ಮನುಷ್ಯನ ದುರಾಸೆಗೆ ಹೆತ್ತವರನ್ನು ಕಳೆದುಕೊಳ್ಳುವ ಮರಿಹಾವೊಂದು ತಪ್ಪು ಮಾಡಿದವರ ವಿರುದ್ಧ ಸೇಡು ತೀರಿಸಿಕೊಳ್ಳಲು ಮಾನವನ ರೂಪದಲ್ಲಿ ಭೂಮಿಗೆ ಬರುವ ಕಾಲ್ಪನಿಕ ಕಥೆಯಾಧಾರಿತ ‘ನಾಗಿಣಿ’ ಧಾರಾವಾಹಿ ವೀಕ್ಷಕರನ್ನು ಹಿಡಿದಿಟ್ಟಿದೆ.
ಇಚ್ಛಾಧಾರಿ ‘ನಾಗಿಣಿ’ (ಅಮೃತಾ) ದೀಪಿಕಾ ದಾಸ್ ಅವರ ಅಭಿನಯ ಪಾತ್ರಕ್ಕೆ ಜೀವಂತಿಕೆ ಒದಗಿಸಿದೆ. ಹಾಸನ ಮೂಲದವರಾದ ನಟಿ ದೀಪಿಕಾ ಬಿಸಿಎ ಪದವೀಧರೆ. ಸುವರ್ಣ ವಾಹಿನಿಯ ಕೃಷ್ಣ–ರುಕ್ಮಿಣಿ ಧಾರಾವಾಹಿಯಲ್ಲಿ ನಟಿಸಿರುವ ಅವರು ತೆಲುಗು ಮತ್ತು ಕನ್ನಡ ಸಿನಿಮಾಗಳಲ್ಲೂ ಅಭಿನಯಿಸಿದ್ದಾರೆ.
‘ನಾಗಿಣಿ’ ಧಾರಾವಾಹಿ ಮೂಲಕ ಜನಮಾನಸದಲ್ಲಿ ಅಚ್ಚಾಗಿ ಉಳಿದಿರುವ ದೀಪಿಕಾ ದಾಸ್, ಅವರನ್ನು ಛೇಡಿಸುವ ಕೆಲ ಪ್ರಶ್ನೆಗಳಿಗೆ ಇಲ್ಲಿ ಉತ್ತರಿಸಿದ್ದಾರೆ.
*ಪಾತ್ರಕ್ಕೆ ಸೂಕ್ತವಾದ ಅಮೃತಾ ಎಂಬ ಹಾವನ್ನು ನಿರ್ದೇಶಕರು ಹೇಗೆ ಹುಡುಕಿ ತಂದರು?
ಕಾಲೇಜಿನಲ್ಲಿ ಓದುತ್ತಿರುವಾಗಲೇ ಹಲವು ನೃತ್ಯ ಕಾರ್ಯಕ್ರಮಗಳಲ್ಲಿ ಭಾಗವಹಿಸಿದ್ದೆ. ರೂಪದರ್ಶಿಯಾಗಿಯೂ ಕಾಣಿಸಿಕೊಂಡಿದ್ದೆ. ಈ ಬಗ್ಗೆ ತಿಳಿದಿದ್ದ ಅಮ್ಮನ ಸ್ನೇಹಿತೆಯ ಮೂಲಕ ಕಿರುತೆರೆಯಲ್ಲಿ ನಟಿಸಲು ಅವಕಾಶ ಸಿಕ್ಕಿತು. ಒಮ್ಮೆ ನಿರ್ದೇಶಕ ಹಯವದನ್ ಅವರ ವ್ಯವಸ್ಥಾಪಕರು ನನಗೆ ಕರೆ ಮಾಡಿ ಸರ್ ಅವರನ್ನು ಭೇಟಿ ಮಾಡುವಂತೆ ತಿಳಿಸಿದ್ದರು.
ಫಲಿತಾಂಶ ಏನೇ ಆಗಲಿ ಕರೆದಾಗ ಹೋಗಿ ಮಾತಾಡಿಸಿ ಬರುವುದು ನನ್ನ ಅಭ್ಯಾಸ. ಅಂತೆಯೇ ಹೋಗಿದ್ದೆ. ನನ್ನ ಧ್ವನಿ, ಗಾಂಭೀರ್ಯತೆ ಕಂಡು ನೀವು ಈ ಪಾತ್ರಕ್ಕೆ ಸರಿಯಾದ ವ್ಯಕ್ತಿ. ಅಭಿನಯಿಸುತ್ತೀರಾ ಎಂದು ಕೇಳಿದರು. ಅವರ ಮಾತಿಗೆ ಇಲ್ಲ ಎನ್ನಲು ಮನಸ್ಸಾಗಲಿಲ್ಲ. ಯಾವುದೋ ಹುತ್ತದಲ್ಲಿದ್ದ ನಾನು ನಟಿಸಲು ಒಪ್ಪಿಕೊಂಡೆ.
