ADVERTISEMENT

ಸವಿ ಸಂಕಲ್ಪದ ಗೆಲುವು

ವಿಶಾಖ ಎನ್.
Published 8 ಡಿಸೆಂಬರ್ 2017, 19:30 IST
Last Updated 8 ಡಿಸೆಂಬರ್ 2017, 19:30 IST
ಸುರೇಶ್ ತ್ರಿವೇಣಿ
ಸುರೇಶ್ ತ್ರಿವೇಣಿ   

2001ರಲ್ಲಿ ಚೆನ್ನೈನ ಶಾಂಪೂ ಕಂಪೆನಿಯೊಂದು ಜಾಹೀರಾತು ಮಾಡಿಸಲು ನಿರ್ಧರಿಸಿತು. ಮಲಯಾಳಿ ಹುಡುಗ ಸುರೇಶ್ ತ್ರಿವೇಣಿ ಆ ಕಂಪೆನಿಯ ಕಣ್ಣಿಗೆ ಬಿದ್ದರು. ಆಡಿಷನ್‌ಗೆಂದು ಮುಂಬೈನಿಂದ ಕೆಲವು ಮಾಡೆಲ್ ಗಳ ಫೋಟೊಗಳನ್ನು ಕಂಪೆನಿಯವರು ತರಿಸಿಕೊಟ್ಟರು. ಎಲ್ಲ ಮಾಡೆಲ್‌ಗಳ ಫೋಟೊಗಳನ್ನು ಹರಡಿ ಕುಳಿತ ಸುರೇಶ್ ತ್ರಿವೇಣಿ ಕಣ್ಣು ಕೀಲಿಸಿದ್ದು ವಿದ್ಯಾ ಬಾಲನ್ ಮುಖದ ಮೇಲೆ.

‘ಈ ಹುಡುಗಿ ದೊಡ್ಡ ಮಟ್ಟಕ್ಕೆ ಬೆಳೆಯುವುದರಲ್ಲಿ ಅನುಮಾನವೇ ಇಲ್ಲ’ ಎಂದು ಸುರೇಶ್ ಆಪ್ತರೊಬ್ಬರಿಗೆ ಆಗಲೇ ಹೇಳಿದ್ದರು. ಆ ಕ್ಷಣದಿಂದಲೇ ಸುರೇಶ್, ವಿದ್ಯಾ ಬಾಲನ್ ಅಭಿಮಾನಿ ಆಗಿಬಿಟ್ಟರು.

ಪಾಲಕ್ಕಾಡ್ ತವರು. ಬೆಳೆದದ್ದು ರಾಂಚಿಯಲ್ಲಿ. ಮಾರ್ಕೆಟಿಂಗ್ ಸ್ನಾತಕೋತ್ತರ ಪದವಿ ಪಡೆದುಕೊಂಡ ಅನೇಕರಂತೆ ಸುರೇಶ್ ಜಾಹೀರಾತು ಮಾಧ್ಯಮಕ್ಕೆ ಕಾಲಿಟ್ಟರು. ಅದಕ್ಕೂ ಮೊದಲು ಗ್ರಾಹಕ ಸೇವೆ ನೀಡುವ ಏಜೆಂಟ್ ಆಗಿ, ಮಾರಾಟ ವ್ಯವಸ್ಥಾಪಕರಾಗಿ ಕೆಲಸ ಮಾಡಿ ಚಿಕ್ಕಾಸು ಗಳಿಸಿದ್ದೂ ಇದೆ.

ADVERTISEMENT

ಮುಂಬೈಗೆ 2004ರಲ್ಲಿ ಕಾಲಿಟ್ಟಾಗ ತಲೆಯಲ್ಲಿ ಸಿನಿಮಾ ಮಾಡುವ ಬಯಕೆ ಮೊಳೆತಿತ್ತು. ಅದಕ್ಕೆ ಅಗತ್ಯ ಕೌಶಲ ಕಲಿತುಕೊಳ್ಳಲು ಜಾಹೀರಾತು ಮಾಧ್ಯಮವೇ ಸೂಕ್ತ ಎಂದು ಅವರು ನಿರ್ಧರಿಸಿದ್ದರು. ಬಿಬಿಸಿ ಟಿವಿ ಚಾನೆಲ್‌ಗೆ ಒಂದು ಶೋ ಸಿದ್ಧಪಡಿಸುವ ತಂಡದಲ್ಲಿ ಸುರೇಶ್ ಕೂಡ ಒಬ್ಬರಾದರು.

