ADVERTISEMENT

ಆಟೊ ಟೆಕ್

​ಪ್ರಜಾವಾಣಿ ವಾರ್ತೆ
Published 21 ಮಾರ್ಚ್ 2012, 19:30 IST
Last Updated 21 ಮಾರ್ಚ್ 2012, 19:30 IST

ಬೆಳಕಿನ ಹಿಂದೆ
ಥಾಮಸ್ ಆಲ್ವಾ ಎಡಿಸನ್ ಬಲ್ಬ್ ಪ್ರದರ್ಶಿಸಿದಾಗ ಜನ ಆಶ್ಚರ್ಯ ಚಕಿತರಾಗಿದ್ದರು. ಗಾಜಿನ ಬುರುಡೆಯೊಳಗಿನ ತಂತಿ ಕಾದು ಬೆಳಕು ಹೊರಹೊಮ್ಮುವುದು ಅಚ್ಚರಿಯಲ್ಲದೇ ಇನ್ನೇನು. ಜತೆಗೆ ಕಣ್ಣಿಗೆ ಕಾಣದ ವಿದ್ಯುತ್ ಎಂಬ ಮಹಾಶಕ್ತಿಯ ದಿಗ್ದರ್ಶನವಾದದ್ದೂ ಆಗಲೇ ಅಲ್ಲವೇ.
 
ವಾಹನಗಳಲ್ಲೂ ಇನ್‌ಕ್ಯಾಂಡಸೆಂಟ್ (ತಂತಿ ಕಾಯುವ ದೀಪ) ಬಲ್ಬ್‌ಗಳು ಬಳಕೆ ಈಗಲೂ ಚಾಲ್ತಿಯಲ್ಲಿದೆ. ಅನಿಲ ತುಂಬಿದ ಗಾಜಿನ ಬುರುಡೆಯಲ್ಲಿ ವಿದ್ಯುತ್ ಸಹಾಯದಿಂದ ತಂತಿ ಕಾದು ಬೆಳಕು ಹೊರಹೊಮ್ಮುತ್ತದೆ. ಹೆಡ್ ಲೈಟ್ ಅಸೆಂಬ್ಲಿಯ ರಿಫ್ಲೆಕ್ಟರ್ ಬೆಳಕನ್ನು ಕೇಂದ್ರೀಕರಿಸುತ್ತದೆ. ಆದರೆ ಹಳೆಯ ತಂತ್ರಜ್ಞಾನದ ಬಲ್ಬ್‌ಗಳು ಕಡಿಮೆ ಸಾಮರ್ಥ್ಯ ಹೊಂದಿದ್ದವು. ಹೆಚ್ಚು ಶಾಖ ಉತ್ಪತ್ತಿಯಾಗಿ ಬೇಗನೇ ಹಾಳಾಗುತ್ತಿದ್ದವು. ಈ ನ್ಯೂನತೆ ಸರಿಪಡಿಸಲು ಹ್ಯಾಲೋಜಿನ್, ಕ್ಸೆನಾನ್ ಮಾದರಿಯ ಬಲ್ಬ್‌ಗಳು ಹೊರಬಂದವು.

ಹ್ಯಾಲೋಜಿನ್ ಬಲ್ಬ್
ಇದು ಸಾಂಪ್ರದಾಯಿಕ ಇನ್‌ಕ್ಯಾಂಡಸೆಂಟ್ ತಂತ್ರಜ್ಞಾನವನ್ನೇ ಅಳವಡಿಸಿಕೊಂಡ ಸುಧಾರಿತ ಬಲ್ಬ್. ಟಂಗ್‌ಸ್ಟನ್ ಕಾಯಿಲ್ ಇರುವ, ಹ್ಯಾಲೋಜಿನ್ ಅನಿಲ ತುಂಬಿದ ಬಲ್ಬ್ ಇದು. ಟಂಗ್‌ಸ್ಟನ್ ಹಾಗೂ ಹ್ಯಾಲೋಜಿನ್‌ಗಳೆರಡೂ ಪ್ರಜ್ವಲವಾಗಿ ಉರಿಯುವುದರ ಜತೆಗೆ, ಹೆಚ್ಚು ಕಾಲ ಬಾಳಿಕೆ ಬರುವ ಸಾಮರ್ಥ್ಯವನ್ನೂ ಹೊಂದಿರುವುದು ವಿಶೇಷ.

ಹಾಗಾಗಿ ಪ್ರಜ್ವಲವಾದ ಬೆಳಕು ವಾಹನ ಚಾಲನೆಯಲ್ಲಿ ಸಿಗುತ್ತದೆ. ಇಂದಿನ ಶೇ 90 ಕ್ಕೂ ಹೆಚ್ಚಿನ ಕಾರು, ಬೈಕ್‌ಗಳಲ್ಲಿ ಹ್ಯಾಲೋಜಿನ್ ಬಲ್ಬ್‌ಗಳೇ ಇವೆ. ಹ್ಯಾಲೋಜಿನ್ ಅನಿಲ ಹೆಚ್ಚು ಶಾಖ ಹೊಂದದ ಕಾರಣ, ಹೆಡ್ ಲೈಟ್ ಅಸೆಂಬ್ಲಿ ಬಿಸಿಯಾಗದು.
 
