ADVERTISEMENT

ಸೆಲೆಬ್ರೆಟಿಗಳ ಕೋಳಿಜಗಳ

ಬಾಲಿವುಡ್‌

ಸಿ ಮಂಜುನಾಥ
Published 2 ಡಿಸೆಂಬರ್ 2016, 19:30 IST
Last Updated 2 ಡಿಸೆಂಬರ್ 2016, 19:30 IST
ಸೆಲೆಬ್ರೆಟಿಗಳ ಕೋಳಿಜಗಳ
ಸೆಲೆಬ್ರೆಟಿಗಳ ಕೋಳಿಜಗಳ   

ಬಾಲಿವುಡ್‌ ಸ್ಟಾರ್ ನಟ ನಟಿಯರು ತಮ್ಮ ಅಭಿನಯ, ಸೌಂದರ್ಯದಿಂದ ಮಾತ್ರವಲ್ಲ ವೃತ್ತಿ ಮತ್ಸರ, ಕೋಳಿ ಜಗಳಗಳಿಂದಲೂ ಚರ್ಚೆಗೆ ಗ್ರಾಸವಾಗುತ್ತಿದ್ದಾರೆ.
ಬಾಲಿವುಡ್‌ ಮಂದಿಯ ಈ ವೈರತ್ವಕ್ಕೆ ದೀರ್ಘ ಇತಿಹಾಸವೇ ಇದೆ. 70ರ ದಶಕದ ಜಯಾ ಬಚ್ಚನ್, ರೇಖಾ ವೈರತ್ವದಿಂದ ಹೊಸ ನಟಿಯರಾದ ದೀಪಿಕಾ, ಕತ್ರಿನಾ ಕೈಫ್‌ವರೆಗೆ ಇದು ಎಲ್ಲಾ ಕಾಲಮಾನದಲ್ಲಿಯೂ ಪ್ರಸ್ತಾಪವಾಗುತ್ತಲೇ ಇದೆ.

ಬಾಲಿವುಡ್‌ನ ಇತ್ತೀಚಿಗಿನ ಕೆಲವು ಬಹು ಚರ್ಚಿತ ವೈಮಸ್ಯ, ವೃತ್ತಿ ಮತ್ಸರಗಳ ವಿವರ ಇಲ್ಲಿದೆ...
ರಣಬೀರ್‌ ಕಪೂರ್– ರಣವೀರ್ ಸಿಂಗ್‌
ಖಾನ್‌ ತ್ರಯರ ನಂತರ ಬಾಲಿವುಡ್‌ನ ಟಾಪ್‌ ಹೀರೋಗಳೆಂದೇ ಗುರುತಿಸಲ್ಪಡುವ ರಣಬೀರ್‌ ಕಪೂರ್ ಮತ್ತು ರಣವೀರ್‌ ಮಧ್ಯೆ ಹಗೆತನ ಪ್ರಾರಂಭವಾಗಿದ್ದು 2013ರಲ್ಲಿ. ಪಾರ್ಟಿಯೊಂದರಲ್ಲಿ ರಣಬೀರ್‌ ತನ್ನ ಮಾಜಿ ಪ್ರಿಯತಮೆ ದೀಪಿಕಾ ಬಗ್ಗೆ ಲಘುವಾಗಿ ಮಾತನಾಡಿದಾಗ ರಣವೀರ್‌ ಸಿಟ್ಟಾಗಿದ್ದರು. ದೀಪಿಕಾ ಪರ ವಕಾಲತು ವಹಿಸಿ ರಣಬೀರ್‌ ವಿರುದ್ಧ ಮಾತಿನ ಸಮರಕ್ಕಿಳಿದಿದ್ದರು.
ಈ ಘಟನೆಯ ನಂತರ ದೀಪಿಕಾ, ರಣವೀರ್‌ ಹೆಚ್ಚು ಹತ್ತಿರವಾದರು ಎಂಬುದು ಕೇವಲ ಗಲ್ಲಿ ಗಾಸಿಪ್ ಆಗಿ ಉಳಿಯಲಿಲ್ಲ.
ಶ್ರದ್ಧಾ ಕಪೂರ್‌– ಆಲಿಯ ಭಟ್‌