*ನಟ ಅರ್ಜುನ್ ನಿಮ್ಮ ಪ್ರೀತಿಗಾಗಿ ಪಡುವ ಪಾಡು ಅಷ್ಟಿಷ್ಟಲ್ಲ. ನಿಮಗೆ ಕರುಣೆಯೇ ಇಲ್ವಾ?
ನನಗೆ ಕರುಣೆ ಇದೆ. ಆದರೆ ನಿರ್ದೇಶಕರು ಬಿಡಬೇಕಲ್ಲ. ನಿಜ ಜೀವನದಲ್ಲಿ ನಾಗಿಣಿಯಾಗಿದ್ದಿದ್ದರೆ ಖಂಡಿತ ತಕ್ಷಣವೇ ಒಪ್ಪಿಕೊಳ್ಳುತ್ತಿದ್ದೆ. ನಿರ್ದೇಶಕರು ಪ್ರೀತಿ ಮಾಡು ಅಂದರೆ ಮಾಡುತ್ತೇನೆ. ಬೇಡ ಎಂದರೆ ಸುಮ್ಮನಿರುತ್ತೇನೆ.
*ಸೇಡು ತೀರಿಸಿಕೊಂಡ ನಂತರವಾದರೂ ಅರ್ಜುನ್ ಅವರನ್ನು ಪ್ರೀತಿಸುತ್ತೀರಾ?
ನನ್ನ ಅಪ್ಪ–ಅಮ್ಮನ ಸಾವಿಗೆ ಮುಖ್ಯ ಕಾರಣ ಅರ್ಜುನ್ ತಂದೆ ಮತ್ತು ಅವರ ಚಿಕ್ಕಪ್ಪ. ಅಂದಮೇಲೆ ಅವರನ್ನು ಪ್ರೀತಿಸಿದರೆ ನನ್ನ ಕೆಲಸ ಸುಲಭ ತಾನೆ. ಅರ್ಜುನ್‌ಗೂ ಹಾವೆಂದರೆ ಇಷ್ಟ. ಮೇಲಾಗಿ ಅವನಿಂದ ನನಗೆ ಯಾವುದೇ ಅಪಾಯವೂ ಇಲ್ಲ. ನೀವೇ ಕಾದು ನೋಡಿ.
*ಸಿನಿಮಾಗಳಲ್ಲಿ ದೇವಕನ್ಯೆಯರು ಭೂಲೋಕ ಇಷ್ಟಪಟ್ಟು ಮನುಷ್ಯನಂತೆ ಜೀವಿಸುವುದನ್ನು ನೋಡಿದ್ದೇವೆ. ನೀವೂ ಏಕೆ ಹಾಗೆ ಮಾಡಬಾರದು?
ಈ ಬಗ್ಗೆ ಹಲವು ಕಥೆಗಳನ್ನು ನಾನೂ ಕೇಳಿದ್ದೇನೆ. ಅದು ಎಷ್ಟು ಸತ್ಯವೋ ಅಥವಾ ಸುಳ್ಳೋ ಗೊತ್ತಿಲ್ಲ. ನಿರ್ದೇಶಕರು ಈ ಬಗ್ಗೆ ತೀರ್ಮಾನ ಕೈಗೊಳ್ಳುತ್ತಾರೆ.
*ಹಾವು ಮನುಷ್ಯನಾಗಿ, ಮನುಷ್ಯ ಹಾವಾಗಿ ಬದಲಾಗುವ ವಿಚಾರವನ್ನು ನಂಬುತ್ತೀರಾ?
ಅಜ್ಜ–ಅಜ್ಜಿಯರು ಈ ಬಗ್ಗೆ ಕಥೆಗಳನ್ನು ಹೇಳುತ್ತಿದ್ದರು. ಅದು ಕಲ್ಪನೆಯೂ ಇರಬಹುದು. ಪ್ರಸ್ತುತ ಸಂದರ್ಭದಲ್ಲಿ ವಿಚಾರ ಮಾಡಿದಾಗ ಇಲ್ಲ ಎನಿಸುತ್ತೆ.
