ADVERTISEMENT

ವರ್ಷದ ಚೆಲುವೆ ನೇರಳೆ ಬಣ್ಣ

​ಪ್ರಜಾವಾಣಿ ವಾರ್ತೆ
Published 29 ಜನವರಿ 2018, 19:30 IST
Last Updated 29 ಜನವರಿ 2018, 19:30 IST
ವರ್ಷದ ಚೆಲುವೆ ನೇರಳೆ ಬಣ್ಣ
ವರ್ಷದ ಚೆಲುವೆ ನೇರಳೆ ಬಣ್ಣ   

ಕಣ್ಣಿಗೆ ಸದಾ ಮುದ ನೀಡುವ ಬಣ್ಣ ನೇರಳೆ. ಹತ್ತಾರು ಹೂವುಗಳ ನಡುವೆ ಇರುವ ನೇರಳೆ ಬಣ್ಣದ ಹೂವು ಕೂಡ ಚೆಲುವಿನಿಂದ ಕಂಗೊಳಿಸುತ್ತದೆ. ತುಸು ಗಾಢ ಬಣ್ಣ ಆಗಿರುವುದರಿಂದ ಈ ಬಣ್ಣದ ದಿರಿಸು ತೊಡಲು ಸ್ವಲ್ಪ ಯೋಚಿಸುವವರೇ ಜಾಸ್ತಿ. ಆದರೆ ಸಾಂಪ್ರದಾಯಿಕ ಅದರಲ್ಲೂ ಸೀರೆ ತೊಡುವವರು ನೇರಳೆ ಬಣ್ಣಕ್ಕೆ ಯಾವಾಗಲೂ ಆದ್ಯತೆ ನೀಡುತ್ತಾರೆ. ಸಿನಿಮಾಗಳಲ್ಲಿಯೂ ಈ ಬಣ್ಣ ಸಾಕಷ್ಟು ಮಿಂಚಿದೆ.

ಅಂದಹಾಗೆ ಈ ವರ್ಷ ನೀವು ಮುಜುಗರವಿಲ್ಲದೆ ನೇರಳೆ ಬಣ್ಣದ ವಿವಿಧ ನಮೂನೆಯ ಉಡುಗೆ ತೊಟ್ಟು ಖುಷಿಪಡಬಹುದು. ಯಾಕೆಂದರೆ ವರ್ಷದ ಬಣ್ಣ ಯಾವುದು ಎಂದು ನಿರ್ಧರಿಸುವ ಪೆಂಟನ್‌ ಕಂಪನಿ ಈ ವರ್ಷದ ಬಣ್ಣವಾಗಿ ಆರಿಸಿರುವುದು ನೇರಳೆ ಬಣ್ಣವನ್ನೇ.

ಬಣ್ಣವೇ ವಿಶೇಷ ಎಂದಮೇಲೆ, ನೇರಳೆ ಬಣ್ಣದ ದಿರಿಸು ತೊಟ್ಟವರು ವಿಶೇಷವಾಗಿ ಕಾಣಿಸಲೇಬೇಕಲ್ಲ. ಸಾಂಪ್ರದಾಯಿಕ ನೋಟವೇ ಇರಲಿ, ಪಾಶ್ಚಾತ್ಯ ಶೈಲಿಯ ಉಡುಗೆಯೇ ಆಗಲಿ ಧರಿಸಿದವರ ಚೆಲುವನ್ನು ಈ ಬಣ್ಣ ದುಪ್ಪಟ್ಟಾಗಿಸುತ್ತದೆ. ಕಪ್ಪು, ಕೆಂಪು ಹಾಗೂ ಬಿಳಿ ಬಣ್ಣಕ್ಕೆ ಫ್ಯಾಷನ್‌ ಲೋಕದಲ್ಲಿ ಎಷ್ಟು ಪ್ರಾಮುಖ್ಯತೆ ಇದೆಯೋ ಅಷ್ಟೇ ಪ್ರಾಮುಖ್ಯತೆಯನ್ನು ನೇರಳೆ ಬಣ್ಣವೂ ತಂದುಕೊಡಲಿದೆ ಎನ್ನುವುದು ಫ್ಯಾಷನ್‌ ತಜ್ಞರ ಅಭಿಪ್ರಾಯ.

ADVERTISEMENT

ನೇರಳೆ ಎಂದರೆ ಗಾಢ ಬಣ್ಣ, ಎಲ್ಲರಿಗೂ ಒಪ್ಪುವುದಿಲ್ಲ ಎಂದು ಚಿಂತಿಸಬೇಕಿಲ್ಲ. ನೇರಳೆ ಬಣ್ಣದ ಬೇರೆ ಬೇರೆ ಶೇಡ್‌ಗಳಲ್ಲಿಯೂ ದಿರಿಸು ಲಭ್ಯವಿದೆ. ನಿಮ್ಮ ಮೈಬಣ್ಣಕ್ಕೆ ಸರಿಹೊಂದುವ ಶೇಡ್‌, ದೇಹಾಕಾರಕ್ಕೆ ಹೊಂದುವ ವಿನ್ಯಾಸಗಳು ಮಾರುಕಟ್ಟೆಯಲ್ಲಿ ಬೇಕಾದಷ್ಟಿವೆ.

