ADVERTISEMENT

ಅವಳ ದನಿ, ನೆನಪುಗಳ ಗಣಿ

​ಪ್ರಜಾವಾಣಿ ವಾರ್ತೆ
Published 25 ಅಕ್ಟೋಬರ್ 2017, 19:30 IST
Last Updated 25 ಅಕ್ಟೋಬರ್ 2017, 19:30 IST
ಅವಳ ದನಿ, ನೆನಪುಗಳ ಗಣಿ
ಅವಳ ದನಿ, ನೆನಪುಗಳ ಗಣಿ   

-ಡಾ. ಮಹೇಂದ್ರ ಎಸ್ ತೆಲಗರಹಳ್ಳಿ

ಹೀಗೆ ಸುಮಾರು ಹನ್ನೆರಡು ವರುಷಗಳ ಕೆಳಗೆ ಹೈಸ್ಕೂಲು ಓದುವಾಗ ಹಬ್ಬದ ಪ್ರಯುಕ್ತ ಮನೆ ಸ್ವಚ್ಛಗೊಳಿಸುವ ಸಲುವಾಗಿ ಅಟ್ಟವೇರಿದವನು ಇದ್ದಕ್ಕಿದ್ದಂತೆ ಸ್ವಚ್ಛ ಮಾಡುವುದನ್ನು ಬಿಟ್ಟು, ಅಟ್ಟದ ಮೇಲೆ ಚೆಲ್ಲಾಪಿಲ್ಲಿಯಾಗಿ ಬಿದ್ದುಕೊಂಡಿದ್ದ ವಸ್ತುಗಳ ರಾಶಿ ಮೇಲೆ ಕಣ್ಣಾಡಿಸತೊಡಗಿದೆ. ಆ ಬೃಹತ್ ರಾಶಿಯೊಳಗೆ ಗೆದ್ದಲು ಹುಳುಗಳ ಸಂಸಾರಕ್ಕೆ ನಿತ್ಯ ಭೋಜನವಾಗಿದ್ದ ಹಳೇ ಪುಸ್ತಕಗಳು, ಭಾರತದ ಕೃಷಿ ಅವಸಾನದತ್ತ ಸಾಗುತ್ತಿದೆ ಎಂಬುದನ್ನು ಎತ್ತಿ ತೋರಿಸುತ್ತಿದ್ದ ಕಿಲುಬಿಡಿದ ಕುಡುಗೋಲು, ಸಲಿಕೆ, ಪಿಕಾಸಿ ಅದರೊಂದಿಗೆ ಕುಟ್ಟೆ ತಿಂದ ಮಂಕರಿ, ಮೊರ ಮುಂತಾದ ಕೃಷಿ ಉಪಕರಣಗಳು.

ನಮ್ಮಜ್ಜ ಹೇಳುವ ಹಾಗೆ ಒಂದಾನೊಂದು ಕಾಲದಲ್ಲಿ ನಮ್ಮ ಮನೆಯಲ್ಲಿ ಎರಡೆರಡು ಜೊತೆ ಎತ್ತುಗಳನ್ನು ಕಟ್ಟಿದ್ದೆವೆಂಬುದಕ್ಕೆ ಸಾಕ್ಷಿಯಂತಿದ್ದ ದನದ ಕತ್ತಿನ ಗಂಟೆ, ಛಾಟಿ, ಕುಕ್ಕೆ, ಪಟಡಿಗಳ ಮಧ್ಯೆ ಸಿಕ್ಕಿಹಾಕಿಕೊಂಡಿದ್ದ ಆ ಬೂದುಬಣ್ಣದ ವಿದ್ಯುತ್ ವಯರಿನ ಮೂಲವನ್ನು ರಾಶಿವಸ್ತುಗಳ ನಡುವೆ ಚಕ್ರವ್ಯೂಹ ಬೇಧಿಸಿದಂತೆ ಹುಡುಕುತ್ತಾ ಹೋದಂತೆ ಇನ್ನೊಂದು ತುದಿಗೆ ಸಿಕ್ಕಿದ್ದೇ ಮೈಯೆಲ್ಲಾ ಗಾಯಗಳನ್ನು ಮಾಡಿಕೊಂಡು ಶಿಥಿಲಾವಸ್ಥೆ ತಲುಪಿದ್ದ ಆಯತಾಕಾರದ ರೇಡಿಯೊ! ಆ ಸ್ಥಿತಿಯಲ್ಲಿದ್ದರೂ ಆ ರೇಡಿಯೊವನ್ನು ನೋಡಿದಾಕ್ಷಣವೇ ನನಗೆ ಅದರ ಮೇಲೆ ಪ್ರೀತಿ ಹುಟ್ಟಿತ್ತು.