*ನಿಮ್ಮನ್ನು ನೋಡಿ ಕುಟುಂಬ ಸದಸ್ಯರು ಹೆದರುತ್ತಾರಾ ಹೇಗೆ?
ಖಂಡಿತ ಹೆದರಿಕೆ ಇಲ್ಲ. ನೀನು ಹಂಗ್ ಮಾಡಬೇಕಿತ್ತು ಹಿಂಗ್ ಮಾಡಬೇಕಿತ್ತು ಎಂದು ಹರಟುತ್ತಿರುತ್ತಾರೆ. ಎಲ್ಲಿಯೇ ಹೋಗಲಿ ಜನರು ನೀವು ‘ನಾಗಿಣಿ’ ಅಲ್ವಾ. ಒಮ್ಮೆ ನಾಲಿಗೆಯನ್ನು ಹೊರಹಾಕಿ ಎಂದು ಕೇಳುತ್ತಾರೆ. ಮತ್ತೆ ಕೆಲವರು ಜಾಹೀರಾತು ಸಂದರ್ಭದಲ್ಲಿ ನಾಲಿಗೆಯನ್ನು ಹೊರ ಹಾಕಿ ಒಳಕ್ಕೆ ತೆಗೆದುಕೊಳ್ಳುವ ದೃಶ್ಯ ನೋಡಲು ಭಯವಾಗುತ್ತೆ. ನೆನೆಸಿಕೊಂಡರೆ ನಿದ್ದೆ ಬರಲ್ಲ ಎಂದೂ ಹೇಳುತ್ತಾರೆ. ಆದರೆ ಎಲ್ಲರಿಂದಲೂ ಉತ್ತಮ ಪ್ರತಿಕ್ರಿಯೆ ಇದೆ.
*ನಿಮ್ಮನ್ನು ಪ್ರೀತಿಸುವ/ಮದುವೆಯಾಗುವ ಹುಡುಗ ಈ ಧಾರಾವಾಹಿ ನೋಡಿ ಹೆದರಿಕೊಂಡರೆ ಹೇಗೆ ಸಂತೈಸುತ್ತೀರಿ?
ಸಂತೈಸುವ ಪ್ರಶ್ನೆಯೇ ಇಲ್ಲ. ಆ ಮೂಲಕವಾದರೂ ನನ್ನನ್ನು ಕಂಡರೆ ಸ್ವಲ್ಪ ಭಯ–ಭಕ್ತಿ ಇರಲಿ ಎಂದು ಭಾವಿಸುತ್ತೇನೆ.
*ನಿಜಜೀವನದಲ್ಲಿ ನಿಮಗೆ ಹಾವನ್ನು ಕಂಡರೆ ಭಯವಿದೆಯಾ?
ತುಂಬಾ ಭಯ. ಹಗ್ಗ ಅಲುಗಾಡಿದರೂ ಸಾಕು ಹೆದರುತ್ತೇನೆ. ಧಾರಾವಾಹಿಯಲ್ಲಿ ಪಾತ್ರ ಮಾತ್ರವಾದ್ದರಿಂದ ಏನೂ ಅನಿಸಲ್ಲ. ಕೆಲವು ದೃಶ್ಯಗಳ ಚಿತ್ರೀಕರಣದ ಸಂದರ್ಭದಲ್ಲಿ ಪ್ಲಾಸ್ಟಿಕ್ ಹಾವು ಹಿಡಿದುಕೊಳ್ಳಲೂ ಭಯ ಆಗುತ್ತಿತ್ತು. ಕ್ರಮೇಣ ರೂಢಿ ಮಾಡಿಕೊಂಡೆ. ಇದೊಂದು ಕಾಲ್ಪನಿಕ ಕಥೆಯಲ್ಲವೇ ಎಂದು ಮನಸ್ಸು ಗಟ್ಟಿ ಮಾಡಿಕೊಂಡೆ. ಪಾತ್ರದಲ್ಲಿ ಮುಳುಗಿದಾಗ ಏನೂ ಗೊತ್ತಾಗಲ್ಲ. ಜನರ ಪ್ರತಿಕ್ರಿಯೆ ನನ್ನ ಹುಮ್ಮಸ್ಸನ್ನು ಇನ್ನೂ ಹೆಚ್ಚಿಸಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.