ADVERTISEMENT

ಹೋಯ್, ನೀನು ಬ್ಲ್ಯಾಕಿ...

ರೋಹಿಣಿ ಮುಂಡಾಜೆ
Published 1 ಅಕ್ಟೋಬರ್ 2017, 19:30 IST
Last Updated 1 ಅಕ್ಟೋಬರ್ 2017, 19:30 IST
ಹೋಯ್, ನೀನು ಬ್ಲ್ಯಾಕಿ...
ಹೋಯ್, ನೀನು ಬ್ಲ್ಯಾಕಿ...   

'ನಮ್ಮ ಕುಟುಂಬದಲ್ಲಿ ಯಾರೂ ಕಪ್ಪಗಿಲ್ಲ. ನನ್ನ ಮಗ ಅಷ್ಟು ಬೆಳ್ಳಗಿದ್ದಾನೆ. ಅವನಿಗೆ ನೀನೊಬ್ಬ ಕಪ್ಪು ಮೂತಿಯವನು ಹುಟ್ಟಬೇಕಿತ್ತಾ?’- ಮ್ಮಗನ ಕಪ್ಪು ಬಣ್ಣದ ಬಗ್ಗೆ ಅಜ್ಜಿಯ ಮೂದಲಿಕೆ ಹೀಗಿತ್ತು.

ಬೆಳ್ಳಗಿದ್ದರೇ ಚಂದ, ತಾಯಿ- ಮಗ ತಮ್ಮ ನಡುವೆ ಒಂದು ಕರಿಚುಕ್ಕೆ ಎಂಬ ಅವರ ಹೀಯಾಳಿಕೆಗೂ ಅವನಷ್ಟೇ ಅಂದರೆ ಎಂಟರ ಹರೆಯ.

'ಬಣ್ಣ ಕಟ್ಕೊಂಡು ಏನ್ಮಾಡ್ತೀಯ? ಒಳ್ಳೆಯ ಗುಣ ಇರಬೇಕು, ಕಷ್ಟಕ್ಕೆ ಕರಗುವ ಮನಸು ಇರಬೇಕು. ಅದು ಹೃದಯದ ಬಣ್ಣ ಕಣೋ. ನಿನ್ನ ಬಣ್ಣದ ಬಗ್ಗೆ ಯಾರೇ ಏನೇ ಅಂದರೂ ಹೀಗೇ ಹೇಳು' ಸುಮುಖನ ಅಮ್ಮ ಹೇಳಿದ ಕಿವಿಮಾತೂ ಅಜ್ಜಿಯ ಮಾತಿನ ಮುಂದೆ ಶಕ್ತಿ ಕಳಕೊಂಡಿತ್ತು.

ADVERTISEMENT

ಅಜ್ಜಿಯ ಹೀಯಾಳಿಕೆ ಬರೀ ಮಾತಲ್ಲೇ ಮುಗಿದಿರಲಿಲ್ಲ. ಶಾಲೆಗೆ ತೆಗೆದುಕೊಂಡು ಹೋಗಬೇಕಾದ ಫ್ಯಾಮಿಲಿ ಫೋಟೊಗಾಗಿ ತನ್ನೊಂದಿಗೆ ಅಜ್ಜಿ ನಿಂತಿರಲಿಲ್ಲ.

'ಶಾಲೆಯಲ್ಲಿ ಆ ಅರ್ಜುನ್ ಕಪೂರ್ ಸಹ ಅಜ್ಜಿಯ ಹಾಗೇ ಮಾತಾಡಿದ್ದನಲ್ಲ? 'ನೀನು ಬ್ಲ್ಯಾಕಿ' ಅಂತ ಗೆಳೆಯರೊಂದಿಗೆ ನಕ್ಕಿದ್ದ. ಅಷ್ಟೇ ಆಗಿದ್ದಿದ್ದರೆ ಪರವಾಗಿರಲಿಲ್ಲ. ಟೇಬಲ್ ಟೆನಿಸ್ ಆಡಲು ವಸುಮತಿ ಮಿಸ್ಸು ಕ್ರಮವಾಗಿ ಒಂದು- ಎರಡು, ಒಂದು -ಎರಡು ಅಂತ ಎಣಿಸಿ ಎರಡು ಗುಂಪು ಮಾಡುತ್ತಿದ್ದಾಗಲೂ ಅರ್ಜುನ್ ಮತ್ತು ಅವನ ಗೆಳೆಯರು ನನ್ನನ್ನು ಹಿಂದಕ್ಕೆ ಜಗ್ಗಿದ್ದರು. ಪುಣ್ಯಕ್ಕೆ ವಸುಮತಿ ಮಿಸ್ ನೋಡಿದ್ರಿಂದ ಗೌರೀಶ್ ಟೀಂನಲ್ಲಿ ಸೇರಿಕೊಂಡೆ. ನಾನ್ಯಾಕೆ ಕಪ್ಪಗಿದ್ದೀನಿ?’' ಸುಮುಖನಿಗೆ ಈ ವರ್ಣಭೇದವು ದಿನದಿಂದ ದಿನಕ್ಕೆ ದೊಡ್ಡ ಒಗಟು ಎನಿಸುತ್ತಿತ್ತು.

