ADVERTISEMENT

ಆಟೊ ಟೆಕ್: ಡಿಫರೆನ್ಷಿಯಲ್, ವೈಪರ್ ಪಂಪ್

ಪ್ರಜಾವಾಣಿ ವಿಶೇಷ
Published 2 ಮೇ 2012, 19:30 IST
Last Updated 2 ಮೇ 2012, 19:30 IST
ಆಟೊ ಟೆಕ್: ಡಿಫರೆನ್ಷಿಯಲ್, ವೈಪರ್ ಪಂಪ್
ಆಟೊ ಟೆಕ್: ಡಿಫರೆನ್ಷಿಯಲ್, ವೈಪರ್ ಪಂಪ್   

ಕೆ.ಪಿ. ಪೂರ್ಣಚಂದ್ರ ತೇಜಸ್ವಿ ಅವರ ಜುಗಾರಿ ಕ್ರಾಸ್ ಕಾದಂಬರಿಯನ್ನು ಓದಿದವರಿಗೆ ದೌಲತ್‌ರಾಮ್ ಮತ್ತು ಕರುಣಾಕರ ಕುಟ್ಟಿ ಗೊತ್ತಿರಲೇಬೇಕು. ಭೂಗತ ಲೋಕದ ಈ ಖದೀಮರಲ್ಲಿ, ಕುಟ್ಟಿ ಕಾರು, ಲಾರಿ ನಡೆಸುವುದರಲ್ಲಿ ನಿಸ್ಸೀಮ. ಒಮ್ಮೆ ಪೊಲೀಸ್ ಜೀಪೊಂದು ಇವರ ಬೆನ್ಜ್ ಲಾರಿಯನ್ನು ಅಟ್ಟಿಸಿಕೊಂಡು ಬಂದಾಗ, ಕುಟ್ಟಿ ಲಾರಿಯ ಬ್ರೇಕ್‌ನ್ನು ಹಠಾತ್ತನೆ ಹಾಕಿ, ಜೀಪು ಲಾರಿಯ ಡಿಫರೆನ್ಷಿಯಲ್‌ಗೆ ಡಿಕ್ಕಿ ಹೊಡೆದು ಪುಡಿಪುಡಿಯಾಗುತ್ತದೆ...

ಡಿಫರೆನ್ಷಿಯಲ್

ಅರೆ, ಇದೇನಿದು ಈ ಡಿಫರೆನ್ಷಿಯಲ್ ಎಂಬ ಪ್ರಶ್ನೆ ಆಗ ಬರುವುದು ಸಹಜವೇ. ಇದು ವಾಹನದ ಚಲನೆಯ ಮೂಲ ಸಾಧನ. ಇದರ ಕಾರ್ಯರಚನೆಯೂ ಅತ್ಯಂತ ಸರಳ. ವಾಹನದ ಎಂಜಿನ್‌ಗೆ ಜೋಡಿತಗೊಂಡಿರುವ ಆಕ್ಸಿಲ್ ಹಿಂಬದಿಯ ಚಕ್ರಗಳಿಗೆ ಜೋಡಿತವಾಗಿರುವ ಈ ಡಿಫರೆನ್ಷಿಯಲ್‌ಗೆ ಸಂಪರ್ಕ ಹೊಂದಿರುತ್ತದೆ. ಡಿಫರೆನ್ಷಿಯಲ್‌ನ ರಚನೆ ಹೇಗಿರುತ್ತದೆಯೆಂದರೆ, ಚಕ್ರವೊಂದು ಟಿ ಆಕಾರದ ಇನ್ನಿತರ ಹಲ್ಲಿನ ಚಕ್ರಗಳಿಗೆ ಸಂಪರ್ಕ ಹೊಂದಿದ್ದು, ಮೂರೂ ಚಕ್ರಗಳೂ ಏಕಕಾಲಕ್ಕೆ ತಿರುಗುತ್ತದೆ. ಇದು ವಾಹನದ ಹಿಂಬದಿ ಚಕ್ರಗಳಿಗೆ ಜೋಡಿತಗೊಂಡಿರುವುದರಿಂದ ಆಕ್ಸಿಲ್ ತಿರುಗಲು ಆರಂಭಿಸಿದ ಕೂಡಲೇ ವಾಹನಕ್ಕೆ ಚಾಲನೆ ಸಿಗುತ್ತದೆ. ದೊಡ್ಡ ಗೋಳಾಕೃತಿಯ ರಚನೆಯಿದು. ಇದರಲ್ಲಿ ಹಲ್ಲಿನ ಚಕ್ರದ ಜತೆಗೆ, ಸಾಕಷ್ಟು ಎಣ್ಣೆಯೂ ಇರುತ್ತದೆ. ಸದಾ ತಿರುಗುತ್ತಿರುವ ಕಾರಣ, ಇದಕ್ಕೆ ಎಣ್ಣೆಯ ಅಗತ್ಯ ಅತಿ ಹೆಚ್ಚು.

