ ಜೊತೆಗೆ ದೇಹಕ್ಕೆ ಅಗತ್ಯವಾದ ಪೌಷ್ಟಿಕಾಂಶಗಳನ್ನು ಒದಗಿಸುತ್ತದೆ. ಬೇಸಿಗೆಯಲ್ಲಿ ಇವುಗಳ ನಿಯಮಿತ ಸೇವನೆಯಿಂದ ದೇಹ ಡಿಹೈಡ್ರೇಟ್‌ ಆಗುವುದನ್ನು ತಪ್ಪಿಸಬಹುದು. ಈ ಜ್ಯೂಸ್‌ಗಳನ್ನು ತಯಾರಿಸಲು ಹೆಚ್ಚು ಸಮಯವೂ ಬೇಕಿಲ್ಲ. ಮಾರುಕಟ್ಟೆಗಳಲ್ಲಿ ಸಿಗುವ ತಂಪು ಪಾನೀಯಗಳು ನಾಲಿಗೆಗೆ ರುಚಿ ಎನಿಸಿದರೂ ದೇಹಕ್ಕೆ ಹಿತಕಾರಿಯಲ್ಲ, ಮನೆಯಲ್ಲಿ ತಯಾರಿಸುವ ಈ  ಜ್ಯೂಸ್‌ಗಳು ದೇಹಕ್ಕೂ ಉತ್ತಮ, ನಾಲಿಗೆಗೂ ಸವಿ. ಇದರಲ್ಲಿ ವಿಟಮಿನ್‌ ಹಾಗೂ ಪೋಷಕಾಂಷಗಳು ಹೇರಳವಾಗಿರುತ್ತವೆ. ಮಕ್ಕಳು ಬೇಸಿಗೆಯಲ್ಲಿ ಊಟ ನಿರಾಕರಿಸಿದರೆ ಜ್ಯೂಸ್‌ಗಳು ಮಾಡಿಕೊಡಿ. ಅದಕ್ಕೆ ಸ್ವಲ್ಪ ಮಸಾಲ ಅಥವಾ ಚಾಟ್ ಮಸಾಲ ಬೆರೆಸಿಕೊಟ್ಟರೆ ಮಕ್ಕಳು ಇಷ್ಟಪಟ್ಟು ಕುಡಿಯುತ್ತಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.