ಸಂಪ್ರದಾಯದ ಬಗೆಗೆ ವಿಶೇಷ ಒಲವಿರುವವರು ನೀವಾದರೆ ಸೀರೆ, ಚೂಡಿದಾರ, ಅನಾರ್ಕಲಿಗಳ ಮೊರೆ ಹೋಗಬಹುದು. ಪಾಶ್ಚಾತ್ಯ ಉಡುಗೆ ತೊಡುಗೆಗಳ ವ್ಯಾಮೋಹಿ ಆಗಿದ್ದಲ್ಲಿ ಟೀಶರ್ಟ್‌, ಶಾರ್ಟ್‌ ಟಾಪ್‌ಗಳು, ಗೌನ್‌ಗಳು, ಪಲಾಜೊಗಳು, ಸ್ಕರ್ಟ್‌ ಹೀಗೆ ಸಾಕಷ್ಟು ಆಯ್ಕೆಗಳಿವೆ. ಅವುಗಳಿಗೆ ಹೊಂದುವಂತೆ ಕೇಶವಿನ್ಯಾಸ, ಮೇಕಪ್‌ ಜೊತೆಗೆ ಆಭರಣಗಳನ್ನು ಆಯ್ದುಕೊಂಡಿರಿ ಎಂದಾದರೆ ನೆರೆದವರ ಕಣ್ಣು ನಿಮ್ಮ ಮೇಲೆಯೇ ಬೀಳುವುದರಲ್ಲಿ ಸಂಶಯವೇ ಇಲ್ಲ.

ವರ್ಷದ ಬಣ್ಣ ಎಂದೇ ಆಯ್ಕೆಯಾಗಿರುವ ನೇರಳೆ ಬಣ್ಣವನ್ನು ಯಾವೆಲ್ಲಾ ರೀತಿಯಲ್ಲಿ ತೊಡಬಹುದು, ಹೇಗೆಲ್ಲಾ ಸಂಯೋಜನೆ ಮಾಡಿಕೊಂಡು ಚೆಲುವಾಗಬಹುದು ಎಂಬುದರ ಬಗೆಗೆ ಕೆಲವು ವಿನ್ಯಾಸಕರು ನೀಡಿರುವ ಟಿಪ್ಸ್‌ ಇಲ್ಲಿದೆ.

* ನೆರಿಗೆಯಂತಿರುವ ನೇರಳೆ ಬಣ್ಣದ ಉದ್ದದ ಸ್ಕರ್ಟ್‌ಗೆ ಬಂಗಾರದ ಬಣ್ಣದ ರವಿಕೆ ತೊಡಬಹುದು. ಅಥವಾ ಬಂಗಾರದ ಬಣ್ಣದ ಶಾರ್ಟ್‌ ಟಾಪ್‌ ಅಥವಾ ಟೀಶರ್ಟ್‌ ತೊಟ್ಟರೆ ಚೆನ್ನಾಗಿ ಒಪ್ಪುತ್ತದೆ. ಜೆಮ್‌ಸ್ಟೋನ್‌ ಇರುವ ಪೆಂಡೆಂಟ್‌ ಅಥವಾ ಬೆಳ್ಳಿ ಬಣ್ಣದ ಕಾಲರ್‌ ಕ್ಲಿಪ್‌ಗಳಿಂದಲೂ ಅಲಂಕರಿಸಿಕೊಳ್ಳಬಹುದು. ಪಲಾಜೊ ಧರಿಸಿಯೂ ಈ ಶೈಲಿಯನ್ನು ಪ್ರಯತ್ನಿಸಬಹುದು. ನೇರಳೆ ಬಣ್ಣದೊಂದಿಗೆ ಬಿಳಿ ಬಣ್ಣವೂ ಚೆನ್ನಾಗಿ ಒಪ್ಪುತ್ತದೆ.

* ನೇರಳೆ ಬಣ್ಣದ ಜಂಪ್‌ಸೂಟ್‌ಗಳು ಕೂಡ ಮೋಡಿ ಮಾಡಬಲ್ಲವು. ತೆಳುವಾಗಿದ್ದು, ಫಿಟ್‌ನೆಸ್‌ ಕಾಯ್ದುಕೊಂಡವರಾಗಿದ್ದರೆ ಮರು ಯೋಚಿಸದೆ ಜಂಪ್‌ಸೂಟ್‌ ಧರಿಸಿ. ನೇರಳ ಬಣ್ಣದ ಮೇಲೆ ಕಪ್ಪು, ಬಿಳಿ, ಕಂದು ಹಾಗೂ ನೀಲಿ ಬಣ್ಣದ ಸ್ಟ್ರೈಪ್‌ ಇರುವ ಜಂಪ್‌ಸೂಟ್‌ ಉತ್ತಮ ಆಯ್ಕೆಯಾದೀತು. ಇವುಗಳಿಗೆ ಹೊಳೆಯುವ ಉದ್ದದ ಕಿವಿಯೋಲೆ ಹಾಗೂ ಆಕ್ಸಿಡೈಸ್ಡ್‌ ಶೈಲಿಯ ದೊಡ್ಡದಾದ ಮೂಗುತಿ ಧರಿಸಬಹುದು. ಅಂದಹಾಗೆ ನೇರಳೆ ಬಣ್ಣ ಒಂದೇ ಇರುವ ಜಂಪ್‌ಸೂಟ್‌ಗೆ ಬಿಳಿ ಅಥವಾ ಕಪ್ಪು ಬಣ್ಣದ ಬೆಲ್ಟ್‌ ಇದ್ದರೆ ಒಳ್ಳೆಯ ನೋಟ ನೀಡುತ್ತದೆ.

