ಸುಮಾರು 200 ವರ್ಷಗಳಷ್ಟು ಸುದೀರ್ಘ ಕಾಲ ವಿಜಯಪುರವನ್ನು ಆಳಿದವರು ಆದಿಲ್‌ಶಾಹಿ ಅರಸರು. ಅಕ್ಷರಪ್ರಿಯರಾಗಿದ್ದ ಈ ಅರಸರ ಕಾಲದಲ್ಲಿ ರಚಿತಗೊಂಡಿರುವ ಸಾಹಿತ್ಯಗಳು ಅವೆಷ್ಟೋ. ಭಾರತದ ನೆಲಕ್ಕೆ ಮುಸಲ್ಮಾನರು ಕಾಲಿಟ್ಟ ದಿನದಿಂದ 1912ರವರೆಗಿನ ಸಮಗ್ರ ಇತಿಹಾಸ ಇರುವ ಮುಲ್ಲಾ ಮುಹಮ್ಮದ್ ಕಾಸಿಮ ಹಿಂದುಶಹಾ ಇಸ್ತರಾಬಾದಿ (ಕಾವ್ಯನಾಮ-ಫರಿಶ್ತಾ) ವಿರಚಿತ ‘ತಾರೀಖ-ಎ-ಫರಿಶ್ತಾ’ ಸೇರಿದಂತೆ ಹಲವು ಮಹತ್ವದ ಸಾಹಿತ್ಯ ಕೃತಿಗಳು ರಚಿತಗೊಂಡಿದ್ದು ಇವರ ಅವಧಿಯಲ್ಲಿಯೇ. ಆದರೆ ಈ ಎಲ್ಲ ಸಾಹಿತ್ಯಗಳು ಪರ್ಷಿಯನ್ ಹಾಗೂ ದಕ್ಕನಿ ಉರ್ದು ಭಾಷೆಯಲ್ಲಿವೆ. ಆದರೆ ಈ ಸಾಹಿತ್ಯಗಳೆಲ್ಲ ಈಗ ಕನ್ನಡಕ್ಕೆ ಬರಲಿವೆ, ಈ ಮೂಲಕ ಈ ಸಮಗ್ರ ಇತಿಹಾಸವನ್ನು ಇದೀಗ ಕನ್ನಡದಲ್ಲಿ ಓದಲು ಸಾಧ್ಯವಾಗಿದೆ.
2013ರಲ್ಲಿ ಖ್ಯಾತ ಸಂಶೋಧಕ ಡಾ. ಎಂ.ಎಂ.ಕಲಬುರ್ಗಿಯವರ ಅಧ್ಯಕ್ಷತೆಯಲ್ಲಿ ರಚನೆಗೊಂಡಿರುವ ‘ಆದಿಲ್‌ಶಾಹಿ ಸಾಹಿತ್ಯ ಅನುವಾದ ಸಮಿತಿ’ಯು ಕನ್ನಡ ತರ್ಜುಮೆ ಕಾರ್ಯವನ್ನು ಬಹುತೇಕ ಸಂಪನ್ನಗೊಳಿಸಿದೆ. ಆರು ಸಂಪುಟಗಳಲ್ಲಿ ನಾಲ್ಕು ಸಾವಿರ ಪುಟಗಳಷ್ಟು ಸಾಹಿತ್ಯವನ್ನು ಕನ್ನಡೀಕರಿಸಿ ಈಗಾಗಲೇ ಪ್ರಕಟಿಸಿದೆ. ಸುಂದರ ಮುದ್ರಣ, ಆಕರ್ಷಕ ಮುಖಪುಟ, ಸುಲಭ ಓದಿಗೆ ಅನುಕೂಲವಾಗುವ ಸರಳ-ಸಾಮಾನ್ಯ ಭಾಷೆಯಿಂದಾಗಿ ಈ ಸಂಪುಟಗಳು ಸಾಮಾನ್ಯ ಓದುಗರನ್ನು ಆಕರ್ಷಿಸಲಿವೆ.
