ADVERTISEMENT

ವಾಸ್ತವದ ಜಗಲಿಕಟ್ಟೆ ಮೇಲಿನ ಮಾತು

​ಪ್ರಜಾವಾಣಿ ವಾರ್ತೆ
Published 20 ಏಪ್ರಿಲ್ 2018, 19:30 IST
Last Updated 20 ಏಪ್ರಿಲ್ 2018, 19:30 IST
ಕಲೆ– ಗಂಗಾಧರ ಅಡ್ಡೇರಿ
ಕಲೆ– ಗಂಗಾಧರ ಅಡ್ಡೇರಿ   

-ರಾಜಿ

ಮದುವೆಯಾಗಿ ತಿಂಗಳಿಲ್ಲ
ನೋಡಿರಣ್ಣ ಹೇಗಿದೆ
ನಾನು ಕೂಗಿದಾಗಲೆಲ್ಲ
ಬರುವಳೆನ್ನ ಶಾರದೆ...

ಮದುವೆಯ ಹೊಸತು ಎಂದರೆ ಕಣ್ಣತುಂಬ ರಮ್ಯ ಕನಸುಗಳು. ಎಷ್ಟೇ ವರ್ಷದ ಪರಿಚಯ– ಪ್ರೇಮ ಜೊತೆಗಿರಲಿ. ಹೊಸಿಲು ದಾಟಿ ಒಳಬಂದವಳ ಜೊತೆಗೆ, ನಂಬಿಕೆಯ ಬೆಚ್ಚನೆಯ ವಲಯದೊಳಗೆ ಕರೆದುಕೊಂಡವನ ಜೊತೆಗೆ ಒಂದೇ ಮನೆಯೊಳಗೆ ಬದುಕಿನಲ್ಲಿ ನಿರೀಕ್ಷೆಯ ಮಹಾಪೂರವೇ ಇರುತ್ತದೆ ಅಲ್ಲವೇ.

ADVERTISEMENT

ಮದುವೆಯ ಮೊದಲ ವರ್ಷ ಪ್ರತಿದಿನವೂ ಹೊಸತು. ಕೆಲವೊಮ್ಮೆ ಖುಷಿ. ಮತ್ತೆ ಕೆಲವೊಮ್ಮೆ ಬೇಸರ. ಅದೇ ಮೊದಲ ಬಾರಿಗೆ ಸಿಟ್ಟಾಗಿ ಮಾತಿಗೆ ಮಾತು ಬೆಳೆದು ಜಟಾಪಟಿ ಆಗುವಾಗ ಅವನ ಒಳಗೊಂದು ಅಚ್ಚರಿ. ‘ಅರೆ ಇವಳು ಹೀಗೆಲ್ಲಾ ಕಿರುಚ್ತಾಳಾ!' ಅವಳಿಗೂ ಹಾಗೆಯೇ ಅನಿಸುವುದುಂಟು. ಮದುವೆಗೆ ಮುನ್ನ ಅಪರಾತ್ರಿಯವರೆಗೂ ವಾಟ್ಸ್‌ಆಪ್‌ನಲ್ಲಿ ಮುಳುಗಿ ಮಂಚದಡಿಯಲ್ಲಿ ಫೋನಿಟ್ಟುಕೊಂಡು ಟೈಪಿಸಿದ್ದುಂಟು. ಈಗ ಒಂದೊಂದೇ ಆಫೀಸ್‌ ಕಾಲ್‌ಗೆ ಜೋತು ಬೀಳ್ತಾ ಬೀಳ್ತಾ ಇದ್ದಾನಲ್ಲ.

