ಬಾಬಿಗೆ ಯಾವತ್ತೂ ಕೆಟ್ಟ ದಿನ ಎಂಬುದು ಇಲ್ಲ. ಏಕೆಂದರೆ ಆತ ಯಾವತ್ತೂ ಗೊಣಗಾಡುವುದಿಲ್ಲ. ಆ ದಿನ ಕೆಟ್ಟದಾಗಿದೆ ಎಂಬ ಕಾರಣಕ್ಕೆ ನಾವು ಗೊಣಗಾಡುತ್ತೇವೆ ಎಂದು ನೀವು ಸಮಜಾಯಿಷಿ ನೀಡಬಹುದು. ಆದರೆ, ನೀವು ಗೊಣಗಾಡಿದ ಕಾರಣಕ್ಕೆ ಆ ದಿನ ಹಾಳಾಗುತ್ತದೆ. ನೀವು ಸಮಾಧಾನ ಸ್ಥಿತಿಯಲ್ಲಿ ಇದ್ದಾಗ ಈ ಹೇಳಿಕೆ ಬಗ್ಗೆ ಯೋಚಿಸಿ. ಇದರಲ್ಲಿನ ಸತ್ಯ ನಿಮಗೆ ಅರ್ಥವಾಗುತ್ತದೆ.
ಬಾಬಿ ಮುಕ್ತ ಮನುಷ್ಯ. ಆತ ಸಾವಿಗೂ ಹೆದರುವುದಿಲ್ಲ. ಜೀವನದ ಪ್ರತಿಕ್ಷಣವನ್ನು ಸಂತಸದಿಂದ ಕಳೆಯಲು ಸಾವು ಪ್ರೇರಣೆ ನೀಡುತ್ತದೆ ಎನ್ನುತ್ತಾನೆ ಆತ. ಪ್ರತಿ ದಿನವೂ ತನಗೆ ಸಿಕ್ಕಿದ ಉಡುಗೊರೆ ಎಂದು ಆತ ಹೇಳುತ್ತಾನೆ. ಆ ದಿನ ಭೂಮಿಯ ಮೇಲೆ ತನ್ನ ಕೊನೆಯ ದಿನವಾಗಿದ್ದರೂ ಅದು ಮೊದಲ ದಿನ ಎಂಬಂತೆ ಆತ ಕಾಲಕಳೆಯುತ್ತಾನೆ.
ಹಲವು ವರ್ಷಗಳ ಹಿಂದಿನ ಮಾತು. ಬಾಬಿ ಸಹ ಸಾವಿಗೆ ಹೆದರುತ್ತಿದ್ದ. ಒಂದು ದಿನ ಈಜುಕೊಳದಲ್ಲಿ ಧ್ಯಾನಸ್ಥ ಸ್ಥಿತಿಯಲ್ಲಿ ಇದ್ದಾಗ ಸೂರ್ಯನ ಬೆಚ್ಚನೆಯ ಕಿರಣಗಳು ಆತನ ಭುಜವನ್ನು ಸೋಂಕಿದವು. ಮೃದುವಾದ ನೀರು ಆತನನ್ನು ಆವರಿಸಿತ್ತು. ಸೂರ್ಯ ತನ್ನ ತಂದೆಯಂತೆ, ನೀರು ತನ್ನ ತಾಯಿಯಂತೆ ಎಂಬ ಭಾವ ಆತನಲ್ಲಿ ಮೂಡಿತು. ಆ ಭಾವದಲ್ಲೇ ಸತ್ಯವೊಂದು ಅರಿವಾಯಿತು. ಸಾವಿಗೆ ಅಂಜುವ ಹಲವರು ಬದುಕುವುದನ್ನೇ ಮರೆತುಬಿಡುತ್ತಾರೆ ಎಂಬ ಸ್ಪಷ್ಟ ಅರಿವು ಆತನಲ್ಲಿ ಮೂಡಿತು.
