ADVERTISEMENT

ವ್ಯಾಯಾಮ ಮಾಡುತ್ತಾ ವಿದ್ಯುತ್ ಉತ್ಪಾದಿಸಿ...

​ಪ್ರಜಾವಾಣಿ ವಾರ್ತೆ
Published 9 ಮೇ 2018, 19:30 IST
Last Updated 9 ಮೇ 2018, 19:30 IST
ವ್ಯಾಯಾಮ ಮಾಡುತ್ತಾ ವಿದ್ಯುತ್ ಉತ್ಪಾದಿಸಿ...
ವ್ಯಾಯಾಮ ಮಾಡುತ್ತಾ ವಿದ್ಯುತ್ ಉತ್ಪಾದಿಸಿ...   

ವ್ಯಾಯಾಮ ಮಾಡಿ ಬೆವರು ಹರಿಸಿ, ಫಿಟ್ ಆಗಲು ಜನರು ಜಿಮ್‍ಗೆ ಬರುತ್ತಾರೆ. ದೈಹಿಕವಾಗಿ ದೃಢವಾಗಲು ಏನೇನೆಲ್ಲಾ ಅಗತ್ಯವಿದೆಯೋ ಆ ಎಲ್ಲಾ ವ್ಯಾಯಾಮವನ್ನೂ ಮಾಡುತ್ತಾರೆ. ಇವಿಷ್ಟಕ್ಕೇ ಜಿಮ್‍ನ ಕೆಲಸ ಮುಗಿಯುತ್ತದೆ.

ಆದರೆ ಈ ಜಿಮ್ ಹಾಗಲ್ಲ. ಸುಸ್ಥಿರ ಪರಿಕಲ್ಪನೆಯಲ್ಲಿ ಕಾರ್ಯ ನಿರ್ವಹಿಸುತ್ತಿರುವ ಕ್ಯಾಲಿಫೋರ್ನಿಯಾದ ಈ ಜಿಮ್‍ನಲ್ಲಿ ವ್ಯಾಯಾಮವೇ ವಿದ್ಯುತ್‍ನ ಮೂಲ.

ವ್ಯಾಯಾಮಕ್ಕೆ ವ್ಯಯಿಸುವ ದೇಹದ ಶಕ್ತಿಯಿಂದಲೇ ಏಕೆ ಹೊಸ ಸಾಧ್ಯತೆಯನ್ನು ಕಂಡುಕೊಳ್ಳಬಾರದು ಎಂದು ಯೋಚಿಸಿದ ಜಿಮ್, ಫಿಟ್‍ನೆಸ್ ಸಾಧನಗಳಿಂದ ವಿದ್ಯುತ್ ಉತ್ಪಾದಿಸುವ ಹೊಸ ದಾರಿಯನ್ನು ಕಂಡುಕೊಂಡಿದೆ. ‘ಎಕೊ ಫಿಟ್‍ನೆಸ್’ ಪರಿಕಲ್ಪನೆಯಲ್ಲಿ ಸ್ಪೋರ್ಟ್ ಆರ್ಟ್ ವ್ಯಾಯಾಮ ಸಾಧನಗಳನ್ನು ಹೊರತಂದಿದೆ.

ADVERTISEMENT

ಪ್ರಾಯೋಗಿಕವಾಗಿ ತಿಂಗಳ ಮಟ್ಟಿಗೆ ಈ ಸಾಧನಗಳ ಸಾಧ್ಯಾಸಾಧ್ಯತೆಗಳನ್ನು ಕಂಡುಕೊಳ್ಳಲಾಗಿದೆ. ಇದೀಗ ಜಿಮ್‍ಗೆ ಅಗತ್ಯವಿರುವ ವಿದ್ಯುತ್ ಅಲ್ಲೇ ಉತ್ಪತ್ತಿಯಾಗುತ್ತಿದೆ.

ಒಂದು ಸೈಕ್ಲಿಂಗ್ ಕ್ಲಾಸ್‍ನಿಂದ 24 ಗಂಟೆಗಳ ತನಕ ಎರಡು ಫ್ರಿಜ್‍ಗಳಿಗೆ ಬೇಕಾದ ಶಕ್ತಿ ಉತ್ಪತ್ತಿಯಾಗಬಲ್ಲದು. ಜಿಮ್‍ನಲ್ಲಿನ ಸ್ಪಿನ್ ಬೈಕ್, ವಿಶ್ವದ ಮೊದಲ ವಿದ್ಯುತ್ ಉತ್ಪಾದಕ ಟ್ರೆಡ್‍ಮಿಲ್ ಒಳಗೊಂಡಂತೆ ವಿದ್ಯುತ್ ಉತ್ಪಾದಿಸಬಲ್ಲ ಹಲವು ಸಾಧನಗಳು ಇಲ್ಲಿವೆ. ಒಂದು ಫಿಟ್‍ನೆಸ್ ಸಾಧನ ಗಂಟೆಗೆ 200 ವ್ಯಾಟ್ ವಿದ್ಯುತ್ ಉತ್ಪಾದಿಸಬಲ್ಲದು.

ವಿದ್ಯುತ್ ಉತ್ಪಾದನೆಗೆ ಸಹಾಯಕವಾಗುವಂತೆ ಯಂತ್ರಗಳನ್ನು ವಿನ್ಯಾಸಗೊಳಿಸಲಾಗಿದೆ. ಸೋಲಾರ್ ಪ್ಯಾನೆಲ್ ಹಾಗೂ ಪವನ ಯಂತ್ರಗಳಲ್ಲಿ ಬಳಸಲಾಗುವ ಮೈಕ್ರೊ ಇನ್ವರ್ಟರ್‌ಗಳನ್ನು ಇವುಗಳಲ್ಲಿ ಅಳವಡಿಸಲಾಗಿದೆ. ಇವು ಯಂತ್ರಗಳಲ್ಲಿನ ಚಲನಶಕ್ತಿಯಿಂದ ವಿದ್ಯುತ್ ಉತ್ಪಾದನೆಯಾಗುವಂತೆ ಮಾಡುತ್ತವೆ. ಈ ಶಕ್ತಿ ಬ್ಯಾಟರಿಯೊಳಗೆ ಶೇಖರಣೆಗೊಳ್ಳುತ್ತದೆ. ಇದರಿಂದಲೇ ಜಿಮ್‍ನಲ್ಲಿನ ಲೈಟ್‍ಗಳು, ಸೆಲ್‍ಫೋನ್ ಚಾರ್ಜರ್ ಎಲ್ಲವೂ ಕಾರ್ಯನಿರ್ವಹಿಸುತ್ತಿವೆ. ಇದರಿಂದ ವಿದ್ಯುತ್‌ ಬಿಲ್‌ನಲ್ಲಿ ಭಾರೀ ವ್ಯತ್ಯಾಸವೂ ಕಂಡುಬಂದಿದೆಯಂತೆ.

ಫಿಟ್‍ನೆಸ್ ಪ್ರೇಮಿಗಳು ಹೆಚ್ಚಿರುವ ಈ ದಿನಗಳಲ್ಲಿ ಸುಸ್ಥಿರ ಪರಿಕಲ್ಪನೆಯ ಇಂಥ ಜಿಮ್‍ಗಳಿಂದ ಭೂಮಿಗೆ ಲಾಭವಾಗುವ ಸಾಧ್ಯತೆಯೂ ಹೆಚ್ಚಾಗಬಹುದಲ್ಲವೇ? 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.