ADVERTISEMENT

ರೋಡ್‌ ಟು ಪ್ರೆಡಿಶನ್‌

​ಪ್ರಜಾವಾಣಿ ವಾರ್ತೆ
Published 7 ಜೂನ್ 2017, 19:30 IST
Last Updated 7 ಜೂನ್ 2017, 19:30 IST
ರೋಡ್‌ ಟು ಪ್ರೆಡಿಶನ್‌
ರೋಡ್‌ ಟು ಪ್ರೆಡಿಶನ್‌   

ನಡುರಾತ್ರಿ. ಸುಲಿವ್ಯಾನ್‌ ಯಾವುದೋ ದಾಖಲೆಗಳನ್ನು ಪರಿಶೀಲಿಸುತ್ತಾ ಕೂತಿದ್ದಾನೆ. ಅವನ ಒಂದು ಭುಜದಲ್ಲಿ ಗುಂಡು ತಾಕಿದ ಗಾಯ ಇನ್ನೂ ಹಸಿಯಾಗಿಯೇ ಇದೆ. ಮಗ ಮೈಕಲ್‌ ಸುಮ್ಮನೇ ಬಂದು ಅವನ ಎದುರು ಕುಳಿತುಕೊಳ್ಳುತ್ತಾನೆ.

ಸ್ವಲ್ಪ ಹೊತ್ತಿನ ಮೌನದ ನಂತರ ಅವನು ಕೇಳುವ ಪ್ರಶ್ನೆ ‘ಅಪ್ಪಾ ನಿನಗೆ ನನಗಿಂತ ತಮ್ಮನ ಮೇಲೆಯೇ ಹೆಚ್ಚು ಪ್ರೀತಿ ಇತ್ತು ಅಲ್ವಾ?’. ಸಂಭಾಷಣೆ ಹೀಗೆಯೇ ಮುಂದುವರಿಯುತ್ತದೆ.
‘ನಿನಗೆ ಹಾಗನಿಸಿತಾ?
‘ಹೌದು’
‘ಅದು ಹಾಗಲ್ಲ ಮೈಕಲ್‌, ನಿನ್ನ ತಮ್ಮ ಅಮ್ಮನ ಹಾಗೆ. ಆದರೆ ನೀನು ನನ್ನನ್ನೇ ಹೆಚ್ಚು ಹೋಲುತ್ತಿದ್ದೆ. ಸ್ವಭಾವದಲ್ಲಿಯೂ. ಆದರೆ ನೀನು ನನ್ನಂತಾಗುವುದು ನನಗೆ ಸ್ವಲ್ಪವೂ ಇಷ್ಟವಿರಲಿಲ್ಲ. ಅದಕ್ಕೆ ನಿನ್ನಿಂದ ಸ್ವಲ್ಪ ಅಂತರ ಕಾಯ್ದುಕೊಳ್ಳುತ್ತಿದ್ದೆನೇನೊ. ಅದಕ್ಕೆ ನಿನಗೆ ಹಾಗನಿಸಿರಬಹುದು’.

ಅದುವರೆಗೆ ಕೇವಲ ಓರ್ವ ಕೊಲೆಪಾತಕಿ, ದುಷ್ಟನಾಗಿಯಷ್ಟೇ ಕಾಣುತ್ತಿದ್ದ ಸುಲಿವ್ಯಾನ್‌ ಈಗ ಆ ರಾತ್ರಿಯ ದೀಪದ ಮಂದಬೆಳಕಿನಲ್ಲಿ ಬೇರೆಯೇ ಆಗಿ ಕಾಣಲಾರಂಭಿಸುತ್ತಾನೆ. 2002ರಲ್ಲಿ ಬಿಡುಗಡೆಯಾದ ಅಮೆರಿಕನ್‌ ಸಿನಿಮಾ ‘ರೋಡ್‌ ಟು ಪ್ರೆಡಿಷನ್‌’, ಪಾತಕಲೋಕದ ಕಥೆಯಿಟ್ಟುಕೊಂಡೇ, ಮನುಷ್ಯನನ್ನು ಒಳ್ಳೆಯವ ಮತ್ತು ಕೆಟ್ಟವ ಎಂಬ ಗಡಿರೇಖೆಗಳ ತಥ್ಯವನ್ನು ಪರೀಕ್ಷಿಸುವ ಸಿನಿಮಾ.

