ADVERTISEMENT

‘ಸೆಟ್‌ನಲ್ಲಿ ಚಹಾ ನೀಡುತ್ತಿದ್ದೆ’

ಪ್ರೇರಣೆ

​ಪ್ರಜಾವಾಣಿ ವಾರ್ತೆ
Published 17 ಜನವರಿ 2016, 19:30 IST
Last Updated 17 ಜನವರಿ 2016, 19:30 IST
‘ಸೆಟ್‌ನಲ್ಲಿ ಚಹಾ ನೀಡುತ್ತಿದ್ದೆ’
‘ಸೆಟ್‌ನಲ್ಲಿ ಚಹಾ ನೀಡುತ್ತಿದ್ದೆ’   

ನನ್ನ ಅಪ್ಪ ಅಸಿಸ್ಟೆಂಟ್‌ ಡೈರೆಕ್ಟರ್‌ ಆಗಿದ್ದರು. ಆದರೆ ನಾವು ಮಕ್ಕಳು ಯಾರೂ ನಟನೆಯನ್ನು ಅವಲಂಬಿಸುವುದು ಅವರಿಗಿಷ್ಟವಿರಲಿಲ್ಲ. ಆದರೆ ನನಗಂತೂ ನಟನೆಯಲ್ಲಿಯೇ ಹೆಸರು ಮಾಡಬೇಕಾಗಿತ್ತು. ಆದರೆ ನಾವೆಲ್ಲ ಪರಿಶ್ರಮಿಯಾಗಿದ್ದೆವು. ಪರಿಶ್ರಮ ಪಡುವುದು ನನಗೆ ಅಭ್ಯಾಸವಾಗಿತ್ತು. ಬಾಲನಟನಾಗಿ ಒಂದು ಚಿತ್ರದಲ್ಲಿ ಅವಕಾಶ ಸಿಕ್ಕಿತ್ತು.

ಹತ್ತು ಹನ್ನೆರಡು ದಿನಗಳ ಶೂಟಿಂಗ್‌ ಸಹ ಆಗಿತ್ತು. ಆ ಪಾತ್ರಕ್ಕಾಗಿ ಸಿತಾರ್‌ ನುಡಿಸಬೇಕಾಗಿತ್ತು. ಚೆಂಬೂರ್‌ನಿಂದ ಮೂರು ಬಸ್‌ ಬದಲಿಸಿ, ಬಾಂದ್ರಾಕ್ಕೆ ಬಂದು ಸಿತಾರ್‌ ಕಲಿತಿದ್ದೆ. ಅದಲ್ಲದೆ ಚಿತ್ರೀಕರಣದ ಸಂದರ್ಭದಲ್ಲಿ ಅವಕಾಶವಿದ್ದ ಎಲ್ಲ ಕಾರ್ಯಗಳಲ್ಲೂ ತೊಡಗಿಸಿಕೊಳ್ಳುತ್ತಿದ್ದೆ. ಯಾವತ್ತೂ ಯಾವುದಕ್ಕೂ ಇಲ್ಲವೆನ್ನುತ್ತಿರಲಿಲ್ಲ.

ಅದೆಷ್ಟೋ ದಿನ, ಅದೆಷ್ಟೋ ಚಿತ್ರಗಳಲ್ಲಿ ಎಕ್ಸ್ಟ್ರಾ ಕಲಾವಿದನಾಗಿಯೂ ದುಡಿದಿದ್ದೆ. ಅಪ್ಪ ನಿರ್ದೇಶಕರಾದಾಗ, ನಿರ್ಮಾಪಕ ರಾದಾಗ ಎಲ್ಲ ಕೆಲಸಗಳನ್ನೂ ಶ್ರದ್ಧೆಯಿಂದ ಮಾಡುತ್ತಿದ್ದೆ. ಸೆಟ್‌ನಲ್ಲಿ ಚಹಾ ನೀಡುವುದರಿಂದ ಹಿಡಿದು, ನಟನಟಿಯರನ್ನು ವಿಮಾನ ನಿಲ್ದಾಣದಿಂದಲೂ ಕರೆತರುತ್ತಿದ್ದೆ. ರಾಜ್‌ಬಬ್ಬರ್‌ನಂಥ ಕಲಾವಿದರ ಸಾಹಸ ದೃಶ್ಯಗಳಿಗೆ ಡಬಲ್‌ ಆಗಿಯೂ ನಟಿಸಿದೆ. ನನ್ನಲ್ಲಿ ಒಂದು ಭ್ರಮೆಯಿತ್ತು... ನಾನು ನೋಡಲು ಸಾಧಾರಣವಾಗಿರಬಹುದು.