ಈ ದಿನ ಹಾಳಾಯಿತು ಎಂದು ಗೊಣಗಾಡುತ್ತ ಅತ್ಯಮೂಲ್ಯವಾದ ಕ್ಷಣಗಳನ್ನು ಹಾಳು ಮಾಡಿಕೊಳ್ಳಬೇಡಿ. ಅದರ ಬದಲು `ಬಾಬಿ~ಯ ಮನೋಭಾವವನ್ನು ಅಪ್ಪಿಕೊಳ್ಳಿ. ನಿಮ್ಮ ಬಳಿ ಕೊಡೆ ಇಲ್ಲ. ಮಳೆ ಸುರಿಯುತ್ತಿದೆ ಅಂದಾಗಲೂ ನಾನು ಈ ದಿನವನ್ನು ಹೇಗೆ ಸುಂದರವಾಗಿಸಿಕೊಳ್ಳುತ್ತೇನೆ ಎಂದು ಯೋಚಿಸಿ. ಬರಬೇಕಾದ ಪಾರ್ಸಲ್ ಬಂದಿಲ್ಲ ಎಂಬ ಕಾರಣಕ್ಕೆ, ನಿಮ್ಮ ಹುಟ್ಟುಹಬ್ಬಕ್ಕೆ ಯಾರೂ ಶುಭಾಶಯ ಹೇಳಿಲ್ಲ ಎಂಬ ಕಾರಣಕ್ಕೆ, ಉದ್ಯೋಗದಲ್ಲಿ ಬಡ್ತಿ ದೊರಕಿಲ್ಲ ಎಂಬ ಕಾರಣಕ್ಕೆ, ನಿಮ್ಮ ಸ್ನೇಹಿತರೋ, ಹಿರಿಯ ಸಹೋದ್ಯೋಗಿಗಳೋ, ಸಂಗಾತಿಯೋ ಕೆಟ್ಟದಾಗಿ ಮಾತನಾಡಿದರು ಎಂಬ ಕಾರಣಕ್ಕೆ ಆ ದಿನ ಕೆಟ್ಟದಾಗಿದೆ ಎಂದುಕೊಳ್ಳಬೇಕಿಲ್ಲ. ಒಳ್ಳೆಯ ದಿನವನ್ನು ನಾನೇ ಸೃಷ್ಟಿಸಿಕೊಳ್ಳಬಲ್ಲೆ, ನನ್ನಲ್ಲೇ ಆ ಶಕ್ತಿ ಇದೆ ಎಂಬ ಅರಿವು ನಿಮ್ಮಲ್ಲಿ ಮೂಡಿದಾಗ ಸಂತಸದ ಹೊಳೆ ಹರಿಯುತ್ತದೆ.
ನಿಮ್ಮ ದಿನ, ನಿಮ್ಮ ಜೀವನ ನೀವೇ ಸೃಷ್ಟಿಸಿಕೊಳ್ಳಬಹುದು ಎಂಬ ಅರಿವಿನಲ್ಲೇ ಸುಖ ಅಡಗಿದೆ.
- ಬೆಳಿಗ್ಗೆ ಕಣ್ಣು ಬಿಟ್ಟಾಗ ಈ ದಿನ ನನ್ನದು ಎಂದುಕೊಳ್ಳಿ. ಉತ್ತಮ ಘಟನೆಗಳು ಜರುಗಲಿವೆ ಅಂದುಕೊಳ್ಳಿ.
- ಹಲ್ಲುಜ್ಜಿದ ನಂತರ ಆಳವಾಗಿ ಉಸಿರಾಡಿ. ನಾನು ಈ ಭೂಮಿಯ ಮೇಲೆ ಹೇಗೆ ಬಂದೆ ಎಂದು ವಿಸ್ಮಯದಿಂದ ಪ್ರಶ್ನಿಸಿಕೊಳ್ಳಿ.
- ಊಟದ ಪ್ರತಿ ಅಗಳನ್ನೂ ಕೃತಜ್ಞತೆಯಿಂದ ಜಗಿಯಿರಿ. ನಿಮ್ಮ ತಟ್ಟೆಗೆ ಆಹಾರ ಬಂದು ಬೀಳಲು ಕಾರಣರಾದ ಪ್ರತಿಯೊಬ್ಬರನ್ನೂ ಕೃತಜ್ಞತೆಯಿಂದ ನೆನೆಸಿಕೊಳ್ಳಿ.
- ಕಿರಿಕಿರಿ ಮಾಡುವ ವ್ಯಕ್ತಿಗಳಿಗೆ ಮೃದುವಾದ ಸಂದೇಶ ಕಳುಹಿಸಿ. ಅವರು ಅಂತಹ ಸ್ಥಿತಿ ತಲುಪಲು ಎಂತಹ ಕಷ್ಟ ಅನುಭವಿಸಿದ್ದಾರೋ ಯಾರಿಗೆ ಗೊತ್ತು.
