ADVERTISEMENT

ತಂತ್ರೋಪನಿಷತ್ತು

ವಿಶ್ವನಾಥ್ ಎಸ್.
Published 24 ಮಾರ್ಚ್ 2014, 15:11 IST
Last Updated 24 ಮಾರ್ಚ್ 2014, 15:11 IST

ದಿನವೂ ಕಂಪ್ಯೂಟರ್ ಬಳಸುತ್ತೇವೆ. ಹೆಚ್ಚು ಕಷ್ಟಪಡದೆ ಕೆಲಸ ಮಾಡುವುದು ಹೇಗೆ ಎಂಬ ಬಗ್ಗೆ ಗಮನ ಹರಿಸದೇ ಮೌಸ್ ಅನ್ನೇ ಹೆಚ್ಚಾಗಿ ಬಳಸುತ್ತೇವೆ. ಅದಕ್ಕೆಂದೇ ಕೀಬೋರ್ಡ್ ಅನ್ನು ಪರಿಣಾಮಕಾರಿಯಾಗಿ ಬಳಸಿ ಸುಲಭವಾಗಿ ಮತ್ತು ವೇಗವಾಗಿ ಕೆಲಸ ಮಾಡಲು ಸಹಾಯ ಮಾಡುವ ಕೆಲವು ಶಾರ್ಟ್‌ಕಟ್‌ಗಳ ಪರಿಚಯ ಇಲ್ಲಿದೆ.

win + D
ಹಲವು ತಂತ್ರಾಂಶಗಳನ್ನು ತೆರೆದುಕೊಂಡು ಕೆಲಸ ಮಾಡುತ್ತಿದ್ದೀರಿ ಎಂದುಕೊಳ್ಳಿ. ಈ ಸಂಯೋಜನೆ ಒತ್ತಿದರೆ ತಕ್ಷಣವೇ ಡೆಸ್ಕ್‌ಟಾಪ್ ಕಾಣಿಸುತ್ತದೆ. ಇದನ್ನು ಬಳಸುವುದರಿಂದ ತಂತ್ರಾಂಶಗಳನ್ನು ಮಿನಿಮೈಸ್ ಮಾಡುವುದು ತಪ್ಪಲಿದೆ.

win + E
ಈ ಸಂಯೋಜನೆ ಒತ್ತಿದಾಕ್ಷಣ ನಿಮ್ಮ ಮುಂದೆ ಮೈ ಕಂಪ್ಯೂಟರ್ ಕಾಣಿಸಿಕೊಳ್ಳುತ್ತದೆ. ಉದಾಹರಣೆಗೆ ಒಂದು ನಿರ್ದಿಷ್ಟ ಡ್ರೈವ್‌ನಿಂದ ಏನನ್ನಾದರೂ ಕಾಪಿ ಮಾಡಬೇಕು ಎಂದುಕೊಳ್ಳೋಣ. ಟಾಸ್ಕ್ ಬಾರ್‌ನಲ್ಲಿ ಕಾಣುವ ಮೈ ಕಂಪ್ಯೂಟರ್ ಮೇಲೆ ಮೌಸ್‌ನಲ್ಲಿ ಕ್ಲಿಕ್ ಮಾಡುವುದಕ್ಕಿಂತ ಕಡಿಮೆ ಸಮಯದಲ್ಲಿ ಇದು ಮೈ ಕಂಪ್ಯೂಟರಿಗೆ ಕರೆದೊಯ್ಯುತ್ತದೆ.
‌‌
win + L
ಈ ಸಂಯೋಜನೆ ಬಳಸಿ ನಿಮ್ಮ ಕಂಪ್ಯೂಟರ್ ಅನ್ನು ಲಾಕ್ ಮಾಡಬಹುದು. ಕಚೇರಿಯಲ್ಲಿ ನೀವು ಕಂಪ್ಯೂಟರ್ ಬಳಸುತ್ತೀರಾದರೆ, ಚಹಾ ವಿರಾಮಕ್ಕೆಂದು ಹೊರಗೆ ಹೋಗುವ ಸಂದರ್ಭದಲ್ಲಿ ಈ ಸಂಯೋಜನೆ ಬಳಸಿದರೆ ನಿಮ್ಮ ವೈಯಕ್ತಿಕ ಡೆಸ್ಕ್‌ಟಾಪ್ ಬೇರೆಯವರು ಬಳಸಲಾಗುವುದಿಲ್ಲ.

ADVERTISEMENT

 ctrl + Enter
ಒಂದು ನಿರ್ದಿಷ್ಟ ಜಾಲತಾಣ ಪ್ರವೇಶಿಸಲು ಸಂಪೂರ್ಣ ವಿಳಾಸ (ಯುಆರ್ಎಲ್) ಟೈಪಿಸುವ ಅಗತ್ಯ ಇಲ್ಲ. ಉದಾ : ಫೇಸ್‌ಬುಕ್‌ಗೆ ಭೇಟಿ ನೀಡಲು ಈಗಲೂ ಸಹ ಬಹಳಷ್ಟು ಮಂದಿ http://www.facebook.com ಎಂದು ಪೂರ್ತಿ ವಿಳಾಸ ಬರೆಯುತ್ತಾರೆ. ಬದಲಾಗಿ facebook ಎಂದು ಬರೆದು Enter ಅಥವಾ ctrl + Enter ಬಳಸಿದರೆ ಸಾಕು.

Tab, Shift + Tab
ಆನ್‌ಲೈನ್ ಅರ್ಜಿ ತುಂಬುವಾಗ ಒಂದು ಬಾಕ್ಸ್‌ನಲ್ಲಿ ವಿವರ ತುಂಬಿದ ನಂತರ Tab, Shift + Tab ಕೀ ಬಳಸಿದರೆ ಕರ್ಸರ್ ಮುಂದಿನ ಬಾಕ್ಸ್ ಗೆ ಹೋಗುತ್ತದೆ. ಇದರಿಂದ ಸಮಯ ಉಳಿತಾಯ ಆಗುತ್ತದೆ. ಮುಖ್ಯವಾಗಿ ಸರ್ಕಾರಿ ಜಾಲತಾಣದಲ್ಲಿ ಅರ್ಜಿ ತುಂಬುವಾಗ ಇದು ಹೆಚ್ಚು ಬಳಕೆಗೆ ಬರುತ್ತದೆ. ಏಕೆಂದರೆ ಏಕಕಾಲಕ್ಕೆ ರಾಜ್ಯಾದ್ಯಂತ ಹಲವರು ಬಳಸುವುದರಿಂದ, ಸಹಜವಾಗಿಯೇ ಜಾಲತಾಣ ನಿಧಾನವಾಗಿ ಕೆಲಸ ಮಾಡಲಾರಂಭಿಸುತ್ತದೆ. ಇಂತಹ ಸ್ಥಿತಿಯಲ್ಲಿ ನಾವು ಪ್ರತಿಯೊಂದು ಮುಂದಿನ ವಿವರ ಬರೆಯುವ ಮುಂಚೆ ಮೌಸ್ ಬಳಸಿದರೆ ಕೆಲಸ ಮತ್ತಷ್ಟು ತಡವಾಗುತ್ತದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.