ADVERTISEMENT

ದೇಶಿ-ವಿದೇಶಿ ಸಂಸ್ಕೃತಿ ಸಂಗಮ

​ಪ್ರಜಾವಾಣಿ ವಾರ್ತೆ
Published 23 ಆಗಸ್ಟ್ 2011, 19:30 IST
Last Updated 23 ಆಗಸ್ಟ್ 2011, 19:30 IST
ದೇಶಿ-ವಿದೇಶಿ ಸಂಸ್ಕೃತಿ ಸಂಗಮ
ದೇಶಿ-ವಿದೇಶಿ ಸಂಸ್ಕೃತಿ ಸಂಗಮ   

ನೋಡು ನೋಡುತ್ತಿದ್ದಂತೆಯೇ ಮತ್ತೊಂದು ಸ್ವಾತಂತ್ರ್ಯೋತ್ಸವ ಮುಗಿದುಹೋಯಿತು. ಮಹಾನಗರಿ  ಬೆಂಗಳೂರಿನಲ್ಲಂತೂ ಸ್ವಾತಂತ್ರ್ಯದ ಆಚರಣೆ ಜೋರಾಗಿಯೇ ನಡೆಯಿತು. ಶಾಲಾ-ಕಾಲೇಜು ವಿದ್ಯಾರ್ಥಿಗಳು ಧ್ವಜಾರೋಹಣದಲ್ಲಿ ಪಾಲ್ಗೊಂಡು ಸಂಭ್ರಮಿಸಿದರು. ಆದರೆ, ಈ ಸಂಭ್ರಮ ಸಂಭ್ರಮ ಅಲ್ಲಿಗೇ ಮುಗಿಯಲಿಲ್ಲ.

ಬೆಂಗಳೂರು ಹೇಳಿ ಕೇಳಿ ಮೆಟ್ರೊ ನಗರ. ಇಲ್ಲಿನ ಯುವಜನರಂತೂ ಪ್ರತಿಯೊಂದು ಆಚರಣೆಯನ್ನೂ ತಮ್ಮದೇ ಆದ  ವಿಶೇಷ ರೀತಿಯಲ್ಲಿ ಆಚರಿಸುವವರು. ಇಲ್ಲಿನ ಸೇಂಟ್ ಜೋಸೆಫ್ಸ್ ಆರ್ಟ್ಸ್ ಮತ್ತು ಸೈನ್ಸ್ ಕಾಲೇಜಿನ ವಿದ್ಯಾರ್ಥಿಗಳು ಮೊದಲೇ ಯೋಜನೆ ಹಾಕಿಕೊಂಡು, ಸ್ವಾತಂತ್ರ್ಯೋತ್ಸವದ ಅಂಗವಾಗಿ ನಾಲ್ಕು ದಿನಗಳ `ಎಥ್ನಿಕ್ ಡೇ~  ಅಥವಾ `ಸಾಂಪ್ರದಾಯಿಕ ದಿನ~ ಆಚರಿಸಿದರು.

ಭಾರತ ಬಹು ಸಂಸ್ಕೃತಿಯ ದೇಶ. ಪ್ರದೇಶದಿಂದ ಪ್ರದೇಶಕ್ಕೆ ಆಚಾರ ವಿಚಾರಗಳು, ಆಹಾರ ಪದ್ಧತಿಯೂ ವಿಭಿನ್ನ. ಅವೆಲ್ಲವನ್ನೂ ಒಗ್ಗೂಡಿಸಲು ಎಲ್ಲರಿಗೂ ವಿವಿಧ ಸಂಸ್ಕೃತಿಗಳ ಪರಿಚಯ ಮಾಡಿಸಿಕೊಡಲು ವಿದ್ಯಾರ್ಥಿ ಮಂಡಳಿ ನಾಲ್ಕು ದಿನಗಳ ಕಾರ್ಯಕ್ರಮವನ್ನು ಹಮ್ಮಿಕೊಂಡಿತ್ತು. ಪ್ರತಿಯೊಂದು ದಿನಕ್ಕೂ ವಿವಿಧ ವಿಷಯಗಳನ್ನು ಆರಿಸಿಕೊಂಡಿತ್ತು. ವಿದ್ಯಾರ್ಥಿಗಳು ಅತ್ಯುತ್ಸಾಹದಿಂದಲೇ ಇದರಲ್ಲಿ ಭಾಗವಹಿಸಿದ್ದರು.
ಮೊದಲ ದಿನ ವಿದ್ಯಾರ್ಥಿಗಳು ವಿದೇಶಿ ಉಡುಪಿನ್ಲ್ಲಲಿ ಕಾಲೇಜಿಗೆ ಬಂದರು.