ಬಾಲಿವುಡ್‌ನಲ್ಲಿ ಹಿಟ್‌ ಮೇಲೆ ಹಿಟ್‌ ನೀಡುತ್ತಿರುವ ಶ್ರದ್ಧಾ ಕಪೂರ್ ಮತ್ತು ಆಲಿಯಾ ಭಟ್‌ ಪರಸ್ಪರ ಕಾಲೆದುಕೊಳ್ಳುತ್ತಲೇ ಇರುತ್ತಾರೆ. ಈ ನಟಿಯರ ಮಧ್ಯದ ವೈರತ್ವಕ್ಕೆ ವೃತ್ತಿ ಮತ್ಸರವೇ ಕಾರಣ.
ಅಭಿನಯ, ಚಿತ್ರಗಳ ಆಯ್ಕೆ ವಸ್ತ್ರ ವಿನ್ಯಾಸ ಇತ್ಯಾದಿಗಳ ಬಗ್ಗೆ ಇಬ್ಬರೂ ನಟಿಯರು ಪರಸ್ಪರ ಕಾಲೆಳೆದುಕೊಳ್ಳುವುದು ಮಾಮೂಲಿ ಎನಿಸಿದೆ. ಮಾಧ್ಯಮಗಳಿಗೆ ಸುದ್ದಿಯನ್ನೂ, ಜನರಿಗೆ ಪುಕ್ಕಟೆ ರಂಜನೆಯನ್ನೂ ಒದಗಿಸುತ್ತಿದೆ.

ಪ್ರಿಯಾಂಕ ಚೋಪ್ರ– ಕರೀನಾ ಕಪೂರ್‌
ಬಣ್ಣದ ಬದುಕನ್ನು ಜೊತೆಯಾಗಿ ಆರಂಭಿಸಿದ ಈ ನಟಿಯರು ಆರಂಭದಿಂದಲೂ ಹಾವು–ಮುಂಗುಸಿಯೇ. ಪ್ರತಿಭೆ ಮತ್ತು ಸೌಂದರ್ಯದಲ್ಲಿ ಸಮಾನ ಎನಿಸಿಕೊಂಡಿರುವ ಇವರಿಬ್ಬರೂ ಬಹಿರಂಗವಾಗಿ ಪರಸ್ಪರ ಮೂದಲಿಸಿಕೊಳ್ಳುವುದು ಮಾಮೂಲಿ ಎನಿಸಿದೆ. ಪ್ರಿಯಾಂಕಾ ಅವರ ಹಾಲಿವುಡ್ ಯಶಸ್ಸಿನ ಬಗ್ಗೆ ಕೇಳಲಾದ ಪ್ರಶ್ನೆಗೆ ಕರೀನಾ, ‘ಹಾಲಿವುಡ್‌ಗೆ ಹಾರೋಕೆ ಪ್ರತಿಭೆಯೇ ಬೇಕು ಎಂದೇನಿಲ್ಲ’ ಎಂದು ಉತ್ತರಿಸಿದ್ದರು. ಇವರಿಬ್ಬರ ಸಂಬಂಧ ಹೀಗಿದೆ ಎಂದು ಗಲ್ಲಿ ಗಾಸಿಪ್ ಹರಡಲು ಇದಕ್ಕಿಂತ ಸಾಕ್ಷ್ಯ ಬೇಕೆ?

ದೀಪಿಕಾ ಪಡುಕೋಣೆ – ಕತ್ರಿನಾ ಕೈಫ್‌
ರಣಬೀರ್‌ನ ಸದ್ಯದ ಗೆಳತಿ ಕತ್ರಿನಾ ಕೈಫ್‌ ಮತ್ತು ಹಳೆಯ ಗೆಳತಿ ದೀಪಿಕಾ ಪಡುಕೋಣೆ ನಡುವಿನ ಹಗೆತನ ಹಳೆಯದು. ರಣಬೀರ್‌ನಿಂದ ದೀಪಿಕಾ ದೂರಾದ ಮೇಲೆ ವೈಷಮ್ಯ ಆರಂಭವಾಯಿತು. ಈಗ ಇದು ತಾರಕಕ್ಕೆ ತಲುಪಿದೆ.

