ADVERTISEMENT

ಗಾಳಿಯ ಬೆನ್ನೇರಿ ಬೆಳಕಿನ ಸವಾರಿ!

ಯೋಗೇಶ್ ಮಾರೇನಹಳ್ಳಿ
Published 17 ಏಪ್ರಿಲ್ 2013, 19:59 IST
Last Updated 17 ಏಪ್ರಿಲ್ 2013, 19:59 IST

ಹುಬ್ಬಳ್ಳಿಯ ಅಕ್ಷಯ ಕಾಲೋನಿಯಲ್ಲಿರುವ ಆ ಮನೆಯ ಮೇಲೆ ಮೂರು ಫ್ಯಾನುಗಳು ತಿರುಗುತ್ತಿರುತ್ತವೆ. ಇವು ಸಾಧಾರಣ ಫ್ಯಾನುಗಳಲ್ಲ. ಇವು ಆ ಮನೆಗೆ ಬೇಕಾದ ವಿದ್ಯುತ್ ಪೂರೈಸುವ ಫ್ಯಾನ್‌ಗಳು. ಈ ಫ್ಯಾನುಗಳು ತಿರುಗಿಸುವ ಮೂರು ಟರ್ಬೈನುಗಳಿಂದ ತಯಾರಾಗುವ ವಿದ್ಯುತ್‌ನ ಪ್ರಮಾಣ 500 ವ್ಯಾಟ್. ಮನೆಯ ಬಹುತೇಕ ವಿದ್ಯುತ್ ಅಗತ್ಯವನ್ನು ಇದು ಪೂರೈಸುತ್ತದೆ. ಈ ವಿದ್ಯುತ್ ಸ್ವಾವಲಂಬನೆಯ ಯೋಜನೆಯನ್ನು ರೂಪಿಸಿದ್ದು ಐಐಟಿಯಲ್ಲಿ ಕಲಿತ ಎಂಜಿನಿಯರ್ ಅಲ್ಲ. ಇನ್ನಷ್ಟೇ ಡಿಪ್ಲೊಮಾ ಪೂರೈಸಬೇಕಾಗಿರುವ ಶಶಿಧರ ಆನಂದಮಠ.

ಹುಬ್ಬಳ್ಳಿಯ ಮೌಂಟ್ ಫರಾನ್ ಪಾಲಿಟೆಕ್ನಿಕ್‌ನಲ್ಲಿ ನಾಲ್ಕನೇ ಸೆಮಿಸ್ಟರ್ ಡಿಪ್ಲೊಮಾ ಕಲಿಯುತ್ತಿದ್ದಾರೆ. ವಿದ್ಯುತ್ ಎಂದೊಡನೆ ಅವರ ಮುಖ ಅರಳುತ್ತದೆ. ಗಾಳಿಯಲ್ಲಿ ವಿದ್ಯುತ್ ಹುಡುಕ ಹೊರಟ ಅವರು ಈಗ ಮಾಡಿರುವ ಕೆಲಸ ಸಣ್ಣದಲ್ಲ. ದೇಶ ನವೀಕರಿಸಬಹುದಾದ ಇಂಧನ ಮೂಲಗಳ ಹುಡುಕಾಟದಲ್ಲಿರುವಾಗ ಪವನಶಕ್ತಿಯನ್ನು ಗೃಹಬಳಕೆ ಉದ್ದೇಶಕ್ಕೆ ಉತ್ಪಾದಿಸಿ ತೋರಿಸಿದ್ದಾರೆ.

