ADVERTISEMENT

ಆಟೋ ಟೆಕ್

​ಪ್ರಜಾವಾಣಿ ವಾರ್ತೆ
Published 23 ಮೇ 2012, 19:30 IST
Last Updated 23 ಮೇ 2012, 19:30 IST

ಬೆಂಕಿಯಲ್ಲಿ ಶಕ್ತಿಯಿದೆ ಎಂದು ಕಂಡುಕೊಂಡಿದ್ದೇ ಮನುಷ್ಯನ ಮಹಾನ್ ಸಾಧನೆ. ಇದೇ ಬೆಂಕಿಯನ್ನು ನಿಯಂತ್ರಿಸಿ ಅದನ್ನು ವಾಹನದ ಮೂಲಕ ಚಲನೆಗೂ ಬಳಸಿಕೊಂಡಿದ್ದು ಅವನ ಅಪರಿಮಿತ ಬುದ್ಧಿಶಕ್ತಿಗೆ ಸಾಕ್ಷಿ.
 
ವಾಹನ ಚಲನೆಗೆ ಒಳಪಡಬೇಕಾದರೆ ಇಂಧನ ಉರಿಯುವುದು ಅಗತ್ಯ. ಇಂದಿನ ಅಂತರ್ದಹನ ಎಂಜಿನ್‌ಗಳಲ್ಲಿ ಇಂಧನ ಉರಿಯುವುದು ಕಣ್ಣಿಗೆ ಕಾಣುವುದೂ ಇಲ್ಲ. ಸೈಲೆನ್ಸರ್‌ನ ತುದಿಯಲ್ಲಿ ಸುಟ್ಟ ವಾಸನೆಯ ಹೊಗೆ ಬರುವುದೊಂದೇ ಇಂಧನ ಉರಿಯುತ್ತಿದೆ ಎಂದು ಒಪ್ಪಿಕೊಳ್ಳಲು ಇರುವ ಸಾಕ್ಷಿ.

ಇಂಧನ ಉರಿಯುವಿಕೆ ಕಣ್ಣಿಗೆ ಕಾಣದೇ ಇದ್ದರೂ, ಉರಿಯುವುದಂತೂ ನಿಜ. ಹಾಗಾದರೆ ಈ ಉರಿಯುವಿಕೆ ಹೇಗೆ ಸಂಭವಿಸುತ್ತದೆ? ಜಾಣ ತಂತ್ರಜ್ಞ ಅದಕ್ಕೆಂದೇ ಎರಡು ಮಹಾನ್ ತಂತ್ರಜ್ಞಾನಗಳನ್ನು ಸಂಶೋಧಿಸಿದ್ದಾನೆ. ಅವೇ ಸಿಡಿಐ ಸಿಸ್ಟಂ ಹಾಗೂ ಇಗ್ನಿಷನ್.


ಸಿಡಿಐ ಸಿಸ್ಟಂ

ಇದು ವಿದ್ಯುತ್ ಡೈನಮೋ ತಂತ್ರಜ್ಞಾನದಂತೇ ಕಾರ್ಯನಿರ್ವಹಿಸುವ, ಆದರೆ ಕೊಂಚ ವಿಭಿನ್ನವಾದ ತಂತ್ರಜ್ಞಾನ. ಡೈನಮೋ ವಿದ್ಯುತ್ ಉತ್ಪಾದಿಸಿದರೆ ಇದು ಕೇವಲ ಕಿಡಿಯನ್ನು ಮಾತ್ರ ಉತ್ಪಾದಿಸುತ್ತದೆ. ತಾಮ್ರದ ಸುರುಳಿ ತಂತಿಗಳನ್ನು ಒಳಗೊಂಡ ಚಕ್ರವೊಂದು ವಾಹನದ ಎಂಜಿನ್‌ಗೆ ಅಳವಡಿಸಲ್ಪಟ್ಟಿರುತ್ತದೆ.
 
ಇದು ಎಂಜಿನ್ ಚಲನೆಯಲ್ಲಿ ಇರುವಾಗ ಅದರೊಂದಿಗೆ ತಿರುಗುತ್ತಿರುತ್ತದೆ. ತಿರುಗುತ್ತಿರುವಂತೆಯೇ ಇದು ನಿರಂತರವಾಗಿ ವಿದ್ಯುತ್ ಕಿಡಿಯನ್ನು ಉತ್ಪಾದಿಸುತ್ತ ಕಿಡಿಯನ್ನು ಎಂಜಿನ್‌ನ ಹೆಡ್‌ಗೆ ಸ್ಪಾರ್ಕ್ ಪ್ಲಗ್ ಮೂಲಕ ಸಾಗಿಸಿ, ಇಂಧನ ದಹಿಸುವಂತೆ ಮಾಡುತ್ತದೆ.

