ADVERTISEMENT

ಮೇಡಂಗೆ ಸಿಟ್ಟು ಬರೋದು ಏಕೆ?

ಸಂಪಿಗೆ
Published 6 ಏಪ್ರಿಲ್ 2018, 19:30 IST
Last Updated 6 ಏಪ್ರಿಲ್ 2018, 19:30 IST
ಮೇಡಂಗೆ ಸಿಟ್ಟು ಬರೋದು ಏಕೆ?
ಮೇಡಂಗೆ ಸಿಟ್ಟು ಬರೋದು ಏಕೆ?   

‘ಹೆಂಡತಿ ನೀ ಯಾಕೆ ಪ್ರಾಣ ಹಿಂಡುತಿ...’

– ಬಹುತೇಕ ಗಂಡಸರ ಮಾತಿದು. ಸಂಸಾರದ ಬಂಡಿಗೆ ಜೀವದ್ರವ್ಯವಾಗಿರುವ ಹೆಂಡತಿ ಮೇಲೆ ಹಲವು ಜೋಕುಗಳು, ಮೀಮ್‌ಗಳು ಹೇರಳವಾಗಿಯೇ ಸಿಗುತ್ತವೆ. ಅದರಲ್ಲೂ ಹೆಂಡತಿಯರು ಗಂಡನ ಮೇಲೆ ತೋರುವ ಸಿಟ್ಟಿನ ಕುರಿತು ಥರೇವಾರಿ ವ್ಯಂಗ್ಯಚಿತ್ರಗಳಿಗೇನೂ ಕೊರತೆಯಿಲ್ಲ.

ಹೆಂಡತಿಯರೆಂದರೆ ಮಹಾನ್ ಪೆದ್ದರೂ, ವಿಲನ್‌ಗಳೆಂಬಂತೆಯೂ ಚಿತ್ರಿಸಲಾಗಿರುತ್ತದೆ. ಆದರೆ, ನಿಜಕ್ಕೂ ಹೆಂಡತಿಯರಿಗೇಕೆ ಗಂಡನ ಮೇಲೆ ಸಿಟ್ಟು ಬರುತ್ತೆ ಅಂತ ಗೊತ್ತೇ? ಇಲ್ಲಿದೆ ನೋಡಿ ಆ ಸಿಟ್ಟಿಗೆ ಕೆಲ ಕಾರಣಗಳು.

ADVERTISEMENT

* ಸಮಯ ಕೊಡೋದಿಲ್ಲ: ಗಂಡ ದೇಶದ ಪ್ರಧಾನಿಯೇ ಆಗಿರಲಿ, ಕೂಲಿಕಾರ್ಮಿಕನೇ ಆಗಿರಲಿ. ದಿನನಿತ್ಯ ಹೆಂಡತಿ ಜತೆ ತುಸುವಾದರೂ ಸಮಯ ಕಳೆಯಬೇಕೆಂಬುದು ಎಲ್ಲಾ ಹೆಂಡತಿಯರ ಆಸೆ. ಬೆಳಿಗ್ಗೆ ಕಚೇರಿ ಕೆಲಸಕ್ಕೋ ಅಥವಾ ಇತರ ಕೆಲಸಕ್ಕೋ ಹೊರಗೆ ತೆರಳುವ ಗಂಡ, ಸಂಜೆ ಹೊತ್ತಿಗೆ ಸೀದಾ ಮನೆಗೆ ಬರ್ತಾನೆ ಅನ್ನೋದು ಹೆಂಡ್ತಿಯರ ಲೆಕ್ಕಾಚಾರ. ಆದರೆ, ಈ ಲೆಕ್ಕಾಚಾರ ಬಹುತೇಕ ಬಾರಿ ಉಲ್ಟಾ ಹೊಡೆಯುವುದೇ ಹೆಚ್ಚು. ಸಂಜೆ ಬೇಗ ಬರ್ತೀನಿ ಅಂತ ಹೇಳಿದ ಗಂಡ, ರಾತ್ರಿಯಾದರೂ ಮನೆಗೆ ಬಾರದಿದ್ದಾಗ ಸಹಜವಾಗಿಯೇ ಹೆಂಡ್ತಿಗೆ ಸಿಟ್ಟು ಬರುತ್ತದೆ. ಹೇಳಿದ ಸಮಯಕ್ಕೆ ಬರಲಾಗಿದ್ದರೆ ಹೆಂಡತಿಗೆ ಕನಿಷ್ಠ ಒಂದು ಮೆಸೇಜ್ ಆದರೂ ಮಾಡಿ. ಮೇಡಂ ಸಿಟ್ಟು ತುಸುವಾದರೂ ತಣಿಯುತ್ತೆ.