ಹುಬ್ಬಳ್ಳಿಯ ಅಕ್ಷಯ ಕಾಲೊನಿಯಲ್ಲಿ ಸೋದರಮಾವನ ಮನೆಯಲ್ಲಿರುವ ಶಶಿಧರ್, ಮನೆಯ ಮೇಲೆ ಮೂರು ಟರ್ಬೈನ್ ಅಳವಡಿಸಿ ಗಂಟೆಗೆ 500 ವ್ಯಾಟ್ಸ್ ವಿದ್ಯುತ್ ಉತ್ಪಾದಿಸುತ್ತಿದ್ದಾರೆ. ಪ್ರತಿದಿನ 12ರಿಂದ 24 ಗಂಟೆ ತಿರುಗುವ ಟರ್ಬೈನ್‌ಗಳಿಂದ ಉತ್ಪತ್ತಿಯಾದ ವಿದ್ಯುತ್‌ನಿಂದ ಮನೆ 24 ಗಂಟೆಗಳೂ ಬೆಳಗುತ್ತಿದೆ.

ಎರಡು ಅಂತಸ್ತಿನ ಮನೆಯ ಒಳಗಿನ ಮತ್ತು ಹೊರಗಿನ ಲೈಟುಗಳು, ಟಿ.ವಿ., ಫ್ಯಾನ್, ಕಂಪ್ಯೂಟರ್, ವಾಷಿಂಗ್ ಮೆಷೀನು ಇತರ ಗೃಹ ಬಳಕೆ ವಸ್ತುಗಳು ಶಶಿಧರ್ ಉತ್ಪಾದಿಸಿದ ಪವನ ವಿದ್ಯುಚ್ಛಕ್ತಿಯಿಂದ ನಡೆಯುತ್ತಿವೆ. ಹಲವು ಬಗೆಯ ತ್ಯಾಜ್ಯ ವಸ್ತುಗಳನ್ನು ಬಳಸಿ ಶಶಿಧರ್ ತಾವೇ ಟರ್ಬೈನ್‌ಗಳನ್ನು ತಯಾರಿಸಿದ್ದಾರೆ.

ಚಕ್ರದ ಒಳಗೆ ಜನರೇಟರ್- ಡೈನಮೊ ಅಳವಡಿಸಿದ್ದು, ಫ್ಯಾನ್ ತಿರುಗಿದಾಗ ಡೈನಮೊ ತಿರುಗುತ್ತದೆ. ಇದರಿಂದ ಡಿ. ಸಿ. ವಿದ್ಯುತ್ (ಡಿ.ಸಿ.- ಡೈರೆಕ್ಟ್ ಕರೆಂಟ್) ಉತ್ಪತ್ತಿಯಾಗಿ ಬ್ಯಾಟರಿಯಲ್ಲಿ ಸಂಗ್ರಹವಾಗುತ್ತದೆ. ಬ್ಯಾಟರಿ ತುಂಬಿದಾಗ ಚಕ್ರಗಳು ಸ್ವಯಂಚಾಲಿತವಾಗಿ ಸ್ಥಗಿತಗೊಳ್ಳುತ್ತವೆ. ಡಿ.ಸಿ. ವಿದ್ಯುತ್ತನ್ನು ನೇರವಾಗಿ ಮನೆಯಲ್ಲಿ ಬಳಸಲು ಸಾಧ್ಯವಿಲ್ಲ. ಅದನ್ನು ಎ.ಸಿ. ವಿದ್ಯುತ್ (ಎ.ಸಿ.- ಆಲ್ಟರ್ನೇಟಿವ್ ಕರೆಂಟ್) ಆಗಿ ಪರಿವರ್ತಿಸಬೇಕು. ಅದಕ್ಕಾಗಿ ಶಶಿಧರ್ ಇನ್‌ವರ್ಟರ್ ಇಟ್ಟುಕೊಂಡಿದ್ದಾರೆ. 12 ವೋಲ್ಟ್‌ಗಳ ಡಿ.ಸಿ. ವಿದ್ಯುತ್ 220 ವೋಲ್ಟ್‌ನ ಎ.ಸಿ. ವಿದ್ಯುತ್ತಾಗಿ ಬದಲಾಗುತ್ತದೆ.

