ADVERTISEMENT

‘ಸಿಟ್ಟ್ಯಾಕೊ ಸಿಡುಕ್ಯಾಕೊ ನನ ಜಾಣ’

ಹರವು ಸ್ಫೂರ್ತಿ
Published 23 ಮೇ 2017, 19:30 IST
Last Updated 23 ಮೇ 2017, 19:30 IST
‘ಸಿಟ್ಟ್ಯಾಕೊ ಸಿಡುಕ್ಯಾಕೊ ನನ ಜಾಣ’
‘ಸಿಟ್ಟ್ಯಾಕೊ ಸಿಡುಕ್ಯಾಕೊ ನನ ಜಾಣ’   

ಹೆಣ್ಣುಮಕ್ಕಳಿಗೆ ತಾಳ್ಮೆ ಹೆಚ್ಚು. ಈ ಗುಣವನ್ನು ಪುರುಷರಿಗೂ ಸ್ಪಲ್ಪ ಕಲಿಸಬೇಕು. ನಿಮ್ಮ ಗೆಳೆಯ, ಅಣ್ಣ, ಅಪ್ಪ, ತಮ್ಮ ಅಥವಾ ಗಂಡ ಕೋಪ ಮಾಡಿಕೊಂಡು ಸಿಡುಕಿದರೆ ನೀವೇನು ಮಾಡಬಹುದು ಎಂಬುದಕ್ಕೆ ಒಂದಿಷ್ಟು ಸಲಹೆ ಇಲ್ಲಿದೆ.

ಕಣ್ಣಲ್ಲಿ ಕಣ್ಣಿಟ್ಟು ನೋಡಿ: ಪುರುಷರು ಸಿಟ್ಟಾಗಿ ಬೈಯುವಾಗ ಕಣ್ಣಲ್ಲಿ ಕಣ್ಣಿಟ್ಟು ನೋಡಿ, ಇದು ಹುಸಿ ಕೋಪವಾದರೆ ಅವರು ನಿಮ್ಮ ದೃಷ್ಟಿಯನ್ನು ತಡೆದುಕೊಳ್ಳಲಾರದೆ ಸುಮ್ಮನೆ ಗೊಣಗಿಕೊಂಡು ಹೋಗಿಬಿಡುತ್ತಾರೆ. ಆದರೆ ನೀವೇ ತಪ್ಪು ಮಾಡಿದ್ದರೆ ಗುರಾಯಿಸಬೇಡಿ. ಇನ್ನೂ ಹೆಚ್ಚು ಬೈಸಿಕೊಳ್ಳುವ ಸಂದರ್ಭ ಬರಬಹುದು.
ಕೋಪತಾಪಗಳನ್ನು ಕಣ್ಣಲ್ಲೇ ನಿಯಂತ್ರಣ ಮಾಡಲು ಪ್ರಯತ್ನಿಸಿ ನೋಡಿ.

ಹಸಿವಾಗಿದ್ದರೆ ಹೆಚ್ಚು ಕೋಪ: ಹಸಿವಾದಾಗ ಕೆಲ ಗಂಡುಮಕ್ಕಳು ಕಾರಣವಿಲ್ಲದೆ ಸಿಡುಕುತ್ತಾರೆ. ಮನೆ ಇರಲಿ, ರಸ್ತೆ ಇರಲಿ ಕೂಗಾಡಿ ಬಿಡುತ್ತಾರೆ. ಜನ ನೋಡುತ್ತಾರೆ ಎಂಬ ಮುಜುಗರವಿರುವುದಿಲ್ಲ. ಗಂಡಸರ ಕೋಪ ವಿಕೋಪಕ್ಕೆ ತಿರುಗುವಾಗ ಸುಮ್ಮನಿದ್ದುಬಿಡಿ. ಒಂದೊಳ್ಳೆ ಊಟ ಕೊಟ್ಟುಬಿಡಿ.

ADVERTISEMENT

ಊಟ ಮಾಡುವಾಗಲಂತೂ ಅವರಿಗೆ ಕಿರಿಕಿರಿ ಉಂಟಾಗುವ ವಿಷಯಗಳನ್ನು ಮಾತನಾಡಬೇಡಿ. ನಂತರ ಸರಿಯಾಗಿ ತರಾಟೆಗೆ ತೆಗೆದುಕೊಳ್ಳಿ. ಸಾರ್ವಜನಿಕ ಸ್ಥಳದಲ್ಲಿ ಕೂಗಾಡಬಾರದು ಎಂಬ ವಿಷಯವನ್ನು ಅವರಿಗೆ ಅರಿವು ಮಾಡಿಕೊಡಿ.

