ADVERTISEMENT

ಮೃದು ಅಧರ ಮಧುರ

​ಪ್ರಜಾವಾಣಿ ವಾರ್ತೆ
Published 3 ಡಿಸೆಂಬರ್ 2013, 19:30 IST
Last Updated 3 ಡಿಸೆಂಬರ್ 2013, 19:30 IST

ಚಳಿಗಾಲದಲ್ಲಿ ಒಣತುಟಿಯಿಂದಾಗಿ ನಗುವರಳಿಸುವುದು ಕಷ್ಟವೇ? ನಗುವುದಷ್ಟೇ ಅಲ್ಲ, ಮಾತನಾಡುವುದೂ ಕಷ್ಟವಾಗುತ್ತದೆ ಎನ್ನುತ್ತಾರೆ ಒಣ ತುಟಿಯ ಸಮಸ್ಯೆಯಿಂದ ಬಳಲುವವರು. 

ಶುಷ್ಕ ತುಟಿಯಿಂದಾಗಿ ಆಗಾಗ ನಾಲಗೆ ಸವರುವುದರ ಬದಲು ವಿಟಮಿನ್‌ ಇ–ಯುಕ್ತ ಬಾಮ್‌ ಸವರಿಕೊಳ್ಳುವುದು ಉತ್ತಮ ಪರಿಹಾರ. ಲಿಪ್‌ ಬಾಮ್‌ ಆಯ್ಕೆ ಮಾಡಿಕೊಳ್ಳುವಾಗಲೂ ಎಚ್ಚರವಹಿಸಬೇಕಿರುವುದು ಅತ್ಯಗತ್ಯ.

ಮೆದು ತುಟಿಯ ಮಾಧುರ್ಯಕ್ಕಾಗಿ ಇಲ್ಲಿವೆ ಕೆಲವು ಸರಳ ಸೂತ್ರಗಳು.
ಚಳಿಗಾಲವಾದ್ದರಿಂದ ನೀರು ಕುಡಿಯುವುದನ್ನು ಪ್ರಜ್ಞಾಪೂರ್ವಕವಾಗಿ ಒಂದು ಅಭ್ಯಾಸ ಮಾಡಿಕೊಳ್ಳಬೇಕು. ವಿಟಮಿನ್‌–ಬಿ ಹೇರಳವಾಗಿ ಸೇವಿಸಬೇಕು. ಇಲ್ಲದಿದ್ದರೆ ಒಣ ತುಟಿಯಷ್ಟೇ ಅಲ್ಲ, ಚರ್ಮವೂ ಬಿರಿಯುತ್ತದೆ. ಶುಷ್ಕವಾಗುತ್ತದೆ.

ತುಟಿಯನ್ನು ನಾಲಗೆಯಿಂದ ಸವರಿಕೊಳ್ಳಬೇಕು ಎನಿಸಿದಾಗಲೆಲ್ಲ ನೀರು ಕುಡಿಯಿರಿ. ಇಲ್ಲದಿದ್ದರೆ ತುಟಿ ಇನ್ನಷ್ಟು ಬಿರಿಯುವ ಸಾಧ್ಯತೆ ಇರುತ್ತದೆ.

ಚರ್ಮದಲ್ಲಿ ಸತ್ತ ಕಣಗಳನ್ನು ಬೇರ್ಪಡಿಸಲು ಮೃದುವಾದ ಬ್ರಷ್‌ ಬಳಸಿದರೆ ಒಳಿತು. ಇಲ್ಲದಿದ್ದಲ್ಲಿ ಕೆಲವೊಮ್ಮೆ ತುಟಿಯ ಚರ್ಮವೇ ಕಿತ್ತುಬಂದು ಗಾಯವಾಗುವ ಸಾಧ್ಯತೆಗಳೂ ಇರುತ್ತವೆ.

ಲಿಪ್ ಬಾಮ್ ಅಥವಾ ಲಿಪ್ ಜೆಲ್ ಕೊಳ್ಳುವಾಗ ಎಚ್ಚರದಿಂದ ಲೇಬಲ್ ಓದಿರಿ. ತುಟಿಯ ಮೆದುತ್ವ ಉಳಿಸಲು ಕೇವಲ ಪೆಟ್ರೋಲಿಯಂ ಜೆಲ್ಲಿ ಅಥವಾ ಮಿನರಲ್‌ ಆಯಿಲ್‌ ಇದ್ದರೆ ಸಾಲದು. ಅದು ಕೇವಲ ತುಟಿಯ ಮೇಲೊಂದು ಲೇಪನವಾಗಿರುತ್ತದೆಯೇ ಹೊರತು ತೇವಾಂಶವನ್ನು ಕಾಪಾಡುವುದಿಲ್ಲ. ಮಾಯಿಶ್ಚರೈಸರ್‌ ಅಂಶ ಇರುವ ಲಿಪ್‌ ಬಾಮ್‌ಗಳನ್ನು ಬಳಸುವುದು ಒಳಿತು.

ದಿನಾ ರಾತ್ರಿ ಮಲಗುವ ಮುನ್ನ ತುಪ್ಪ ಅಥವಾ ಕೆನೆಯನ್ನು ಸವರುವುದರಿಂದಲೂ ತುಟಿಯ ಮೃದುತ್ವವನ್ನು ಕಾಪಾಡಬಹುದು.
ಹೂ ಬಿರಿದಂಥ ನಗುವಿಗೆ ತುಟಿ ಬಿರಿಯದಂತೆ ಕಾಪಾಡಿಕೊಳ್ಳುವುದೇ ಪರಿಹಾರವಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.