ಹಳೇ ಪಾತ್ರೆ, ಹಳೇ ಕಬ್ಣ....
ಶಶಿಧರ್ ಗುಜರಿಯಲ್ಲಿ ಸಿಗುವ ಹಳೆಯ ತ್ಯಾಜ್ಯಗಳಿಂದಲೇ ಟರ್ಬೈನ್ ತಯಾರಿಸಿದ್ದಾರೆ. ವರ್ಕ್‌ಷಾಪ್‌ನಲ್ಲಿರುವ ರೇಡಿಯೇಟರ್ ಫ್ಯಾನ್ ಅನ್ನು ಟರ್ಬೈನ್ ರೆಕ್ಕೆಗಳಾಗಿ ಬಳಸಿದ್ದಾರೆ. ಅದಕ್ಕೆ ಅವರು 200 ರೂಪಾಯಿ ವೆಚ್ಚ ಮಾಡಿದ್ದಾರೆ. ದೊಡ್ಡ ಟರ್ಬೈನ್‌ಗೆ ಟ್ರ್ಯಾಕ್ಟರ್ ರೇಡಿಯೇಟರ್ ಫ್ಯಾನ್ ಬಳಸಿದ್ದಾರೆ. ಮನೆಯ ಮೇಲೆ ಅಳವಡಿಸಲು 600 ರೂಪಾಯಿ ಕೊಟ್ಟು 14 ಅಡಿ ಕಬ್ಬಿಣದ ಪೈಪ್ ತಂದಿದ್ದಾರೆ.

ಟರ್ಬೈನ್ ರೆಕ್ಕೆಗಳನ್ನು ಜೋಡಿಸಲು ಮನೆಯನ್ನು ಪ್ಲಾಸ್ಟರ್ ಮಾಡಲು ಬಳಸುವ ಅಲ್ಯುಮಿನಿಯಂ ಪಟ್ಟಿ ತಂದಿದ್ದಾರೆ. ಪಟ್ಟಿ ಬೆಲೆ 80 ರೂಪಾಯಿ. ಗಾಳಿಪಟಕ್ಕೊಂದು ಬಾಲ ಇರುವ ಹಾಗೆ ಟರ್ಬೈನ್‌ಗೂ ಒಂದು ಬಾಲ ಇರುತ್ತದೆ. ಆ ಬಾಲವನ್ನು ಹಳೆಯ ಫೈಬರ್ ಮತ್ತು ಫೋಮ್ ಶೀಟ್‌ನಿಂದ ತಯಾರಿಸಿದ್ದಾರೆ. ಇದಕ್ಕೆ ಖರ್ಚಾಗಿರುವುದು 100 ರೂಪಾಯಿ. ಟರ್ಬೈನ್‌ನ ತುದಿಯಲ್ಲಿ ಜನರೇಟರ್ ಮುಚ್ಚಲು ಒಂದು ಸಣ್ಣ ಪ್ಲಾಸ್ಟಿಕ್ ಡಬ್ಬಿ ಬಳಿಸಿದ್ದಾರೆ. ಇದರ ಬೆಲೆ 10 ರೂಪಾಯಿ. ಇವಿಷ್ಟು ವಸ್ತುಗಳು ಶಶಿಧರ್ ಅವರ ಕ್ರಿಯಾಶೀಲತೆಯಿಂದ ತಯಾರಾದ ವಸ್ತುಗಳು.

ಈ ವಸ್ತುಗಳ ಜೊತೆಗೆ ಜನರೇಟರ್, ಬ್ಯಾಟರಿ, ಇನ್‌ವರ್ಟರ್. 150 ಎ.ಎಚ್. ಸಾಮರ್ಥ್ಯದ ಬ್ಯಾಟರಿ 12,000 ರೂಪಾಯಿ. 875 ವಿ.ಎ. ಸಾಮರ್ಥ್ಯದ ಇನ್‌ವರ್ಟರ್ ಬೆಲೆ 7,500 ರೂಪಾಯಿ. ಇಷ್ಟು ಖರ್ಚಿನಿಂದ ತಯಾರಾದ ಪವನ ವಿದ್ಯುತ್ ಘಟಕದ ಸಾಮರ್ಥ್ಯ 40 ವರ್ಷ.