* ಗಮನ ಕೊಡದಿದ್ದರೆ: ಸಾಮಾನ್ಯವಾಗಿ ಹೆಂಡ್ತೀರು ಮಾತನಾಡುವಾಗ ಬಹುತೇಕ ಗಂಡಂದಿರು ಮೊಬೈಲ್‌ನೊಳಗೆ ಮುಳುಗಿರುತ್ತಾರೆ. ಪೇಪರ್ ಓದುವುದೋ, ಟಿವಿ ನೋಡುವುದೋ ಅಥವಾ ಕಂಪ್ಯೂಟರ್‌ನಲ್ಲೋ ತಲ್ಲೀನರಾಗಿರುವಂತೆ ತೋರ್ಪಡಿಸಿಕೊಳ್ಳುತ್ತಾರೆ. ಹೆಂಡತಿ, ‘ರೀ ಅಂತ ಶುರು ಮಾಡಿದ್ರೆ ಸಾಕು ಏನೋ ಬೇಡಿಕೆ ಮಂಡನೆ ಇದೆ ಅಂತಲೇ ಬಹುತೇಕ ಗಂಡಂದಿರು ಭಾವಿಸುತ್ತಾರೆ. ಆದರೆ, ಹೆಂಡತಿಗೆ ಗಂಡನಾದವನು ತನ್ನ ಮಾತನ್ನು ಗಮನವಿಟ್ಟು ಕೇಳಬೇಕು ಎಂಬ ಸಣ್ಣ ಆಸೆ ಇರುತ್ತದೆ. ಬೇಡಿಕೆ ಈಡೇರಿಸುವುದು ಎರಡನೇ ಆದ್ಯತೆಯಾಗಿರುತ್ತದೆ. ಮನೆಯಾಕೆ ಕೇಳಿದ್ದು ತಂದು ಕೊಡದಿದ್ದರೂ ಪರವಾಗಿಲ್ಲ, ಅವಳ ಮಾತನ್ನು ಕೇಳಿಸಿಕೊಳ್ಳಿ ಸ್ವಾಮಿ.

* ಮಾತು ಕೇಳದಿದ್ದಾಗ: ಸಾಮಾನ್ಯವಾಗಿ ಹೆಂಡತಿ ಸಂಸಾರ ನಿಭಾಯಿಸುವ ವಿಚಾರದಲ್ಲಿ ಜಾಣೆಯರಾಗಿರುತ್ತಾಳೆ. ಇಂಥ ವಸ್ತುವಿಗೆ ಇಷ್ಟೇ ಮೌಲ್ಯ ಅನ್ನುವುದನ್ನೂ ಅಂದಾಜಿಸುವ ಗುಣ ಅವಳಿಗಿರುತ್ತದೆ. ಮಾರ್ಕೆಟ್‌ಗೆ ಹೋದಾಗ ಗಂಡಂದಿರು ವ್ಯಾಪಾರಿಗಳು ಹೇಳಿದಷ್ಟು ಬೆಲೆ ಕೊಟ್ಟಾಗ ಹೆಂಡತಿಯರಿಗೆ ಸಿಟ್ಟು ಬರುತ್ತದೆ. ಗಂಡ ತನ್ನ ಮಾತು ಕೇಳಬೇಕಿತ್ತು ಅನ್ನುವ ಭಾವ ಅವರದು. ಈ ಸಾಮಾನು ಬೇಕೆ ಬೇಡವೇ ಎಂಬ ಬಗ್ಗೆ ಹೆಂಡತಿ ಬಳಿ ಒಂದು ಮಾತು ಕೇಳಿದರೆ ಅವಳಿಗೆ ಸಖತ್ ಖುಷಿಯಾಗುತ್ತೆ.

* ಬೇರೆಯವರನ್ನು ಹೊಗಳಬೇಡಿ: ಹೆಂಡತಿ ಎದುರು ಬೇರೆ ಹುಡುಗಿ, ಬೇರೆಯವರ ಹೆಂಡತಿಯನ್ನೋ ಅಥವಾ ಸಂಬಂಧಿಕರನ್ನೋ ಹೊಗಳಿದರೆ ಅವಳಿಗೆ ಕೋಪ ಬಂದೀತು. ನಿಮ್ಮ ಸಹೋದ್ಯೋಗಿಯನ್ನೋ, ಹೆಂಡತಿಯು ದ್ವೇಷಿಸುವವರನ್ನೋ ಅಪ್ಪಿತಪ್ಪಿಯೂ ಹೊಗಳುವ ಕೆಲಸ ಮಾಡಬೇಡಿ. ಇದು ಸುಖಸಂಸಾರಕ್ಕೆ ಒಳಿತಲ್ಲ.