ಕಾರ್ಯದ ಆರಂಭ
ವಿಜಯಪುರದ ಬಿಎಲ್‌ಡಿಇ ಸಂಸ್ಥೆಯ ವಚನ ಪಿತಾಮಹ ಡಾ. ಫ.ಗು.ಹಳಕಟ್ಟಿ ಸಂಶೋಧನಾ ಕೇಂದ್ರದಲ್ಲಿ ನಡೆದ ಸಭೆಯಲ್ಲಿ ಆದಿಲ್‌ಶಾಹಿ ಸಾಹಿತ್ಯದ ಅನುವಾದ ಹಾಗೂ ಪ್ರಕಟಣೆಯ ವಿಷಯ ಪ್ರಸ್ತಾಪವಾಯಿತು. ಆ ಪ್ರಸ್ತಾಪ ಸಂಸ್ಥೆಯ ಅಧ್ಯಕ್ಷ ಎಂ.ಬಿ.ಪಾಟೀಲರ ಗಮನ ಸೆಳೆಯಿತು. ಈ ಯೋಜನೆಗೆ ಒಂದು ಕೋಟಿ ರೂಪಾಯಿ ಖರ್ಚಾಗಬಹುದು ಎಂದು ತಜ್ಞರು ಉತ್ತರಿಸಿದರು. ಕನ್ನಡ ಸಂಸ್ಕೃತಿ ಇಲಾಖೆಗೆ ಈ ಕುರಿತು ವಿವರವಾದ ಪ್ರಸ್ತಾವ ಸಲ್ಲಿಸಲಾಯಿತು. ಇದಕ್ಕೆ ಮಂಜೂರಾತಿ ಸಿಕ್ಕಿತು.
ಡಾ. ಕೃಷ್ಣ ಕೋಲ್ಹಾರ ಕುಲಕರ್ಣಿ ನಿರ್ದೇಶಕರಾಗಿ ಕಾರ್ಯ ಆರಂಭಗೊಂಡಿದೆ. ಸಮಿತಿಯ ಸದಸ್ಯರಾಗಿ ಡಾ.ಬಿ.ಜಿ.ಮೂಲಿಮನಿ, ಡಾ. ರಹಮತ್ ತರೀಕೆರೆ, ರಂಜಾನ ದರ್ಗಾ, ಡಾ. ಎಚ್.ಜಿ.ದಡ್ಡಿ ಹಾಗೂ ವಿಶೇಷ ಆಮಂತ್ರಿತ ಸದಸ್ಯರಾಗಿ ಶಿವಯೋಗಿ ತಂಬಾಕೆ, ಡಾ.ಎಂ.ಎಸ್.ಮದಭಾವಿ, ಪರ್ಷಿಯನ್, ಅರೇಬಿಕ್ ಹಾಗೂ ದಕ್ಕನಿ ಉರ್ದು ಭಾಷೆಯ ವಿದ್ವಾಂಸ ಮೌಲಾನಾ ಮಹ್ಬೂಬುರ್ ರಹಮಾನ ಮದನಿ ಕಾರ್ಯ ನಿರ್ವಹಿಸುತ್ತಿದ್ದಾರೆ.
ಆದಿಲ್‌ಶಾಹಿ ಸಾಹಿತ್ಯ ಅನುವಾದ ಯೋಜನೆಯ ಪ್ರಸ್ತಾಪವಾದಾಗ, ಸಮಿತಿ ಬಳಿ ಅನುವಾದವಾಗಬೇಕಾದ ಯಾವುದೇ ಕೃತಿಯಾಗಲಿ-ಹಸ್ತಪ್ರತಿಯಾಗಲಿ ಇರಲಿಲ್ಲ. ಅವುಗಳನ್ನು ದೇಶ-ವಿದೇಶಗಳ ಬೇರೆ ಬೇರೆ ಸ್ಥಳಗಳಿಂದ ಸಂಗ್ರಹಿಸಬೇಕಿತ್ತು. ದಕ್ಕನಿ ಉರ್ದು ಹಾಗೂ ಪರ್ಷಿಯನ್ ಭಾಷೆಗಳ ಪಂಡಿತರನ್ನು ಹುಡುಕಬೇಕಿತ್ತು. ಈ ಮೂಲಕ ತರ್ಜುಮೆ ನಡೆಯಬೇಕಿತ್ತು. ಇವೆಲ್ಲವುಗಳನ್ನು ಮನಗಂಡು ತಜ್ಞ ಸಮಿತಿಯ ರಚನೆಯಾಗಿದೆ.
