ADVERTISEMENT

ಮುದ್ದು ಮುಖ ಮಧುರ ಸ್ವರ

​ಪ್ರಜಾವಾಣಿ ವಾರ್ತೆ
Published 12 ಜನವರಿ 2018, 19:30 IST
Last Updated 12 ಜನವರಿ 2018, 19:30 IST
ಸೂರ್ಯ ಗಾಯತ್ರಿ
ಸೂರ್ಯ ಗಾಯತ್ರಿ   

ಸಾಮಾಜಿಕ ಜಾಲತಾಣವೆಂಬುದು ಕೇವಲ ನಮ್ಮ ಭಾವನೆಗಳನ್ನು ಹಂಚಿಕೊಳ್ಳಲು, ಸ್ನೇಹಿತರನ್ನು ಹುಡುಕಿಕೊಳ್ಳಲು, ಫೋಟೊಗಳನ್ನು ಹಂಚಿಕೊಂಡು ಲೈಕ್, ಕಾಮೆಂಟ್ ಪಡೆಯಲು ಅಷ್ಟೇ ಅಲ್ಲ. ಎಷ್ಟೋ ಜನರಿಗೆ ಇದು ತಮ್ಮಲ್ಲಿ ಹದುಗಿರುವ ಅಪೂರ್ವ ಪ್ರತಿಭೆಯನ್ನು ಹೊರಹಾಕಲು ವೇದಿಕೆಯಾಗಿದೆ. ನಮಗೆ ಗೊತ್ತೇ ಇಲ್ಲದ, ಹೆಸರೇ ಕೇಳದ ಅದೆಷ್ಟೋ ಮಂದಿ ರಾತ್ರಿ ಕಳೆದು ಬೆಳಗಾಗುವಷ್ಟರಲ್ಲಿ ಸ್ಟಾರ್‌ಗಳಾಗಿರುತ್ತಾರೆ. ಇಲ್ಲಿದೆ ಅಂತಹ ಪುಟಾಣಿ ಸ್ಟಾರ್‌ಗಳ ಪರಿಚಯ. ಈ ಮಕ್ಕಳು ತಮ್ಮ ಇಂಪಾದ ಕಂಠದಿಂದಲೇ ಸಾಮಾಜಿಕ ಜಾಲತಾಣಗಳಲ್ಲಿ ಲಕ್ಷಾಂತರ ಫಾಲೋವರ್ಸ್‌ಗಳನ್ನು ಹೊಂದಿದ್ದಾರೆ.

ಸೂರ್ಯ ಗಾಯತ್ರಿ

ನೋಡಲು ಮುದ್ದಾಗಿರುವ, ಕೋಗಿಲೆ ಕಂಠದವಳು ಇವಳು. ತನ್ನ ಚಿನ್ನದ ಕಂಠದಿಂದಲೇ ಇಂದು ವಿಶ್ವದಾದ್ಯಂತ ಹೆಸರುವಾಸಿಯಾಗಿದ್ದಾಳೆ. ಕುಲ್‌ದೀಪ್ ಎಂ. ಪೈ ಎನ್ನುವವರ ‘ಒಂದೇ ಗುರು ಪರಂಪರಂ’ ಎಂಬ ಆಧ್ಯಾತ್ಮಿಕ ಸಂಗೀತ ಸರಣಿಯಲ್ಲಿ ಸೂರ್ಯ ಗಾಯತ್ರಿ ಕೂಡ ಹಾಡಿದ್ದಾರೆ. ಈ ಸರಣಿ ಸಾಮಾಜಿಕ ಜಾಲತಾಣಗಳಲ್ಲಿ ಸಾಕಷ್ಟು ಮೆಚ್ಚುಗೆ ಗಳಿಸಿತು. ಕೇರಳದ ವಡಕ್ಕರದ ಪುರಮೇರಿ ಜಿಲ್ಲೆಯವಳು. ತಂದೆ ಪಿ.ವಿ. ಅನಿಲ್‌ ಕುಮಾರ್ ಮೃದಂಗ ವಾದಕರು ಮತ್ತು ತಾಯಿ ಕೂಡ ಸಂಗೀತ ಬಲ್ಲವರಾಗಿದ್ದಾರೆ. ಆನಂದಿ ಹಾಗೂ ನಿಶಾಂತ್ ಎನ್ನುವವರ ಬಳಿ ಕರ್ನಾಟಕ ಶಾಸ್ತ್ರೀಯ ಸಂಗೀತವನ್ನು ಅಭ್ಯಾಸ ಮಾಡುತ್ತಿದ್ದಾರೆ. ದೇಶದ ಬೇರೆ ಬೇರೆ ಸ್ಥಳಗಳಲ್ಲಿಯೂ ಈಕೆ ಸಂಗೀತ ಕಛೇರಿ ನಡೆಸಿಕೊಟ್ಟ ಸಾಧನೆ ಈ ಪೋರಿಯದು.