ಅಜ್ಜಿ ನೋಡುವ ಧಾರಾವಾಹಿಗಳ ಹೀರೊ, ಹೀರೋಯಿನ್, ಅವರು ಇವರೆಲ್ಲ ಬೆಳ್ಳಗಿರುತ್ತಾರೆ. ವಿಲನ್‌ಗಳು ಮಾತ್ರ ಕಪ್ಪಗಿರುತ್ತಾರೆ.

'ಸುಮುಖ, ಫ್ಯಾಮಿಲಿ ಫೋಟೊ ನಿನ್ನ ಡೈರಿಯಲ್ಲಿಟ್ಟಿದ್ದೇನೆ.ಕೊಟ್ಟು ಬಿಡು' ಅಂದಳು ಅಮ್ಮ. ಫೋಟೊದಲ್ಲಿ ಅಜ್ಜಿ ಇರಲಿಲ್ಲ. ಅಪ್ಪ ಮತ್ತು ಅಮ್ಮ ಎರಡೂ ಕೆನ್ನೆಗೆ ಮುತ್ತಿಡುತ್ತಿದ್ದ ಫೋಟೊವನ್ನೇ ಅಮ್ಮ ಆಯ್ಕೆ ಮಾಡಿದ್ದಳು.

ಅಮ್ಮನ ಮುಖ ನೋಡಿದ ಸುಮುಖನಿಗೆ ಅವಳ ಕಣ್ಣಲ್ಲೇ ಉತ್ತರವಿತ್ತು. 'ಚರ್ಮದ ಬಣ್ಣಕ್ಕಿಂತ ಹೃದಯದ ಬಣ್ಣ ಮುಖ್ಯ... ನೆನಪಿಟ್ಕೋ ಬಂಗಾರು' ಅಂದಳು ಅಮ್ಮ.

ಅಜ್ಜಿ ಇಲ್ಲದ ಫೋಟೊ, ಕಪ್ಪು-ಕಂದು ಬಿಳಿ ಬಣ್ಣಭೇದ, ಅರ್ಜುನ್ ಕಪೂರ್‌ನ ಮೂದಲಿಕೆ.. ಎಲ್ಲದಕ್ಕೂ ಅಮ್ಮನ ಮಾತಲ್ಲಿ ಉತ್ತರವಿತ್ತು.

‘ಇನ್ನೊಂದು ಸಲ ಯಾರಾದ್ರೂ ನಾನು ಕಪ್ಪಗಿದ್ದೀನಿ ಅಂತ ಹೀಯಾಳಿಸಲಿ, ‘ಹೌದು ನಾನು ಕಪ್ಪಗಿದ್ದೀನಿ. ಏನೀವಾಗ?’ ಅಂತ ಕೇಳಿಯೇ ಬಿಡ್ತೀನಿ’ ಅಂದುಕೊಂಡ

ಪೋಷಕರೇ ಗಮನಿಸಿ…
* ನಾವು ಮಾಮೂಲಿಯಾಗಿ ಬಳಸುವ ಕೆಲವು ಮಾತುಗಳು ಗಾದೆಗಳೂ ಸಹ ವರ್ಣಭೇದದ ಅರ್ಥ ಹೊಂದಿರುತ್ತವೆ. ಮಕ್ಕಳನ್ನು ಘಾಸಿಗೊಳಿಸುತ್ತವೆ.
* ಮಕ್ಕಳ ಮೈಬಣ್ಣವನ್ನು ಪರಸ್ಪರ ಹೋಲಿಸುವಾಗ ಎಚ್ಚರವಿರಲಿ. ಕಪ್ಪಗಿರುವುದು ಅಪರಾಧ ಎನಿಸುವಂತೆ ಎಂದಿಗೂ ವರ್ತಿಸಬೇಡಿ.
* ಜಾಹೀರಾತುಗಳಿಗೆ ಮರುಳಾಗಿ ಸಿಕ್ಕಸಿಕ್ಕ ಫೇರ್‌ನೆಸ್‌ ಕ್ರೀಂಗಳನ್ನು ಮಕ್ಕಳ ಮೇಲೆ ಪ್ರಯೋಗಿಸಬೇಡಿ.
* ಕಪ್ಪೋ-ಬಿಳುಪೋ ಮಗುವಿನ ಮನಸಿಗೆ ಘಾಸಿಯಾಗದಿರುವುದು ಮುಖ್ಯ.
* ನಿಮ್ಮ ಮಗುವನ್ನು ಬೇರೆ ಯಾರಾದರೂ ಬಣ್ಣದ ಕಾರಣಕ್ಕೆ ಹೀಯಾಳಿಸಿದರೆ, ಅವಮಾನಿಸಿದರೆ, ಬೈದರೆ ತಕ್ಷಣ ಪ್ರತಿಕ್ರಿಯಿಸಿ. ನೀವು ಆ ಸಂದರ್ಭದಲ್ಲಿ ಸುಮ್ಮನಿರುವುದೂ ಮಗುವಿನಲ್ಲಿ ಕೀಳರಿಮೆ ಬೆಳೆಸುತ್ತದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.