ADVERTISEMENT

ರೇಡಿಯೊದ ಮೈಮೇಲಿದ್ದ ದೂಳನ್ನೆಲ್ಲಾ ನನ್ನೆದೆಯ ಅಂತರಳಾದ ಉಸಿರನ್ನು ಬಿಟ್ಟು ಶುದ್ಧಿಮಾಡಿ ನೋಡಿದಾಗಲೇ ನನಗೆ ಗೊತ್ತಾಗಿದ್ದು ಅದರ ಮುದ್ದಾದ ಹೆಸರು 'ಫಿಲಿಪ್ಸ್' ಅಂತ. ಅಲುಗಾಡಿಸಿದಾಗ ನಿತ್ರಾಣದಿಂದ ನೋವಿನ ಸದ್ದು ಹೊರಡಿಸುತ್ತಿದ್ದ ಆ ರೇಡಿಯೊವನ್ನು ಹೇಗಾದರೂ ಮಾಡಿ ಉಳಿಸಿಕೊಳ್ಳಲೇಬೇಕೆಂದು ಪಣತೊಟ್ಟೆ ನಾನು. ಹಾಗಾಗಿ ಅದರ ಉದರವ ನಿಧಾನವಾಗಿ ನೋವಿಲ್ಲದಂತೆ ತೆರೆದು ಶಸ್ತ್ರಚಿಕಿತ್ಸೆಗೆ ಮುಂದಾಗಿ, ಸಂಪರ್ಕ ಕಳೆದುಕೊಂಡಿದ್ದ ಅದರಳೊಗಿನ ಕೆಂಪು, ಬಿಳಿ ತಂತಿಗಳೆಂಬ ರಕ್ತನಾಳ, ನರಗಳನ್ನೆಲ್ಲಾ ಒಂದು ಮಾಡಿ, ಟೇಪು ಅಂಟಿಸಿ, ಒಂದು ಮಟ್ಟಕ್ಕೆ ಸಿದ್ಧಮಾಡಿಕೊಂಡು ರೋಗಿಗೆ ಸಲೈನು ಹಾಕುವ ಹಾಗೆ ಅದರ ಹೊರಭಾಗದ ತಂತಿಯನ್ನು ವಿದ್ಯುತ್ತಿನ ಸ್ವಿಚ್‌ ಬೋರ್ಡಿಗೆ ಧಾವಂತವಾಗಿ ತುರುಕಿ, ಗುಂಡಿಯನ್ನು ಒತ್ತಿದಾಕ್ಷಣ 'ಗೊರ್sssssss' ಎಂದು ಉಸಿರಾಡಲು ಪ್ರಾರಂಭಿಸಿತು. ಹಾಗೇ ಅದರ ಮೂಗುನತ್ತಿನಂತಿದ್ದ ವೃತ್ತಾಕಾರದ ಬ್ಯಾಂಡನ್ನು ತಿರುವುತ್ತಿದ್ದಂತೆಯೇ ಗಂಧರ್ವ ಕನ್ಯೆಯಂತಹ ಧ್ವನಿಯಿಂದ "ಆಕಾಶವಾಣಿ, ಬೆಂಗಳೂರು" ಎಂದಿದ್ದು ನಿಜಕ್ಕೂ ನನಗೆ 'ಐ ಲವ್ ಯೂ' ಅಂದಂತೆ ಭಾಸವಾಗಿ ಹೋಗಿತ್ತು!.