ಭಾರಿ ಸುದ್ದಿಗೆ ಗ್ರಾಸವಾಗಿದ್ದ ಕತ್ರಿನಾ ಮತ್ತು ರಣಬೀರ್‌ರ ಬೀಚ್‌ ಚಿತ್ರಗಳ ಬಗ್ಗೆ ಪ್ರತಿಕ್ರಿಯಿಸಿದ್ದ ದೀಪಿಕಾ, ‘ಇದು ಕೀಳು ಮಟ್ಟದ ಪ್ರಚಾರ ಸ್ಟಂಟ್‌’ ಎಂದು ಕರೆದು ಕತ್ರಿನಾ ಹಾಗೂ ರಣಬೀರ್‌ ಇಬ್ಬರ ಕೆಂಗಣ್ಣಿಗೂ ಗುರಿಯಾಗಿದ್ದರು.

ಕತ್ರಿನಾ ಅವರ ಅಭಿನಯ ಪ್ರತಿಭೆ ಬಗ್ಗೆಯೂ ದೀಪಿಕಾ ಕೆಲವು ಟಾಕ್‌ ಶೋಗಳಲ್ಲಿ ವ್ಯಂಗ್ಯವಾಡಿದ್ದರು.

ಹೃತಿಕ್‌ ರೋಷನ್‌– ಕಂಗನಾ ರನೋಟ್
ಹೃತಿಕ್‌ ತನ್ನ ಮಡದಿ ಸೂಸನ್‌ಗೆ ವಿಚ್ಚೇದನ ನೀಡಿದ ಬಳಿಕ ಕಂಗನಾಗೆ ಹತ್ತಿರವಾಗಿದ್ದರು ಎಂಬ ಗುಲ್ಲು ಬಾಲಿವುಡ್‌ ಅಂಗಳದಲ್ಲಿ ಹರಡಿತ್ತು.
ಆದರೆ ಅದೇನು ಕಾರಣವೋ, ಇದ್ದಕ್ಕಿದ್ದಂತೆಯೇ ಇವರಿಬ್ಬರೂ ಬದ್ಧ ವೈರಿಗಳಂತೆ ವರ್ತಿಸಲು ಆರಂಭಿಸಿದರು. ಒಂದು ಸಂದರ್ಭದಲ್ಲಿ ಈ ಜೋಡಿ ಪರಸ್ಪರರ ಮೇಲೆ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಲೂ ಮುಂದಾಗಿತ್ತು.

ಅಜಯ್‌ ದೇವಗನ್–ಕರಣ್‌ ಜೋಹರ್

ADVERTISEMENT

ಗೆಳೆಯರೇ ಆಗಿದ್ದ ಕರಣ್‌ ಜೋಹರ್ ಮತ್ತು ಅಜಯ್ ದೇವಗನ್ ಕಿತ್ತಾಡಿದ್ದು ತಮ್ಮ ಇತ್ತೀಚಿನ ಸಿನಿಮಾ ಬಗ್ಗೆ.
ಕರಣ್‌ ತಮ್ಮ ಚಿತ್ರ ‘ಎ ದಿಲ್‌ ಹೈ ಮುಷ್ಕಿಲ್’ ಬಗ್ಗೆ ಉತ್ತಮ ವಿಮರ್ಶೆ ಬರೆಯಲೆಂದು ವಿಮರ್ಶಕ ಕಮಾಲ್ ಆರ್.ಖಾನ್‌ಗೆ ಹಣ ನೀಡಿದ್ದಾರೆ ಎಂದು ಅಜಯ್‌ ದೇವಗನ್ ಟ್ವೀಟ್‌ ಮಾಡಿದ್ದರು.
ಈ ಬಗ್ಗೆ ಕರಣ್‌ ಕಟು ವಾಕ್ಯಗಳಲ್ಲಿಯೇ ಪ್ರತ್ಯುತ್ತರ ನೀಡಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.