ADVERTISEMENT

‘ವೈರಲ್‌’ ಆಗುವ ಹುಚ್ಚು

​ಪ್ರಜಾವಾಣಿ ವಾರ್ತೆ
Published 27 ಮಾರ್ಚ್ 2018, 19:30 IST
Last Updated 27 ಮಾರ್ಚ್ 2018, 19:30 IST
ಕರಿಷ್ಮಾ ಶರ್ಮಾ
ಕರಿಷ್ಮಾ ಶರ್ಮಾ   

ಸೆಲೆಬ್ರಿಟಿಗಳು ಏನೇ ಮಾಡಿದರೂ ಸುದ್ದಿಯಾಗುತ್ತದೆ ಎನ್ನುವುದು ಸರ್ವವಿದಿತ. ಆದರೆ, ಸುದ್ದಿಯಾಗಲೇಬೇಕು ಎಂದು ತಮಗೆ ತಾವೇ ಮಾಧ್ಯಮದಲ್ಲಿ ಜಾಗ ಸೃಷ್ಟಿಸಿಕೊಂಡು ‘ವೈರಲ್‌’ ಎಂಬ ಟ್ಯಾಗ್‌ಲೈನ್‌ನಡಿ ಸುದ್ದಿಯಾಗುವ ಖಯಾಲಿ ಈಗ ಹೆಚ್ಚುತ್ತಿದೆ. ತಮ್ಮ ಸಮಕಾಲೀನರು ಅಥವಾ ಪ್ರತಿಸ್ಪರ್ಧಿಗಳು ಸುದ್ದಿಯಾಗಿದ್ದಾರೆ ತಾವೂ ಆಗಬೇಕು ಅದಕ್ಕಾಗಿ ಏನೂ ಮಾಡಲೂ ಸಿದ್ಧ ಎಂಬ ಗೀಳೂ ವೈರಲ್‌ ಆಗುತ್ತಿದೆ!

ಬಹುಭಾಷಾ ನಟಿ ಶ್ರೀಯಾ ಶರಣ್‌ ಮತ್ತು ರಷ್ಯಾದ ಟೆನಿಸ್‌ ಆಟಗಾರ ಆ್ಯಂಡ್ರಿ ಕೊಷೀವ್‌ (Andrei Koscheev) ಮೊನ್ನೆ ತಾನೇ ಮದುವೆಯಾದಾಗ, ‘ಗುಟ್ಟಾಗಿ ಮದುವೆಯಾದರು’ ಎಂದು ಇಡೀ ಮಾಧ್ಯಮ ದೂರಿಕೊಂಡಿತು. ಸಿಕ್ಕಿದ ಫೋಟೊಗಳನ್ನೂ, ವಿಡಿಯೊ ತುಣುಕುಗಳನ್ನೂ ಪ್ರಸಾರ ಮಾಡಿತು. ಗಪ್‌
ಚುಪ್‌ ಅಂತ ಮದುವೆಯಾಗೋ ಅಗತ್ಯವೇನಿತ್ತು ಎಂದು, ಶ್ರೀಯಾ ಮೇಲೆ ರೇಗಿದವು. ಮದುಮಕ್ಕಳು ಅವರದೇ ಮೂಡ್‌ನಲ್ಲಿದ್ದರು. ಆ್ಯಂಡ್ರಿ, ಶ್ರೀಯಾಳಿಗೆ ದೀರ್ಘಚುಂಬನವಿತ್ತ. ಮದುವೆಯನ್ನು ರಹಸ್ಯವಾಗಿಟ್ಟ ಶ್ರೀಯಾಗೆ, ಪತಿಯೊಂದಿಗಿನ ರಸನಿಮಿಷಗಳೂ ಖಾಸಗಿ ಸಮಾಚಾರ ಎಂಬುದು ಮರೆತುಹೋಯಿತು. ಕ್ಯಾಮೆರಾ ಮುಂದೆ ಪತಿ–ಪತ್ನಿಯ ದೀರ್ಘಚುಂಬನ ವೈರಲ್‌ ಆಯಿತು.

ಇದೇ ಶ್ರಿಯಾ, ಹಿಂದೊಮ್ಮೆ ‘ಟಾಪ್‌ಲೆಸ್‌’ ಫೋಟೊ ಶೂಟ್‌ ಮಾಡಿಸಿಕೊಂಡಾಗಲೂ ಲಕ್ಷಾಂತರ ಮಂದಿ ಹುಬ್ಬೇರಿಸಿದ್ದರು.