ಮನೆಯಲ್ಲಿ ಆಧುನಿಕ ನಾರಿಯಂತಹ ಬಣ್ಣದ ದೂರದರ್ಶನವಿದ್ದರೂ ಕೂಡ, ಸಂಪ್ರದಾಯಸ್ಥ ಹೆಣ್ಣಿನಂತಿದ್ದ ಆರ್ಭಟವಿಲ್ಲದ ಸರಳ ಸುಂದರಿಯಾದ ಆ ರೇಡಿಯೊ ಎಂದರೆ ಅದೇನೋ ಸೆಳೆತ ನನಗೆ. ನನ್ನ ರೇಡಿಯೊ ಸುಂದರಿ ನನ್ನ ಜೊತೆ ಎಲ್ಲವನ್ನೂ ಮುಕ್ತವಾಗಿ ಹಂಚಿಕೊಂಡಿದ್ದಾಳೆ. ಅವಳ ಮಾತೇ ಚೆಂದ. ಒಮ್ಮೊಮ್ಮೆ ಧ್ವನಿ ಬದಲಿಸಿ ಗಂಡಿನ ರೀತಿಯೂ ಮಾತಾಡುತ್ತಿದ್ದಳು. ಆ ಮಧುರ ಮಾತುಗಳನ್ನು ನಾನು ಮೈಯೆಲ್ಲಾ ಕಿವಿಯಾಗಿಸಿಕೊಂಡು ಕೇಳುತ್ತಿದ್ದೆ.

ಅವಳಿಗೆ ಎಲ್ಲವೂ ಗೊತ್ತಿತ್ತು. ರಾಜಕೀಯ, ಆರೋಗ್ಯ, ಕೃಷಿ, ಪಶುಸಂಗೋಪನೆ, ಕ್ರಿಕೆಟ್ ವೀಕ್ಷಕ ವಿವರಣೆ, ಸರ್ಕಾರಿ ಯೋಜನೆಗಳನ್ನೆಲ್ಲಾ ನನ್ನ ಮೆದುಳೊಳಗೆ ತುರುಕಿ ನನ್ನ ಸಾಮಾನ್ಯ ಜ್ಞಾನದ ಹಸಿವನ್ನು ನೀಗಿಸಿದ್ದಾಳೆ. ಅಷ್ಟೇ ಅಲ್ಲದೆ ಗ್ರಾಮೀಣ ಸೊಗಡಿನ ಕಥೆ, ಕವನ, ಭಾವಗೀತೆ, ಜನಪದ ಹಾಡುಗಳಿಗೆ ಧ್ವನಿಯಾಗಿದ್ದಾಳೆ. ಚಿತ್ರಗೀತೆಗಳ ವಿಷಯಕ್ಕೆ ಬಂದರೆ ನಾವಿಬ್ಬರೂ ಯುಗಳ ಗೀತೆಗಳನ್ನೇ ಹಾಡಿಕೊಂಡಿದ್ದೇವೆ.

ಇಂತಹ ಸಿಹಿಕಂಠದ ಚೆಲುವೆ ಮಳೆಗಾಲದ ಸಮಯದಲ್ಲಿ ಹಾಡಿದ್ದಕ್ಕಿಂತ ಕೆಮ್ಮಿದ್ದೇ ಹೆಚ್ಚು. ಅಂತಹ ಸಂದರ್ಭಗಳಲ್ಲಿ ನಾನು ಅವಳ ಜಡೆಯಂತಿದ್ದ ಆಂಟೆನಾವನ್ನು ದೃಷ್ಟಿ ನಿವಾಳಿಸುವ ರೀತಿ ದಶದಿಕ್ಕುಗಳಿಗೂ ತಿರುಗಿಸಿ, ಧ್ವನಿ ಸರಿಹೊಂದುವ ಕಡೆ ಎಚ್ಚರಿಕೆಯಿಂದ ಇಡುತ್ತಿದ್ದೆ. ಆಗ ತಕ್ಕಮಟ್ಟಿಗೆ ಹಾಡುವ ಅವಳನ್ನು ಸಹಿಸಿಕೊಳ್ಳುತ್ತಿದ್ದೆ.