ದೇಶಿ ವಿದೇಶಿ ಸಂಸ್ಕೃತಿಗಳ ಸಮ್ಮಿಶ್ರಣವಾದ ಬೆಂಗಳೂರಿಗರಿಗೆ ವಿದೇಶಿ ಉಡುಪು ಹೊಸದೇನಲ್ಲ. ಸಾಮಾನ್ಯವಾಗಿ ಎಲ್ಲರೂ ಯುವಕ ಯುವತಿಯರೆನ್ನುವ ಭೇದವಿಲ್ಲದೆ ಜೀನ್ಸ್ ಧರಿಸುವವರು. ಆದರೂ ಸಾಂಪ್ರದಾಯಿಕ ದಿನವನ್ನು ಮಹತ್ವಪೂರ್ಣವಾಗಿ ಆಚರಿಸಲು ಅವರು ವಿದೇಶಿ ಉಡುಪುಗಳನ್ನೇ ಧರಿಸಿ ಮೊದಲನೇ ದಿನ ಮಿಂಚಿದರು. 

ಎರಡನೇ ದಿನವಂತೂ ಅಪ್ಪಟ ದೇಶಿ ದಿನ. ಹಿಂದಿನ ದಿನ ವಿದೇಶಿ ಉಡುಪುಗಳನ್ನು ಧರಿಸಿದ್ದ ಅದೇ ವಿದ್ಯಾರ್ಥಿಗಳು ಎರಡನೇ ದಿನ ಅಪ್ಪಟ ದೇಶಿ ಉಡುಪಿನ್ಲ್ಲಲಿ ಕಾಲೇಜಿಗೆ ಬಂದಿದ್ದರು. ಕಾಲೇಜಿನ ಒಳಹೊಕ್ಕರೆ ನೋಡಿದಲ್ಲೆಲ್ಲ ಕುರ್ತಾ, ಸೀರೆ, ಚೂಡಿದಾರ್, ಪಂಚೆಗಳದ್ದೇ ಕಾರುಬಾರು.

ಮನೆಯ ಕಪಾಟಿನ ಮೂಲೆಯಲ್ಲಿದ್ದ ದೇಶಿ ಉಡುಪುಗಳಿಗೆ ಅಂದು ಬಹು ಬೇಡಿಕೆ ಬಂದಿತ್ತು. ಇದು ಬೆಂಗಳೂರಿನ ನಗರ ಮಧ್ಯದಲ್ಲಿರುವ ಕಾಲೇಜು ಹೌದೇ ಎಂಬ ಪ್ರಶ್ನೆ ಮೂಡಿಸುವಷ್ಟು ವಿದ್ಯಾರ್ಥಿಗಳು ಅಪ್ಪಟ ಭಾರತೀಯರಾಗಿ ಮಾರ್ಪಟ್ಟಿದ್ದರು.
ಇಲ್ಲಿಗೇ ಮುಗಿಯಲಿಲ್ಲ. ಈ ನಾಲ್ಕು ದಿನಗಳಲ್ಲಿ ಮೂರನೇ ದಿನ ಎಲ್ಲರೂ ಬೆರಗಾಗಿ ಹೋಗುವಷ್ಟು ವೈವಿಧ್ಯ ಕಾಲೇಜಿನಲ್ಲಿ ಕಂಡುಬಂದಿತ್ತು.

`ನೇಟಿವ್~ ಎಂಬ ಥೀಮ್ ಅನ್ನು ಮೂರನೇ ದಿನಕ್ಕೆ ನೀಡಲಾಗಿತ್ತು. ಮೂರನೇ ದಿನವಂತೂ ಇಡೀ ಭಾರತವೇ ಅಲ್ಲಿ ಒಟ್ಟುಗೂಡಿತ್ತು. ದೇಶದ ಮೂಲೆಮೂಲೆಗಳಿಂದ ಬಂದಿದ್ದ ಪ್ರತೀ ವಿದ್ಯಾರ್ಥಿಗಳು ಅವರವರ ಪ್ರಾಂತ್ಯದ ಉಡುಪು ಧರಿಸಿದ್ದರು.
 
ಕೆಲವರು ಕೂರ್ಗಿ ಸೀರೆಯಲ್ಲಿ, ಇನ್ನು ಕೆಲವರು ಕುರ್ತಾ ಮತ್ತು ಧೋತಿಯಲ್ಲಿ ಮಿಂಚಿದ್ದರೆ ನೇಪಾಳಿಗಳು ರ‌್ಯಾಪ್ ಅರೌಂಡ್ ಸ್ಕರ್ಟ್ ಧರಿಸಿ ಬಂದಿದ್ದರು. ಹೀಗೆ ವಿವಿಧ ಸಂಸ್ಕೃತಿಗಳು ಒಂದೇ ದಿನ ಅಲ್ಲಿ ಒಟ್ಟುಗೂಡಿದ್ದವು.

