ADVERTISEMENT

ಸೂಪರ್‌ಹೀರೊ ದಾರಿಗುಂಟ

​ಪ್ರಜಾವಾಣಿ ವಾರ್ತೆ
Published 16 ಜನವರಿ 2018, 19:30 IST
Last Updated 16 ಜನವರಿ 2018, 19:30 IST
ಸೂಪರ್‌ಹೀರೊ ದಾರಿಗುಂಟ
ಸೂಪರ್‌ಹೀರೊ ದಾರಿಗುಂಟ   

ಬಾಲಿವುಡ್‌ನ ಮೊದಲ ಸೂಪರ್‌ ಹೀರೊ, ಲವರ್‌ ಬಾಯ್‌, ನೃತ್ಯಪಟು ಎನ್ನುತ್ತಿದ್ದಂತೆ ಹೃತಿಕ್‌ ರೋಶನ್‌ ಮನಸ್ಸಿನ ಪರದೆಯ ಮೇಲೆ ಬಂದು ನಿಲ್ಲುತ್ತಾರೆ. ‘ಕಹೋ ನ ಪ್ಯಾರ್‌ ಹೈ’ ಚಿತ್ರದ ಮೂಲಕ ನಾಯಕ ನಟನಾಗಿ ಕಾಣಿಸಿಕೊಂಡ ಹೃತಿಕ್‌ ಸಿನಿಪ್ರೇಮಿಗಳ ಮನಸ್ಸಿನಲ್ಲಿ ಶಾಶ್ವತವಾಗಿ ಸ್ಥಾನ ಗಿಟ್ಟಿಸಿಕೊಂಡರು. ಅವರ ಸುಂದರ ನಿಲುವು, ನಟನೆ, ನೃತ್ಯ ಪ್ರೌಢಿಮೆಯಿಂದ ಯುವ ಮನಸ್ಸುಗಳ ಕಣ್ಮಣಿಯಾದರು. ಹರೆಯದ ಹುಡುಗಿಯರ ಎದೆಬಡಿತ ಏರಿಸಿದ ತಮ್ಮ ಮೊದಲ ಸಿನಿಮಾ ಅಭಿನಯಕ್ಕೇ ಸಾಕಷ್ಟು ಪ್ರಶಸ್ತಿಗಳನ್ನು ಬಾಚಿಕೊಂಡರು. ಅಲ್ಲಿಂದ ‘ಫಿಜಾ’, ‘ಕಭಿ ಖುಷಿ ಕಭಿ ಗಮ್‌’, ‘ಕೋಯಿ ಮಿಲ್‌ ಗಯಾ’, ‘ಕ್ರಿಶ್‌’, ‘ಕ್ರಿಶ್‌ 3’, ‘ಧೂಮ್‌ 2’, ‘ಜೋಧಾ ಅಕ್ಬರ್‌’, ‘ಜಿಂದಗಿ ನ ಮಿಲೇಗಿ ದುಬಾರಾ’, ‘ಅಗ್ನಿಪಥ್‌’, ‘ಬ್ಯಾಂಗ್‌ ಬ್ಯಾಂಗ್‌’ ಹೀಗೆ ಸಾಲು ಸಾಲು ಸಿನಿಮಾಗಳನ್ನು ಮಾಡಿದರು. ಒಂದಷ್ಟು ಚಿತ್ರಗಳು ಕಲ್ಪನೆಗೂ ನಿಲುಕದಷ್ಟು ಜನಪ್ರಿಯವಾದರೆ ಕೆಲವು ಸಿನಿಮಾಗಳು ಹೃತಿಕ್‌ಗೆ ಹೆಸರು ತಂದುಕೊಡಲಿಲ್ಲ.

ಬಾಲಿವುಡ್‌ ಗಲ್ಲಿಯಲ್ಲಿ ಜನಪ್ರಿಯತೆ ಗಳಿಸಿದ ಹೆಸರಾಂತ ಕುಟುಂಬದಿಂದಲೇ ಬಂದಿದ್ದರೂ ಹೃತಿಕ್‌ ಆಗೀಗ ಸೋಲು ಅನುಭವಿಸಿದ್ದಾರೆ. ಅವರ ಪಯಣ ಹೂವಿನ ಹಾಸಿಗೆಯಾಗಿರದೆ ಸವಾಲಿನ ದಾರಿಯಾಗಿತ್ತು ಎಂಬುದಕ್ಕೆ ಸಾಕಷ್ಟು ನಿದರ್ಶನಗಳೂ ದೊರೆಯುತ್ತವೆ.

