ADVERTISEMENT

ಮುದ್ದಿನ ಬೆಕ್ಕಿಗೆ ಐಷಾರಾಮಿ ಪಂಚತಾರಾ ಹೋಟೆಲ್

​ಪ್ರಜಾವಾಣಿ ವಾರ್ತೆ
Published 23 ಏಪ್ರಿಲ್ 2018, 20:27 IST
Last Updated 23 ಏಪ್ರಿಲ್ 2018, 20:27 IST
ಮುದ್ದಿನ ಬೆಕ್ಕಿಗೆ ಐಷಾರಾಮಿ ಪಂಚತಾರಾ ಹೋಟೆಲ್
ಮುದ್ದಿನ ಬೆಕ್ಕಿಗೆ ಐಷಾರಾಮಿ ಪಂಚತಾರಾ ಹೋಟೆಲ್   

ಹವಾನಿಯಂತ್ರಿತ ಕೊಠಡಿ, ಕೂದಲು ಕತ್ತರಿಸಲು ಪ್ರತ್ಯೇಕ ಸಲೂನು, ಹೆಣ್ಣಿನ ಜತೆ ಡೇಟಿಂಗ್ ನಡೆಸಲು ವಿಶೇಷ ಸವಲತ್ತು... ಇಷ್ಟೆಲ್ಲಾ ಎಲ್ಲಿ ಸಿಗುತ್ತೆ ಅಂಥ ಕೇಳ್ತಾ ಇದ್ದೀರಾ? ಸ್ವಲ್ಪ ತಡೀರಿ ಇದು ಮನುಷ್ಯರಿಗಲ್ಲ. ಬೆಕ್ಕುಗಳಿಗೆ!

ಮಲೇಷ್ಯಾದ ಕ್ವಾಲಾಲಂಪುರದಲ್ಲಿ ಬೆಕ್ಕುಗಳಿಗಾಗಿಯೇ ವಿಶ್ವದ ಮೊದಲ ಪಂಚತಾರಾ ಹೋಟೆಲ್ ಆರಂಭಿಸಲಾಗಿದೆ. ಅಲ್ಲಿ ಮುದ್ದಿನ ಬೆಕ್ಕುಗಳಿಗೆ ಇಷ್ಟೆಲ್ಲಾ ಸೌಲಭ್ಯಗಳನ್ನು ಕಲ್ಪಿಸಲಾಗಿದೆ. 2014ರಲ್ಲಿ ಆರಂಭವಾಗಿರುವ ‘ಕ್ಯಾಟ್ಜೋನಿಯಾ’ ಹೆಸರಿನ ಈ ಹೋಟೆಲ್‌ನಲ್ಲಿ ಬೆಕ್ಕುಗಳಿಗೆ ನಾಲ್ಕು ರೀತಿಯ ಕೊಠಡಿಗಳಿವೆ.

ವಿವಿಐಸಿ (ವೆರಿವೆರಿ ಇಂಪಾರ್ಟೆಂಟ್ ಕ್ಯಾಟ್‌) ವಿಭಾಗದ ಕೊಠಡಿಯಲ್ಲಿ ಹತ್ತು ದೊಡ್ಡ ಬೆಕ್ಕುಗಳಿಗೆ ಇರಲು ಅವಕಾಶವಿದೆ. ಇಲ್ಲಿ ತಾಯಿ ಬೆಕ್ಕು ತನ್ನ ಮಕ್ಕಳು ಮತ್ತು ಸಂಗಾತಿನೊಂದಿಗೆ ಉಳಿಯಬಹುದು. ಇಲ್ಲಿ ಪ್ರತ್ಯೇಕ ಆಟದ ಮೈದಾನ, ಶೌಚಾಲಯವಿದೆ. ಬೆಕ್ಕುಗಳಿಗೆ ಮಲಗಲು ಮೂರು ದೊಡ್ಡ ಹಾಸಿಗೆಗಳ ಸೌಲಭ್ಯವೂ ಇದೆ.

ADVERTISEMENT

ಉಳಿದಂತೆ ವಿಐಪಿ ಹಾಗೂ ಸಾಮಾನ್ಯ ದರ್ಜೆಯ ಕೊಠಡಿಗಳೂ ಇಲ್ಲಿವೆ. ಇಲ್ಲಿ ಬೆಕ್ಕುಗಳಿಗೆ ಸ್ನಾನ ಮಾಡಲು ಶವರ್ ಮತ್ತು ಬೆಕ್ಕುಗಳ ಮಾಲೀಕರಿಗೆ ವೈಫೈ ಸೌಲಭ್ಯವನ್ನು ಕಲ್ಪಿಸಲಾಗಿದೆ. ಎಲ್ಲಾ ಕೊಠಡಿಗಳಿಗೂ ಸಿಸಿ ಕ್ಯಾಮೆರಾ ಅಳವಡಿಸಲಾಗಿದೆ.

‘ಬೆಕ್ಕುಗಳನ್ನೂ ಆಗಾಗ ಪ್ರವಾಸಕ್ಕೆ ಕರೆದುಕೊಂಡು ಹೋಗುತ್ತಿರಬೇಕು. ಅವುಗಳಿಗೆ ರಾಜಾತಿಥ್ಯ ಮಾಡಬೇಕು. ಅವು ಇಲ್ಲಿ ಹಾಯಾಗಿ ಓಡಾಡಿಕೊಂಡಿರಲು ಅವಕಾಶ ಕಲ್ಪಿಸಲಾಗಿದೆ. ಮುಖ್ಯವಾಗಿ ಬೆಕ್ಕುಗಳಿಗೆ ಒಂಟಿತನದ ಅನುಭವವಾಗಬಾರದು. ಹಾಗಾಗಿ, ಇಲ್ಲಿ ಮನೆಯಂಥ ವಾತಾವರಣವನ್ನೇ ಕಲ್ಪಿಸಲಾಗಿದೆ’ ಎಂದು ‘ಕ್ಯಾಟ್ಜೋನಿಯಾ’ ಹೋಟೆಲಿನ ಮಾಲೀಕರು ತಮ್ಮ ವೆಬ್‌ಸೈಟ್‌ನಲ್ಲಿ ಹೇಳಿಕೊಂಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.