* ಬ್ಯಾಗ್‌ನಲ್ಲಷ್ಟೇ ಅಲ್ಲ ದಿರಿಸಿನಲ್ಲಿಯೂ ಫ್ರಿಂಜ್‌ ವಿನ್ಯಾಸ ಜನಪ್ರಿಯ. ದಿರಿಸಿನ ತುಂಬ ಇಲ್ಲವೇ ಅಂಚಿನಲ್ಲಿ ಫ್ರಿಂಜ್‌ ವಿನ್ಯಾಸ ಮಾಡುವುದು ಹೆಚ್ಚಾಗುತ್ತಿದೆ. ಸರಳ ಟೀಶರ್ಟ್‌ಗೆ ಫ್ರಿಂಜ್‌ ವಿನ್ಯಾಸದ ಶಾರ್ಟ್‌ ಸ್ಕರ್ಟ್‌ಗಳು ಚೆನ್ನಾಗಿ ಕಾಣುತ್ತವೆ. ಇಂಥ ದಿರಿಸು ಹಾಕಿದಾಗ ಬಂಗಾರ ಅಥವಾ ಬೆಳ್ಳಿ ಬಣ್ಣದ ಆಭರಣಗಳಿಗೆ ದಾರದ ಮೆರುಗು ಇರುವ ಕಿವಿಯೋಲೆ, ಸರವನ್ನು ಧರಿಸಿ.

* ವೆಲ್ವೆಟ್‌ ಬಟ್ಟೆಯಲ್ಲಿ ನೇರಳೆ ಬಣ್ಣ ಎದ್ದು ಕಾಣುತ್ತದೆ. ಮದುವೆ ಅಥವಾ ಪಾರ್ಟಿಗಳಲ್ಲಿ ವೆಲ್ವೆಟ್‌ ಬಟ್ಟೆಯಿಂದ ಮಾಡಿದ ಸೂಟ್‌, ಲೆಹೆಂಗಾ, ಗೌನ್‌ಗಳು ಚೆನ್ನಾಗಿ ಕಾಣುತ್ತವೆ. ಅವುಗಳ ಮೇಲೆ ಬಂಗಾರ ಬಣ್ಣದ ಕಸೂತಿ ಕಲೆ ಅಥವಾ ವಿಭಿನ್ನ ಕುಸುರಿ ವಿನ್ಯಾಸ ಮೂಡಿದ್ದರೆ ಇನ್ನೂ ಆಕರ್ಷಕವಾಗಿರುತ್ತದೆ. ಬಂಗಾರದ ಬಣ್ಣದ ಒಡವೆಗಳು ಒ‍ಪ್ಪುತ್ತವೆ.

* ಮೈತುಂಬಾ ನೇರಳೆ ಬಣ್ಣವೇ ಇದ್ದರೆ ಅತಿಯಾಯ್ತು ಎನ್ನುವವರೂ ಇದ್ದಾರೆ. ಅಂಥವರು ತಮ್ಮ ದಿರಿಸಿಗೆ ತಕ್ಕಂತೆ ನೇರಳೆ ಬಣ್ಣದ ಕೇಪ್‌, ಕೋಟ್‌ಗಳನ್ನೂ ಬಳಸಿಕೊಳ್ಳಬಹುದು. ನೇರಳೆ ಬಣ್ಣದ ದಿರಿಸು ತೊಟ್ಟಗೆ ಚಪ್ಪಲಿ ಆಯ್ಕೆಯ ಬಗೆಗೆ ವಿಶೇಷ ಗಮನ ಕೊಡಬೇಕಾಗುತ್ತದೆ. ಎಲ್ಲ ಬಣ್ಣಗಳು ನೇರಳೆ ಬಣ್ಣದೊಂದಿಗೆ ಹೊಂದಿಕೊಳ್ಳುವುದಿಲ್ಲ. ಹೀಗಾಗಿ ಆದಷ್ಟು ಕಪ್ಪು, ಬಿಳಿ, ಆಫ್‌ ವೈಟ್‌ ಬಣ್ಣದ ಚಪ್ಪಲಿಯನ್ನು ಜೋಡಿಸಿಕೊಳ್ಳಿ. ಕೇಶಾಲಂಕಾರದಲ್ಲಿಯೂ ನೇರಳೆ ಬಣ್ಣಕ್ಕೆ ಆದ್ಯತೆ ನೀಡಬಹುದು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.