ತನ್ನ ಇಮೇಜ್‌ಗೆ ಕುಂದು ಬರಬಹುದು ಎನ್ನುವ ಕಾರಣಕ್ಕೆ ಅವರೆಂದೂ ಪಾತ್ರಗಳನ್ನು ನಿರಾಕರಿಸಿಲ್ಲ. ಸಿನಿಮಾ ಬದುಕಿನ ಪ್ರಾರಂಭದಿಂದಲೂ ವಿಭಿನ್ನ ಪಾತ್ರವಾಗುತ್ತಾ ನಟನೆಗೇ ಹೆಚ್ಚು ಒತ್ತು ನೀಡಿದರು. ವಿಜ್ಞಾನಕ್ಕೆ ಸಂಬಂಧಿಸಿದ ಸಾಹಸಮಯ ಚಿತ್ರಗಳಲ್ಲಿ ಅಭಿನಯಿಸಿ ಬಾಲಿವುಡ್‌ನ ಸೂಪರ್‌ ಹೀರೊ ಪಟ್ಟವನ್ನೂ ದಕ್ಕಿಸಿಕೊಂಡರು. ಸಿನಿಮಾ ಸೋತಾಗಲೂ ಹಿಂದೆ ಸರಿಯದೆ, ತಾನು ಮಾಡುವ ಕೆಲಸವನ್ನು ನಿಷ್ಠೆಯಿಂದ, ಆತ್ಮವಿಶ್ವಾಸದಿಂದ ಮಾಡುತ್ತಲೇ ಇದ್ದರು. ಸಿನಿಮಾ, ಫ್ಯಾಷನ್‌, ಫಿಟ್‌ನೆಸ್‌ಗಳ ಮೂಲಕ ಅಂತರರಾಷ್ಟ್ರೀಯ ಮಟ್ಟದಲ್ಲಿಯೂ ತಾರಾ ಮೌಲ್ಯ ಗಳಿಸಿಕೊಂಡ ಹೃತಿಕ್‌ ವಿವಿಧ ಬ್ರ್ಯಾಂಡ್‌ಗಳ ನೆಚ್ಚಿನ ರಾಯಭಾರಿ.

ADVERTISEMENT

ಫೋರ್ಬ್ಸ್‌ ಇಂಡಿಯಾ ಪಟ್ಟಿಮಾಡಿದ ಹತ್ತು ಸೆಲೆಬ್ರಿಟಿಗಳ ಪಟ್ಟಿಯಲ್ಲಿ ಹೃತಿಕ್‌ ಹೆಸರು ಗಳಿಸಿಕೊಂಡರು. ವರ್ಷಕ್ಕೆ ₹63.12 ಕೋಟಿ ಸಂಪಾದನೆ ಹೊಂದಿದ್ದ ಹೃತಿಕ್‌ 2016ರ ನಂತರ ₹90.25 ಕೋಟಿಯಷ್ಟು ಸಂಪಾದನೆ ಮಾಡಲಾರಂಭಿಸಿದರು. ಫ್ಯಾಷನ್‌ ಐಕಾನ್‌ ಆಗಿಯೂ ಹೃತಿಕ್‌ ಗುರುತಿಸಿಕೊಂಡಿರುವುದರಿಂದ ಅಂತರ್ಜಾಲದ ಮುಂಚೂಣಿ ಬ್ರ್ಯಾಂಡ್‌ ಆದ ಮಿಂತ್ರಾ.ಕಾಮ್‌ ಹೃತಿಕ್‌ನನ್ನೇ ರಾಯಭಾರಿಯನ್ನಾಗಿಸಿಕೊಂಡಿವೆ. ಹೃತಿಕ್‌ ಹೆಸರಿನಲ್ಲಿ ಎಚ್‌ಆರ್‌ಎಕ್ಸ್‌ ಎನ್ನುವ ಬ್ರ್ಯಾಂಡ್‌ ಕೂಡ ಇದೆ.

ಚಿಕ್ಕಂದಿನಿಂದಲೂ ತಮಗೆ ಎದುರಾದ ಸಮಸ್ಯೆಗಳನ್ನು ನಿಭಾಯಿಸಿ ಸೈ ಎನಿಸಿಕೊಂಡವರು ಹೃತಿಕ್‌. ಸಿನಿಮಾ ಕ್ಷೇತ್ರಕ್ಕೆ ಬಂದ ಮೇಲೆಯೂ ಆರೋಗ್ಯ ಸಮಸ್ಯೆಗಳನ್ನು ಎದುರಿಸಿದ್ದಾರೆ. ಆದರೆ ಈ ಎಲ್ಲಾ ಸಮಸ್ಯೆಗಳಿಂದಾಗಿ ಅವರು ಎಂದಿಗೂ ಸಿನಿಮಾ ವಿಷಯದಲ್ಲಿ ರಾಜಿ ಆಗಿಲ್ಲ ಎಂಬುದು ಅವರ ಹೆಗ್ಗಳಿಕೆ.

