ADVERTISEMENT

ಆಹಾರದಲ್ಲಿ ಕೂದಲ ಆರೈಕೆ

​ಪ್ರಜಾವಾಣಿ ವಾರ್ತೆ
Published 28 ಜನವರಿ 2018, 19:30 IST
Last Updated 28 ಜನವರಿ 2018, 19:30 IST
ತ್ವಚೆ ಹಾಗೂ ಕೂದಲ ಆರೈಕೆ
ತ್ವಚೆ ಹಾಗೂ ಕೂದಲ ಆರೈಕೆ   

ಹಣ್ಣು ತರಕಾರಿಗಳು ಹೊಟ್ಟೆ ತುಂಬಲಷ್ಟೇ ಅಲ್ಲ ದೇಹದ ಆರೋಗ್ಯಕ್ಕೂ ಅತ್ಯಾವಶ್ಯಕ. ಅಂತೆಯೇ ಕೆಲ ಹಣ್ಣು ತರಕಾರಿಗಳು ಕೂದಲು ಹಾಗೂ ತ್ವಚೆಯ ಆರೈಕೆಯಲ್ಲಿಯೂ ಮಹತ್ವದ ಪಾತ್ರ ವಹಿಸುತ್ತವೆ.

* ಕೂದಲಿನ ಆರೋಗ್ಯದ ವಿಷಯದಲ್ಲಿ ತುಳಸಿ ಬಳಕೆ ಅತ್ಯುತ್ತಮ. ತುಳಸಿ ಎಲೆ ಅಥವಾ ತುಳಸಿಯ ಯಾವುದೇ ಉತ್ಪನ್ನದ ಬಳಕೆಯಿಂದ ಕೂದಲಿನ ಕೋಶಗಳು ಪುನರುಜ್ಜೀವನಗೊಳ್ಳುತ್ತವೆ. ತಲೆ ಚಿಪ್ಪು ತಂಪಾಗಿರುವಂತೆ ತುಳಸಿ ನೋಡಿಕೊಳ್ಳುತ್ತದೆ. ರಕ್ತ ಸಂಚಾರ ಚೆನ್ನಾಗಿ ಆಗುತ್ತದೆ.

* ಕಬ್ಬಿನ ರಸದಲ್ಲಿ ಖನಿಜಾಂಶಗಳು ಹೇರಳವಾಗಿರುತ್ತವೆ. ಇದರಿಂದ ಕೂದಲು ಸೊಂಪಾಗಿ ಬೆಳೆಯಲು ನೆರವಾಗುತ್ತದೆ. ಇದರಲ್ಲಿ ಬಿ 12, ವಿಟಮಿನ್‌ ಸಿ, ವಿಟಮಿನ್‌ ಎ, ಸತು, ಕ್ಯಾಲ್ಶಿಯಂ ಮುಂತಾದ ಅಂಶಗಳು ಹೇರಳವಾಗಿರುವುದರಿಂದ ಎನರ್ಜಿ ಡ್ರಿಂಕ್‌ ಆಗಿಯೂ ಬಳಸುವುದು ರೂಢಿ. ಕಬ್ಬಿನಲ್ಲಿರುವ ಈ ಎಲ್ಲಾ ಅಂಶಗಳು ಕೂದಲು ಚೆನ್ನಾಗಿ ಬೆಳೆಯುವಂತೆ ಸಹಕರಿಸುವುದಲ್ಲದೆ ಕೂದಲಿಗೆ ಹೊಳಪನ್ನೂ ತಂದುಕೊಡುತ್ತವೆ.

ADVERTISEMENT

* ಸೇಬುಹಣ್ಣಿನಲ್ಲಿ ಪೈರಸ್‌ ಮಾಲಸ್‌ (pyrus malus) ಎನ್ನುವ ನಾರಿನಂಶ ಹೇರಳವಾಗಿರುತ್ತದೆ. ಈ ಅಂಶ ಕೂದಲಿನಲ್ಲಿ ಪಿಎಚ್‌ (ಪೊಟೆನ್ಶಿಯಲ್‌ ಆಫ್‌ ಹೈಡ್ರೋಜನ್‌) ಪ್ರಮಾಣವನ್ನು ನಿಯಂತ್ರಿಸುತ್ತದೆ. ತಲೆಯ ಚಿಪ್ಪನ್ನು ಸ್ವಚ್ಛವಾಗಿಡುತ್ತದೆ. ಇದರಿಂದ ತಲೆ ಹೊಟ್ಟಿನ ಸಮಸ್ಯೆ ಇರುವುದಿಲ್ಲ.