ಹೊತ್ತಗೆಯಲ್ಲಿ ಏನೇನಿದೆ?
ಫರಿಶ್ತಾ ರಚಿಸಿದ ಭಾರತೀಯ ಮುಸ್ಲಿಂ ಚರಿತ್ರೆಯಾದ ‘ತಾರೀಖ-ಎ-ಪರಿಶ್ತಾ’ ನಾಲ್ಕು ಸಂಪುಟಗಳಲ್ಲಿ ಅನಾವರಣಗೊಂಡಿದೆ. ಐದನೇ ಸಂಪುಟದಲ್ಲಿ ವಿಜಯಪುರದವನೇ ಆದ ಮಹಮ್ಮದ ಇಬ್ರಾಹಿಮ್ ಜುಬೇರಿಯ ‘ಬಸತೀನೆ-ಸಲಾತಿನ’ ಕೃತಿಯ ಅನುವಾದ ಇದೆ. ಜುಬೇರಿ ಅನೇಕ ಆಕರ ಗ್ರಂಥಗಳಿಂದ ಪಡೆದ ಫರ್ಮಾನು (ಪತ್ರವ್ಯವಹಾರ), ಸನದು (ಅಧಿಕಾರ ಪತ್ರ) ಹಾಗೂ ಕೈಪಿಯತ್ತು (ಅಧಿಕಾರ ಪತ್ರ) ಗಳನ್ನು ಈ ಗ್ರಂಥಗಳಲ್ಲಿ ದಾಖಲಿಸಿದ್ದಾನೆ. ಆರನೇ ಸಂಪುಟದಲ್ಲಿ ದಿಲ್ಲಿಯ ಅಬ್ದುಲ ದೆಹಲ್ವಿಯ ‘ಇಬ್ರಾಹಿಮನಾಮಾ’, ಹೈದರಾಬಾದಿನ ಖ್ವಾಜಾ ಮೀರ ಅಹ್ಮದ ಅಲಿಖಾನರ ‘ಗುಲದಸ್ತಾಯೆ ಬಿಜಾಪುರ’, ಬೆಳಗಾವಿಯ ಫಿತೂರಖಾನ ವಲ್ಲದ ಅಸದಖಾನ ಲ್ಯಾರಿಯ ‘ಹಪ್ತಕುರ್ಸೀ’ ಹಾಗೂ ಈಶ್ವರದಾಸ ನಗರ ಅವರ ’ಫುತೂಹತ್-
ಇ-ಅಲಂಗೀರ’ ಸೇರಿಕೊಂಡಿವೆ.
ಇನ್ನೂ ಆರು ಸಂಪುಟಗಳ ಅಂತಿಮ ಹಂತದ ಅನುವಾದ ಕಾರ್ಯ ಈಗ ಜಾರಿಯಲ್ಲಿದೆ. ‘ಸಮಿತಿಯ ಮುಂದೆ ಒಟ್ಟು 19 ಕೃತಿಗಳಿವೆ. ಇವೆಲ್ಲವೂ ಧಾರ್ಮಿಕವಲ್ಲದ ಸಾಹಿತ್ಯ ಕೃತಿಗಳು’ ಎನ್ನುತ್ತಾರೆ ನಿರ್ದೇಶಕ ಕೃಷ್ಣ ಕೋಲ್ಹಾರ ಕುಲಕರ್ಣಿ.