ಫಿಟ್‌ನೆಸ್‌ ನಡೆ
ಅಂಗಸೌಷ್ಟವದ ವಿಷಯದಲ್ಲಿ ಹೃತಿಕ್‌ ಕಠಿಣ ಪರಿಶ್ರಮಿ. ಏಷ್ಯಾದ ಸೆಕ್ಸಿಯೆಸ್ಟ್‌ ಮ್ಯಾನ್‌ ಎನ್ನುವ ಹೆಗ್ಗಳಿಕೆಯೂ ಅವರ ಹೆಗಲ ಮೇಲಿದೆ. ಪ್ರಪಂಚದ ಸುಂದರ ಜೀವಂತ ಪುರುಷರಲ್ಲಿ ಹೃತಿಕ್‌ಗೆ ಮೂರನೇ ಸ್ಥಾನವಿದೆ. ತಮ್ಮ ದೇಹಸಿರಿಯ ಗುಟ್ಟನ್ನು ಅವರು ಹುಟ್ಟುಹಬ್ಬದ ನೆಪದಲ್ಲಿ ಹಂಚಿಕೊಂಡಿದ್ದಾರೆ.

ವ್ಯಾಯಾಮ ಒತ್ತಡಕ್ಕೆ ಮದ್ದು ಎನ್ನುವ ಅವರು, ದೈಹಿಕ ಸಾಮರ್ಥ್ಯ, ದೇಹದ ಸುಲಭ ಬಾಗುವಿಕೆ, ಸಹನೆಯನ್ನು ಬೆಳೆಸುವಂಥ ವ್ಯಾಯಾಮದಲ್ಲಿ ಹೆಚ್ಚು ತೊಡಗಿಕೊಳ್ಳುತ್ತಾರೆ. 20ರಿಂದ 30 ನಿಮಿಷ ಕಾರ್ಡಿಯೊ ಮಾಡುತ್ತಾರೆ. ದೇಹದ ಎಲ್ಲಾ ಭಾಗಗಳಿಗೆ ವ್ಯಾಯಾಮ ನೀಡುವ ಸರ್ಕ್ಯೂಟ್‌ ವ್ಯಾಯಾಮಕ್ಕೂ ಆದ್ಯತೆ ನೀಡುತ್ತಾರೆ. ದೇಹಕ್ಕೆ ಅಥ್ಲೀಟ್‌ ನೋಟ ನೀಡುವ ವ್ಯಾಯಾಮವನ್ನು ಹೆಚ್ಚಾಗಿ ಮಾಡುತ್ತಾರೆ. ಊಟ ತಿಂಡಿಯ ವಿಷಯದಲ್ಲಿಯೂ ಅವರು ಕಟ್ಟುನಿಟ್ಟು. ಚಾಕೋಲೆಟ್‌, ಬೇಕಿಂಗ್‌ ಉತ್ಪನ್ನಗಳು, ಕುಕೀಸ್‌ಗಳು ತುಂಬಾ ಇಷ್ಟವಾದರೂ ಅವುಗಳಿಂದ ದೂರವಿರುತ್ತಾರೆ. ಪ್ರೊಟೀನ್‌, ಕಾರ್ಬೊಹೈಡ್ರೇಟ್‌ ಅಂಶ ಹೆಚ್ಚಿರುವ ಆಹಾರ ಅವರ ಮೆನುವಿನಲ್ಲಿ ಸ್ಥಾನ ಪಡೆದಿದೆ. ಒಂದೇ ಸಲ ಹೆಚ್ಚು ತಿನ್ನುವುದಕ್ಕಿಂತ ಬಿಟ್ಟು ಬಿಟ್ಟು ಆಹಾರ ಸೇವನೆಯನ್ನು ಅವರು ಅನುಕರಿಸುತ್ತಾರೆ. ಇದು ಜೀರ್ಣಕ್ರಿಯೆಯನ್ನು ವೃದ್ಧಿಸುತ್ತದೆ. ಕಣ್ತುಂಬ ನಿದ್ದೆ ದೇಹದ ಫಿಟ್‌ನೆಸ್‌ಗೆ ಅತ್ಯುತ್ತಮ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.