ADVERTISEMENT


ಶ್ರಿಯಾ ಶರಣ್, ಆ್ಯಂಡ್ರಿ ಕೊಷೀವ್‌

ಬಾಲಿವುಡ್‌ನ ಸದ್ಯದ ಹಾಟ್‌ ಜೋಡಿ ರಣವೀರ್‌ ಸಿಂಗ್‌– ದೀಪಿಕಾ ಪಡುಕೋಣೆ ಸುದ್ದಿಯ ಸುಗ್ಗಿಯನ್ನೇ ಕೊಡುತ್ತಿದ್ದಾರೆ. ‘ಪದ್ಮಾವತ್‌’ ಬಿಡುಗಡೆಯಾಗುವವರೆಗೂ ಸೆಟ್‌ನಲ್ಲಿ, ಹೋದಲ್ಲಿ ಬಂದಲ್ಲಿ ಬಿಂದಾಸ್‌ ಆಗಿ ಪ್ರೇಮದಾಟ ಆಡುತ್ತಿದ್ದ ಈ ಜೋಡಿ ಚಿತ್ರ ಬಿಡುಗಡೆಯಾಗುತ್ತಲೇ ಡೇಟಿಂಗ್‌ ಹೆಸರಲ್ಲಿ ವಿದೇಶದಲ್ಲಿ ಮೋಜಿನ ಪ್ರವಾಸಕ್ಕೆ ಹೋದರು. ಅಲ್ಲಿಂದ ತಮ್ಮ ‘ಖಾಸಗಿ’ ಕ್ಷಣಗಳ ಫೋಟೊಗಳನ್ನು ಸಾಮಾಜಿಕ ಜಾಲತಾಣಗಳಿಗೆ ಹರಿಯಬಿಟ್ಟರು. ಈ ಜೋಡಿ ಯಾವುದೇ ವಾಹಿನಿಗಳಿಗೆ ಜೊತೆಯಾಗಿ ಸಂದರ್ಶನ ನೀಡುವಾಗಲೂ ಇಬ್ಬರ ವರ್ತನೆಯೂ ತಾವು ಪ್ರೇಮಿಗಳು ಎಂಬುದನ್ನು ಸಾರಿಹೇಳುವಂತಿರುತ್ತದೆ.

ಮದುವೆಯಾಗುವವರೆಗೂ ಹೋದಲ್ಲಿ ಬಂದಲ್ಲಿ ಸುದ್ದಿಯಾಗುತ್ತಿದ್ದ ವಿರಾಟ್‌ ಕೊಹ್ಲಿ ಮತ್ತು ಅನುಷ್ಕಾ ಶರ್ಮಾ ಮೊನ್ನೆ ಮೊನ್ನೆ ಮುತ್ತು ವಿನಿಮಯ ಮಾಡಿಕೊಂಡ ಫೋಟೊ ಕೂಡಾ ವೈರಲ್‌ ಆಗಿದೆ. ಸಾಮಾಜಿಕ ಜಾಲತಾಣಗಳಲ್ಲಿ ಖಾಸಗಿ ವಿಚಾರಗಳಿಗಾಗಿ ಅಷ್ಟಾಗಿ ಕಾಣಿಸಿಕೊಂಡಿರದ ನಟ ಅಮೀರ್‌ಖಾನ್‌ ಮತ್ತು ನಿರ್ಮಾಪಕಿ ಕಿರಣ್‌ ರಾವ್‌ ದಂಪತಿ ಮೊನ್ನೆಯಷ್ಟೇ ಅಮೀರ್‌ ಹುಟ್ಟುಹಬ್ಬದ ದಿನ ‘ವೈರಲ್‌’ ಆಗಿಬಿಟ್ಟರು. ಕಾರಣ, ಗಂಡನಿಗೆ ಹುಟ್ಟಿದ ದಿನದ ಉಡುಗೊರೆಯಾಗಿ ಕಿರಣ್‌ ಕೊಟ್ಟ ದೀರ್ಘಚುಂಬನ.