ಹುಮ್ನಾಬಾದ್‌ನಿಂದ ಹುಬ್ಬಳ್ಳಿವರೆಗೆ...
21ರ ಹರೆಯದ ಶಶಿದರ್ ಆನಂದಮಠ ಹುಮ್ನಾಬಾದ್‌ನ ಜಯಲಿಂಗಸ್ವಾಮಿ ಆನಂದಮಠ- ಶ್ರೀದೇವಿ ದಂಪತಿಗಳ ಎರಡನೇ ಮಗ. ಅಣ್ಣ ಹೈದರಾಬಾದ್‌ನಲ್ಲಿ ನೌಕರಿಯಲ್ಲಿದ್ದಾರೆ. ತಮ್ಮ 10ನೇ ತರಗತಿ ವಿದ್ಯಾರ್ಥಿ. ಶಶಿಧರ್ ಎಸ್‌ಎಸ್‌ಎಲ್‌ಸಿಯ ತನಕವೂ ಹುಟ್ಟೂರು ಹುಮ್ನಾಬಾದ್‌ನಲ್ಲೇ ಇದ್ದರು. ಎಸ್‌ಎಸ್‌ಎಲ್‌ಸಿ ಮುಗಿಸಿ ಆಂಧ್ರದ ಸಂಗಾರೆಡ್ಡಿಯ ಸಾಯಿ ಕೈಗಾರಿಕಾ ತರಬೇತಿ ಸಂಸ್ಥೆಯಲ್ಲಿ ಎಲೆಕ್ಟ್ರಿಕಲ್ ವಿಭಾಗದಲ್ಲಿ ಐಟಿಐಗೆ ಸೇರಿದರು.

ಐಟಿಐ ಮುಗಿಸಿ ಹೈದರಾಬಾದ್‌ನ ವಿಜಯ್ ಎಲೆಕ್ಟ್ರಿಕಲ್ ಲಿಮಿಟೆಡ್‌ನಲ್ಲಿ ಒಂದು ವರ್ಷದ ಅಪ್ರೆಂಟಿಷಿಪ್‌ಗೆ ಸೇರಿದರು. ಅಪ್ರೆಂಟಿಷಿಪ್ ಅವಧಿಯಲ್ಲಿ ಅವರು ತೋರಿದ ಶ್ರದ್ಧೆಗೆ ಮೆಚ್ಚಿ ಕಂಪೆನಿ ಅವರಿಗೆ ಉದ್ಯೋಗ ನೀಡಿತು. ಮನೆಯಲ್ಲಿ ಬಡತನ ಇದ್ದ ಕಾರಣ ಮುಂದೆ ಓದನ್ನು ಮುಂದುವರಿಸಲು ಸಾಧ್ಯವಾಗಲಿಲ್ಲ. ಅವರು ಕೆಲಸಕ್ಕೆ ಸೇರಿದ ಮೇಲೆ ಇಡೀ ಕುಟುಂಬದ ನೊಗ ಶಶಿಧರ್ ಹೆಗಲಿಗೆ ಬಂತು.

