ADVERTISEMENT

ಆಟೊಟೆಕ್

ಪ್ರಜಾವಾಣಿ ವಿಶೇಷ
Published 16 ಜನವರಿ 2013, 19:59 IST
Last Updated 16 ಜನವರಿ 2013, 19:59 IST
ಆಟೊಟೆಕ್
ಆಟೊಟೆಕ್   

ಮಳೆ, ಬಿಸಿಲು
ಮಳೆ ಬರುವಾಗ ಕಾರು ಓಡಿಸುವುದು ಕೊಂಚ ಕಿರಿಕಿರಿಯೇ. ವೈಪರ್ ಬಳಸಬೇಕು, ಹೆಚ್ಚಾದರೆ ವೈಪರ್ ಸಹ ಸಾಲುವುದಿಲ್ಲ. ಗಾಜಿನ ಹಿಂದೆ ಹಬೆ ಕೂರಲು ಬೇರೆ ಆರಂಭವಾಗುತ್ತದೆ.  ಎಸಿ ಇರುವ ಕಾರುಗಳಾದರೆ ಹೇಗೋ ಪಾರಾಗಬಹುದು. ಇಲ್ಲದಿರುವ ಕಾರುಗಳಾದರೆ ಬಟ್ಟೆಯಿಂದ ಒರೆಸಬೇಕು.

ಕಾರಿನ ಚಾಲನೆಯನ್ನೂ ಮಾಡುತ್ತ, ಇವನ್ನೂ ಏಕ ಕಾಲದಲ್ಲಿ ಮಾಡುವುದು ನಿಜಕ್ಕೂ ಕಷ್ಟವೇ ಸರಿ.
ಆದರೆ ವಾಹನ ಚಾಲನೆಯಲ್ಲಿ ಇವೆಲ್ಲ ಅನಿವಾರ್ಯ. ಹಿಂದೊಂದು ಕಾಲದಲ್ಲಿ ಮಳೆ ಬಂದರೆ ವೈಪರ್ ಸಹ ಇರಲಿಲ್ಲ ಎಂಬುದನ್ನು ನೆನಪಿಸಿಕೊಳ್ಳಬೇಕು.

ಈಗಲೂ ಕೆಲವೊಮ್ಮೆ ವೈಪರ್ ಕೊಟ್ಟಾಗ ವೃತ್ತಿಪರ ಚಾಲಕರು ಎರಡು ವಿಧಾನ ಅನುಸರಿಸುತ್ತಾರೆ. ಯಾವುದಾದರೂ ಸಾಬೂನು ಇಟ್ಟುಕೊಂಡೇ ಇರುತ್ತಾರೆ. ಅದನ್ನು ಗಾಜಿನ ಮೇಲೆ ಉಜ್ಜಿಬಿಡುತ್ತಾರೆ. ಆಗ ನೀರು ಅದರ ಮೇಲೆ ಹೆಚ್ಚಾಗಿ ಕೂರುವುದಿಲ್ಲ. ಕೆಲವರು ತಂಬಾಕು ಪುಡಿ ಹಚ್ಚುತ್ತಾರೆ. ಇದೆಷ್ಟು ಪರಿಣಾಮಕಾರಿಯೋ ಗೊತ್ತಿಲ್ಲ!

ರೈನ್ ಸೆನ್ಸರ್
ಮಳೆ ಬರುತ್ತಲೂ ಸ್ಟೀರಿಂಗ್ ವೀಲ್ ಬಳಿಯ ಬಟನ್ ಮೂಲಕ ವೈಪರ್‌ಗೆ ಚಾಲನೆ ನೀಡಬೇಕು. ಮಳೆ ನಿಂತಾಗ ನಿಲ್ಲಿಸಬೇಕು. ಈ ಕೆಲಸ ತಂತಾನೆ ಆಗುವಂತಿದ್ದರೆ? ಅದು ಈಗ ಸಾಧ್ಯವಾಗಿದೆ. ಕಾರಿನ ಗಾಜಿನ ಮೇಲ್ಭಾಗದಲ್ಲಿ ಒಂದು ಪುಟ್ಟ ಸಾಧನ ಅಳವಡಿಸಲಾಗಿರುತ್ತದೆ.

