ADVERTISEMENT

ಸ್ನಾನ ಬೆಳಿಗ್ಗೆಯೋ ... ರಾತ್ರಿಯೋ?

​ಪ್ರಜಾವಾಣಿ ವಾರ್ತೆ
Published 9 ಫೆಬ್ರುವರಿ 2018, 19:30 IST
Last Updated 9 ಫೆಬ್ರುವರಿ 2018, 19:30 IST
ಸ್ನಾನ ಬೆಳಿಗ್ಗೆಯೋ ... ರಾತ್ರಿಯೋ?
ಸ್ನಾನ ಬೆಳಿಗ್ಗೆಯೋ ... ರಾತ್ರಿಯೋ?   

‘ಏನಪ್ಪಾ ಇಷ್ಟೊಂದು ಸೆಂಟ್‌ ಹಾಕ್ಕೊಂಡಿದ್ದೀಯಾ ಸ್ನಾನ ಮಾಡಿಲ್ವಾ?’ ಅಂತ ನೀವೂ ಯಾರಿಗಾದರೂ ಕಾಲೆಳೆದಿರಬಹುದು. ನಿಮ್ಮನ್ನೂ ಯಾರಾದರೂ ಕೇಳಿರಬಹುದು ಬಿಡಿ. ಸ್ನಾನ ಮಾಡದಿದ್ದರೇನಾಗುತ್ತದೆ ಎಂಬ ಜಿಜ್ಞಾಸೆ ಏಳುವುದಿದೆ. ವಿಪರೀತ ಚಳಿಯಲ್ಲಿಯೂ ತಣ್ಣೀರು ಸ್ನಾನ ಮಾಡಬೇಕಾದಾಗ ಮತ್ತು ವಾರದ ರಜೆಯಂದು ಬ್ರಹ್ಮಾಂಡದ ಉದಾಸೀನವನ್ನೆಲ್ಲಾ ಆಪೋಶನ ಮಾಡಿಕೊಂಡಂತೆ ವರ್ತಿಸುತ್ತೇವಲ್ಲ ಆಗ, ಸ್ನಾನ ಎಂಬುದು ಕ್ಲೀಷೆಯಂತೆಯೂ, ಜಿಜ್ಞಾಸೆಯಂತೆಯೂ ಕಾಡುತ್ತದೆ.

ಇವೆಲ್ಲ ಇರಲಿ. ಸ್ನಾನ, ಬೆಳಿಗ್ಗೆ ಮಾಡೋದು ಉತ್ತಮವೇ, ರಾತ್ರಿಯೇ ಸೂಕ್ತವೇ? ವಿಜ್ಞಾನಿಗಳು, ವೈದ್ಯರು, ಸೌಂದರ್ಯ ಸಲಹೆಕಾರರು, ಮಾನಸಿಕ ತಜ್ಞರು ಈ ಬಗ್ಗೆ ತಲೆಕೆಡಿಸಿಕೊಂಡಿದ್ದಾರೆ. ಅವರು ಕೊಡುವ ಸಲಹೆಗಳು ಸ್ನಾನ ಮಾಡುವ ಸಮಯದ ಬಗ್ಗೆ ಮತ್ತೊಮ್ಮೆ ನಮ್ಮನ್ನು ಚಿಂತನೆಗೀಡು ಮಾಡುತ್ತವೆ.

‘ರಾತ್ರಿ ಮಲಗುವುದಕ್ಕೂ ಮೊದಲು ಸ್ನಾನ ಮಾಡುವುದೇ ಸೂಕ್ತ’ ಎನ್ನುವುದು ನಿದ್ರೆಯ ಬಗ್ಗೆ ಜಾಗೃತಿ ಮೂಡಿಸುತ್ತಾ ‘ನಿದ್ರೆಯ ರಾಯಭಾರಿ’ ಎಂದೇ ಹೆಸರಾಗಿರುವ ಅಮೆರಿಕದ ನ್ಯಾನ್ಸಿ ರಾತ್‌ಸ್ಟೀನ್‌ ಅವರ ಸಲಹೆ.

ADVERTISEMENT

ಮಲಗುವುದಕ್ಕೂ ಮೊದಲು ಸ್ನಾನ ಮಾಡಿದರೆ, ವಿಶೇಷವಾಗಿ ಶವರ್‌ನಡಿ ಹಾಯಾಗಿ ಸ್ನಾನ ಮಾಡಿದರೆ ತಾಜಾತನ, ಹೊಸತನ ಸಿಗುತ್ತದೆ. ಹಗಲಿನಿಂದ ರಾತ್ರಿಯನ್ನು ಪ್ರತ್ಯೇಕಿಸಿ ‘ಇದು ನಿದ್ದೆ ಮಾಡುವ ಸಮಯ’ ಎಂಬ ಸಂದೇಶವನ್ನು ನಮಗೆ ನಾವೇ ರವಾನಿಸಿಕೊಂಡಂತಾಗುತ್ತದೆ ಎಂಬುದು ನ್ಯಾನ್ಸಿ ಅವರ ವಿಶ್ಲೇಷಣೆ.

