ADVERTISEMENT

ಕುಂದದ ಉತ್ಸಾಹ...

​ಪ್ರಜಾವಾಣಿ ವಾರ್ತೆ
Published 29 ಮಾರ್ಚ್ 2011, 19:30 IST
Last Updated 29 ಮಾರ್ಚ್ 2011, 19:30 IST
ಕುಂದದ ಉತ್ಸಾಹ...
ಕುಂದದ ಉತ್ಸಾಹ...   

ಫೆಸ್ಟ್...ಫೆಸ್ಟ್... ಬೆಂಗಳೂರಿನ ಎಲ್ಲಾ ಕಾಲೇಜುಗಳಲ್ಲಿ ಈಗ ಫೆಸ್ಟ್‌ಗಳದ್ದೇ ಕಾಲ. ಜೈನ್ ಕಾಲೇಜಿನಲ್ಲಿ ಇತ್ತೀಚೆಗೆ ವಿದ್ಯಾರ್ಥಿಗಳೇ ಆಯೋಜಿಸಿದ್ದ ಫೆಸ್ಟ್ ‘ಜೈನಿಕಾ’ದಲ್ಲಂತೂ ವಿದ್ಯಾರ್ಥಿಗಳು ಭಾರೀ ಚಟುವಟಿಕೆಯಿಂದ ಅತ್ತಿತ್ತ ಓಡಾಡುತ್ತಿದ್ದರು.

ಇದೇ ಮೊದಲ ಬಾರಿಗೆ ಜೈನ್ ಕಾಲೇಜು ತನ್ನ ನೂತನ ಕ್ಯಾಂಪಸ್‌ನಲ್ಲಿ ಫೆಸ್ಟ್ ಆಯೋಜಿಸಿತ್ತು. ಆದರೆ ಫೆಸ್ಟ್ ನಡೆಯುವ ಸ್ಥಳ ಬದಲಾವಣೆಯಾದರೇನಂತೆ, ವಿದ್ಯಾರ್ಥಿಗಳ ಉತ್ಸಾಹ ಮಾತ್ರ ಕಿಂಚಿತ್ತೂ ಕಡಿಮೆಯಾಗಿರಲಿಲ್ಲ. ಅವರು ಎಂದಿನಂತೆ ಉತ್ಸಾಹದಿಂದಲೇ ಇದ್ದರಲ್ಲದೆ ನೆರೆದಿದ್ದ ಸಮೂಹವನ್ನು ಖುಷಿಪಡಿಸುವಲ್ಲಿ ನಿರತರಾಗಿದ್ದರು.

ಮಿಸ್ಟರ್ ಆ್ಯಂಡ್ ಮಿಸ್ ಎಥ್‌ನಿಕ್ ಸ್ಪರ್ಧೆಯೊಂದಿಗೆ ಸಾಂಸ್ಕೃತಿಕ ಕಾರ್ಯಕ್ರಮ ಆರಂಭಗೊಂಡಿತು. ಸಾಂಪ್ರದಾಯಿಕ ಉಡುಪು ಧರಿಸಿದ್ದ ವಿದ್ಯಾರ್ಥಿಗಳು ರ್ಯಾಂಪ್ ಮೇಲೆ ನಡೆದಾಗ ವಿದ್ಯಾರ್ಥಿಗಳ ನಿರೀಕ್ಷೆ ಹುಸಿಯಾಗಲಿಲ್ಲ. ಯುವತಿಯರು ಸೀರೆ, ಸಲ್ವಾರ್ ಕಮೀಜ್ ಮತ್ತು ಅನಾರ್ಕಲಿ ಧರಿಸಿದರೆ ಪುರುಷರೇನೂ ಹಿಂದೆ ಬೀಳಲಿಲ್ಲ. ಬಿಳಿ ಕುರ್ತಾ, ಶೆರ್ವಾಣಿ ಮತ್ತು ಬಿಳಿ ಪಂಚೆ ಧರಿಸಿದ ಯುವಕರು ಯುವತಿಯರಿಗೆ ಸ್ಪರ್ಧೆ ನೀಡಿದರು. ನೃತ್ಯ ಸ್ಪರ್ಧೆ ಎರಡನೇ ದಿನದ ಆಕರ್ಷಣೆಯಾಗಿತ್ತು. ಸ್ಪರ್ಧೆಗೆಂದು ವೇದಿಕೆ ಏರಿದ ವಿದ್ಯಾರ್ಥಿಗಳು ತಮ್ಮ ಪ್ರತಿಭೆಯನ್ನು ಪ್ರದರ್ಶಿಸಿದರು.ಜಯನಗರ ಜೈನ್ ಕಾಲೇಜಿನ ವಿದ್ಯಾರ್ಥಿಗಳು ಬಾಲಿವುಡ್ ಡಾನ್ಸ್ ನಂಬರ್‌ಗಳನ್ನು ಪ್ರದರ್ಶಿಸಿದರು.