* ಆಲಿವ್‌ ಎಣ್ಣೆ ಇರುವ ಉತ್ಪನ್ನಗಳನ್ನು ಹೆಚ್ಚೆಚ್ಚು ಬಳಸಿ. ಆಲಿವ್‌ ಎಣ್ಣೆ ಹೊಟ್ಟನ್ನು ಉತ್ಪಾದಿಸುವ ಪದರಗಳನ್ನು ಕಡಿಮೆಗೊಳಿಸಿ ಕೂದಲಿನಲ್ಲಿ ತೇವಾಂಶ ಇರುವಂತೆ ನೋಡಿಕೊಳ್ಳುತ್ತದೆ.

* ಅವಕಾಡೊ ಹಣ್ಣನ್ನು ಕೂಡ ಕೂದಲಿನ ಆರೋಗ್ಯವನ್ನು ಕಾಪಾಡುತ್ತದೆ. ಎವಕಾಡೊವನ್ನು ಕೂದಲಿಗೆ ಮಾಸ್ಕ್‌ನಂತೆ ಬಳಸಿದರೆ ಕೂದಲಿಗೆ ಪೋಷಣೆ ಸಿಗುವುದರ ಜೊತೆಗೆ ಕೂದಲು ಸದೃಢವಾಗುತ್ತದೆ.

* ದ್ರಾಕ್ಷಿ ಹಣ್ಣಿನಲ್ಲಿ ನಾರಿನಂಶ ಹೆಚ್ಚಿದ್ದು ಕ್ಯಾಲರಿ ಕಡಿಮೆ ಇರುತ್ತವೆ. ಇದರಲ್ಲಿರುವ ವಿಟಮಿನ್‌ ಸಿ ಹಾಗೂ ಆ್ಯಂಟಿ ಆಕ್ಸಿಡೆಂಟ್‌ ಅಂಶಗಳು ತ್ವಚೆಯ ಆರೋಗ್ಯವನ್ನು ಕಾಪಾಡುತ್ತವೆ. ದೇಹದಲ್ಲಿ ಕೊಲಾಜಿನ್‌ ಉತ್ಪತ್ತಿಯನ್ನು ನಿಯಂತ್ರಿಸುವುದರಿಂದ ತ್ವಚೆಯಲ್ಲಿ ಮೃದುತ್ವ, ಕಾಂತಿಯನ್ನು ಉಳಿಸುತ್ತದೆ. ಇದರಲ್ಲಿರುವ ಆ್ಯಂಟಿ ಆಕ್ಸಿಡೆಂಟ್‌ ಅಂಶಗಳು ಹಾನಿಗೊಳಗಾದ ಚರ್ಮಕ್ಕೆ ಜೀವತುಂಬುತ್ತವೆ. ದ್ರಾಕ್ಷಿಯಲ್ಲಿರುವ ಪೊಟಾಶಿಯಂ ಅಂಶ ತ್ವಚೆಯ ಮೇಲಿರುವ ನೆರಿಗೆಯನ್ನು (wrinkle) ಕಡಿಮೆ ಮಾಡುತ್ತದೆ. ನೇರಳೆ ಕಿರಣಗಳಿಂದ ರಕ್ಷಣೆ ನೀಡುತ್ತವೆ.

*ಕಿವಿಹಣ್ಣು ಕೂಡ ತ್ವಚೆ ಹಾಗೂ ಕೂದಲಿನ ರಕ್ಷಣೆಗೆ ಅತ್ಯುತ್ತಮ. ಪೌಷ್ಟಿಕಾಂಶ ಹೇರಳವಾಗಿದೆ. ಆ್ಯಂಟಿ ಆಕ್ಸಿಡೆಂಟ್‌, ವಿಟಮಿನ್‌ ಸಿ ಹಾಗೂ ಇ, ಪಾಲಿಫಿನಲ್‌ ಅಂಶಗಳು ಹೇರಳವಾಗಿರುತ್ತವೆ. ಒತ್ತಡ ಉಂಟಾಗದಂತೆ ತಡೆಯುವ ಶಕ್ತಿಯೂ ಇದಕ್ಕಿದೆ. ಇದರಲ್ಲಿರುವ ಪೋಷಕಾಂಶಗಳು ತ್ವಚೆ ಹಾಗೂ ಕೂದಲು ಕಾಂತಿಯುತವಾಗಿರುವಂತೆ ನೋಡಿಕೊಳ್ಳುತ್ತವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.