ನಿನ್ನೆ ನಿನ್ನೆಗೆ: ಕೋಪ ಅತೃಪ್ತಿಗಳನ್ನು ಅಂದಿನ ದಿನಕ್ಕೇ ಕೊನೆಯಾಗಿಸಿ. ಕೋಪಕ್ಕೆ ಕಾರಣವಾದ ವಿಚಾರವನ್ನು ವಿವರಿಸಿ, ಇನ್ನೊಮ್ಮೆ ಹೀಗಾದಂತೆ ಎಚ್ಚರವಹಿಸುವಂತೆ ತಿಳಿಹೇಳಿ. ಕೊನೆಗೆ ಕ್ಷಮಿಸಿ, ಏನೂ ಆಗಿಲ್ಲ, ಹೋಗಲಿ ಬಿಡಿ ಎಂದು ಸಮಾಧಾನ ಮಾಡಿ.

ಕ್ಷಮೆಯ ಶಕ್ತಿಯನ್ನು ಬಿಡಿಸಿ ಹೇಳಿ. ಕೋಪಕ್ಕಿಂತ ಕ್ಷಮೆ ದೊಡ್ಡದು ಎಂದು ಮನವರಿಕೆ ಮಾಡಿಕೊಡಿ. ಮರುದಿನ ಏನೂ ನಡೆದಿಲ್ಲ ಎನ್ನುವಂತೆ ಖುಷಿಯಾಗಿರಿ.

ಉತ್ತರ ಹೇಳಿ: ಯಾವುದೋ ಒತ್ತಡ ಅಥವಾ ಕಾರಣವಿಲ್ಲದೆ ಕೆಲ ಪುರುಷರು ಸಿಡುಕುತ್ತಾರೆ. ಅಂಥ ಸಮಯದಲ್ಲಿ ಕೋಪಕ್ಕೆ ಕಾರಣ ಕೇಳಿ. ಯಾರದೋ ಮೇಲಿನ ಕೋಪವನ್ನು ಮನೆಗೆ ತರಬೇಡಿ ಎಂದು ಸ್ಪಷ್ಟವಾಗಿ ತಿಳಿಸಿ. ಸಮಾಧಾನವಾಗದೆ ಇದ್ದರೆ ಮಾತು ಬಿಡಿ. ಅವರೇ ದಾರಿಗೆ ಬರುತ್ತಾರೆ.

ಲೆಕ್ಕ ಬರೆದಿಡಿ: ದಿನಕ್ಕೆ ಅಥವಾ ವಾರಕ್ಕೆ ಎಷ್ಟು ಬಾರಿ ಕೋಪಿಸಿಕೊಂಡರು ಎಂಬುದನ್ನು ದಾಖಲು ಮಾಡಿ ಜೊತೆಗೆ ಅವರ ಸಿಟ್ಟಿನಿಂದ ಆದ ಪರಿಣಾಮವನ್ನೂ ಬರೆಯಿರಿ. ತಿಂಗಳ ಕೊನೆಯಲ್ಲಿ ಆ ಪಟ್ಟಿಯನ್ನು ಅವರಿಗೆ ತೋರಿಸಿ.

ಕೋಪಗೊಂಡ ಕಾರಣ ಮತ್ತು ಅದರಿಂದಾದ ಪರಿಣಾಮ ಹೋಲಿಸಿ. ಕೊನೆಗೆ ಅವರಿಗೇ ಅರ್ಥವಾಗುತ್ತದೆ ಇಷ್ಟು ಸಣ್ಣ ಕಾರಣಕ್ಕೆ ಮನೆಯವರನ್ನೆಲ್ಲಾ ನೋಯಿಸಿದೆ ಎಂದು.

ಮಕ್ಕಳ ಮುಂದೆ ಬೇಡ: ಮಕ್ಕಳ ಮುಂದೆ ಕೋಪಿಸಿಕೊಳ್ಳುವುದು, ಬೈಯುವುದು, ವಾದ ಮಾಡುವುದನ್ನು ಎಂದೂ ಮಾಡಬೇಡಿ. ಇದು ಅವರ ಮನಸ್ಸು ಮತ್ತು ವ್ಯಕ್ತಿತ್ವದ ಮೇಲೆ ಗಾಢ ಪರಿಣಾಮವನ್ನು ಉಂಟು ಮಾಡುತ್ತದೆ. ಪರಿಸ್ಥಿತಿ ಹತೋಟಿಗೆ ಬಾರದಿದ್ದರೆ ಮೌನವಾಗಿದ್ದುಬಿಡಿ. ಮಕ್ಕಳಿಲ್ಲದ ಸಮಯದಲ್ಲಿ ಈ ವಿಷಯವನ್ನು ಚರ್ಚಿಸಿ. ಅಷ್ಟೊತ್ತಿಗೆ ಕೋಪವೂ ಸ್ವಲ್ಪ ಕಡಿಮೆಯಾಗಿರುತ್ತದೆ! ಏನಂತೀರಾ?

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.