- ಎಲ್ಲರೂ ತಾವಿರುವ ಸನ್ನಿವೇಶಕ್ಕೆ ಅನುಗುಣವಾಗಿ ಅತ್ಯುತ್ತಮವಾದುದನ್ನೇ ಮಾಡುತ್ತಾರೆ ಎಂದು ಭಾವಿಸಿಕೊಳ್ಳಿ. ಪೂರ್ಣ ವ್ಯಕ್ತಿಗಳಾಗಲು ಯಾರೂ ಪರಿಪೂರ್ಣರಾಗಬೇಕಿಲ್ಲ. ಆದರೆ, ನಾವು ಪರಿಪೂರ್ಣರು ಎಂದು ತೋರಿಸಿಕೊಳ್ಳುವ ಹಂಬಲವಿಲ್ಲದೇ ನಮ್ಮ ಉತ್ತಮ ಮತ್ತು ಕೆಟ್ಟ ಗುಣಗಳನ್ನು ಅಪ್ಪಿಕೊಳ್ಳುವ ಮನೋಭಾವ ಬೆಳೆಸಿಕೊಳ್ಳಬೇಕು.
- ಕೃಷಿಕನೊಬ್ಬ ತನ್ನ ಹೊಲವನ್ನು ಮಾರುವ ಉದ್ದೇಶದಿಂದ ಪತ್ರಿಕೆಯಲ್ಲಿ ಪ್ರಕಟಣೆ ನೀಡಲು ಕವಿಯಾಗಿದ್ದ ತನ್ನ ಗೆಳೆಯನಿಗೆ ನಾಲ್ಕು ಸಾಲು ಬರೆದುಕೊಡುವಂತೆ ಕೇಳಿಕೊಂಡ.
`ದೊಡ್ಡದಾದ ಜಾಗದಲ್ಲಿ ನಸುಕಿನಲ್ಲಿ ಹಕ್ಕಿಗಳು ಹಾಡುತ್ತವೆ. ಸೂರ್ಯನ ಕಿರಣಗಳಿಂದ ತೊಯ್ದ ನದಿ ಈ ಹೊಲವನ್ನು ಅಡ್ಡದಾಗಿ ಸೀಳಿ ಹರಿಯುತ್ತದೆ. ಅದರೊಳಗಿರುವ ಫಾರ್ಮ್‌ಹೌಸ್‌ನ ವರಾಂಡಾದಲ್ಲಿ ತಣ್ಣನೆಯ ನೆರಳು ಹಾಸಿರುತ್ತದೆ- ಈ ಜಾಗ ಮಾರಾಟಕ್ಕಿದೆ~ ಎಂದು ಆ ಕವಿ ಬರೆದುಕೊಟ್ಟ. ಕೆಲ ದಿನಗಳ ನಂತರ ಆ ಗೆಳೆಯ ರೈತನನ್ನು ಹೊಲ ಮಾರಾಟವಾಯಿತೇ ಎಂದು ಪ್ರಶ್ನಿಸಿದ. ಇಲ್ಲ, ನೀನು ಬರೆದಿದ್ದನ್ನು ಓದಿದ ಮೇಲೆ ನನ್ನ ಬಳಿ ಎಂತಹ ಸಂಪತ್ತು ಇದೆ ಎಂಬುದರ ಅರಿವಾಯಿತು ಎಂದು ಆ ರೈತ ಕವಿಗೆ ಹೇಳಿದ.
ಅದೇ ರೀತಿ ನಿಮ್ಮ ಮನೆ, ಪ್ರೀತಿಯ ಸ್ನೇಹಿತರು, ನಿಮ್ಮ ಆರೋಗ್ಯ, ಜ್ಞಾನ, ಅನುಭವ ಎಲ್ಲವನ್ನೂ ನೆನಪಿಸಿಕೊಳ್ಳಿ. ನಿಮ್ಮ ಮನೆಯಲ್ಲಿ ಕಳೆಯುವ ಪ್ರತಿ ಕ್ಷಣವನ್ನೂ ಸಂತಸದಿಂದ ಅನುಭವಿಸಿ. ರಾತ್ರಿ ಮಲಗುವ ಮುನ್ನ ಪ್ರಶಾಂತ ಮನಃಸ್ಥಿತಿ ತಂದುಕೊಳ್ಳಿ. ಬೆಳಿಗ್ಗೆ ಎದ್ದಾಗ ನೀವಿನ್ನೂ ಜೀವಂತವಾಗಿರುವುದಕ್ಕೆ ಸಂತಸ ಪಡಿ. ಮುಂದೆ ಪಶ್ಚಾತ್ತಾಪ ಪಡದಂತೆ ಮಧ್ಯಾಹ್ನದ ಹೊತ್ತು ಉತ್ತಮವಾದುದನ್ನೇ ಮಾಡಿ. ರಾತ್ರಿ ಮಗುವಿನಂತೆ ನಿದ್ರಿಸಿ.
ನಿಮ್ಮ ಹೃದಯದಾಳದಿಂದ ಬದುಕುವುದು ಸಹ ದೊಡ್ಡ ಸಾಧನೆಯೇ ಆಗಿರುತ್ತದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.