ಅವರು ಸಂದರ್ಶನ ಮಾಡಿದವರಲ್ಲಿ ಬಾಲಿವುಡ್ ನಿರ್ದೇಶಕ ವಿಧು ವಿನೋದ್ ಚೋಪ್ರಾ ಕೂಡ ಒಬ್ಬರು. ಅವರ ನಿರ್ದೇಶನದ ಸಿನಿಮಾಗಳಲ್ಲಿ ಕೆಲಸ ಮಾಡಿದ ನಟ-ನಟಿಯರನ್ನು ಮಾತನಾಡಿಸಬೇಕಾಗಿ ಬಂತು. ಆಗ ವಿದ್ಯಾ ಬಾಲನ್ ಎದುರು ಸುರೇಶ್ ಕುಳಿತರು. ಆಕಾಶ ಮೂರೇ ಗೇಣು. ‘ಒಂದು ದಿನ ಸ್ಕ್ರಿಪ್ಟ್ ಹಿಡಿದು ನಿಮ್ಮ ಬಳಿಗೆ ಬರುವೆ. ಆಗ ನಿಮ್ಮ ಕಾಲ್‌ಷೀಟ್ ಕೊಡಲೇಬೇಕು’ ಎಂದು ಅರ್ಜಿ ಹಾಕಿ, ವಿದ್ಯಾ ಬಾಲನ್ ಹಸ್ತಾಕ್ಷರ ಪಡೆದು ಸುರೇಶ್ ಹಿಂತಿರುಗಿದ್ದರು.

ನುಡಿದಂತೆಯೇ ಸ್ಕ್ರಿಪ್ಟ್ ತೆಗೆದುಕೊಂಡು ವಿದ್ಯಾ ಎದುರು ಕುಳಿತುಕೊಳ್ಳಲು ಅವರಿಗೆ ಹದಿಮೂರು ವರ್ಷಗಳು ಬೇಕಾದವು. ವಿದ್ಯಾ ಮೈದುನ ನೆನೆ ಅವರ ಸಂಪರ್ಕದಿಂದ ಸುರೇಶ್ ಮತ್ತೆ ನೆಚ್ಚಿನ ನಟಿಯ ಮನೆಯ ಕದ ತಟ್ಟಲು ಆಗಿದ್ದು.

ಹದಿಮೂರು ವರ್ಷದ ಹಿಂದೆ ಸಲ್ಲಿಸಿದ್ದ ಅರ್ಜಿಯನ್ನು ಸುರೇಶ್ ನೆನಪಿಸಿದಾಗ ವಿದ್ಯಾ ಕೂಡ ಥ್ರಿಲ್ ಆದರು. ಸುರೇಶ್ ಮೊದಲು ಎರಡು ಒನ್ ಲೈನರ್‌ಗಳನ್ನು ಹೇಳಿದರು. ಅದರಲ್ಲಿ ವಿದ್ಯಾ ಇಷ್ಟಪಟ್ಟಿದ್ದು ಗೃಹಿಣಿಯೊಬ್ಬಳು ರೇಡಿಯೊ ಜಾಕಿ ಆಗುವ ಕಥಾ ಎಳೆಯನ್ನು.

