ADVERTISEMENT

ಆಟೊಟೆಕ್

ಪ್ರಜಾವಾಣಿ ವಿಶೇಷ
Published 30 ಮೇ 2012, 19:30 IST
Last Updated 30 ಮೇ 2012, 19:30 IST
ಆಟೊಟೆಕ್
ಆಟೊಟೆಕ್   

ಕೆಲವು ಸಣ್ಣ ವಿಚಾರಗಳು ಕೆಲವೊಮ್ಮೆ ಅತಿ ಪ್ರಮುಖವಾದ ಕೆಲಸವನ್ನು ಮಾಡುತ್ತವೆ. ಸಣ್ಣವೆಂದು ನಿರ್ಲಕ್ಷಿಸುವಂತೆಯೇ ಇಲ್ಲ. ಅತಿ ಸಣ್ಣದು ಎಂಬ ಹಿಂದಿನ ದೃಶ್ಯ ತೋರಿಸುವ ಮಿರರ್ ಇಲ್ಲದೇ ಹೋದಲ್ಲಿ ಎಷ್ಟು ಕಿರಿಕಿರಿ ಆಗುತ್ತದೆ ಎಂಬುದನ್ನು ಅನುಭವಿಸಿದವರೇ ಬಲ್ಲರು.

ವಾಹನ ತಂತ್ರಜ್ಞಾನ ಕೆಲವು ದಿನಗಳಲ್ಲಿ ಸೃಷ್ಟಿಯಾದುದಲ್ಲ. ಅನೇಕ ದಶಕಗಳಿಂದ ಅಭಿವೃದ್ಧಿಗೊಂಡ ಸುಸ್ಥಿರ ತಂತ್ರಜ್ಞಾನ. ಇಂದು ವಾಹನಗಳಿಲ್ಲದೆ ಜೀವನವೇ ಇಲ್ಲ ಎಂಬಷ್ಟು ಅನಿವಾರ್ಯತೆ ಸೃಷ್ಟಿಗೊಳ್ಳಲು ಮಾನವನ ಕಲ್ಪನಾ ಶಕ್ತಿಯ ಅದಮ್ಯ ಶಕ್ತಿ, ಅದನ್ನು ಸಾಕಾರಗೊಳಿಸಲು ಪಟ್ಟ ಶ್ರಮ, ಬುದ್ಧಿವಂತಿಕೆಯ ಫಲವೇ ಕಾರಣ.

ಮಡ್ ಫ್ಲಾಪ್
ಆರಂಭದಲ್ಲಿ ಸೈಕಲ್‌ನ ಆವಿಷ್ಕಾರವಾದಾಗ ಮೊದಲು ಎದುರಾದ ಕ್ಲಿಷ್ಟಕರ ಸಮಸ್ಯೆಗಳಿಗೆ ಒತ್ತರವೇನೋ ಸಿಕ್ಕಿತು. ಸೈಕಲ್‌ನ ಚೈನ್, ಪೆಡಲ್, ಸಮತೋಲನ ಕಾಪಾಡಿಕೊಳ್ಳುವಿಕೆಗೆ ಶಾಶ್ವತ ಪರಿಹಾರ ಸಿಕ್ಕಿತು. ಆದರೆ ನಿರ್ಲಕ್ಷಿಸಬಹುದಾದರೂ, ನಿರ್ಲಕ್ಷಿಸಲಾಗದ ಸಮಸ್ಯೆಯೊಂದು ಎದುರಾಯಿತು.

ಅದೇ ಚಕ್ರಗಳಿಂದ ಮಣ್ಣು ಮತ್ತು ಕೆಸರು ಸಿಡಿಯುವುದು! ಮಳೆಗಾಲದಲ್ಲಂತೂ ಈ ಸಮಸ್ಯೆ ತಾರಕಕ್ಕೇರುತ್ತಿತ್ತು. ಚಾಲಕನ ಮೈಕೈಗಳೆಲ್ಲಾ ಗಲೀಜಾಗುವ ಮುಜುಗರದ ಸಂಗತಿಯಿದು. ಆಗ ಕಂಡುಕೊಂಡಿದ್ದೇ ಮಡ್ ಫ್ಲಾಪ್. ಇದೇನು ಅತಿ ಕ್ಲಿಷ್ಟಕರವಾದ ತಂತ್ರಜ್ಞಾನವೇ ಅಲ್ಲ. ಇಲ್ಲಿ ಯಾವ ತಂತ್ರವೂ ಇಲ್ಲ.