ಸೆಲೆಬ್ರಿಟಿಗಳು ಚಲಾವಣೆಯಲ್ಲಿರುವುದೆಂದರೆ ಸುದ್ದಿಯಲ್ಲಿರುವುದು ಎಂದೇ ನಂಬಿದ್ದಾರೆ. ನಟ ನಟಿಯರಿಗೆ ಸಿನಿಮಾಗಳಲ್ಲಿ ಅವಕಾಶ ಸಿಗದೇ ಇದ್ದರೆ ಜನ ಮರೆಯುತ್ತಾರೆ. ರೂಪದರ್ಶಿಗಳು ತೆರೆಮರೆಗೆ ಸರಿದರೆ ಅವಕಾಶಗಳು ಸಿಗುವುದಿಲ್ಲ. ಇಂತಹ ಪರಿಸ್ಥಿತಿಯಲ್ಲಿ ಖಾಸಗಿತನವನ್ನೇ ಹರಾಜಿಗಿಡಲು ಮುಂದಾಗುತ್ತಾರೆ. ಏನಿಲ್ಲವೆಂದರೂ ವಿಚಿತ್ರವಾಗಿ ಫೋಟೊ ಶೂಟ್‌ ಮಾಡಿಸಿಕೊಂಡಾದರೂ ‘ವೈರಲ್‌’ ಆಗುವ ಹುಚ್ಚು ಇನ್ನು ಕೆಲವರದು. ಈ ಮೇಲಾಟಗಳಿಂದಾಗಿ ಖಾಸಗಿತನ (ಪ್ರೈವೆಸಿ) ಎಂಬ ಪದ ಈಗ ಸವಕಲು ನಾಣ್ಯದಂತಾಗಿದೆ.

ತಾಯಿಯಾದ ಬಳಿಕವೂ ತಾನು ಸಪೂರ ಸುಂದರಿಯಾಗಿಯೇ ಉಳಿದಿದ್ದೇನೆ ಎಂಬುದನ್ನು ಸಾರಲು ಕರೀನಾ ಕಪೂರ್‌ ಮಾಡಿಸಿಕೊಂಡ ಫೋಟೊ ಶೂಟ್‌ನಲ್ಲಿ ಮಾದಕವಾಗಿ ಕಾಣಿಸಿಕೊಳ್ಳಲು ಏನೆಲ್ಲಾ ಕಸರತ್ತು ಮಾಡಿಕೊಂಡಿದ್ದರು ಎಂಬುದು ನೆನಪಿದೆ ತಾನೆ. ಅದಕ್ಕೂ ಮೊದಲು ಈಕೆ ಸುದ್ದಿಯಲ್ಲಿರಲು ಬಳಸಿಕೊಂಡದ್ದು ಮಗ ತೈಮೂರ್‌ನನ್ನು! ಮಗುವಿನ ಬೆಳವಣಿಗೆಯ ಪ್ರತಿ ಹಂತವನ್ನೂ, ಮನೆಯಿಂದಾಚೆ ಅವನೊಂದಿಗೆ ಕಾಲಿಟ್ಟ ಪ್ರತಿ ಸಂದರ್ಭವನ್ನೂ ಸಾಮಾಜಿಕ ಜಾಲತಾಣಗಳಿಗೆ ಹಂಚಿಕೊಂಡು ಪ್ರತಿದಿನವೂ ಪ್ರಚಾರ ಕಾಯ್ದುಕೊಂಡರು.


ಮುತ್ತೊಂದು ನೀಡುವೆ. .ಅನುಷ್ಕಾ, ವಿರಾಟ್‌ ದಂಪತಿ

ಯುವ ನಟಿ, ‘ರಾಗಿಣಿ ಎಂಎಂಎಸ್‌ ರಿಟರ್ನ್ಸ್‌’ ಚಿತ್ರದ ನಾಯಕಿ ಕರಿಷ್ಮಾ ಶರ್ಮಾ ಜನವರಿಯಲ್ಲಿ ಕನಿಷ್ಠ ಉಡುಗೆಯಲ್ಲಿ ‘ಬೀಚ್‌ ಫೋಟೊಶೂಟ್‌’ ಮಾಡಿಸಿಕೊಂಡು ಸುದ್ದಿಯಾದರು. ಅವರ ಫೋಟೊಗಳನ್ನು ಯೂಟ್ಯೂಬ್‌ನಲ್ಲಿ ನೋಡಿದವರು ಹಸಿಬಿಸಿಯಾದರು. ಕನಿಷ್ಠ ಉಡುಗೆ, ಪಾರದರ್ಶಕ ಉಡುಗೆ, ಸಮುದ್ರಕಿನಾರೆಯಲ್ಲಿ, ಬೆಡ್‌ರೂಮ್‌ನಲ್ಲಿ, ಗೆಳೆಯನ ಜೊತೆ, ಒಂಟಿಯಾಗಿ ಫೋಟೊ ಶೂಟ್‌ ಮಾಡಿಸಿಕೊಳ್ಳುವ ಮೂಲಕ ಪ್ರಚಾರದ ಗಿಮಿಕ್‌ ಮಾಡುವ ಸೆಲೆಬ್ರಿಟಿಗಳು ನೋಡುಗರಿಗೆ ಪುಕ್ಕಟೆ ಮನರಂಜನೆ ನೀಡುವುದಂತೂ ಸತ್ಯ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.