‘ನೀವು ದಿನವಿಡೀ ಪಾದರಕ್ಷೆ ಧರಿಸಿಕೊಂಡಿರುತ್ತೀರಾ? ಹಾಗಿದ್ದರೆ ರಾತ್ರಿ ಸ್ನಾನ ಮಾಡುವುದು ಅತ್ಯವಶ್ಯ’ ಎಂದೂ ನ್ಯಾನ್ಸಿ ಹೇಳುತ್ತಾರೆ.

‘ಬೆಳಿಗ್ಗೆ, ಶವರ್‌ನಲ್ಲೋ ಮಗ್‌ನಲ್ಲಿ ನೀರು ಸುರಿದುಕೊಂಡೋ ತಲೆ ಸ್ನಾನ ಮಾಡುವುದರಿಂದ ಇಡೀ ದಿನ ಚೈತನ್ಯದಿಂದ ಕೂಡಿರುತ್ತದೆ, ತಾಜಾತನದ ಅನುಭವ ನಮ್ಮಲ್ಲಿರುತ್ತದೆ. ಅಲ್ಲದೆ, ದಿನವನ್ನು ಹೊಸ ಉಲ್ಲಾಸದೊಂದಿಗೆ ಆರಂಭಿಸಲು ತಲೆ ಸ್ನಾನ ನಾಂದಿಯಾಗುತ್ತದೆ. ಬೆಳಿಗ್ಗೆಯೇ ತಲೆ ಸ್ನಾನ ಮಾಡುವುದರಿಂದ ಚರ್ಮದ ಉರಿ, ನವೆಗೆ ಕಾರಣವಾಗುವ ಕಾರ್ಟಿಸೊಲ್‌ ಎಂಬ ಹಾರ್ಮೋನುಗಳು ನಿಯಂತ್ರಣದಲ್ಲಿರುತ್ತವೆ’ ಎನ್ನುವುದು ಚರ್ಮ ವೈದ್ಯೆ ಅವರ ಅಭಿಪ್ರಾಯ.

‘ನಾವು ನಿದ್ರಿಸುವಾಗ ವಿಶ್ರಾಂತಿ ಪಡೆಯುವ ಹಲವಾರು ಅಂಗಗಳ ಪೈಕಿ ಚರ್ಮವೂ ಸೇರಿದೆ. ಚರ್ಮದಲ್ಲಿನ ಸೂಕ್ಷ್ಮ ಜೀವಕೋಶಗಳು ರಾತ್ರಿಯಿಡೀ ಹಾಯಾಗಿರುವ ಕಾರಣ ಬೆಳಿಗ್ಗೆ ತುಂಬಾ ಬಿಸಿ ನೀರಿನಿಂದ ಸ್ನಾನ ಮಾಡುವುದು ಸೂಕ್ತ ಅಲ್ಲ. ಹಾಗಾಗಿ ಉಗುರು ಬೆಚ್ಚಗಿನ ನೀರು ಚರ್ಮ ಹೊಳೆಯುವಂತೆ ಮಾಡಿದರೆ ಬಿಸಿಯಾದ ನೀರು, ಚರ್ಮ ತನ್ನ ತೇವಾಂಶವನ್ನು ಕಳೆದುಕೊಂಡು ಶುಷ್ಕವಾಗಿಸುತ್ತದೆ. ಹಾಗಾಗಿ ಉಗುರು ಬೆಚ್ಚಗಿನ ನೀರೇ ಸೂಕ್ತ’ ಎನ್ನುತ್ತಾರೆ ಅವರು.

ನಿದ್ದೆಗೂ ರಾತ್ರಿ ಸ್ನಾನಕ್ಕೂ ನೇರ ಸಂಬಂಧವಿದೆ. ಆಹ್ಲಾದಕರ ಸುವಾಸನೆಯ ಸಾಬೂನು ಹಚ್ಚಿ, ಶಾಂಪೂ ಬಳಸಿ ಸ್ನಾನ ಮಾಡಿದಾಗ ದೇಹದ ಕೊಳೆ ಮತ್ತು ಬೆವರು ಮಾತ್ರ ನಿವಾರಣೆಯಾಗುವುದಲ್ಲ. ದೇಹ ಹಗುರವಾದ ಅನುಭವವಾಗುತ್ತದೆ. ನೀರು ತಲೆಯಿಂದ ಕಾಲಿನವರೆಗೆ ಹರಿದು ಬರುತ್ತಿದ್ದರೆ ಮನಸು ಧ್ಯಾನಸ್ಥ ಸ್ಥಿತಿಗೆ ಹೋಗುತ್ತೇವೆ. ಸ್ನಾನವೆಂದರೆ ಎಲ್ಲ ಚಿಂತೆ, ಒತ್ತಡ, ದುಃಖ, ದಣಿವನ್ನು ಮರೆಸುವ ಧ್ಯಾನವೂ ಹೌದು. ದೇಹ ಮತ್ತು ಮನಸ್ಸಿನ ದಣಿವು ನಿವಾರಣೆಯಾದಾಗ ನಿದ್ದೆಯೂ ಚೆನ್ನಾಗಿ ಬರಲೇಬೇಕಲ್ಲವೇ?

ಸ್ನಾನ ಬೆಳಿಗ್ಗೆ ಮಾಡಬೇಕೋ ರಾತ್ರಿಯೋ ಎಂದು ಈಗ ನೀವೇ ನಿರ್ಧರಿಸಿಕೊಳ್ಳಿ...

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.