ಆದರೆ ಮೊನ್ನೆ ಸಿಕ್ಕಿದ ನಳಿನಿ ಹೇಳಿದ್ದಳು. ‘ನಂಗಿಷ್ಟ ಅಂತ ಅವನೂ ಹೊರಗೆ ಹೋದಾಗ ‘ಘೀ ರೈಸ್‌’ ತಿಂತಾ ಇದ್ದ ಪಾಪ. ಮದುವೆಯಾದ ಮೇಲೆಯೇ ಗೊತ್ತಾಯ್ತು ನಿಜವಾಗಿಯೂ ಅವನಿಗೆ ಕುಚ್ಚಲಕ್ಕಿ ಅನ್ನ, ಉಪ್ಪಿನಕಾಯಿ ಇಷ್ಟ ಅಂತ. ಮದುವೆಗೆ ಮುಂಚಿನ ಮಾತಿನ ಮಹಲುಗಳೆಲ್ಲ ಕರಗಿ, ವಾಸ್ತವದ ಜಗಲಿ ಕಟ್ಟೆಯನ್ನು ಅರ್ಥ ಮಾಡಿಕೊಳ್ಳಬೇಕಲ್ವಾ...’

ವಾಸ್ತವವನ್ನು ಅರಿಯುತ್ತ ಅರಿಯುತ್ತ, ಅವಳು ಯಾವಾಗ ಕಿರುಚುತ್ತಾಳೆಂದು ಅವನಿಗೆ ಮೊದಲೇ ಅರ್ಥವಾಗುತ್ತದೆ, ಇವನು ಯಾವಾಗ ಒಂದ್‌ ಬಿಯರ್‌ ಕುಡಿತಾನೆ ಅಂತ ಇವಳಿಗೂ ಅಂದಾಜಾಗಿರುತ್ತದೆ. ಅಷ್ಟೊತ್ತಿಗೆ ಮದುವೆಯಾಗಿ ಒಂದು ವರ್ಷವಾಗಿರುತ್ತದೆ.

‘ಪಲಾವ್ ಮಾಡ್ತೀನಿ, ಒಳ್ಳೆ ಚಹಾ ಮಾಡ್ತೀನಿ ನೀನೇ ಅಡುಗೆ ಮನೆ ವಹಿಸಿಕೊಳ್ಳಬೇಕಿಲ್ಲ’ ಅಂತ ಅವನು ಮದುವೆಗೆ ಮುನ್ನ ಹೇಳಿದ್ದ. ಅದನ್ನೆಲ್ಲ ಮಾಡಲು ಅವನಿಗೆ ಗೊತ್ತಿದೆ ನಿಜ. ಆದರೆ ಬೆಳಿಗ್ಗೆ ನಾನು ಆಫೀಸಿಗೆ ಹೊರಡುವ ಮೊದಲು ಅದೆಲ್ಲ ಆಗಿ ಬುತ್ತಿ ಕಟ್ಟಿಕೊಳ್ಳಬೇಕಲ್ಲ. ಉಹುಂ ಇವನನ್ನು ನಂಬಿದ್ರೆ ಅಷ್ಟೇ ಅಂತ ಎರಡು ವಾರದಲ್ಲೇ ಗೊತ್ತಾಯಿತು’ ಅಂತ ಕಳೆದ ಜನವರಿಯಲ್ಲಿ ಮದುವೆಯಾದ ನೀತು ಹೇಳುತ್ತಾಳೆ. ಅವರೋ ಮದುವೆಗೆ ಮುನ್ನವೇ ತಮ್ಮದೇ ಮನೆ ಜೋಡಿಸಿಕೊಂಡಿದ್ದಾರೆ.

