ADVERTISEMENT

ಕಾಲೇಜಿನಲ್ಲಿ ಚೆಂಡೆಮದ್ದಲೆ...

​ಪ್ರಜಾವಾಣಿ ವಾರ್ತೆ
Published 11 ಅಕ್ಟೋಬರ್ 2011, 19:30 IST
Last Updated 11 ಅಕ್ಟೋಬರ್ 2011, 19:30 IST

ಕಾಲೇಜಿನಲ್ಲಿ `ಸಾಂಪ್ರದಾಯಿಕ ದಿನ~ ಅಥವಾ `ಎಥ್ನಿಕ್ ಡೇ~ ಆಚರಣೆಗೆ ನಿಗದಿತ ದಿನವಿಲ್ಲ. ತಮ್ಮ ಅನುಕೂಲಕ್ಕೆ ತಕ್ಕಂತೆ ಒಂದು ದಿನವನ್ನು ಸಾಂಪ್ರದಾಯಿಕ ದಿನವನ್ನಾಗಿ ಆಚರಿಸಲಾಗುತ್ತದೆ.
 
ಆದರೆ ಎಚ್‌ಕೆಬಿಕೆ ಎಂಜಿನಿಯರಿಂಗ್ ಕಾಲೇಜಿನ ವಿದ್ಯಾರ್ಥಿಗಳು ಮಾತ್ರ ಇತ್ತೀಚೆಗೆ `ಎಥ್ನಿಕ್ ಡೇ~ಯನ್ನು ವಿಶಿಷ್ಟ ರೀತಿಯಲ್ಲಿ ಆಚರಿಸಿದರು. ಅದಕ್ಕೆಂದೇ ಅವರು `ಓಣಂ ಹಬ್ಬ~ದ ಥೀಮ್ ಅನ್ನು ಆರಿಸಿಕೊಂಡಿದ್ದರು.

ಓಣಂ ಎಂದರೆ ಗೊತ್ತಲ್ಲ. ಮಹಾಬಲಿ, ಕೇರಳ ಸೀರೆ, ಮುಂಡು, ಪೂಕ್ಕಳಂ.... ಇತ್ಯಾದಿ. ಇಲ್ಲೂ ಅಷ್ಟೆ. ಕೇರಳದಲ್ಲಿ ಆಚರಿಸುವಂತೆ ಅದೇ ಸಾಂಪ್ರದಾಯಿಕ ಮಾದರಿಯಲ್ಲೇ ವಿದ್ಯಾರ್ಥಿಗಳು ಆಚರಿಸಿದರು.

ಇದೇ ದಿನವನ್ನು ಹೊಸ ವಿದ್ಯಾರ್ಥಿಗಳನ್ನು ಸ್ವಾಗತ ಕೋರುವ ದಿನವನ್ನಾಗಿಯೂ ಆಚರಿಸಲಾಯಿತು. ಸಾಂಪ್ರದಾಯಿಕ ರೀತಿಯಲ್ಲಿ ಉಡುಪು ಧರಿಸಲು ವಿದ್ಯಾರ್ಥಿಗಳಿಗೆ ದೊರೆತ ಉತ್ತಮ ಸಂದರ್ಭ ಇದಾಗಿತ್ತು.

ಯುವತಿಯರು ಕೇರಳ ಸೀರೆ, ಸಲ್ವಾರ್‌ನಲ್ಲಿ ಕಂಗೊಳಿಸಿದರೆ, ಯುವಕರು ಕೇರಳದ ಸಾಂಪ್ರದಾಯಿಕ ಮುಂಡು (ಪಂಚೆ)ಧರಿಸಿ ಎಲ್ಲರ ಗಮನ ಸೆಳೆದರು. ಮತ್ತೆ ಕೆಲವರು ಧೋತಿ ಮತ್ತು ಕುರ್ತಾ ಧರಿಸಿ ಕಾಲೇಜಿಗೆ ಬಂದಿದ್ದರು.

`ಎಥ್ನಿಕ್ ಡೇ~ ಕೇರಳೀಯ ಶೈಲಿಯ `ಶಿಂಗಾರಿ ಮೇಳ~ ಅಥವಾ ಚೆಂಡೆ ಮೇಳ ದೊಂದಿಗೆ ಆರಂಭಗೊಂಡಿತು. ಸಾಂಪ್ರದಾಯಿಕ ರೀತಿಯಲ್ಲಿ ಉಡುಪು ಧರಿಸಿದ ಕಾಲೇಜಿನ ವಿದ್ಯಾರ್ಥಿಗಳು ಚೆಂಡೆ ಬಾರಿಸಿದಾಗ ಆ ಚೆಂಡೆಯ ನಾದ ಇಡೀ ಕಾಲೇಜಿಗೆ ಕೇಳಿಸುವಂತಿತ್ತು.

ಇದೇ ವೇಳೆ ಕಾಲೇಜಿನ ನಾಲ್ಕನೇ ವರ್ಷದ ವಿದ್ಯಾರ್ಥಿ ಮಹಾಬಲಿಯ ವೇಷ ಧರಿಸಿ ಮತ್ತಷ್ಟು ರಂಗೇರಿಸಿದನು.

ಕೇರಳದ ಸಾಂಪ್ರದಾಯಿಕ ಬಿಳಿ ಮತ್ತು ಚಿನ್ನದ ಬಣ್ಣದ ಬಾರ್ಡರ್‌ನ ಸೀರೆ ಧರಿಸಿದ ಯುವತಿಯರು ಶಿಂಗಾರಿ ಮೇಳ ಮತ್ತು ಮಹಾಬಲಿಯನ್ನು ಕಾರ್ಯಕ್ರಮ ನಡೆಯುವ ಮುಖ್ಯ ವೇದಿಕೆಯತ್ತ ಕರೆದುಕೊಂಡು ಹೋದರು.