2016ರ ಜನವರಿಯಲ್ಲಿ ಕೆಲಸದಿಂದ ರಜೆ ತೆಗೆದುಕೊಂಡು 29 ದಿನಗಳಲ್ಲಿ ಸುರೇಶ್ ಸಿದ್ಧಪಡಿಸಿದ ಸ್ಕ್ರಿಪ್ಟ್ ಅದು. ಒಂದು ದಿನ ಓದಲು ಕಾಲಾವಕಾಶ ಕೇಳಿದ ವಿದ್ಯಾ, ಆಮೇಲೆ ಅಭಿಮಾನಿಯ ಕನಸನ್ನು ನನಸಾಗಿಸಲು ಒಪ್ಪಿದರು. ಸ್ಕ್ರಿಪ್ಟ್ ಮೇಲೆ ‘ಲೆಟ್ಸ್ ಡೂ ಇಟ್’ ಎಂದು ವಿದ್ಯಾ ಬರೆದ ಹಸ್ತಾಕ್ಷರವನ್ನು ಅವರ ಈ ಪರಮ ಅಭಿಮಾನಿ ಈಗಲೂ ನೋಡಿ ಖುಷಿ ಪಡುತ್ತಿರುತ್ತಾರೆ.

ಎಂಥೆಂಥ ಹುಚ್ಚು ಅಭಿಮಾನಿಗಳನ್ನು ನಾವು ನೋಡಿದ್ದೇವೆ; ಆದರೆ, ಮೆಚ್ಚಿದ ನಟಿಗೆ ಸಿನಿಮಾ ನಿರ್ದೇಶಿಸುವ ಸಂಕಲ್ಪ ಮಾಡಿ ಗೆದ್ದವರು ವಿರಳ. ಸುರೇಶ್ ಅದನ್ನು ಸಾಕಾರಗೊಳಿಸಿಕೊಂಡಿದ್ದು ‘ತುಮ್ಹಾರಿ ಸುಲು’ ಹಿಂದಿ ಚಿತ್ರದ ಮೂಲಕ. ಇದು ಅವರ ನಿರ್ದೇಶನದ ಮೊದಲ ಸಿನಿಮಾ ಎನ್ನುವುದು ವಿಶೇಷ.

ಸುರೇಶ್ ಜಾಹೀರಾತು ಲೋಕದಲ್ಲಿ ಮೊದಲು ಸುದ್ದಿಯಾದದ್ದು 2015ರಲ್ಲಿ; ವಿಶ್ವಕಪ್ ಕ್ರಿಕೆಟ್‌ಗೆ ಸಂಬಂಧಿಸಿದ ‘ಮೌಕಾ’ ಎಂಬ ವಿಡಿಯೊ ಸರಣಿಗಳನ್ನು ಮಾಡಿದಾಗ. ಶಾರುಖ್ ಖಾನ್, ಅಮಿತಾಭ್ ಬಚ್ಚನ್, ವರುಣ್ ಧವನ್, ದೋನಿ ತರಹದ ದಿಗ್ಗಜರ ಜತೆ ಕೆಲಸ ಮಾಡಿದ ಅನುಭವವನ್ನು ತಮ್ಮದಾಗಿಸಿಕೊಂಡ ಅವರು, ತಾವು ಕೆಲಸ ಮಾಡುತ್ತಿದ್ದ ‘ಬಬಲ್‌ರ‍್ಯಾಪ್‌  ಫಿಲ್ಮ್’  ಕಂಪೆನಿಗೂ ಹೆಸರು ತಂದುಕೊಟ್ಟರು.

‘ತಿಕ್ಕಲುತನದ ಹುಡುಗ’ ಎಂದು ಜಾಹೀರಾತು ಲೋಕದಲ್ಲಿ ಅನೇಕರಿಂದ ಸಕಾರಾತ್ಮಕ ಬಿರುದು ಪಡೆದುಕೊಂಡ ಸುರೇಶ್, ನೆಚ್ಚಿನ ತಾರೆಯ ಜತೆಗೆ ಇನ್ನೊಂದು ಸಿನಿಮಾ ಮಾಡುವ ಅವಕಾಶ ಸಿಕ್ಕರೂ ಒಲ್ಲೆ ಎನ್ನಲಾರರು. ಸದ್ಯಕ್ಕೆ ‘ತುಮ್ಹಾರಿ ಸುಲು’ ತನ್ನ ಸರಳತೆಯಿಂದಾಗಿ ಜನಮೆಚ್ಚುಗೆ ಗಳಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.