ADVERTISEMENT

50ನೇ ಶತಕಕ್ಕೆ ವಿಡಿಯೊ ಹಾಡು

​ಪ್ರಜಾವಾಣಿ ವಾರ್ತೆ
Published 26 ಜನವರಿ 2018, 19:30 IST
Last Updated 26 ಜನವರಿ 2018, 19:30 IST
ವಶಿಷ್ಠ ಮತ್ತು ಜಾಕ್ಸನ್‌
ವಶಿಷ್ಠ ಮತ್ತು ಜಾಕ್ಸನ್‌   

ಕ್ರಿಕೆಟ್‌, ಸಿನಿಮಾ ಈ ಎರಡೂ ಕ್ಷೇತ್ರದ ಸಾಧಕರಿಗೆ ಅಭಿಮಾನಿಗಳು ಅಪಾರ. ತಮ್ಮ ನೆಚ್ಚಿನ ನಾಯಕರನ್ನು ದೇವರೆಂದು ಆರಾಧಿಸುವವರಿದ್ದಾರೆ. ಅವರ ಹೆಸರನ್ನು ಮೈಮೇಲೆ ಹಚ್ಚೆ ಹಾಕಿಸಿಕೊಂಡವರಿದ್ದಾರೆ. ಅವರ ಹೆಸರಿನಲ್ಲಿ ಸಮಾಜಸೇವೆ ಮಾಡುವವರಿದ್ದಾರೆ. ಅಂತಹವರ ಸಾಲಿನಲ್ಲಿ ಕೇರಳದ ಕೊಯಿಕ್ಕೋಡಿನ ವಸಿಷ್ಠ ಕೂಡಾ ಒಬ್ಬರು.

ಕೊಯಿಕ್ಕೋಡಿನ ಮಲಬಾರ್‌ ಕ್ರಿಶ್ಚಿಯನ್‌ ಕಾಲೇಜಿನಲ್ಲಿ ಇತಿಹಾಸ ಪ್ರಾಧ್ಯಾಪಕರಾಗಿರುವ ವಸಿಷ್ಠ, ಸಚಿನ್‌ ತೆಂಡೂಲ್ಕರ್‌ ಹಾಗೂ ವಿರಾಟ್‌ ಕೊಹ್ಲಿ ಅಭಿಮಾನಿ. 2017ರ ನವೆಂಬರ್‌ನಲ್ಲಿ ವಿರಾಟ್‌ ಕೊಹ್ಲಿ ಅಂತರರಾಷ್ಟ್ರೀಯ ಕ್ರಿಕೆಟ್‌ನಲ್ಲಿ 50ನೇ ಶತಕ ಪೂರೈಸಿದ ಸಂಭ್ರಮವನ್ನು ವಿಶೇಷವಾಗಿ ಆಚರಿಸಿಕೊಂಡಿದ್ದಾರೆ. ವಿರಾಟ್‌ಗೆ ಹಾಡೊಂದನ್ನು ಅರ್ಪಿಸಿ, ಆ ಮೂಲಕ ತಮ್ಮ ಪ್ರೀತಿಯನ್ನು ತೋರಿಸಿದ್ದಾರೆ.

‘ಕಿಂಗ್‌ ಕೊಹ್ಲಿ’ ವಸಿಷ್ಠ ಅವರು ವಿರಾಟ್‌ ಕುರಿತಾಗಿ ಮಾಡಿರುವ ವಿಡಿಯೊ ಆಲ್ಬಂ. ಇದಕ್ಕೆ ಹಾಡನ್ನು ಸ್ವತಃ ವಸಿಷ್ಠ ಅವರೇ ಬರೆದಿದ್ದಾರೆ. ಇವರ ಈ ಕೆಲಸಕ್ಕೆ ಬೆಂಬಲ ನೀಡಿದವರು ಅವರ ಶಿಷ್ಯ ಜಾಕ್ಸನ್‌. ಜಾಕ್ಸನ್‌ ಅವರಿಗೂ ಕ್ರಿಕೆಟ್‌ ಕುರಿತು ಹುಚ್ಚು ಪ್ರೀತಿ. ಸಂಗೀತಾಭ್ಯಾಸದಲ್ಲಿ ತೊಡಗಿಸಿಕೊಂಡಿರುವ ಜಾಕ್ಸನ್‌ ಈ ಆಲ್ಬಂ ಹಾಡಿಗೆ ಸಂಗೀತ ನಿರ್ದೇಶನ ಮಾಡಿ, ಹಾಡನ್ನು ಹಾಡಿದ್ದಾರೆ. ಇಂಗ್ಲಿಷ್‌ ಸಾಹಿತ್ಯವಿರುವ ಮೂರು ನಿಮಿಷದ ‘ಕಿಂಗ್‌ ಕೊಹ್ಲಿ’ ಹಾಡು ರಾಕ್‌ ಮಾದರಿಯಲ್ಲಿದೆ.