ಒಂದು ವರ್ಷ ಅವರು ಅದೇ ಕಂಪೆನಿಯ ಪರಿವರ್ತಕ (ಟಿಸಿ)ಗಳ ವಿಭಾಗದಲ್ಲಿ ದುಡಿಯುತ್ತಿದ್ದರು. ಅಲ್ಲಿ ಪವನ ವಿದ್ಯುತ್ ಕನಸು ಮತ್ತಷ್ಟು ಹೆಚ್ಚಾಯಿತು. ಅಲ್ಲಿ ಎಂಜಿನಿಯರ್ ಮಾಡುವ ಕೆಲಸವನ್ನು ಶಶಿಧರ್ ಮಾಡುತ್ತಿದ್ದರು. ಸದಾ ವೈರುಗಳ ಜೊತೆ ಕಳೆದು ಹೋಗುತ್ತಿದ್ದ ಶಶಿಧರ್ ಪ್ರತಿಭೆಯನ್ನು ಸೋದರಮಾವ, ಹುಬ್ಬಳ್ಳಿ ಗುರುಸಿದ್ಧೇಶ್ವರ ಬ್ಯಾಂಕ್‌ನ ನಿವೃತ್ತ ನೌಕರ ಶಿವಾನಂದ ಸಾಲಿಮಠ ಗಮನಿಸುತ್ತಿದ್ದರು. ಶಿವಾನಂದ್- ಅರುಣಾದೇವಿ ದಂಪತಿಗಳು ಶಶಿಧರ್‌ರನ್ನು ಹುಬ್ಬಳ್ಳಿಗೆ ಕರೆದುಕೊಂಡು ಬಂದು ಡಿಪ್ಲೊಮಾಗೆ ಸೇರಿಸಿದರು. ಅವರ ಪ್ರತಿಭೆಗೆ ಆಸರೆಯಾದರು. ಅಲ್ಲಿಂದ ಶಶಿಧರ್ ಪ್ರತಿಭೆ ಅನಾವರಣಗೊಂಡಿತು.

ADVERTISEMENT

ದಿಗಂತದಲ್ಲಿ ಕಂಡ ಫ್ಯಾನು
ಶಶಿಧರ್ ವಿದ್ಯುತ್ ಕ್ಷೇತ್ರದಲ್ಲಿ ಸಾಧನೆ ಮಾಡುವ ಗುರಿ ಹೊಂದಲು ಹಲವು ಪ್ರೇರಣೆಗಳಿವೆ. ಅವರು ಒಮ್ಮೆ ರೈಲಿನಲ್ಲಿ ಹುಮ್ನಾಬಾದ್‌ನಿಂದ ಬೆಂಗಳೂರಿಗೆ ಪ್ರಯಾಣಿಸುತ್ತಿದ್ದರು. ಅವರ ಮೊಬೈಲ್ ಫೋನ್‌ನಲ್ಲಿ ಬ್ಯಾಟರಿ ಚಾರ್ಜ್ ಖಾಲಿಯಾಗಿತ್ತು. ಸಾಮಾನ್ಯ ದರ್ಜೆ ಬೋಗಿಯಾದ ಕಾರಣ ಚಾರ್ಜಿಂಗ್ ಪಿನ್ ಅಲ್ಲಿರಲಿಲ್ಲ. ಈ ಬಗ್ಗೆ ಯೋಚಿಸುತ್ತಾ ಕುಳಿತರು. ಕಿಟಕಿಯಿಂದ ಗಾಳಿ ವೇಗವಾಗಿ ಅವರ ಮುಖಕ್ಕೆ ಬಡಿಯುತ್ತಿತ್ತು. ಆಗ ಅವರಿಗೆ ಹೊಳೆದದ್ದು ಗಾಳಿಯಿಂದ ಮೊಬೈಲ್ ಚಾರ್ಜ್ ಮಾಡುವ ಉಪಾಯ.

ಇನ್ನೊಮ್ಮೆ ರೈಲಿನಲ್ಲಿ ಪ್ರಯಾಣಿಸುವಾಗ ಕಂಪ್ಯೂಟರ್‌ನಲ್ಲಿರುವ ಎಸ್‌ಎಂಪಿಎಸ್ (ವಿದ್ಯುತ್ ಪೂರೈಸುವ ಭಾಗ) ಫ್ಯಾನ್ ಜೊತೆಯಲ್ಲಿ ತಂದಿದ್ದರು. ಮೊಬೈಲ್‌ಗೆ ವೈರ್ ಸಂಪರ್ಕ ಕೊಟ್ಟು ಗಾಳಿಗೆ ಫ್ಯಾನ್ ಹಿಡಿದರು. ಅಲ್ಲಿ ವಿದ್ಯುತ್ ಉತ್ಪತ್ತಿಯಾಗಿ ಮೊಬೈಲ್ ಫೋನ್ ಎಚ್ಚರಗೊಂಡಿತು. ಆಗ ಅವರಿಗೆ ಪವನ ಶಕ್ತಿಯ ಮಹತ್ವ ಅರಿವಾಯಿತು.