`ನಮ್ಮ ಕಾಲೇಜಿನಲ್ಲಿ ವಿವಿಧ ಭಾಗಗಳಿಂದ ಬಂದ ವಿದ್ಯಾರ್ಥಿಗಳ್ದ್ದಿದ್ದಾರೆ. ಆದರೂ ಸಾಮಾನ್ಯವಾಗಿ ಎಲ್ಲರೂ ಜೀನ್ಸ್ ಅಥವಾ ಕ್ಯಾಷುವಲ್ ಡ್ರೆಸ್ ಧರಿಸಿ ಕಾಲೇಜಿಗೆ ಬರುವುದರಿಂದ ಅವರ ಸಂಸ್ಕೃತಿಯ ಪರಿಚಯ ನಮಗೆ ದೊರೆಯುವುದಿಲ್ಲ. ವಿದ್ಯಾರ್ಥಿಗಳಾಗಿರುವ ನಮ್ಮ ಏಕೈಕ ಉದ್ದೇಶ ಎಂದರೆ ಕಲಿಕೆ.
 
ಹಾಗಿರುವಾಗಿ ನಮಗೆ ಪ್ರತೀಯೊಬ್ಬರ ಸಂಸ್ಕೃತಿಯತ್ತ ಗಮನ ಹರಿಸಲು ಅಸಾಧ್ಯ. ಅದರೆ `ಎಥ್ನಿಕ್ ಡೇ~ಯಂತಹ ದಿನಗಳು ನಮಗೆ ಎಲ್ಲರ ಸಂಸ್ಕೃತಿಯನ್ನು ಪರಿಚಯಿಸಿಕೊಳ್ಳುವ ಅವಕಾಶ ನೀಡುತ್ತವೆ~ ಎನ್ನುತ್ತಾರೆ ವಿದ್ಯಾರ್ಥಿ ಮಂಡಳಿಯ ಅಧ್ಯಕ್ಷ ಸಲ್ಮಾನ್. ಇಷ್ಟೇ ಅಲ್ಲ, ಇದು ನಮ್ಮಳಗಿನ ಭಾರತೀಯನನ್ನು ನೆನಪಿಸಿಕೊಳ್ಳುವ ಅಥವಾ ಬಡಿದೆಬ್ಬಿಸುವ ಸುದಿನ ಎನ್ನುತ್ತಾರೆ ಖಜಾಂಚಿ ರಮೀಜ್.

ಮೂರು ದಿನಗಳ ದೇಶಿ ವಿದೇಶಿ, ಸ್ಥಳೀಯಗಳ ಅಬ್ಬರದ ಬಳಿಕ ನಾಲ್ಕನೆ ದಿನವನ್ನು ಕಪ್ಪು ಮತ್ತು ನೀಲಿ ದಿನವನ್ನಾಗಿ ಆಚರಿಸಲಾಗಿತ್ತು. ವಿದ್ಯಾರ್ಥಿಗಳು ಅವರವರ ಇಚ್ಛೆಗೆ ತಕ್ಕಂತೆ ಉಡುಪು ಧರಿಸಿ ಬರಲು ಅನುಮತಿ ನೀಡಲಾಗಿತ್ತು.
 
ಮೂರು ದಿನಗಳ ಕಾಲ ಮೂರು ವಿವಿಧ ಉಡುಪುಗಳಲ್ಲಿ ಮಿಂಚಿದ್ದರೂ ಕೂಡ ನಾಲ್ಕನೇ ದಿನವೂ ವಿದ್ಯಾರ್ಥಿಗಳ ಉತ್ಸಾಹ ಸ್ವಲ್ಪವೂ ಕುಂದಿರಲಿಲ್ಲ. ವಿದ್ಯಾರ್ಥಿಗಳ ಈ ಉತ್ಸಾಹವೇ ನಾಲ್ಕು ದಿನಗಳ ಈ `ಸಾಂಪ್ರದಾಯಿಕ ದಿನ~ ಆಚರಣೆಗೆ ವಿಶೇಷ ಮಹತ್ವ ನೀಡಿತ್ತು.

`ಹಳೆಬೇರು ಹೊಸ ಚಿಗುರು ಕೂಡಿದರೆ ಮರ ಸೊಬಗು~ ಎನ್ನುವಂತೆ ದೇಶಿ ವಿದೇಶಿ ಸಂಸ್ಕೃತಿಗಳು ಮೇಳೈಸಿದಾಗಲೇ ಜೀವನ ಸುಂದರ. ಬೇರೆ ಸಂಸ್ಕೃತಿಯನ್ನು ಪ್ರೀತಿಸು, ನಮ್ಮ  ಸಂಸ್ಕೃತಿಯಲ್ಲೇ ಜೀವಿಸು ಎಂಬ ಗಾಂಧೀಜಿಯವರ ಮಾತೂ ಅರ್ಥಪೂರ್ಣ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.