‘ಒಂದು ಸಾಮ್ರಾಜ್ಯಕ್ಕೆ ಸಂಬಂಧಿಸಿದ ಸಾಹಿತ್ಯವನ್ನು ಇಷ್ಟು ದೊಡ್ಡ ಪ್ರಮಾಣದಲ್ಲಿ ಅನುವಾದಿಸಿ ಪ್ರಕಟಿಸಿದ ಉದಾಹರಣೆ ನಮ್ಮ ದೇಶದಲ್ಲಿ ಇನ್ನೊಂದಿಲ್ಲ’ ಎನ್ನುತ್ತಾರೆ ಡಾ. ಕಲಬುರ್ಗಿ.
ಆದಿಲ್‌ಶಾಹಿ ಆಡಳಿತದ ಕುರಿತು ಒಂದಿಷ್ಟು...
ಆದಿಲ್‌ಶಾಹಿ ರಾಜ್ಯದ ಸಂಸ್ಥಾಪಕ ಯುಸುಫ ಆದಿಲ್‌ಖಾನ ಕಾವ್ಯಪ್ರೇಮಿಯಾಗಿದ್ದನಲ್ಲದೇ ಕಾವ್ಯ ಕೃತಿಗಳನ್ನು ರಚಿಸಿದ್ದ. ಆತ ಪರ್ಷಿಯಾದ ಹೆಸರಾಂತ ಕವಿ-ಸಾಹಿತಿಗಳನ್ನು ವಿಜಯಪುರಕ್ಕೆ ಕರೆಯಿಸಿಕೊಂಡಿದ್ದ. ಯುಸುಫನ ಮೊಮ್ಮಗ ಇಬ್ರಾಹಿಮ್‌ನ ಕಾಲದಲ್ಲಿ ದಕ್ಕನಿ ಸಾಹಿತ್ಯಕ್ಕೆ ರಾಜಾಶ್ರಯ ದೊರೆಯಿತು. ಆಗಲೇ ಸೂಫಿ ಸಂತರು ಈ ಭಾಷೆಯಲ್ಲಿ ಅನೇಕ ಕೃತಿಗಳನ್ನು ರಚಿಸಿದರು. ಇಬ್ರಾಹಿಮ್‌ನ ಮಗ ಅಲಿ ಆದಿಲ್‌ಶಾಹಿಯ ಹೆಂಡತಿ ಚಾಂದಬೀಬಿ ಸುಪ್ರಸಿದ್ಧ ಕಲಾವಿದೆ ಹಾಗೂ ಕವಿಯತ್ರಿಯಾಗಿದ್ದಳು.
ಜಗದ್ಗುರು ಎಂದೇ ಖ್ಯಾತನಾದ ಎರಡನೆಯ ಇಬ್ರಾಹಿಮ ‘ಕಿತಾಬ್-ಎ-ನೌರಸ’ ಎಂಬ ಕೃತಿಯನ್ನು ರಚಿಸಿದ್ದನು. ಆತನ ಆಸ್ಥಾನದಲ್ಲಿ 300ಕ್ಕೂ ಅಧಿಕ ಕವಿ-ಸಾಹಿತಿಗಳಿದ್ದರು.
‘ಮಹಮದನಾಮಾ’ ರಚಿಸಿದ ಜುಹೂರಿಯಂಥ ವಿಶ್ವವಿಖ್ಯಾತ ಕವಿ, ಫರಿಶ್ತಾನಂಥ ಅನನ್ಯ ಇತಿಹಾಸಕಾರ, ಅಬ್ದುಲ ದೆಹಲ್ವಿಯಂಥ ಪ್ರಖ್ಯಾತ ಸಾಹಿತಿಗಳು ಅವನ ಆಸ್ಥಾನದಲ್ಲಿ ರಾರಾಜಿಸುತ್ತಿದ್ದರು. ಸ್ವತಃ ಕವಿಯಾದ ಮಹಮ್ಮದ್ ಆದಿಲ್‌ಶಾಹನ ಆಸ್ಥಾನದಲ್ಲಿ ಮುಲ್ಲಾ ನುಸ್ರತಿಯಂಥ ಮಹಾಕವಿಗಳಿದ್ದರು. ಆದಿಲಶಾಹಿ ಅರಮನೆಯಲ್ಲಿ ಒಂದು ದೊಡ್ಡ ಗ್ರಂಥಾಲಯವೇ ಇತ್ತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.