ADVERTISEMENT

ಇನ್ ಬಾಕ್ಸ್

​ಪ್ರಜಾವಾಣಿ ವಾರ್ತೆ
Published 18 ಜುಲೈ 2012, 19:30 IST
Last Updated 18 ಜುಲೈ 2012, 19:30 IST
ಇನ್ ಬಾಕ್ಸ್
ಇನ್ ಬಾಕ್ಸ್   

`ನಾನು ಫೇಲಾಗಿದ್ದೆ~ (ಕಾಮನಬಿಲ್ಲು ಜುಲೈ 12) ಲೇಖನ ಕೇವಲ ಲೇಖಕರ ಅನುಭವವಷ್ಟೇ ಅಲ್ಲ. ಮಾಧ್ಯಮದ ಗೊಂದಲ ಮತ್ತು ಪಾಲಕರ ಆಕಾಂಕ್ಷೆಗಳ ಮಧ್ಯೆ ತಮ್ಮತನವನ್ನು ಕಳೆದುಕೊಳ್ಳುತ್ತಿರುವ ಎಲ್ಲಾ ವಿದ್ಯಾರ್ಥಿಗಳ ಬದುಕಿನ ಕಥನ. ರಘುನಾಥ ಚ.ಹ. ಅವರು ಪದಗಳಲ್ಲಿ ಇದನ್ನು ಹಿಡಿದಿಟ್ಟಿರುವ ಶೈಲಿ ಬಹಳ ಆತ್ಮೀಯವಾದದ್ದು. ಪರಿಣಾಮವಾಗಿ ಇದು ತಮಾಷೆಯಾಚೆಯ ವಾಸ್ತವಗಳನ್ನು ಸ್ಪರ್ಶಿಸುತ್ತಿದೆ.
  ಎಚ್.ಕೆ. ನಿರಂಜನ, ಹಾಸನ

ರಘುನಾಥ ಚ.ಹ. ಅವರ `ನಾನು ಫೇಲಾಗಿದ್ದೆ~ ಅನುತ್ತೀರ್ಣತೆಯ ಹಿಂದಿನ ವಾಸ್ತವವನ್ನು ತೆರೆದಿಟ್ಟಿತು. ಬರಹದ ಅನನ್ಯ ಶೈಲಿ ಇಷ್ಟವಾಯಿತು.

ಡಾ.ಶ್ರೀನಿವಾಸ ಕಕ್ಕಿಲ್ಲಾಯ, ಮಂಗಳೂರು,  ಕೆ. ನಂಜುಂಡೇಗೌಡ, ಹಾಸನ, ಬಿ.ಎಲ್.ರಾಮಚಂದ್ರಪ್ಪ, ಅರಸೀಕೆರೆ, ಟಿ. ಪ್ರಕಾಶ್, ಮೈಸೂರು
ರಘುನಾಥ ಚ.ಹ. ಅವರ `ನಾನು ಫೇಲಾಗಿದ್ದೆ~ ಓದಿದ ಮೇಲೆ ನಾನು ಫೇಲಾಗದೆ ಬಹಳಷ್ಟನ್ನು ಕಳೆದುಕೊಂಡಿದ್ದೇನೆ ಅನ್ನಿಸಿತು.

ಒಂದು ಪರೀಕ್ಷೆಯಲ್ಲಿ ಫೇಲಾಗುವುದು ಬದುಕಿನಲ್ಲಿ ಫೇಲಾದಂತಲ್ಲ ಎಂಬುದನ್ನು ಲೇಖಕರು ಬಹಳ ಚೆನ್ನಾಗಿ ಧ್ವನಿಸಿದ್ದಾರೆ. ಇದು ಅವರದೇ ಅನುಭವವೋ ಅಥವಾ ಹಲವರ ಅನುಭವಗಳ ಗುಚ್ಛವೋ ತಿಳಿಯದು. ವಿದ್ಯಾರ್ಥಿಯೊಬ್ಬ ಫೇಲಾಗುವುದರ ಹಿಂದಿನ ಕಾರಣಗಳ ಸಂಕೀರ್ಣತೆಯನ್ನಂತೂ ಈ ಲೇಖನ ತೋರಿಸಿಕೊಟ್ಟಿತು.
  ಜೆ.ಎಸ್. ಸದಾನಂದ, ಚಿಕ್ಕಬಳ್ಳಾಪುರ