ADVERTISEMENT

ವೈಪರ್ ಪಂಪ್

ನಾಲ್ಕು ಚಕ್ರದ ವಾಹನದ ಡ್ರೈವರ್ ಎದುರಿನ ವಿಂಡ್ ಶೀಲ್ಡ್ ಗಾಜು ಗಾಳಿ, ಮಳೆಯನ್ನು ಪ್ರತಿರೋಧಿಸಿ ರಕ್ಷಣೆ ನೀಡುತ್ತದಾದರೂ, ತುಂಬಾ ಕಸ, ದೂಳು, ಕೊಳೆಗೂ ಇದು ಒಡ್ಡಿಕೊಳ್ಳುತ್ತದೆ. ವಿಂಡ್ ಶೀಲ್ಡ್ ಶುಭ್ರವಾಗಿದ್ದಷ್ಟೂ ಚಾಲಕನಿಗೆ ವಾಹನ ಚಾಲನೆ ಸುಲಭ. ಕೊಳೆಯಾದರೆ ಅಡಚಣೆ ಹೆಚ್ಚು. ಹಾಗಾಗೇ ಕೊಳೆ ನಿವಾರಣೆಗೆ ವೈಪರ್ ಜೋಡಣೆ ಆಗಿರುತ್ತದೆ. ವೈಪರ್‌ನಲ್ಲಿನ ರಬ್ಬರ್ ಬ್ಲೇಡ್ ಮಳೆಯಲ್ಲಿ ನೋಟವನ್ನು ಉತ್ತಮಗೊಳಿಸುತ್ತದೆ ನಿಜ. ಆದರೆ ಮಳೆ ಬಾರದೇ ಇದ್ದಾಗಲೂ ಕೊಳೆಯನ್ನು ಹೋಗಲಾಡಿಸಲು ವ್ಯವಸ್ಥೆಯಿದೆ. ವಾಹನದ ಮುಂಭಾಗದ ಬಾನೆಟ್‌ನ ಒಳಗೆ ವೈಪರ್‌ಗೆ ನೀರುಣಿಸಲು ಸಂಗ್ರಹಣ ಡಬ್ಬಿ ಇರುತ್ತದೆ. ಇದು ಸಾಮಾನ್ಯವಾಗಿ ಸೋಪ್ ನೀರು. ಖಾಲಿ ವೈಪರ್ ತಿರುಗಿಸಿದರೆ ಗಾಜಿನ ಮೇಲೆ ಗೀರು ಬೀಳುವ ಸಾಧ್ಯತೆ ಇರುತ್ತದೆ. ಹಾಗಾಗಿ ನೀರನ್ನು ಪಂಪ್ ಒಂದು ವಿಂಡ್ ಶೀಲ್ಡ್ ಮೇಲೇ ಸ್ಪ್ರೇ ಮಾಡುತ್ತದೆ. ನೀರು ಸಂಗ್ರಹಣ ಡಬ್ಬಿಯಿಂದ ಸಣ್ಣ ರಬ್ಬರ್ ಕೊಳವೆಗಳು, ವೈಪರ್ ಕೆಳಗೆ ಇರುವ ಸಣ್ಣ ರಂಧ್ರಗಳಿಗೆ ಜೋಡಿತಗೊಂಡಿರುತ್ತವೆ. ಬ್ಯಾಟರಿ ಸಹಾಯದಿಂದ ಪಂಪ್ ಕೆಲಸ ಮಾಡಿ, ನೀರು ನೀಡುತ್ತದೆ. 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.