ಇದೇ ವೇಳೆ ಜೆಸಿ ರಸ್ತೆಯ ಜೈನ್ ಕಾಲೇಜಿನ ವಿದ್ಯಾರ್ಥಿಗಳು ಮುಖವಾಡ ಧರಿಸಿ ತಮ್ಮ ಎಂದಿನ ಕಾರ್ಯಕ್ರಮ ನೀಡಿದರು. ಆದರೆ ಪ್ರೇಕ್ಷಕರ ಮನಸ್ಸನ್ನು ಹಿಡಿದು ನಿಲ್ಲಿಸಿದ್ದು ಮಾತ್ರ  ವಿವಿಪುರಂ ಜೈನ್ ಕಾಲೇಜು ತಂಡ. ಕೆಲವು ಕನ್ನಡ ಹಾಡುಗಳನ್ನು ಆರಿಸಿ ನೃತ್ಯ ಪ್ರದರ್ಶಿಸಿದಾಗ ಇಡೀ ಸಭೆಯೇ ಹುಚ್ಚೆದ್ದು ಕುಣಿಯಿತಲ್ಲದೆ ಇನ್ನಷ್ಟು ನೃತ್ಯ ಪ್ರದರ್ಶಿಸುವಂತೆ ಕೂಗಿದರು.

ನೃತ್ಯ ಆಯಿತು. ಇನ್ನು ಸಂಗೀತ ಇಲ್ಲದಿದ್ದರೆ ಹೇಗೆ? ಡಿಜೆ ಮನೀಶ್ ಶೋಲೆ ಕೆಲವು ಹಳೆಯ ಮಿಕ್ಸ್‌ಡ್ ನಂಬರ್‌ಗಳನ್ನು ಪ್ರದರ್ಶಿಸಿದಾಗಂತೂ ಸಂಗೀತವೇ ಎರಡನೇ ದಿನದ ಹೈಲೈಟ್ ಆಗಿತ್ತೆಂದೇ ಹೇಳಬಹುದು. ಭಾರತೀಯ ಫ್ಯೂಷನ್ ಬ್ಯಾಂಡ್ ‘ಸ್ವರಲಯಾತ್ಮ’ದ ಕಾರ್ಯಕ್ರಮವಂತೂ ಸಭಿಕರಿಗೆ ರಂಜನೆ ನೀಡಿತು. ಸೋಲೋ ಕೊಳಲು ವಾದನವಂತೂ ಸಭಿಕರನ್ನು ಕೆಲವು ಕಾಲ ಸ್ತಬ್ಧರನ್ನಾಗಿಸಿತ್ತು. ಬಳಿಕ ಇದೇ ಬ್ಯಾಂಡ್ ‘ರಾಗ್ ಮಧ್ಯಂತಿ’ ರಾಗವನ್ನು ಆಲಾಪಿಸಿತಲ್ಲದೆ  ರಾಗದ ಕೊನೆಯಲ್ಲಿ ಚಪ್ಪಾಳೆ ಹೊಡೆಯುವ ಮೂಲಕ ತಮ್ಮೊಡನೆ ಸೇರಿಕೊಳ್ಳುವಂತೆ ಸಭಿಕರನ್ನು ಮನವಿ ಮಾಡಿಕೊಂಡಿತು.  ಕಾರ್ಯಕ್ರಮದ ಕಟ್ಟಕಡೆಗಂತೂ ‘ರೋಜಾ’ ಚಿತ್ರದ ‘ರೋಜಾ ಜಾನೇಮನ್’ ವಾದ್ಯ ಸಂಗೀತದಲ್ಲಿ ಮೂಡಿ ಬಂದಾಗ ಸಭಿಕರು ಎದ್ದು ನಿಂತು ಗೌರವ ಸೂಚಿಸಿದರು.

 ‘ಜೈನಿಕಾ’ದಲ್ಲಿಯೂ ಫ್ಯಾಷನ್ ಶೋ ಕೊನೆಯ ಕಾರ್ಯಕ್ರಮವಾಗಿತ್ತು. ಗಾರ್ಡನ್ ಸಿಟಿ ಕಾಲೇಜಿನ ವಿದ್ಯಾರ್ಥಿಗಳು ಶಿಮ್ಮರಿ ಪ್ಯಾಂಟ್ ಮತ್ತು ತ್ರೀ-ಫೋರ್ತ್‌ಗಳನ್ನು ಧರಿಸಿ ರ್ಯಾಂಪ್ ಏರಿದರು. ಬಳಿಕ ಎರಡನೆಯದಾಗಿ ಸುರಾನಾ ಕಾಲೇಜು ಬೇಸಿಗೆ ಮತ್ತು ಚಳಿಗಾಲದ ಥೀಮ್‌ಗಳೊಂದಿಗೆ ರ್ಯಾಂಪ್ ಮೇಲೆ ಕಾಣಿಸಿಕೊಂಡರು. ಶಾರ್ಟ್ ಧರಿಸಿದ  ಯುವಕರು ಮತ್ತು ಶಾರ್ಟ್ ಮತ್ತು ಟೈಟ್ಸ್‌ಗಳೊಂದಿಗೆ ಯುವತಿಯರು ಮಿಂಚಿದರು. ದೇವದೂತರು ಮತ್ತು ರಾಕ್ಷಸನ ಥೀಮ್‌ನೊಂದಿಗೆ ಸಿಟಿ ಕಾಲೇಜು ರ್ಯಾಂಪ್ ಏರಿತ್ತು. ಕೊನೆಯಲ್ಲಂತೂ ಜೈನ್ ಕಾಲೇಜು ರ್ಯಾಂಪ್ ಏರಿ ಮತ್ತಷ್ಟು ಕಳೆ ನೀಡಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.