ಇದೊಂದು ಸರಳ ಬುದ್ಧಿವಂತಿಕೆಯಷ್ಟೇ. ಚಕ್ರಗಳಿಗೆ ಮಡ್‌ಗಾರ್ಡ್ ಆರಂಭದಲ್ಲಿ ಆವಿಷ್ಕಾರಗೊಂಡರೂ, ಆ ಮಡ್‌ಗಾರ್ಡ್‌ನ ತುದಿಯಿಂದ ಕೆಸರು ಎರಚುವುದು ಇದ್ದೇ ಇತ್ತು. ಆಗ ರಬ್ಬರ್ ಅಥವಾ ಪ್ಲಾಸ್ಟಿಕ್‌ನಿಂದ ಮಾಡಿದ ಈ ಮಡ್ ಫ್ಲಾಪ್ ಜೋಡಿತಗೊಂಡಿತು. ಇದೊಂದು ಚಿಕ್ಕ ಬಿಲ್ಲೆ. ಈ ಬಿಲ್ಲೆ ಕೆಸರನ್ನು ತಡೆದು ಕೆಳಗೆ ಸೋರುವಂತೆ ಮಾಡುತ್ತದಷ್ಟೇ.

ಡೆಲ್ಟಾ ಬಾಕ್ಸ್
ರೇಸಿಂಗ್ ಬೈಕ್ ಹೊಂದಿರುವವರಿಗೆ ಅಥವಾ ಬಲ್ಲವರಿಗೆ ಡೆಲ್ಟಾ ಬಾಕ್ಸ್ ಅಂದರೇನೆಂದು ತಿಳಿದೇ ಇರುತ್ತದೆ. ರೇಸಿಂಗ್ ಬೈಕ್ ಅಥವಾ ಕಾರುಗಳ ಮುಖ್ಯ ಲಕ್ಷಣ ಹಗುರವಾಗಿರುವುದು. ಇದಕ್ಕಾಗಿ ಅನಗತ್ಯವಾದ ಅನೇಕ ವಸ್ತುಗಳನ್ನು ಬಳಸದೇ ಇರುವುದು. ಇದಕ್ಕೆಂದು ರೇಸಿಂಗ್ ಬೈಕ್‌ಗಳಲ್ಲಿ ಡೆಲ್ಟಾ ಬಾಕ್ಸ್ ಆವಿಷ್ಕಾರಗೊಂಡಿತು.
 
ಬೈಕ್ ಎಂದರೆ ಅನಿವಾರ್ಯವಾಗಿ ಫ್ರೇಂ, ಪೆಟ್ರೋಲ್ ಟ್ಯಾಂಕ್, ಹೆಡ್ ಲೈಟ್ ಅಸೆಂಬ್ಲಿ, ಸೈಡ್ ಪೆನಲ್, ಫೇರಿಂಗ್‌ಗಳು ಇದ್ದರೆ ಅಂದ. ಆದರೆ ಇವುಗಳಿಂದ ತೂಕ ಹೆಚ್ಚಾಗಿ ವೇಗ ಹಾಗೂ ಮೈಲೇಜ್ ಕುಸಿಯುತ್ತದೆ. ಇದನ್ನು ಮನಗಂಡ ತಂತ್ರಜ್ಞರು ಈ ಎಲ್ಲ ಸಾಧನಗಳನ್ನೂ ರೇಸಿಂಗ್ ಬೈಕ್‌ನಿಂದ ತೆಗೆಯುವ ಚಿಂತನೆ ನಡೆಸಿದರು.

ಆಗ ಅಭಿವೃದ್ಧಿಗೊಂಡಿದ್ದೇ ಈ ಡೆಲ್ಟಾ ಬಾಕ್ಸ್. ಈ ಡೆಲ್ಟಾ ಬಾಕ್ಸ್ ಬೈಕ್‌ಗೆ ಫ್ರೇಂ ಸಹ ಹೌದು, ದೇಹವೂ ಹೌದು. ಎರಡೂ ಕೆಲಸವನ್ನೂ ಒಂದೇ ನಿಭಾಯಿಸುತ್ತದೆ. ಬೈಕ್‌ಗೆ ಪೆಟ್ರೋಲ್ ಟ್ಯಾಂಕ್ ಒಂದು ಇರುತ್ತದೆ ಎಂಬುದುನ್ನು ಬಿಟ್ಟರೆ, ಮಿಕ್ಕೆಲ್ಲಾ ಕೆಲಸ ಇದೇ ನಿಭಾಯಿಸುತ್ತದೆ. ಡೆಲ್ಟಾ ಬಾಕ್ಸ್ ಇಡೀ ವಾಹನಕ್ಕೆ ಒಂದೇ ಫ್ರೇಂ. ಹಿಂದಿನ ಚಕ್ರದಿಂದ, ಮುಂದಿನ ಚಕ್ರದವರೆಗೂ ಒಂದೇ ಫ್ರೇಂ ಇರುತ್ತದೆ. ಇದರಿಂದ ಅನಗತ್ಯವಾದ ತೂಕ ಇಳಿಸಿದಂತೆ ಆಗುತ್ತದೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.