ADVERTISEMENT

ಹಾಡಿನಲ್ಲಿ ಕೊಹ್ಲಿಯನ್ನು ಸಮುದ್ರದ ಬೀಸುವ ಬಿರುಸಾದ ಅಲೆ, ಗಗನದಲ್ಲಿ ಹೊಳೆಯುವ ನಕ್ಷತ್ರಗಳಿಗೆ ಹೋಲಿಸಿ, ಕ್ರಿಕೆಟ್‌ ಲೋಕದಲ್ಲಿ ನೀನೇ ರಾಜ ಎಂದು ಬಣ್ಣಿಸಿದ್ದಾರೆ. ಏಕದಿನ ಪಂದ್ಯ, ಐಪಿಎಲ್‌ಗಳಲ್ಲಿ ನೀನು ರಾಜ, ನಿನ್ನ ಮಾತು ಸರಳ, ಮೃದು. ನಿನ್ನ ಈ ಶ್ರೇಷ್ಠತೆಗಳೇ ನಿನ್ನನ್ನು ರಾಜನನ್ನಾಗಿಸಿವೆ ಎಂದು ಹೊಗಳಲಾಗಿದೆ.

‘ವಿರಾಟ್‌ ಕೊಹ್ಲಿ ಯುವಕರಿಗೆ ಸ್ಫೂರ್ತಿ. ಸಣ್ಣ ವಯಸ್ಸಿನಲ್ಲೇ ಅವರ ಸಾಧನೆ ಹೆಚ್ಚು. ವೈಯಕ್ತಿಕವಾಗಿಯೂ ಎಲ್ಲರಿಗೂ ಇಷ್ಟವಾಗುವ ಸ್ವಭಾವ ಅವರದು. ಹೀಗಾಗಿ ಅವರೆಂದರೆ ಗೌರವ ಜಾಸ್ತಿ. ಹೀಗಾಗಿ ಅವರ 50ನೇ ಶತಕಕ್ಕೆ ಈ ಹಾಡನ್ನು ಅರ್ಪಿಸಿದ್ದೇವೆ’ ಎಂದು ಹೇಳುತ್ತಾರೆ ವಸಿಷ್ಠ. ಈ ಹಾಡಿನ ಸಂಯೋಜನೆಗೆ ವಸಿಷ್ಠ ಹಾಗೂ ಜಾಕ್ಸನ್‌ ಅವರಿಗೆ 14 ದಿನಗಳು ಬೇಕಾದುವಂತೆ. ಸಾಧ್ಯವಾದರೆ ಈ ಹಾಡನ್ನು ವಿರಾಟ್‌ ಕೊಹ್ಲಿಗೆ ತೋರಿಸುವ ಬಯಕೆ ಅವರಿಬ್ಬರದು.  

ಇದು ಮೊದಲೇನಲ್ಲ. ವಸಿಷ್ಠ ಅವರಿಗೆ ಕ್ರಿಕೆಟ್‌ ಮೇಲೆ ಎಲ್ಲಿಲ್ಲದ ಆಸಕ್ತಿ. ತೆಂಡೂಲ್ಕರ್‌ ಮೇಲೆಯೂ ಅಪರಿಮಿತ ಪ್ರೇಮ. ತಾವು ಕೆಲಸ ಮಾಡುತ್ತಿರುವ ಕಾಲೇಜಿನಲ್ಲಿ ‘ಸಚಿನ್‌ ಗ್ಯಾಲರಿ’ ಎಂಬ ಗ್ರಂಥಾಲಯವನ್ನೂ ಆರಂಭಿಸಿದ್ದಾರೆ! ಇದರಲ್ಲಿ ಸಚಿನ್‌ಗೆ ಸಂಬಂಧಿಸಿದ ಸಮಗ್ರ ಮಾಹಿತಿಗಳಿವೆ. ಸಚಿನ್‌ ಜೀವನ, ಸಾಧನೆ ಕುರಿತು ಇಂಗ್ಲಿಷ್‌, ಹಿಂದಿ, ಪಂಜಾಬಿ, ಕನ್ನಡ, ಒರಿಯಾ ಹೀಗೆ ವಿವಿಧ ಭಾಷೆಗಳಲ್ಲಿ ಪ್ರಕಟಗೊಂಡ 60 ಕೃತಿಗಳನ್ನು ಸಂಗ್ರಹಿಸಿಟ್ಟಿದ್ದಾರೆ. ಸಚಿನ್‌ ತೆಂಡೂಲ್ಕರ್‌ ಶತಕ ಬಾರಿಸಿದ ಪಂದ್ಯಗಳ ಪೋಸ್ಟರ್‌ಗಳನ್ನು ಸಂಗ್ರಹಿಸಿ, ಗ್ರಂಥಾಲಯದಲ್ಲಿ ಹಾಕಬೇಕು ಎಂಬ ಉದ್ದೇಶ ಅವರದು. ಕ್ರಿಕೆಟ್‌ ಆಟಗಾರರ ಕುರಿತಾದ ಕವನಗಳ ಸಂಗ್ರಹವೂ ವಸಿಷ್ಠ ಅವರ ಹವ್ಯಾಸಗಳಲ್ಲೊಂದು.

ವಿಡಿಯೊ ನೋಡಲು ಬಿಟ್ಲಿ ಲಿಂಕ್‌: bit.ly/2mWXXz2

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.