ADVERTISEMENT

ಲಂಡನ್‌ ರ‍್ಯಾಂಪ್‌ನಿಂದ

​ಪ್ರಜಾವಾಣಿ ವಾರ್ತೆ
Published 15 ಜನವರಿ 2018, 19:30 IST
Last Updated 15 ಜನವರಿ 2018, 19:30 IST
ಲಂಡನ್‌ ರ‍್ಯಾಂಪ್‌ನಿಂದ
ಲಂಡನ್‌ ರ‍್ಯಾಂಪ್‌ನಿಂದ   

ಫ್ಯಾಷನ್‌ ಜಗತ್ತಿನಲ್ಲಿ ಮಹಿಳೆಯರ ಕಾರುಬಾರು ಹೆಚ್ಚು. ಗಾಢ ಬಣ್ಣಗಳೂ ಅವರಿಗೆ ಮೀಸಲು. ಆದರೆ ಇತ್ತೀಚೆಗೆ ನಡೆದ ಪುರುಷರ ಲಂಡನ್‌ ಫ್ಯಾಷನ್‌ ವೀಕ್‌ನಲ್ಲಿ ಕಡು ಬಣ್ಣದ ದಿರಿಸುಗಳೇ ಹೆಚ್ಚಾಗಿ ಗಮನ ಸೆಳೆದವು.

ಹೆಚ್ಚಿನ ವಿನ್ಯಾಸಕರು ಕೇಸರಿ ಬಣ್ಣವನ್ನು ಆಯ್ದುಕೊಂಡಿದ್ದರು. ಅಲ್ಲದೆ ಪುರುಷರು ಹಾಗೂ ಮಹಿಳೆಯರು ಧರಿಸುವಂಥ ಯುನಿಸೆಕ್ಸ್‌ ಉಡುಪುಗಳಿಗೆ ವಿಶೇಷ ಆದ್ಯತೆ ನೀಡಲಾಗಿತ್ತು. ಪುರುಷರ ದಿರಿಸುಗಳಿಗೆ ಬಣ್ಣದ ಚಿತ್ತಾರವಿತ್ತು. ಹೊಟ್ಟೆ ಕಾಣುವ, ತೋಳಿಲ್ಲದ, ಕೋಲ್ಡ್‌ ಶೋಲ್ಡರ್‌ ದಿರಿಸು ತೊಟ್ಟು ಪುರುಷರು ರ‍್ಯಾಂಪ್‌ ಮೇಲೆ ಹೆಜ್ಜೆ ಇಟ್ಟರೆ ನೋಡುಗರು ಬೆರಗಾಗಿದ್ದರು. ಹಲ್ಲಿಗಳ ವಿನ್ಯಾಸದ ತೊಡುಗೆಗಳೂ ಸಾಕಷ್ಟಿದ್ದವು. ಸ್ಥೂಲಕಾಯದವರಿಗಾಗಿ ವಿಶೇಷವಾಗಿ ವಿನ್ಯಾಸಗೊಳಿಸಲಾಗಿದ್ದ ಉಡುಪುಗಳನ್ನೂ ಪ್ರದರ್ಶಿಸಲಾಯಿತು.

ಕೇಸರಿ ಮಾಯೆ: ರ‍್ಯಾಪರ್‌, ಗೀತ ರಚನೆಕಾರರಾಗಿ ಗುರುತಿಸಿಕೊಂಡಿರುವ ಟಿನಿ ಟೆಂಪ್‌ ಕೇಸರಿ ಬಣ್ಣವನ್ನು ಹೆಚ್ಚಾಗಿ ಆಯ್ದುಕೊಂಡಿದ್ದರು. ಸ್ಕಾರ್ಫ್, ಟೀಶರ್ಟ್‌, ಟ್ರೌಸರ್‌ಗಳಲ್ಲಿಯೂ ಕೇಸರಿ ಬಣ್ಣ ಹೆಚ್ಚಾಗಿ ಬಳಕೆಯಾಗಿತ್ತು. ವಿಭಿನ್ನವಿನ್ಯಾಸಕ್ಕೆ ಹೆಸರಾಗಿರುವ ಕ್ರಿಸ್ಟೊಫರ್‌ ರಿಬರ್ನ್‌ ಕೂಡ ಕೇಸರಿ ಬಣ್ಣದ ದಿರಿಸಿಗೆ ಆದ್ಯತೆ ನೀಡಿದ್ದರು. ವೈಮಾನಿಕ ಹಾಗೂ ಜಲ ನೌಕಾಪಡೆಯ ಸಮವಸ್ತ್ರದಲ್ಲಿ ಕೇಸರಿ ಬಣ್ಣವೇ ಪ್ರಧಾನ. ಅಲ್ಲಿಂದ ಸ್ಫೂರ್ತಿ ಪಡೆದ ಕ್ರಿಸ್ಟೊಫರ್‌, ಸ್ಟ್ರೀಟ್‌ವೇರ್‌ಗಳು, ಉದ್ದದ ಪ್ಯಾಡೆಡ್‌ ಜಾಕೆಟ್‌ಗಳು, ಕೈಗವಸು ಹಾಗೂ ಜಲನಿರೋಧಕ ಬೂಟುಗಳನ್ನು ಕೇಸರಿ ಬಣ್ಣದಲ್ಲಿ ವಿನ್ಯಾಸ ಮಾಡಿದ್ದರು.

ADVERTISEMENT

ಅರ್ಬನ್‌ ಕೌ ಬಾಯ್‌ ಹಾಗೂ ಡಿಸ್ಟೋಪಿಯಾ ಪರಿಕಲ್ಪನೆಯ ಉಡುಗೆಗಳೂ ಈ ಫ್ಯಾಷನ್‌ ಶೋನ ಕೇಂದ್ರಬಿಂದುವಾಗಿದ್ದುದು ವಿಶೇಷ. ಆಸ್ಟ್ರಿಡ್‌ ಆಂಡರ್‌ಸನ್‌ ವಿನ್ಯಾಸದ ಈ ದಿರಿಸಿನಲ್ಲಿ ಬೇರೆ ಬೇರೆ ವಿನ್ಯಾಸಗಳನ್ನು ವಿಭಿನ್ನವಾಗಿ ಬಳಸಲಾಗಿತ್ತು. ಕ್ರೀಡಾ ಉಡುಪುಗಳಿಗೆ ಸ್ಟ್ಯಾಟ್‌ಸನ್‌ ಟೊಪ್ಪಿಯ ಮೆರುಗು ನೀಡಲಾಗಿತ್ತು. ಶರ್ಟ್‌ ಮೇಲೆ ಸ್ಮೈಲಿಗಳ ಚಿತ್ರದ ವಿನ್ಯಾಸವಿದೆ. ಕೆಲವು ನಿತ್ಯ ಬಳಕೆಗೆ ಬಾರದ ವಿಶಿಷ್ಟ ಪರಿಕಲ್ಪನೆಯ ದಿರಿಸುಗಳನ್ನೂ ಪರಿಚಯಿಸಲಾಯಿತು. ಆದರೆ ಅವು ಫ್ಯಾಷನ್‌ ಶೋಗಾಗಿ ವಿನ್ಯಾಸಗೊಳಿಸಲಾಗಿದ್ದ ಉಡುಗೆ ತೊಡುಗೆಗಳು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.