ಇನ್ನೊಮ್ಮೆ ಹುಮ್ನಾಬಾದ್‌ನಲ್ಲಿ ಗುಲ್ಬರ್ಗದಿಂದ- ಹೈದರಾಬಾದ್‌ಗೆ ಹೊರಟಿದ್ದ ಆಂಧ್ರದ ರಾಜಹಂಸ ಬಸ್ಸೊಂದು ಮಧ್ಯರಾತ್ರಿ ಕೆಟ್ಟು ನಿಂತಿತ್ತು. ಬಸ್‌ನಲ್ಲಿ 50 ಪ್ರಯಾಣಿಕರಿದ್ದರು. ಡ್ರೈವರ್ ಪ್ರಯತ್ನ ಪಟ್ಟರೂ ರಿಪೇರಿ ಮಾಡಲು ಆಗಲಿಲ್ಲ. ಇದನ್ನು ಗಮನಿಸಿದ ಶಶಿಧರ್ ಡ್ರೈವರ್ ಅನುಮತಿ ಪಡೆದು ಪರೀಕ್ಷಿಸಿದರು. ಎಂಜಿನ್ನಿನ ಫ್ಯೂಸ್ ಕಡಿತಗೊಂಡಿತ್ತು. ಮಹಿಳಾ ಪ್ರಯಾಣಿಕರೊಬ್ಬರ ಬಟ್ಟೆ ಪಿನ್ ಬಳಸಿ ಅವರು ಫ್ಯೂಸ್ ಹಾಕಿದರು, ಬಸ್ ಸ್ಟಾರ್ಟ್ ಆಯಿತು. ಚಿಕ್ಕ ಹುಡುಗನ ಪ್ರತಿಭೆ ಕಂಡ ಅಷ್ಟೂ ಪ್ರಯಾಣಿಕರು ಶಹಬ್ಬಾಸ್ ಅಂದರು. ಶಶಿಧರ್ ಆಗತಾನೆ ಎಸ್ಸೆಸ್ಸೆಲ್ಸಿ ಮುಗಿಸಿ ಐಟಿಐ ಸೇರಿದ್ದರು.

ರೈತರಿಗೆ 20 ಗಂಟೆ ವಿದ್ಯುತ್ ಗುರಿ
ಹಳ್ಳಿಗಳಲ್ಲಿ ಕೇವಲ ನಾಲ್ಕು ಗಂಟೆ ಮೂರು ಫೇಸ್ ವಿದ್ಯುತ್ ಪಡೆಯುತ್ತಿರುವ ರೈತರಿಗೆ ಪವನ ಶಕ್ತಿಯಿಂದ ದಿನಕ್ಕೆ 20 ಗಂಟೆ ವಿದ್ಯುತ್ ಕೊಡುವ ಮೋಟಾರ್ ತಯಾರಿಸುವ ಗುರಿ ಶಶಿಧರ್‌ಗಿದೆ. ಈಗಾಗಲೇ ಕೆಲಸ ಆರಂಭಿಸಿದ್ದು, ಪಂಪ್ ತಯಾರಾಗಿದೆ. 2800 ಆರ್‌ಎಂಪಿ  ಮೋಟಾರ್ (ನಿಮಿಷಕ್ಕೆ 2800 ಸುತ್ತು ಸುತ್ತುವ ಮೋಟಾರ್) ತಯಾರಿಸುತ್ತಿದ್ದಾರೆ.