ಎಂಜಿನ್‌ನ ಕಿಕ್ ಸ್ಟಾರ್ಟ್ ಅಥವಾ ಎಲೆಕ್ಟ್ರಿಕ್ ಸ್ಟಾರ್ಟ್‌ನಲ್ಲಿ ಸಿಡಿಐ ಕಾಯಿಲ್ ಮೂಲಕ ಕಿಡಿಯನ್ನು ಉತ್ಪಾದಿಸಿ ಎಂಜಿನ್ ಮೊದಲು ಚಲನೆಗೆ ಒಳಪಡುತ್ತದೆ. ಒಮ್ಮೆ ಎಂಜಿನ್ ಚಲನೆಗೆ ಒಳಪಟ್ಟ ಮೇಲೆ ಇದು ನಿರಂತರ ಸರಣಿ ಪ್ರಕ್ರಿಯೆಯಾಗಿ ಎಂಜಿನ್ ಚಾಲನೆಯಲ್ಲೇ ಇರುವಂತೆ ನೋಡಿಕೊಳ್ಳುತ್ತದೆ.


ಇಗ್ನಿಷನ್
ಇದೊಂದು ಸರಳ, ಆದರೆ ಅತ್ಯಂತ ಅನಿವಾರ್ಯ ಹಾಗೂ ಅಗತ್ಯ ತಂತ್ರಜ್ಞಾನ. ಸಿಡಿಐ ಸಿಸ್ಟಂ ಕಿಡಿಯನ್ನು ಉತ್ಪಾದಿಸುವುದೇನೋ ನಿಜ. ಆದರೆ ಅದಕ್ಕೆ ಉತ್ಪಾದಿಸು ಎಂದು ಆಜ್ಞೆಯನ್ನು ನೀಡುವುದು ಈ ಇಗ್ನಿಷನ್. ಲ್ಯಾಟಿನ್ ಮೂಲದ ಇಗ್ನೈಟ್ ಎಂಬ ಪದದ, ಬೆಂಕಿ ಎಂಬರ್ಥ ತರುವ ಶಬ್ದದ ಈ ಸಾಧನ, ವಾಹನದಲ್ಲಿ ಅನೇಕ ಕಾರ್ಯಗಳನ್ನು ಮಾಡುತ್ತದೆ.
 
ವಾಹನದ ಕೀಲಿಕೈ ಮೂಲಕ ಇದು ಕೆಲಸ ಮಾಡುತ್ತದೆ. ಕೀಲಿಕೈ ಬಳಸಿ ಇಗ್ನಿಷನ್‌ನ್ನು ಬಳಸಲಾಗುತ್ತದೆ. ಇದೊಂದು ಎಲೆಕ್ಟ್ರಾನಿಕ್ ಸರ್ಕ್ಯೂಟ್ (ಜಾಲ) ಆಧಾರದ ಮೇಲೆ ಕಾರ್ಯನಿರ್ವಹಿಸುವ ತಂತ್ರಜ್ಞಾನ. ಯಾವುದೇ ಎಲೆಕ್ಟ್ರಾನಿಕ್ ಸಂಜ್ಞೆ ಪೂರ್ಣಗೊಳ್ಳಲು ವಿದ್ಯುತ್ ಪೂರೈಕೆ ಆರಂಭವಾದ ಸ್ಥಳದಿಂದ ಜಾಲದಲ್ಲಿ ಸಾಗಿ, ಮತ್ತೆ ಆರಂಭಗೊಂಡ ಸ್ಥಾನಕ್ಕೆ ಬರಬೇಕು.
 
ಮಧ್ಯ ತುಂಡಾದರೆ ವೃತ್ತ ಪರಿಪೂರ್ಣವಾಗದು. ಇದೇ ಸಿದ್ಧಾಂತ ಆಧಾರಿತ ಈ ತಂತ್ರಜ್ಞಾನ, ಇಗ್ನಿಷನ್‌ನಲ್ಲಿಯೂ ಇದೆ. ಅಪರಿಪೂರ್ಣ ಸರ್ಕ್ಯೂಟ್ ಅನ್ನು ಕೀಲಿಕೈ ಮೂಲಕ ಪೂರ್ಣಗೊಳಿಸಲಾಗುತ್ತದೆ. ಆಗ ಎಂಜಿನ್ ಸ್ಟಾರ್ಟ್ ಮಾಡಲು ಕಿಕ್ ಹೊಡೆದಾಗ ಕಿಡಿ ಉತ್ಪನ್ನವಾಗಿ ಎಂಜಿನ್ ಚಾಲೂ ಆಗುತ್ತದೆ. ವಿದ್ಯುದ್‌ವೃತ್ತ ಪರಿಪೂರ್ಣವಾಗದೇ ಇದ್ದರೆ, ಯಾವ ಕಾರಣಕ್ಕೂ ಎಂಜಿನ್ ಚಾಲೂ ಆಗದು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT