ADVERTISEMENT

ಡಿಜಿಟಲ್ ಸಹಾಯಕನೆಂಬ ಗೂಢಚಾರಿ!

ಸುಧೀಂದ್ರ ಪ್ರಸಾದ್
Published 30 ಮೇ 2018, 19:30 IST
Last Updated 30 ಮೇ 2018, 19:30 IST
ಡಿಜಿಟಲ್ ಸಹಾಯಕನೆಂಬ ಗೂಢಚಾರಿ!
ಡಿಜಿಟಲ್ ಸಹಾಯಕನೆಂಬ ಗೂಢಚಾರಿ!   

ಗೂಗಲ್ ಅಸಿಸ್ಟೆಂಟ್‌ ಬಿಡುಗಡೆಗೊಂಡ ತಕ್ಷಣ ಆ ಕುರಿತ ಸಾಮಾಜಿಕ ಜಾಲತಾಣದಲ್ಲಿ ಸಾಕಷ್ಟು ಟ್ರೋಲ್‌ಗಳಾದವು. ಗೂಗಲ್ ಸಿಇಒ ಸುಂದರ ಪಿಚೈ ಪರಿಚಯಿಸಿದ ಸಲೂನ್‌ ದಿನಾಂಕ ನಿಗದಿಪಡಿಸುವ ಗೂಗಲ್ ಅಸಿಸ್ಟೆಂಟ್‌ ಪ್ರಾತ್ಯಕ್ಷಿಕೆಯನ್ನು ಅಣಕಿಸುವ ಭಾರತದಲ್ಲಿನ ಪುರುಷರ ಸಲೂನ್‌ಗೆ ಕರೆ ಮಾಡಿ ಅಸಿಸ್ಟೆಂಟ್‌ ಸಮಯ ನಿಗದಿಪಡಿಸುವ ವಿಡಿಯೊ ವೈರಲ್ ಆಗಿತ್ತು.

ಹಾಗೆಯೇ ಅಮೆಜಾನ್ ಇಕೊ, ದಂಪತಿ ನಡುವಿನ ಸಂಭಾಷಣೆಯನ್ನು ಬೇರೆಯೊಬ್ಬರಿಗೆ ಕಳುಹಿಸಿ ದೊಡ್ಡ ಸುದ್ದಿಯಾಗಿದೆ. ’ಕೆಲವೊಂದು ತಾಂತ್ರಿಕ ಸಂಗತಿಯಿಂದ ಹೀಗಾಗಿದೆ’ ಎಂದು ಅಮೆಜಾನ್ ಹೇಳಿಕೊಂಡಿದೆ.

ಈ ಎರಡೂ ಉದಾಹರಣೆಗಳನ್ನು ಗಮನಿಸಿದಲ್ಲಿ ಗ್ರಾಹಕರ ಮಿತಿಮೀರಿದ ಡಿಜಿಟಲ್ ಆಸಕ್ತಿ ಹಾಗೂ ಹೊಸತನ್ನು ನೀಡುವ ಕಂಪೆನಿಗಳ ಪೈಪೋಟಿಯಿಂದಾಗಿ ಗ್ರಾಹಕರ ಕೈಗೆಟಕುವ ದರದಲ್ಲಿ ಸಂವಹನ ನಡೆಸುವ ಸಾಧನಗಳು ತೀವ್ರ ಪೈಪೋಟಿಯಲ್ಲಿ ಮಾರುಕಟ್ಟೆಗೆ ದಾಂಗುಡಿ ಇಡುತ್ತಿವೆ.

ADVERTISEMENT

ಗೂಗಲ್ ಹೋಂ, ಅಮೆಜಾನ್ ಎಕೊ ಇತ್ಯಾದಿಗಳೆಂಬ ಡಿಜಿಟಲ್ ಸಹಾಯಕ, ತನ್ನ ಮಾಲೀಕರ ಯಾವುದೇ ಪ್ರಶ್ನೆಗೆ ಉತ್ತರಿಸಬಲ್ಲ, ಅವರ ಕೆಲಸಗಳನ್ನು ಚಾಚೂತಪ್ಪದೆ ಪಾಲಿಸಬಲ್ಲ, ಬಾಯಿಯಿಂದ ಹೊರಡುವ ಪ್ರತಿಯೊಂದು ಶಬ್ದಗಳನ್ನೂ ಆಜ್ಞೆಯಂತೆಯೇ ಅನುಸರಿಸುವ ಸಾಧನ ಸದ್ಯದ ಹಾಟ್‌ ಟ್ರೆಂಡ್‌.

ಕೇವಲ ಒಂದು ವರ್ಷದ ಹಿಂದೆ ಭಾರೀ ಸದ್ದು ಮಾಡಿದ್ದ ಸ್ಮಾರ್ಟ್‌ ವಾಚ್ ನಿರೀಕ್ಷಿತ ಮಟ್ಟದಲ್ಲಿ ಸದ್ದು ಮಾಡಲಿಲ್ಲ. ಆದರೆ ಡಿಜಿಟಲ್ ಪರಿಚಾರಕ ಅಥವಾ ಸಹಾಯಕ ಮಾರುಕಟ್ಟೆಗೆ ಪರಿಚಯಗೊಂಡು ಅದರ ಬಳಕೆ ಹೆಚ್ಚಾದಂತೆ, ವೈಯಕ್ತಿಕ ಗುಟ್ಟುಗಳು ರಟ್ಟಾಗಲಿವೆಯೇ ಎಂಬ ಆತಂಕವೂ ಕಾಡಲಾರಂಭಿಸಿದೆ.

ಅಮೆಜಾನ್ ಎಕೊ ಮಾಡಿದ್ದೂ ಅದೇ ಯಡವಟ್ಟು. ಪೋರ್ಟ್‌ಲೆಂಡ್‌ನಲ್ಲಿ ದಂಪತಿಯ ಖಾಸಗಿ ಮಾತುಗಳನ್ನು ರೆಕಾರ್ಡ್‌ ಮಾಡಿಕೊಂಡು, ಅದನ್ನು ಅವರದ್ದೇ ಕಾಂಟಾಕ್ಟ್ ಲಿಸ್ಟ್‌ನಲ್ಲಿದ್ದ ಒಬ್ಬರಿಗೆ ಕಳುಹಿಸಿದೆ. ಆದರೆ, ’ಇದೊಂದು ತಾಂತ್ರಿಕ ತೊಂದರೆ ಎಂದು ಅಮೆಜಾನ್ ಹೇಳಿದೆ’ ಎಂದು ಸಿಯಾಟಲ್‌ ಮೂಲದ ವಾಹಿನಿ ಕಿರೋ ವರದಿ ಮಾಡಿದೆ.

ಇಂಥ ಡಿಜಿಟಲ್ ಸಹಾಯಕ, ತನ್ನ ವ್ಯಾಪ್ತಿಯಲ್ಲಿ ಯಾವುದೇ ಸದ್ದು ಕೇಳಿದರೂ ಜಾಗರೂಕವಾಗುತ್ತದೆ. ದಂಪತಿ ನಡುವಿನ ಮಾತಿನ ಮಳೆಯಲ್ಲಿ ಅವರು ಪ್ರಸ್ತಾಪಿಸಿದ ಯಾರದ್ದೋ ಹೆಸರು ನೆನಪಿಟ್ಟುಕೊಂಡಿರಬಹುದು. ಇವರು ಪರಸ್ಪರ ಆಡಿದ ಪದವೊಂದು ಅದಕ್ಕೆ ಆದೇಶದಂತೆ ಕೇಳಿಸಿರಬಹುದು. ಹೀಗೆ ಹಲವು ಊಹೆಗಳೊಂದಿಗೆ ಕೃತಕ ಬುದ್ಧಿಮತ್ತೆ ಹೊಂದಿರುವ ಡಿಜಿಟಲ್ ಸಹಾಯಕ ಸಾಧನಗಳು ಇನ್ನೂ ಕಲಿಯಬೇಕಾದದ್ದು ಬಹಳಷ್ಟಿದೆ ಎಂದು ತಜ್ಞರು ಅಭಿಪ್ರಾಯಪಡುತ್ತಾರೆ.

ಇಂಥ ಸಾಧನಗಳು ಮನೆ ಸೇರುತ್ತಿದ್ದಂತೆ ಅಂತರ್ಜಾಲದ ವ್ಯಾಪ್ತಿಗೆ ನಮ್ಮನ್ನು ಇನ್ನಷ್ಟು ತೆರೆದುಕೊಂಡಂತಾಗಿದೆ. ಸ್ಮಾರ್ಟ್‌ಫೋನ್‌ ಬಂದೊಡನೆ ಫೋನ್ ಬಳಕೆಯ ಅಭ್ಯಾಸವೇ ಬದಲಾಯಿತು. ಹಾಗೆಯೇ ಆ ಮೂಲಕ ಹ್ಯಾಕರ್‌ಗಳು ಹಿಂಬಾಗಿಲಿನಿಂದ ಮನೆಯೊಳಗೆ ನುಸುಳಲಾರಂಭಿಸಿದರು. ಫೋನ್‌ನಲ್ಲಿರುವ ಪ್ರತಿಯೊಂದು ಆ್ಯಪ್‌ಗಳು ಹಿಂಬದಿಯಲ್ಲಿ ಯಾವ ಮಾಹಿತಿಯನ್ನು ಹೆಕ್ಕಿ, ತಮ್ಮ ಸರ್ವರ್‌ಗೆ ಕಳುಹಿಸುತ್ತಿವೆಯೋ ಅಲ್ಲಿಂದ ಆ ಮಾಹಿತಿ ಯಾರ ಲಾಭಕ್ಕೆ ಬಳಕೆಯಾಗುತ್ತಿದೆಯೋ ತಿಳಿಯದು. ಹಾಗೆಯೇ ಸ್ಮಾರ್ಟ್‌ ಸ್ಪೀಕರ್‌ಗಳ ಮೂಲಕವೂ ಸಂಗ್ರಹವಾಗುವ ದೊಡ್ಡ ಪ್ರಮಾಣದ ದತ್ತಾಂಶವನ್ನು ಸೇವಾದಾರರು ಏನು ಮಾಡುತ್ತಾರೆ ಎಂಬುದು ಕುತೂಹಲಕರ ಅಂಶ!
ಕೃತಕ ಬುದ್ಧಿಮತ್ತೆ ಪ್ರವೇಶದ ಮೂಲಕ ಬಳಕೆದಾರನ ಪ್ರತಿಯೊಂದು ಚಲನವಲನ, ಅವನ ಹುಡುಕಾಟ, ಬೇಕು ಬೇಡಗಳು, ದಿನಚರಿ ಪ್ರತಿಯೊಂದರ ಮೇಲೂ ಮಾರುಕಟ್ಟೆ ನಿಗಾ ಇಟ್ಟಿದೆ. ಅದಕ್ಕಿರುವ ಸಾಧನಗಳೇ ನಾವು ನಿತ್ಯ ಬಳಸುವ ಗ್ಯಾಜೆಟ್‌ಗಳು.

ಆದಾಗ್ಯೂ ಕೆಲವೊಂದು ಪದಗಳನ್ನು ಬಳಸಿದಾಗ (ಉದಾ: ಓಕೆ ಗೂಗಲ್‌) ಮಾತ್ರ ಸ್ಮಾರ್ಟ್‌ ಸ್ಪೀಕರ್‌ಗಳು ತಮ್ಮ ಕಿವಿಗಳನ್ನು ಜಾಗೃತಗೊಳಿಸಿಕೊಂಡು ಕೇಳಲಾರಂಭಿಸುತ್ತವೆ. ಧ್ವನಿ ಕೂಡಾ ಹೊಂದಣಿಕೆಯಾಗಬೇಕು ಇತ್ಯಾದಿ ಆದೇಶ ಸನ್ನೆಗಳನ್ನು (Commanding Prompt) ಅಳವಡಿಸಲಾಗಿದೆ ಎಂಬ ಅಂಶಗಳನ್ನು ತಜ್ಞರು ಹೇಳುತ್ತಾರೆ.

ಹೊಸ ತಂತ್ರಜ್ಞಾನ, ಹೊಸ ಬಗೆಯ ಸಾಧನ ಹೊಸ ರೀತಿಯ ಡಿಜಿಟಲ್ ಅನುಭೂತಿಯನ್ನು ನೀಡುತ್ತಿರುವುದು ಸತ್ಯ. ಆದರೆ ಆಂಥ ಸಾಧನಗಳ ಬಳಕೆ ಮೂಲಕ ಸಂಗ್ರಹವಾಗುವ ದೊಡ್ಡ ಪ್ರಮಾಣದ ದತ್ತಾಂಶಗಳು ಏನಾಗುತ್ತಿವೆ? ಎಂಬ ಸಂದೇಹ ಇಂದಿಗೂ ತಂತ್ರಜ್ಞಾನ ಪಂಡಿತರನ್ನು ಕಾಡುತ್ತಲೇ ಇದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.