ADVERTISEMENT

ದುಬಾರಿಯಾಯ್ತು ಲುಂಗಿ!

​ಪ್ರಜಾವಾಣಿ ವಾರ್ತೆ
Published 2 ಫೆಬ್ರುವರಿ 2018, 19:30 IST
Last Updated 2 ಫೆಬ್ರುವರಿ 2018, 19:30 IST
ದುಬಾರಿಯಾಯ್ತು ಲುಂಗಿ!
ದುಬಾರಿಯಾಯ್ತು ಲುಂಗಿ!   

ಜೀನ್ಸ್‌ ಪ್ಯಾಂಟ್‌ ಹಾವಳಿ ಶುರುವಾದ ಮೇಲೆ ಲುಂಗಿಯನ್ನು ಕೇಳುವವರೇ ಇರಲಿಲ್ಲ. ಈಗ ನೋಡಿ ವಿದೇಶದಲ್ಲಿಯೂ ಲುಂಗಿ ಫ್ಯಾಷನ್‌ ಬಂದಿದೆ. ಸ್ಪೇನ್‌ನ ಜನಪ್ರಿಯ ಫ್ಯಾಷನ್‌ ಬ್ರಾಂಡ್‌ ಆಗಿರುವ ಜಾರಾ ಇತ್ತೀಚೆಗೆ ಮಹಿಳೆಯರಿಗಾಗಿ ವಿನೂತನ ಸ್ಕರ್ಟ್‌ ಅನ್ನು ಪರಿಚಯಿಸಿದೆ. ಬೇಸಿಗೆ ಸಂಗ್ರಹವಾಗಿ ಪರಿಚಯಿಸಲಾಗಿರುವ ಈ ದಿರಿಸಿನ ಬೆಲೆ 78 ಡಾಲರ್‌. ಅಂದರೆ ಸರಿ ಸುಮಾರು ₹5,000.

ಚೌಕಾಕಾರದ ವಿನ್ಯಾಸ ಇರುವ ಸ್ಕರ್ಟ್‌ ಮುಂಭಾಗದಲ್ಲಿ ನೆರಿಗೆಯ ವಿನ್ಯಾಸವಿದೆ. ಭಾರತ, ಪಾಕಿಸ್ತಾನ, ಬಾಂಗ್ಲಾದೇಶ, ನೇಪಾಳ, ಮ್ಯಾನ್ಮಾರ್‌, ಥಾಯ್ಲೆಂಡ್‌, ಕಾಂಬೋಡಿಯಾಗಳಲ್ಲಿ ಪುರುಷರು ಲುಂಗಿಯನ್ನು ಹೆಚ್ಚಾಗಿ ಧರಿಸುತ್ತಾರೆ. ದಕ್ಷಿಣ ಭಾರತದ ಕೆಲವೆಡೆಗಳಲ್ಲಿ ಮಹಿಳೆಯರೂ ಲುಂಗಿಯನ್ನು ಬಳಸುತ್ತಾರೆ.

ಜಾರಾ ಪರಿಚಯಿಸಿರುವ ಸ್ಕರ್ಟ್‌ ಕೂಡ ಥೇಟ್‌ ಲುಂಗಿ ವಿನ್ಯಾಸವನ್ನೇ ಹೋಲುತ್ತದೆ. ಈ ದಿರಿಸು ಫ್ಯಾಷನ್‌ ಕಾರಣಕ್ಕಷ್ಟೇ ಅಲ್ಲ ಬೆಲೆಯ ಕಾರಣಕ್ಕಾಗಿಯೂ ಹೆಚ್ಚು ಸುದ್ದಿಯಲ್ಲಿದೆ. ಜೊತೆಗೆ ಸಾಮಾಜಿಕ ಮಾಧ್ಯಮಗಳಲ್ಲಿ ಸಿಕ್ಕಾಪಟ್ಟೆ ಟ್ರೋಲ್‌ ಕೂಡ ಆಗಿದೆ. ಅನೇಕರು ಇದರ ಬೆಲೆಯ ಬಗೆಗೆ ಅಸಮಾಧಾನ ವ್ಯಕ್ತಪಡಿಸಿದರೆ ಇನ್ನೂ ಅನೇಕರು ‘ಇದು ಮಿನಿ ಸ್ಕರ್ಟ್‌ ಅಲ್ಲ. ಲುಂಗಿಯಿಂದಲೇ ಸ್ಫೂರ್ತಿ ಪಡೆದು ವಿನ್ಯಾಸ ತಾಳಿದೆ. ಆದರೆ ಜಾರಾ ಮಾತ್ರ ಎಲ್ಲಿಯೂ ಲುಂಗಿಯ ಹೆಸರನ್ನು ಪ್ರಸ್ತಾಪಿಸಿಲ್ಲ’ ಎಂದೂ ಕಿಡಿಕಾರಿದ್ದಾರೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.