ADVERTISEMENT

ಪ್ರಣತಿ

ದಕ್ಷಿಣ ಭಾರತದ ಐದು ಭಾಷೆಯಲ್ಲಿ ಹಾಡುವ ಈಕೆ ಮಾಷ್‌ಅಪ್ ತಾರೆ. ಸುಮಧುರ ಕಂಠದಲ್ಲಿ ಹಾಡಲು ಆರಂಭಿಸಿದರೆ ತಲೆದೂಗದವರಿಲ್ಲ. ಎ. ಆರ್‌. ರೆಹಮಾನ್ ಒಡೆತನದ ಕೆ. ಎಂ. ಕಾಲೇಜ್ ಆಫ್ ಮ್ಯೂಸಿಕ್ ಅಂಡ್ ಟೆಕ್ನಾಲಜಿಯಲ್ಲಿ ಸಂಗೀತಾಭ್ಯಾಸ ಮಾಡಿದ್ದಾರೆ. ಸನ್ ನೆಟ್‌ವರ್ಕ್‌ ಆಯೋಜಿಸಿದ್ದ ‘ಸನ್ ಸಿಂಗರ್ ಸೀಸನ್–4’ರ ವಿಜೇತೆ. ‘ಕಬಾಲಿ’ ಚಿತ್ರದ ಪ್ರಚಾರ ವಿಡಿಯೊದಲ್ಲಿ ಕಾಣಿಸಿಕೊಂಡಿದ್ದ ಈ ಹುಡುಗಿಗೆ ಪ್ರಪಂಚದಾದ್ಯಂತ ಅಭಿಮಾನಿಗಳ ಬಳಗವೇ ಹುಟ್ಟಿಕೊಂಡಿತ್ತು. ಕೆಲವು ತಮಿಳು ಚಿತ್ರಗಳಲ್ಲೂ ನಟಿಸಿದ್ದಾಳೆ. ಈಕೆ ನಟಿಸಿದ ‘ಆರುವಿ’ ಚಿತ್ರ ಅಂತರರಾಷ್ಟ್ರೀಯ ಸಿನಿಮೋತ್ಸವಗಳಲ್ಲಿ ಪ್ರದರ್ಶನಗೊಳ್ಳುತ್ತಿದೆ. ಈಕೆ ವಿವಿಧ ಸಾಮಾಜಿಕ ಜಾಲತಾಣಗಳ ರೇಟಿಂಗ್ ಪಟ್ಟಿಯಲ್ಲಿ 5ಕ್ಕೆ 4.9 ಅಂಕ ಗಳಿಸಿದ್ದಾರೆ. ಪ್ರಣತಿ ಎಂಬ ಹೆಸರಿನಲ್ಲಿ ಫೇಸ್‌ಬುಕ್ ಖಾತೆ ಹೊಂದಿರುವ ಇವರಿಗೆ 7 ಲಕ್ಷದಷ್ಟು ಅಭಿಮಾನಿಗಳು ಇದ್ದಾರೆ.