ಕಾಲೇಜಿನ ಆಡಳಿತಾಧಿಕಾರಿ ಅಬ್ದುಲ್ ಹಮೀದ್ ಮತ್ತು ಪ್ರಾಂಶುಪಾಲರಾದ ಸಿ.ಮಂಜುನಾಥ್ ಸೇರಿದಂತೆ ಕಾರ್ಯಕ್ರಮದ ಮುಖ್ಯ ಅತಿಥಿಗಳನ್ನು ಕೇರಳದ ಸಾಂಪ್ರದಾಯಿಕ ಶಾಲು `ಪೊನ್ನಾಡ~ ಹಾಕಿ ವಿದ್ಯಾರ್ಥಿಗಳು ಸ್ವಾಗತಿಸಿದರು. ನಂತರ ಹಲವು ಕಾರ್ಯಕ್ರಮಗಳು ನಡೆದವು.

ಕಾರ್ಯಕ್ರಮದ ಮೊದಲ ಭಾಗವಾಗಿ ಹಿರಿಯ ವಿದ್ಯಾರ್ಥಿಗಳು ಹೊಸ ವಿದ್ಯಾರ್ಥಿಗಳಿಗಾಗಿ ಪ್ರತಿಭಾ ಶೋಧ ಸ್ಪರ್ಧೆ ಏರ್ಪಡಿಸಿದ್ದರು. ಮೂರು ಸುತ್ತುಗಳಲ್ಲಿ ಈ ಸ್ಪರ್ಧಾ ಕಾರ್ಯಕ್ರಮ ನಡೆಸಲಾಗಿತ್ತು. ಮೊದಲನೆಯದಾಗಿ ನಡೆದ ಪರಿಚಯ ಸುತ್ತಿನಲ್ಲಿ ವಿದ್ಯಾರ್ಥಿಗಳು ತಮ್ಮನ್ನು ಸಂಕ್ಷಿಪ್ತವಾಗಿ ಪರಿಚಯ ಮಾಡಿಕೊಳ್ಳಬೇಕಿತ್ತು.

ಪ್ರತಿಭಾ ಸ್ಪರ್ಧೆಯಲ್ಲಿ ವಿದ್ಯಾರ್ಥಿಗಳು ತಮ್ಮ ಪ್ರತಿಭೆಯನ್ನು ಪ್ರದರ್ಶಿಸಬೇಕಿತ್ತಲ್ಲದೆ `ಟಾಸ್ಕ್~ ಸುತ್ತಿನಲ್ಲಿ  ವಿದ್ಯಾರ್ಥಿಗಳಿಗೆ ಅನಿರೀಕ್ಷಿತವಾದ ಪ್ರಶ್ನೆಗಳನ್ನು ಕೇಳಲಾಗಿತ್ತು.

ವಿದ್ಯಾರ್ಥಿಗಳು ನೀಡಿದ ಉತ್ತರಗಳ ಆಧಾರದಲ್ಲಿ ಅವರ ಪ್ರತಿಭೆ ಅಳೆಯಲಾಗಿತ್ತು. ಪ್ರತಿಭಾ ಸುತ್ತಿನಲ್ಲಿ ಹೊಸ ವಿದ್ಯಾರ್ಥಿಗಳು ನೆರೆದಿದ್ದ ಸಭಿಕರನ್ನು ಮೂಕವಿಸ್ಮಿತರನ್ನಾಗಿಸಿದರು.

ಜತೆಗೆ ಮೆಣಸಿನ ಕಾಯಿ ತಿನ್ನುವುದು, ಅಧ್ಯಾಪಕರಿಗಾಗಿ ನಿಧಾನವಾಗಿ ಬೈಕ್ ಓಡಿಸುವುದು ಮುಂತಾದ ಸ್ಪರ್ಧೆಗಳನ್ನು ಆಯೋಜಿಸಲಾಗಿತ್ತಲ್ಲದೆ ಅಂತರ್ ವಿಭಾಗದವರಿಗಾಗಿ ಪೂಕ್ಕಳಂ ಸ್ಪರ್ಧೆಯನ್ನು ಏರ್ಪಡಿಸಲಾಗಿತ್ತು.

 `ಎಥ್ನಿಕ್ ಡೇ~ ಸಂಪ್ರದಾಯವನ್ನು ನೆನಪಿಸಿಕೊಳ್ಳುವ ದಿನವಾದರೂ ಕೂಡ ವಿದ್ಯಾರ್ಥಿಗಳಿಗೆ ಇದು ಅದಕ್ಕಿಂತಲೂ ಹೆಚ್ಚಾಗಿ ಪರಸ್ಪರ ಪರಿಚಯ ಮಾಡಿಕೊಳ್ಳುವ ಅವಕಾಶವನ್ನು ನೀಡುತ್ತದೆ. ಇಂತಹ ಆಚರಣೆಗಳು ಬಂದಾಗ ಪಾಠಗಳನ್ನೆಲ್ಲ ಬದಿಗಿತ್ತು ಸಂತೋಷದಿಂದ ಸಾಂಪ್ರದಾಯಿಕ ಉಡುಪು ಧರಿಸಿ ಖುಷಿ ಪಡುತ್ತಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.