ಹ್ಯಾಲೋಜಿನ್ ಅನಿಲ ಆವರ್ತನದಲ್ಲಿ ಕೆಲಸ ಮಾಡುತ್ತದೆ. ಅಂದರೆ ಅನಿಲ ವಿಭಜನೆ ಮೂಲಕ ಶಕ್ತಿ ಉತ್ಪಾದನೆಯಾಗುತ್ತದೆ. ಹಾಗಾಗಿ ಬಲ್ಬ್‌ನ ಕಾಯಿಲ್ ಹಾಳಾಗುವುದಿಲ್ಲ. ಅಲ್ಲದೇ, ಸಾಂಪ್ರದಾಯಿಕ ಬಲ್ಬ್‌ಗಳಲ್ಲಿ ಶೇಖರಗೊಳ್ಳುವ ಇಂಗಾಲ ಇಲ್ಲಿ ಇರದು. ಹಾಗಾಗಿ ಸ್ವಚ್ಚವಾದ ಬಲ್ಬ್ ಎಂದೂ ಇದನ್ನು ಕರೆಯಬಹುದು!

ಕ್ಸೆನಾನ್ ಲೈಟಿಂಗ್ ಸಿಸ್ಟಂ
ಬಲ್ಬ್‌ಗಳಲ್ಲೇ ಅತಿ ಸುಧಾರಿತ ನೂತನ ತಂತ್ರಜ್ಞಾನವಿದು. ಸಾಂಪ್ರದಾಯಿಕ ಬಲ್ಬ್‌ಗಳಂತೆ ಆನೋಡ್, ಕ್ಯಾಥೋಡ್ ತುದಿಗಳನ್ನು ಸೇರಿಸುವ ಫಿಲಮೆಂಟ್ ಇಲ್ಲಿಲ್ಲ! ಬದಲಿಗೆ ಅಣು ಶಕ್ತಿ ಮಾದರಿಯಲ್ಲಿ ಅನಿಲದ ಅಣು ವಿಭಜನೆಯ ಮೂಲಕ ಬೆಳಕು ತಯಾರಿಸಲಾಗುತ್ತದೆ. ವಾಸ್ತವದಲ್ಲಿ ಯಾವುದೇ ಅನಿಲದ ಅಣುವಿಭಜನೆ ಮೂಲಕ ಬೆಳಕು ಪಡೆಯಬಹುದು. ಆದರೆ ಅಪಾಯ ಹೆಚ್ಚು.
 
ಹಾಗಾಗಿ ಶಾಖ ಹೊಮ್ಮಿಸದೇ, ಕೇವಲ ಬೆಳಕನ್ನು ಮಾತ್ರ ನೀಡುವ ಜಡ ಅನಿಲ ಬಳಕೆಯಾಗುತ್ತದೆ. ಅಂತಹ ಅನಿಲದಲ್ಲಿ ಕ್ಸೆನಾನ್ ಸಹ ಒಂದು. ಕ್ಸೆನಾನ್ ಲೈಟ್ ಶುಭ್ರ ಬಿಳಿ ಬೆಳಕನ್ನು ಹೊಮ್ಮಿಸುತ್ತದೆ. ಕಾರಣ ಇಲ್ಲಿ ಫಿಲಮೆಂಟ್ ಇಲ್ಲದ ಕಾರಣ ಶಾಖ ಉತ್ಪಾದನೆಯಾಗದು. ಅನಿಲ ವಿಭಜನೆಗೊಂಡು ಬೆಳಕು ಉತ್ಪತ್ತಿಯಾದಾಗ, ಬೆಳಕನ್ನು ಶೇಖರಿಸುವ ನಿಮ್ನ ಮಸೂರವೊಂದನ್ನು ಅಳವಡಿಸಲಾಗಿರುತ್ತದೆ.

ಚಿತ್ರಮಂದಿರಗಳ ಪ್ರೊಜೆಕ್ಟರ್‌ಗಳಲ್ಲಿ ಇರುವ ಮಸೂರದ ಮಾದರಿಯಿದು. ಈ ಮಸೂರ ಬೆಳಕನ್ನು ಕೇಂದ್ರೀಕರಿಸಿ ರಸ್ತೆಗೆ ಹೊಮ್ಮಿಸುತ್ತದೆ. ಕ್ಸೆನಾನ್ ಅನಿಲ ಸಾಮಾನ್ಯವಾಗಿ 10 ಲಕ್ಷ ಅಣುವಿದಳನಕ್ಕೆ ಒಳಪಡಬಲ್ಲದು. ಅಂದರೆ ಈ ಬಲ್ಬ್‌ನ ಆಯಸ್ಸು ಸುಮಾರು 30 ವರ್ಷ. ವಾಹನ ಹಳೆಯದಾಗಿ ಗುಜರಿಗೆ ಹೊದರೂ, ಬಲ್ಬ್ ಮಾತ್ರ ಹೊಸತರಂತೆಯೇ ಇರುತ್ತದೆ!

 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.