ಜಯಲಕ್ಷ್ಮಿ

ಕೇರಳ ಮೂಲದ 11 ವರ್ಷದ ಹುಡುಗಿ ಈಗ ಸಾಮಾಜಿಕ ಜಾಲತಾಣದಲ್ಲಿ ‘ಜ್ಯೂನಿಯರ್ ಲತಾ’ ಎಂದೇ ಹೆಸರುವಾಸಿ. ಲತಾ ಮಂಗೇಷ್ಕರ್ ಹಾಡಿರುವ: ಸತ್ಯಂ ಶಿವಂ ಸುಂದರಂ’ ಹಾಡನ್ನು ತನ್ನ ಸುಶ್ರಾವ್ಯ ಕಂಠದಿಂದ ಹಾಡುವ ಮೂಲಕ ಅದೆಷ್ಟೋ ಸಂಗೀತ ಪ್ರಿಯರ ಮನವನ್ನು ಗೆದಿದ್ದಾಳೆ. ಎಲ್ಲಾ ಸಾಮಾಜಿಕ ಮಾಧ್ಯಮದಲ್ಲೂ ಹಿಂಬಾಲಕರನ್ನು ಹೊಂದಿರುವ ಈ ಹುಡುಗಿ ಸಧ್ಯದ ಸೋಷಿಯಲ್ ಮಿಡಿಯಾ ಸಿಂಗರ್ ಸ್ಟಾರ್‌.

ಅಕೌಸ್ಟಿಕ್ ಸಿಂಗ್‌ (ಕಬೀರ್ ಸಿಂಗ್‌)

ಯೂಟ್ಯೂಬ್ ಸ್ಟಾರ್‌ ಎಂದೇ ಖ್ಯಾತ ಈ ಕಬೀರ್‌ ಸಿಂಗ್‌. ವಾರಕ್ಕೆ ಒಂದು ಹಾಡನ್ನು ಆಯ್ಕೆ ಮಾಡಿಕೊಂಡು ಅದನ್ನು ತನ್ನದೇ ಶೈಲಿಯಲ್ಲಿ ಹಾಡುವ ಮೂಲಕ ಖ್ಯಾತಿ ಗಳಿಸಿದ್ದಾರೆ, ಅರ್ಜಿತ್ ಸಿಂಗ್ ಹಾಡಿರುವ ‘ಏ ದಿಲ್ ಹೇ ಮುಷ್‌ಕಿಲ್’ ಹಾಡನ್ನು ಹಾಡಿ ಸಂಗೀತ ಪ್ರಿಯರು ತಲೆದೂಗುವಂತೆ ಮಾಡಿದ್ದರು. ಅದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು ಅಲ್ಲದೇ, ಅರ್ಜಿತ್‌ಗಿಂತ ಈತನೇ ಚೆನ್ನಾಗಿ ಹಾಡುತ್ತಾನೆ ಎಂದು ಅಭಿಮಾನಿಗಳೂ ಗುಣಗಾನ ಮಾಡಿದ್ದಾರೆ. ಯೂಟ್ಯೂಬ್ ಚಾನೆಲ್‌ನಲ್ಲಿ ಆತನ ಹಾಡನ್ನು ಅಪ್‌ಲೋಡ್‌ ಮಾಡಿದ ಕೆಲವೇ ಕೆಲವು ದಿನಗಳಲ್ಲಿ 40,000 ಮಂದಿ ಸಬ್‌ಸ್ಕ್ರೈಬ್ ಮಾಡಿದ್ದಾರೆ.

ನೋದ್ದಿ ಖಾನ್‌

ಈ ಪೋರ ರ‍್ಯಾಪ್ ಸಂಗೀತದಿಂದಲೇ ಜನಪ್ರಿಯತೆ ಗಳಿಸಿದವರು. ‘ಐ ಆ್ಯಮ್ ನೋದ್ದಿ ಖಾನ್‌’ ಎಂಬ ಚೊಚ್ಚಲ ರ‍್ಯಾಪ್ ಹಾಡಿನಿಂದಲೇ ಅಂತರ್ಜಾಲದಲ್ಲಿ ಅಭಿಮಾನಿ ಬಳಗವನ್ನೇ ಗಿಟ್ಟಿಸಿಕೊಂಡವರು. ಹಿಂದಿಯ ಪ್ರಖ್ಯಾತ ರ‍್ಯಾಪರ್‌ ಯೊ ಯೊ ಹನಿಸಿಂಗ್ ಅವರ ಅಪ್ಪಟ ಅಭಿಮಾನಿ ಈತ. ಈತನ ಮೊದಲ ಹಾಡು ಅಪ್‌ಲೋಡ್ ಆದ 72 ಗಂಟೆಗಳಲ್ಲಿ 2.5 ಲಕ್ಷ ಮಂದಿ ವೀಕ್ಷಿಸಿದ್ದರು. ಚಂಡೀಗಡದ ನೋದ್ದಿ 7ನೇ ತರಗತಿ ವಿದ್ಯಾರ್ಥಿ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.