ಆದರೂ ಅವಳ ಮೇಲೆ ಯಾವತ್ತೂ ನಾನು ಕೋಪ ಮಾಡಿಕೊಂಡವನೇ ಅಲ್ಲ. ಚಳಿಗಾಲದ ಇಳಿಸಂಜೆಗಳಲ್ಲಿ ಅವಳೊಂದಿಗೆ ಕಾಫೀ ಹೀರುವ ಸುಖವ ಅಕ್ಷರಗಳಲ್ಲಿ ಕಟ್ಟಿಡುವಷ್ಟು ಮೇಧಾವಿ ನಾನಲ್ಲ. ಅವಳಿಗಂತಲೇ ಪ್ರತ್ಯೇಕ ಜಾಗವನ್ನು ಮೀಸಲಿಟ್ಟಿದ್ದರೂ ಸಹಿತ, ಅದೇನೋ ನನಗೆ ಅವಳನ್ನು ಹಾಸಿಗೆಯ ಮೇಲೆ ಕೂರಿಸಿಕೊಂಡು ಮಾತುಗಳನ್ನು ಕೇಳುವುದೇ ಮಜವೆನಿಸುತ್ತಿತ್ತು. ಅವಳು ತುಂಬಾ ಮಿತಭಾಷಿ ಹಾಗೂ ಶಿಸ್ತಿನ ಸಿಪಾಯಿ. ಪ್ರತಿರಾತ್ರಿ ಸುಮಾರು ಹನ್ನೊಂದಕ್ಕೆಲ್ಲಾ ನನಗೆ ಶುಭರಾತ್ರಿ ಹೇಳಿ ಮಲಗಿಬಿಡುತ್ತಿದ್ದಳು. ನನಗೆ ಅವಳ ಈ ನಿಲುವು ಇಷ್ಟವಾಗುತ್ತಿರಲಿಲ್ಲ. ಇಡೀ ರಾತ್ರಿ ಅವಳ ಧ್ವನಿಯನ್ನು ಕೇಳಬೇಕೆಂದು ಮನ ತುಡಿಯುತ್ತಿತ್ತು.!

ಹೀಗೆ ಅನೇಕ ವರುಷಗಳ ಕಾಲ ನಮ್ಮೀರ್ವರ ಅನುಬಂಧ ನಿರಂತರವಾಗಿ ಸಾಗುತ್ತಿರಲು, ಯಾರ ಕಣ್ಣು ಬಿತ್ತೋ ಏನೋ 'ಮೊಬೈಲ್' ಎಂಬ ತಳಕು-ಬಳಕಿನ ಸ್ಲಿಮ್ಮಾದ ಮಾಟಗಾತಿ ನನ್ನನ್ನು ತನ್ನ ಬುಟ್ಟಿಗೆ ಹಾಕಿಕೊಂಡುಬಿಟ್ಟಳು. ನನ್ನ ರೇಡಿಯೊ ಚೆಲುವೆಯನ್ನು ಕಡೆಗಣಿಸುವಂತೆ ಮಾಡಿ, ಬರಬರುತ್ತಾ ನನ್ನ ಮೇಲೆಯೇ ಹಿಡಿತ ಸಾಧಿಸುತ್ತಾ, ನನ್ನ ಮಾನಸಿಕ ಆರೋಗ್ಯದ ಹರಣಕ್ಕೆ ಮುಂದಾದಳು. ಎಲ್ಲೋ ಒಂದುಕಡೆ ನಾನು ನನ್ನತನವನ್ನು ಕಳೆದುಕೊಳ್ಳುತ್ತಿದ್ದೇನೆ ಎಂದೆನಿಸತೊಡಗಿದೆ. ನನಗೂ ಈ ಮಾಟಗಾತಿಯ ಕಾಟ ಸಾಕಾಗಿಹೋಗಿದೆ. ಇವಳಿಂದ ತಪ್ಪಿಸಿಕೊಳ್ಳಲು ನಾನು ಶತ ಪ್ರಯತ್ನ ಮಾಡುತ್ತಿದ್ದೇನೆ. ಈಗ ದೃಢ ಮನಸ್ಸು ಮಾಡಿಕೊಂಡಾಗಿದೆ.

ಗಾದರೂ ಸರಿ ಮೊಬೈಲಿಗೆ ವಿಚ್ಛೇದನ ಕೊಟ್ಟು ಮರಳಿ ನನ್ನ ರೇಡಿಯೊ ಗೆಳತಿಯನ್ನು ಮಡಿಲಲ್ಲಿಟ್ಟುಕೊಂಡು ಅವಳ ಆಂತರ್ಯದ ನುಡಿಗಳ ನನಗಷ್ಟೇ ಕೇಳುವಂತೆ ಕೇಳಿಸಿಕೊಳ್ಳಬೇಕು ಎನ್ನುವ ಆಸೆ ಮತ್ತೆ ಮೂಡಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.