ADVERTISEMENT

ಗಾಜಿನ ಹಿಂಭಾಗದಲ್ಲಿ ಅದರ ನಿಯಂತ್ರಕ ಇದ್ದು, ಮೇಲ್ಭಾಗದಲ್ಲಿ ಒಂದು ಚಿಕ್ಕ ಬಟನ್ ಮಾದರಿಯ ಸೆನ್ಸರ್ ಇರುತ್ತದೆ. ಮಳೆ ಬೀಳಲು ಆರಂಭಿಸಿದ ಕೂಡಲೇ ಅದೇ ತಂತಾನೇ ವೈಪರ್ ಚಾಲೂ ಮಾಡುತ್ತದೆ. ನಿಂತಾಗ ನಿಲ್ಲಿಸಿಬಿಡುತ್ತದೆ.

ಕಂಪನಗಳನ್ನು ಆಧರಿಸಿ ಇದು ಕೆಲಸ ಮಾಡುತ್ತದೆ. ಸೆನ್ಸರ್‌ನ ಮೇಲೆ ನೀರ ಹನಿ ಬಿದ್ದಾಗ ಏಳುವ ಕಂಪನಗಳೇ ಇದರ ಜೀವಾಳ. ಇದು ಎಷ್ಟು ಸೂಕ್ಷ್ಮ ಎಂದರೆ ಮಳೆಯ ರಭಸಕ್ಕೆ ತಕ್ಕಂತೆ ವೈಪರ್‌ನ ವೇಗವನ್ನೂ ನಿಯಂತ್ರಿಸುತ್ತದೆ!

ಸನ್ ಬ್ಲೈಂಡ್
ಇದೊಂದು ಆರಾಮದಾಯಕ ಸೌಲಭ್ಯ. ಸೂರ್ಯನ ಬೆಳಕು ಪ್ರಖರವಾಗಿರುವ ಸಂದರ್ಭಗಳಲ್ಲಿ ಬಳಕೆಗೆ ಬರುತ್ತದೆ. ಈಗ ಕಾರಿನ ಗಾಜುಗಳಿಗೆ ಸನ್ ಟಿಂಟ್ ಅಳವಡಿಸಲು ಕಾನೂನು ತೊಡಕು ಮಾಡಿರುವ ಕಾರಣ, ಸನ್ ಬ್ಲೈಂಡ್ ಅಳವಡಿಸಿಕೊಳ್ಳಬಹುದು. ಇದೇನೋ ಒಳಗಿನ ನೋಟವನ್ನು ಪ್ರತಿಬಂಧಿಸುವುದಿಲ್ಲ. ಬದಲಿಗೆ ಪ್ರಯಾಣಿಕರಿಗೆ ತಂಪಾದ ಹಿತವನ್ನು ನೀಡುತ್ತದೆಯಷ್ಟೇ.

ನಿರ್ವಾತ ಗುಂಡಿ ಹೊಂದಿರುವ ಈ ಸನ್ ಬ್ಲೈಂಡ್ ಬಟ್ಟೆ ಹೊಂದಿರುವ ಚೌಕಾಕಾರದ ಪರದೆ. ಸುತ್ತಲೂ ತಂತಿಯ ಚೌಕಟ್ಟು ಇರುತ್ತದೆ. ಸೂರ್ಯನ ಬೆಳಕನ್ನು ತಡೆದು ಪ್ರಯಾಣಿಕರಿಗೆ ನೆರಳನ್ನು ನೀಡುತ್ತದೆ. ಬೇಡದಿದ್ದಾಗ ಕಳಚಿ, ಮಡಚಿ ಇಡಬಹುದು. ಕೆಲವು ಅತ್ಯಾಧುನಿಕ ಬ್ಲೈಂಡ್‌ಗಳು, ಒಂದು ಬಟನ್ ಒತ್ತಿದಾಕ್ಷಣ ಮೇಲೆ ಮಡಚಿಕೊಳ್ಳುವ ಸೌಲಭ್ಯ ಹೊಂದಿರುತ್ತವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.