ADVERTISEMENT

ಅನಾಥ ಸುಲಿವ್ಯಾನ್‌ನನ್ನು ಶ್ರೀಮಂತ ಜಾನ್‌ ರೂನಿ ಸಾಕಿರುತ್ತಾನೆ. ತನಗೆ ಬದುಕು ನೀಡಿದ ಒಡೆಯನಿಗೆ ನಿಷ್ಠನಾಗಿ ಅವನಿಗಾಗಿ ಹಲವು ಪಾತಕಗಳನ್ನು ಎಸಗುತ್ತಿರುತ್ತಾನೆ. ಸುಲಿವ್ಯಾನ್‌. ಅವನ ಇಬ್ಬರು ಮಕ್ಕಳಿಗೂ ಅಪ್ಪ ಯಾವ ಕೆಲಸ ಮಾಡುತ್ತಿದ್ದಾನೆ ಎಂದು ತಿಳಿದಿರುವುದಿಲ್ಲ.  

ರೂನಿಯ ಮಗ ಕಾನರ್‌ಗೆ ತಾನೂ ತಂದೆಯ ಪ್ರಭಾವಳಿಯನ್ನು ಮೀರಿ ವ್ಯವಹಾರ ಚತುರ ಅನಿಸಿಕೊಳ್ಳಬೇಕು. ತಂದೆಯ ದಂಧೆಯನ್ನು ಮುನ್ನಡೆಸಬೇಕು ಎನ್ನುವ ಹಂಬಲ. ಇವನ ಸಂಚಿಗೆ ಸುಲಿವ್ಯಾನ್‌ ತನ್ನ ಹೆಂಡತಿ ಮತ್ತು ಕಿರಿಮಗನನ್ನು ಕಳೆದುಕೊಳ್ಳಬೇಕಾಗುತ್ತದೆ.

ಆ ಕ್ಷಣದಿಂದ ಸುಲಿವ್ಯಾನ್‌ಗೆ ತನ್ನ ಒಡೆಯನೇ ತನಗೆ ಶತ್ರುವಾಗಿಬಿಡುತ್ತಾನೆ. ತನಗಿದ್ದ ಎಲ್ಲ ಅಭಯಹಸ್ತಗಳೂ ಹಿಂದೆಸರಿದು ಒಬ್ಬಂಟಿಯಾಗುತ್ತಾನೆ.

12 ವರ್ಷದ ಮಗನೊಟ್ಟಿಗೆ ತನ್ನ ಹೆಂಡತಿ, ಮಗನನ್ನು ಕೊಂದವರ ವಿರುದ್ಧ ಹೇಗೆ ಸೇಡು ತೀರಿಸಿಕೊಳ್ಳುತ್ತಾನೆ ಎಂಬುದೇ ಈ ಚಿತ್ರದ ಕಥಾವಸ್ತು. ಸಾಮಾನ್ಯ ಪಾತಕ ಲೋಕದ ಸೇಡಿನ ಕಥೆಯಾಗಬಹುದಾಗಿದ್ದನ್ನು ಸರಿ ತಪ್ಪುಗಳ ತಾತ್ವಿಕ ಅಸ್ಪಷ್ಟತೆಯ ಶೋಧನೆಯ ಕಥೆಯನ್ನಾಗಿಯೂ ರೂಪಿಸಿದ್ದಾರೆ ನಿರ್ದೇಶಕ ಸ್ಯಾಮ್‌ ಮೆಂಡೆಸ್‌.