ಆದರೆ ನನ್ನ ಕಾಲುಗಳ ಬಗ್ಗೆ ಮಾತ್ರ ಅದಮ್ಯ ಪ್ರೀತಿಯಿತ್ತು. ಅದೊಂದು ಚಿತ್ರದಲ್ಲಿ ಜಾಗಿಂಗ್‌ ಮಾಡುವ ದೃಶ್ಯವಿತ್ತು. ಓಟದ ದೃಶ್ಯದಲ್ಲಿ ನಿರ್ದೇಶಕರು ಟ್ರ್ಯಾಕ್‌ಪ್ಯಾಂಟ್‌ ಧರಿಸಲು ಹೇಳಿದರು... ನಾನು ಮಾತ್ರ ಶಾರ್ಟ್ಸ್‌ ಧರಿಸುವ ಹಟ ಹಿಡಿದಿದ್ದೆ. ಆ ದೃಶ್ಯ ನೋಡಿದಾಗಲೇ ತಿಳಿದಿದ್ದು ಕೋಳಿ ಕಾಲಿನಷ್ಟು ಸಪೂರವಾಗಿದ್ದವು ನನ್ನ ಕಾಲುಗಳು... ಓಟ, ನೋಟ ಇವೆಲ್ಲಕ್ಕೂ ಹೆಚ್ಚಾಗಿ ನಟನೆಯೇ ಮಹತ್ವದ್ದು ಎಂದೆನಿಸಿತು. ಮತ್ತೆ ಕಷ್ಟ ಪಡತೊಡಗಿದೆ.

ರಾಕಿ ಚಿತ್ರದಲ್ಲಿ ಸಂಜಯ್‌ದತ್‌ ಸ್ನೇಹಿತನಾಗಲು ಆಡಿಶನ್‌ ನೀಡಿದೆ. ಪಾತ್ರ ಗುಲ್ಷನ್‌ ಗ್ರೋವರ್‌ ಪಾಲಿಗಾಯಿತು. ಸ್ವಾಮಿ ದಾದಾ ಚಿತ್ರದ ಪಾತ್ರವೂ ಜಾಕಿ ಶ್ರಾಫ್‌ ಪಾಲಿಗೆ ಹೋಯಿತು. ಇಂಥ ಹಲವು ವೈಫಲ್ಯಗಳು ನನ್ನನ್ನು ಕಾಡಿದವು. ಆದರೆ ಹಟವೂ ಹೆಚ್ಚಾಗುತ್ತ ಹೋಯಿತು. ಸುಭಾಷ್‌ ಘಾಯ್‌ ಜೊತೆಗೆ ಕೆಲಸ ಮಾಡಲೇಬೇಕು ಎಂಬ ಹುಚ್ಚು ಕೆಲವು ದಿನಗಳವರೆಗೆ ಸವಾರಿ ಮಾಡಿತು.

ಮೇರಿ ಜಂಗ್‌ ಚಿತ್ರದಲ್ಲಿ ಜಾವೇದ್‌ ಜಾಫ್ರಿ ಪಾತ್ರಕ್ಕಾಗಿ ಪ್ರಯತ್ನಿಸುತ್ತಿದ್ದೆ. ಆದರೆ ಅಮಿತಾಬ್‌ ಮುಖ್ಯ ಪಾತ್ರವನ್ನು ನಿರಾಕರಿಸಿದ್ದರಿಂದ ಆ ಮುಖ್ಯ ಪಾತ್ರ ನನಗೆ ದೊರೆಯಿತು. ‘ವೋ ಸಾಥ್‌ ದಿನ್‌’ ಚಿತ್ರ ಬಿಡುಗಡೆಯಾದಾಗ ನನ್ನೊಳಗಿನ ನಟ ಆಚೆ ಬಂದಿದ್ದು. ನಂತರದ ‘ಮಷಾಲ್‌’ ಚಿತ್ರ ಹೆಸರು ತಂದು ಕೊಟ್ಟಿತು. ಈಗ ಬಾಲಿವುಡ್‌ ಏನು... ಹಾಲಿವುಡ್‌ ನಲ್ಲಿಯೂ ಮಿಂಚಿ ಬಂದೆ. ಎಲ್ಲವೂ ಒಂದೊಂದು ಪಾಠ ಕಲಿಸಿದವು.

ಒಂದೊಂದು ಅನನ್ಯ ಅನುಭವ ನೀಡಿದವು. ಈಗಲೂ ಯಾವ ಪಾತ್ರ ವಾದರೂ ಸೈ ಎನ್ನುತ್ತೇನೆ... ಇದು ನನ್ನ ಕತೆ. ನಿಮ್ಮ ಅನಿಲ್‌ ಕಪೂರ್‌ನದು. ಯಾವ ಕೆಲಸವೂ ಕಡಿಮೆಯದಲ್ಲ ಎಂದುಕೊಂಡು ದುಡಿದರೆ ಗೌರವ ಕಡಿಮೆಯಾಗುವುದಿಲ್ಲ. ಅನುಭವ ದೊರೆಯುತ್ತದೆ. ಯತ್ನಿಸಿ ನೋಡಿ...

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.