* ಥ್ಯಾಂಕ್ಸ್, ಸಾರಿ ಹೇಳಿ: ನಿತ್ಯವೂ ಕಚೇರಿಗೆ ತೆರಳುವ ಸಮಯಕ್ಕೆ ಗಂಡನಿಗೆ ತಿಂಡಿ ಸೇರಿದಂತೆ ಮತ್ತಿತರ ಕೆಲಸಗಳನ್ನು ಮಾಡಿ ಅನುಕೂಲ ಮಾಡಿಕೊಡುವ ಹೆಂಡತಿಗೆ ಆಗಾಗ ಥ್ಯಾಂಕ್ಸ್ ಹೇಳಿದರೆ ಆಕೆಗೆ ಇಷ್ಟವಾಗುತ್ತದೆ. ಹಾಗೆಯೇ ನಿಮ್ಮಿಂದ ಏನಾದರೂ ಸಣ್ಣ ತಪ್ಪುಗಳಾಗಿದ್ದರೆ ಅಹಂ ಬಿಟ್ಟು ’ಸಾರಿ’ ಕೇಳಿ. ಎಷ್ಟೇ ಸಿಟ್ಟಿದ್ದರೂ ಸಾರಿ ಪದ ಕಿವಿಗೆ ಬಿದ್ದಾಕ್ಷಣ ಆಕೆಯ ಸಿಟ್ಟು ಶಮನವಾಗುವುದು ಗ್ಯಾರಂಟಿ

* ಐ ಲವ್ ಯೂ ಹೇಳಿ: ಪ್ರೀತಿಸಿ ಮದುವೆ ಆಗಿದ್ದರೂ, ಮನೆಯವರೇ ನೋಡಿ ಮದುವೆ ಮಾಡಿದ್ದರೂ ಪರವಾಗಿಲ್ಲ. ಹೆಂಡತಿಯರಿಗೆ ತಮ್ಮ ಗಂಡಂದಿರು ಆಗಾಗ ಐ ಲವ್‌ ಯೂ ಹೇಳಬೇಕು ಅನ್ನುವ ನಿರೀಕ್ಷೆ ಇರುತ್ತದೆ.

ಹೆಂಡತಿಯಿಂದ ದೂರವಾಗಿದ್ದಾಗ ಅವಳ ನೆನಪಾದಾಗ ತಪ್ಪದೇ ಐ ಲವ್‌ ಯೂ ಮತ್ತು ಐ ಮಿಸ್‌ ಯೂ ರೀತಿಯ ಮೆಸೇಜ್‌ಗಳನ್ನು ವಾಟ್ಸ್ ಆ್ಯಪ್ ಇಲ್ಲವೇ ಫೇಸ್‌ಬುಕ್ ಮೂಲಕ ಕಳಿಸಿ. ದೂರವಿದ್ದರೂ ಗಂಡನಿಗೆ ತನ್ನೆಡೆಗಿರುವ ಪ್ರೀತಿ ಕಂಡು ಹೆಂಡತಿ ಸಂತಸ ಪಡುತ್ತಾಳೆ.

ಪ್ರೈವೆಸಿ ಕಾಪಾಡಿ: ಮನೆಯಲ್ಲಿ ಸದಾ ಗಿಜಿಗುಡುವ ಸಂಬಂಧಿಕರು ಅಥವಾ ಜನರಿದ್ದರೆ ಸಹಜವಾಗಿಯೇ ಹೆಂಡತಿಗೆ ಸಿಟ್ಟು ಬರುತ್ತದೆ. ಆ ಸಿಟ್ಟಿನ ಹಿಂದಿನ ಕಾರಣ ಸಂಬಂಧಿಕರಿಗಾಗಿ ಶ್ರಮ ಪಡುವುದರ ಬಗ್ಗೆ ಇರುವ ಅಸಹನೆ ಅಲ್ಲ. ಗಂಡನೊಂದಿಗೆ ಏಕಾಂತ ದೊರೆಯುತ್ತಿಲ್ಲ ಎನ್ನುವ ಬೇಸರ. ಮನೆ ತುಂಬಾ ಜನರಿದ್ದಾಗ ಹೆಂಡತಿಯನ್ನು ಸ್ವಲ್ಪ ಹೊತ್ತಾದರೂ ಮನೆಯಿಂದ ಹೊರಗೆ ಕರೆದೊಯ್ಯಿರಿ. ಅವಳ ಮಾತುಗಳಿಗೆ ಕಿವಿಯಾಗಿ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.