ತನ್ನ ಕಾರ್ಯಾಚರಣೆಗೆ ಮಗನನ್ನು ಬಳಸಿಕೊಳ್ಳುತ್ತಿದ್ದರೂ ಸುಲಿವ್ಯಾನ್‌ಗೆ ತನ್ನ ಮಗ ತನ್ನಂತೆ ಪಾತಕಿ ಆಗಬಾರದು ಎಂಬ ಆಸೆಯೇ ಇದೆ. ಕೆಲವು ಜನರಿಂದ ತುಂಬ ಒಳ್ಳೆಯ ವ್ಯಕ್ತಿ ಅನಿಸಿಕೊಂಡು ಇನ್ನು ಕೆಲವರಿಂದ ಕೊಲೆಪಾತಕಿ, ದುಷ್ಟ ಅನಿಸಿಕೊಳ್ಳುವ ತನ್ನ ಅಪ್ಪನ ವ್ಯಕ್ತಿತ್ವದ ಕುರಿತಾದ ಪ್ರಶ್ನೆಗಳಿಗೆ ಮೈಕಲ್‌ನಲ್ಲಿ ಇರುವ ಒಂದೇ ಉತ್ತರ ‘ಅವನು ನನ್ನ ಅಪ್ಪ’.

ಪಾತಕಜಗತ್ತಿನ ಕಥೆಯನ್ನು ಹೇಳುತ್ತಲೇ ಅದನ್ನು ನಿರಾಕರಿಸುವ, ಮೋಸ ವಂಚನೆಗಳ ಕುರಿತು ಮಾತನಾಡುತ್ತಲೇ ಮಾನವೀಯ ಮೌಲ್ಯವನ್ನು ಗೆಲ್ಲಿಸುವ ಒಳ್ಳೆಯ ಸಿನಿಮಾ ‘ರೋಡ್‌ ಟು ಪ್ರೆಡಿಷನ್‌’. ಸುಲಿವ್ಯಾನ್‌ ಪಾತ್ರದಲ್ಲಿ ಟಾಮ್‌ ಹಾಂಕ್ಸ್‌ ಅಭಿನಯ ಆ ಪಾತ್ರದ ಮಾನಸಿಕ ಸಂಘರ್ಷಗಳನ್ನು ಮನಸ್ಸಿಗೆ ತಟ್ಟುವಂತೆ ಕಟ್ಟಿಕೊಟ್ಟಿದೆ.

ಮಗ ಮೈಕಲ್‌ ಪಾತ್ರಧಾರಿ ಟೈಲರ್‌ ಹೋಚ್ಲಿನ್‌ ಅವರ ಮುಗ್ಧ ಅಭಿನಯವೂ ಈ ಸಿನಿಮಾದ ಕಾಡುವ ಗುಣಗಳಲ್ಲಿ ಒಂದು.  ಥಾಮಸ್‌ ನ್ಯೂಸ್‌ಮೆನ್‌ ಅವರ ಸಂಗೀತ ತೆರೆಯ ಮೇಲಿನ ದೃಶ್ಯಗಳ ಭಾವನೆಯನ್ನು ತೀವ್ರಗೊಳಿಸುವಂತಿದೆ. ಕಾರ್ನಾಡ್‌ ಎಲ್‌ ಹಾಲ್‌ ಕ್ಯಾಮೆರಾ ಕೂಡ ಸಿನಿಮಾದ ಧನಾತ್ಮಕ ಅಂಶಗಳಲ್ಲಿ ಒಂದು. ‘ರೋಡ್‌ ಟು ಪ್ರೆಡಿಷನ್‌’ ಅನ್ನು ಯೂ ಟ್ಯೂಬ್‌ನಲ್ಲಿ goo.gl/90mV1L ಕೊಂಡಿ ಬಳಸಿ ನೋಡಬಹುದು.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.