ಪವನ ಶಕ್ತಿ ಜೊತೆಗೆ ಸೌರಶಕ್ತಿಯಲ್ಲೂ ಕೆಲಸ ಮಾಡಿರುವ ಶಶಿಧರ್ `ರೈತಮಿತ್ರ' ಎನ್ನುವ ಸೋಲಾರ್ ತಯಾರಿಸಿದ್ದಾರೆ. ನಾಲ್ಕು ದೀಪ, ಎರಡು ಫ್ಯಾನ್, ಟೀವಿ ಇದರಿಂದ ಕೆಲಸ ಮಾಡುತ್ತವೆ. ಮಾರುಕಟ್ಟೆ ಬೆಲೆಗಿಂತ ಬಹಳ ಕಡಿಮೆ ಬೆಲೆಯಲ್ಲಿ ಇದನ್ನು ತಯಾರಿಸಬಹುದು ಎಂಬುದು ಶಶಿಧರ್ ಲೆಕ್ಕಾಚಾರ.

ಪವನ ಮತ್ತು ಸೂರ್ಯಶಕ್ತಿ ಎರಡರಲ್ಲೂ ಕೆಲಸ ಮಾಡುವ ಗುರಿ ಹೊಂದಿರುವ ಶಶಿಧರ್‌ಗೆ ಸೋದರ ಮಾವ ಸಾಲಿಮಠ, ಹುಬ್ಬಳ್ಳಿಯಲ್ಲಿ ಸೋಲಾರ್ ಚಿಪ್ ತಯಾರಿಸುವ ಘಟಕ ಸ್ಥಾಪಿಸುವ ಭರವಸೆ ಕೊಟ್ಟಿದ್ದಾರೆ. ಬೀದರ್‌ನಲ್ಲಿ ಎರಡು ಪೆಟ್ರೋಲ್ ಬಂಕ್‌ಗಳಿಗೆ ಪವನ ಶಕ್ತಿ ಘಟಕ ಅಳವಡಿಸುವ ಯೋಜನೆ ಸಿಕ್ಕಿದೆ. ರೂ 2,70, 000ಕ್ಕೆ ಅಂದಾಜು ಪಟ್ಟಿ ಕೊಟ್ಟಿದ್ದು, ಇಷ್ಟರಲ್ಲೇ ಕೆಲಸ ಆರಂಭವಾಗಲಿದೆ.

ರಾಜ್ಯಮಟ್ಟದ ಹಲವು ತಾಂತ್ರಿಕ ವಸ್ತುಪ್ರದರ್ಶನದಲ್ಲಿ ತಾಜ್ಯದಿಂದ ತಯಾರಿಸಿದ ಟರ್ಬೈನ್ ಪ್ರದರ್ಶಿಸಿರುವ ಶಶಿಧರ್ ಎಂಜಿನಿಯರ್‌ಗಳ ಮೆಚ್ಚುಗೆಗೆ ಪಾತ್ರರಾಗಿದ್ದಾರೆ. ಜೊತೆಗೆ ಸುಟ್ಟಿರುವ ಸಿಎಫ್‌ಎಲ್ ಬಲ್ಬ್ ರಿಪೇರಿ, ಎಲ್‌ಇಡಿ ವೈರ್ ತಯಾರಿಕೆ, ಕಂಪ್ಯೂಟರ್ ಮದರ್‌ಬೋರ್ಡ್, ಹಾರ್ಡ್‌ಡಿಸ್ಕ್, ರ್‍ಯಾಮ್, ಎಸ್‌ಎಂಪಿಎಸ್ ಮುಂತಾದವನ್ನು ರಿಪೇರಿ ಮಾಡುವ ಕಲೆ ಅವರಿಗೆ ಗೊತ್ತಿದೆ. ಕನ್ನಡ, ಇಂಗ್ಲಿಷ್, ಮರಾಠಿ, ತೆಲುಗು, ತಮಿಳು ಭಾಷೆ ಅವರಿಗೆ ಗೊತ್ತಿವೆ. ಸದ್ಯಕ್ಕೆ ಶಶಿಧರ್ ಪ್ರತಿಭೆಗೆ ಸೋದರ ಮಾವನ ಪ್ರೋತ್ಸಾಹ ಇದೆ. ಶಶಿಧರ್ ಅವರನ್ನು ಮೊಬೈಲ್ ಸಂಖ್ಯೆ 9036930472ರಲ್ಲಿ  ಸಂಪರ್ಕಿಸಬಹುದು. 
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.