ಅವನಿಗಾಗಿ ಅವಳು, ಅವಳಿಗಾಗಿ ಅವನು ಸಣ್ಣ ಸಣ್ಣ ಹೊಂದಾಣಿಕೆ ಮಾಡುತ್ತಾ ದಿನಾ ಹೆಜ್ಜೆ ಇಡುವುದೇ ದಾಂಪತ್ಯವೆಂಬ ಸುಂದರ ಚಿತ್ತಾರದ ಹೆಣಿಗೆ ಅಲ್ಲವೆ. ಬಿಳಿ ಕಸದ ಬುಟ್ಟಿಗಾಗಿ ಗಾಂಧಿಬಜಾರಿನಲ್ಲಿ ಸಂಜೆಪೂರ್ತಿ ಹುಡುಕಾಡುವ ಸುರೇಶ, ಮಿಕ್ಸಿ ಖರೀದಿಸುವಾಗ ತನ್ನನ್ನು ಕರೆದುಕೊಂಡು ಹೋಗಲಿಲ್ಲ ಎಂದು ಮಿಕ್ಸಿಯನ್ನೇ ಹಿಡಿದು ಅಂಗಡಿಗೆ ವಾಪಸ್ಸು ತಂದು ‘ನನಗೆ ಇಷ್ಟವಾದ ಪಿಂಕ್‌ ಮಿಕ್ಸಿ ಕೊಡಿ’ ಅಂತನ್ನುವ ಅಂಜನಾ ಮದುವೆಯ ಮೊದಲ ವರ್ಷದ ಖರೀದಿಯ ಸುಖವನ್ನು ಮೊಗೆದುಕೊಳ್ಳುತ್ತಾರೆ.

ಸವಾಲೆಂದರೆ ಅವನ ಬಂಧುಗಳನ್ನು ಅವಳ ಬಂಧುಗಳನ್ನು ಅರ್ಥಮಾಡಿಕೊಳ್ಳುವುದು. ತಾನು ಏನು ಮಾಡಿದರೆ ಅವನು ನೊಂದುಕೊಂಡಾನು ಅಂತ ಅವಳು, ತಾನು ಹೇಗೆ ನಡೆದರೆ ಅವಳ ನಂಬಿಕೆಯ ಕೋಟೆಯಲ್ಲಿ ಬಿರುಕು ಮೂಡೀತು ಎಂದು ಅವನು ಯೋಚಿಸುತ್ತ ಇಡುವ ಹೆಜ್ಜೆಗಳ ನಡುವೆ ಇರುವುದು ಹೊಂದಾಣಿಕೆಯೊಂದೆ ಮಂತ್ರ.

ಹೆಚ್ಚಿನ ಸಂದರ್ಭಗಳಲ್ಲಿ ಹಣಕಾಸಿನ ವಿಷಯವೇ ಇಬ್ಬರ ನಡುವೆ ಮನಸ್ತಾಪಕ್ಕೆ ಕಾರಣವಾಗುವುದು ಉಂಟು. ಅಪ್ಪ ಅಮ್ಮನಿಗಾಗಿ ಮಾಡಿದ ಯಾವುದೋ ಸಾಲ, ಖರ್ಚು ವೆಚ್ಚಗಳ ಹಂಚಿಕೊಳ್ಳುವಿಕೆ ಆಗಾಗ ಮನಸ್ತಾಪ ಉಂಟುಮಾಡುತ್ತದೆ. ಇದಕ್ಕೆ ಪಾರದರ್ಶಕತೆಯೊಂದೇ ಪರಿಹಾರ. ಮದುವೆಯಾದ ಮೇಲೆ ಇಬ್ಬರ ಹೆಗಲ ಮೇಲಿನ ಹೊರೆಯನ್ನು ಹಂಚಿಕೊಳ್ಳುವುದು ಅನಿವಾರ್ಯ. ಅವಳ ತಂಗಿಯಂದಿರ ಮದುವೆಗೆ ನೆರವಾವುದು, ಅವನ ತಮ್ಮನ ಓದಿಗೆ ಒಂದಿಷ್ಟು ಹಣ ಒದಗಿಸುವುದು ‘ಇರುವ ಪರಿಸ್ಥಿತಿಯನ್ನು ಒಪ್ಪಿಕೊಳ್ಳುವ’ ಮನಸ್ಥಿತಿಯಲ್ಲದೆ ಬೇರೇನೂ ಅಲ್ಲ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.