ಯೂರೋಪಿನಿಂದ ಬಂದ ಸಂಶೋಧಕರ ತಂಡ ಕೋಲಾರದಂಥ ಹಿಂದುಳಿದ ಜಿಲ್ಲೆಗಳ ಮಕ್ಕಳನ್ನು ತಲುಪುವ ಆಕಾಶ ಸಂಬಂಧವೊಂದನ್ನು ವಿವರಿಸಿದ ನರಸಿಂಹಮೂರ್ತಿಯವರಿಗೆ ಧನ್ಯವಾದಗಳು.
  ಎಸ್. ಮುನಿಕೃಷ್ಣಪ್ಪ, ಮಾಲೂರು

ADVERTISEMENT

`ಕಾಮನಬಿಲ್ಲು~ ಪುರವಣಿಯ ಜುಲೈ 5ರ ಸಂಚಿಕೆಯ `ಸೀಳ್ ನುಡಿ~ ವಿಭಾಗದಲ್ಲಿ `ಗೂಬೆ~ ಎಂಬ ಹೆಸರಿನ ಪ್ರಸ್ತಾಪವಿದೆ. ಈ ಪಕ್ಷಿಯ ನಿಜವಾದ ಹೆಸರು ಗೂಗೆ ಅಥವಾ ಗೂಗಿ. ಇದು ಸಂಸ್ಕೃತದಿಂದ ಕನ್ನಡಕ್ಕೆ ಬಂದ ತದ್ಭವ. ಸಂಸ್ಕೃತದಲ್ಲಿ ಈ ಪಕ್ಷಿಗೆ `ಘೂಕ~ ಎನ್ನುತ್ತಾರೆ.

ಕನ್ನಡಕ್ಕೆ ಬರುವಾಗ ಮಹಾಪ್ರಾಣ `ಘೂ~ಕ್ಕೆ ಬದಲಾಗಿ ಅಲ್ಪಪ್ರಾಣ `ಗೂ~ ಎಂದಾಗುತ್ತದೆ. ವ್ಯಾಕರಣದಲ್ಲಿ ಕ, ತ, ಪ ಕಾರಗಳು ಕ್ರಮವಾಗಿ ಗ,ದ,ಬ ಕಾರಗಳಾಗುತ್ತವೆ. ಇಲ್ಲಿ ಕಕಾರ ಗಕಾರವಾಗಿದೆ. ಗೂಗ ಕ್ರಮೇಣ ಗೂಗೆ ಆಗಿ ಗೂಗಿಯಾಗಿ ಪರಿವರ್ತನೆಯಾಗಿದೆ.

ಗೂಬೆ ಅನ್ನುವುದು `ಬ~ ಎಲ್ಲಿಂದ ಬಂತೋ ಗೊತ್ತಿಲ್ಲ. ವರಕವಿ ದ.ರಾ.ಬೇಂದ್ರೆ ತಮ್ಮ ಕಾವ್ಯದಲ್ಲಿ ಇದನ್ನು `ಗೂಗಿ~ ಎಂದೇ ಕರೆದಿದ್ದಾರೆ. ಅನೇಕ ಪದಗಳು ಇಕಾರಾಂತಗಳಾಗುವುದು ಉತ್ತರ ಕರ್ನಾಟಕ ಕನ್ನಡದ ವೈಶಿಷ್ಟ್ಯ. ಕತ್ತೆ-ಕತ್ತಿ, ಆನೆ-ಆನಿ, ಒಂಟೆ-ಒಂಟಿ ಹೀಗೆ.
  ಶಶಿಕಲಾ ವೀರಯ್ಯಸ್ವಾಮಿ, ಬೀದರ

ಸೀಳ್‌ನುಡಿ ವಿಭಾಗದಲ್ಲಿ ಬರುತ್ತಿರುವ ಪದಗಳ ಕುರಿತ ವಿವರಣೆ ಕುತೂಹಲಕಾರಿಯಾಗಿದೆ. ಈ ವಿವರಗಳನ್ನು ನುರಿತ ಭಾಷಾವಿಜ್ಞಾನಿಗಳ ಅಭಿಪ್ರಾಯಗಳೊಂದಿಗೆ ಪ್ರಕಟಿಸಿದರೆ ವಿದ್ಯಾರ್ಥಿಗಳಿಗೂ ಅನುಕೂಲವಾಗುತ್ತದೆ.
  ಎಸ್.ಕೆ. ರಾವ್, ಕೆ.ಆರ್. ನಗರ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.